CCL 2024: ಇದೇ 23ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಶುರು; ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಸುದೀಪ್ ಕ್ಯಾಪ್ಟನ್
Feb 02, 2024 06:11 PM IST
CCL 2024: ಫೆ. 23ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಶುರು; ಕರ್ನಾಟಕ ಬುಲ್ಡೋಜರ್ ತಂಡಕ್ಕೆ ಸುದೀಪ್ ಕ್ಯಾಪ್ಟನ್ Celebrity Cricket League 2024 timings and Live Streaming details
- ಭಾರತದ ಎಂಟು ಮುಖ್ಯ ಚಿತ್ರರಂಗವನ್ನು ಪ್ರತಿನಿಧಿಸುವ ತಂಡಗಳು ಈ ಬಾರಿಯ ಸಿಸಿಎಲ್‌ನಲ್ಲಿ ಭಾಗವಹಿಸುತ್ತಿವೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ ಮತ್ತು ಪಂಜಾಬ್ ತಂಡಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸುತ್ತಿವೆ. ಫೆ. 23ರಿಂದ ಜಿಯೋ ಸಿನಿಮಾದಲ್ಲಿ ಲೈವ್ ವೀಕ್ಷಣೆ ಮಾಡಬಹುದಾಗಿದೆ.
CCL 2024: ಭಾರತದ ಜನಪ್ರಿಯ ಒಟಿಟಿ ವೇದಿಕೆಯಾಗಿರುವ ಜಿಯೊಸಿನಿಮಾ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜೊತೆಗೆ ಸಹಭಾಗಿತ್ವವನ್ನು ಘೋಷಿಸಿದೆ. ಇದರ ಭಾಗವಾಗಿ, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಹತ್ತನೇ ಸೀಸನ್ ಅನ್ನು ಜಿಯೊಸಿನಿಮಾ ಎಕ್ಸ್‌ಕ್ಲ್ಯೂಸಿವ್ ಆಗಿ ನೇರಪ್ರಸಾರ ಮಾಡಲಿದೆ. ಕ್ರೀಡೆ ಮತ್ತು ಮನರಂಜನೆಗಳನ್ನು ಒಂದುಗೂಡಿಸಿ ಭಾರತದಲ್ಲಿ ರೂಪಿಸಿರುವ ಏಕಮಾತ್ರ ಪ್ರಯತ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದಾಗಿದೆ.
ನಾಲ್ಕು ವಾರಾಂತ್ಯಗಳಲ್ಲಿ ನಡೆಯಲಿರುವ ಸಿಸಿಎಲ್ 10ನೇ ಸೀಸನ್‌ನಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ. ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ಸಿನಿಮಾ ಪ್ರೇಮಿಗಳೂ ಕುತೂಹಲದಿಂದ ವೀಕ್ಷಿಸುವ ಈ ಕ್ರಿಕೆಟ್ ಲೀಗ್ ಅನ್ನು ವ್ಯಾಪಕವಾದ ಪ್ರೇಕ್ಷಕ ವರ್ಗಕ್ಕೆ ನೇರವಾಗಿ ತಲುಪಿಸಲು ಜಿಯೊಸಿನಿಮಾ ಮುಂದಾಗಿದೆ. ಇದೇ ಫೆಬ್ರವರಿ 23ರಿಂದ ಎಕ್ಸ್‌ಕ್ಲ್ಯೂಸೀವ್ ಆಗಿ ಜಿಯೊಸಿನಿಮಾದಲ್ಲಿ ಸಿಸಿಎಲ್ ಪಂದ್ಯಗಳು ನೇರಪ್ರಸಾರವಾಗಲಿವೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪ್ರಾರಂಭವಾಗಿದ್ದು 2011ರಲ್ಲಿ. ನಂತರದ ದಿನಗಳಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿರುವ ಸಿಸಿಎಲ್, ಇಂದು ಭಾರತದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಕರನ್ನು ಹೊಂದಿರುವ ಕ್ರೀಡಾ- ಮನರಂಜನೆಯ ಇವೆಂಟ್ ಆಗಿ ಹೊರಹೊಮ್ಮಿದೆ. ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಪ್ರಸಾರವಾಗಿದ್ದ ಕಳೆದ ವರ್ಷದ ಸಿಸಿಎಲ್ ಅನ್ನು, ದೇಶದಾದ್ಯಂತ 250 ಮಿಲಿಯನ್‌ಗೂ ಅಧಿಕ ಜನರು ವೀಕ್ಷಿಸಿದ್ದರು.
ಯಾವ್ಯಾವ ತಂಡಗಳು?
ಭಾರತದ ಎಂಟು ಮುಖ್ಯ ಚಿತ್ರರಂಗವನ್ನು ಪ್ರತಿನಿಧಿಸುವ ತಂಡಗಳು ಈ ಬಾರಿಯ ಸಿಸಿಎಲ್‌ನಲ್ಲಿ ಭಾಗವಹಿಸುತ್ತಿವೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜಪುರಿ ಮತ್ತು ಪಂಜಾಬ್ ತಂಡಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸುತ್ತಿವೆ. ಸಿಸಿಎಲ್ ಸೀಸನ್ 10ರಲ್ಲಿ ಬೇರೆ ಬೇರೆ ಚಿತ್ರರಂಗಗಳ ಇನ್ನೂರಕ್ಕೂ ಅಧಿಕ ಜನಪ್ರಿಯ ತಾರೆಗಳು, ಗಣ್ಯರು ಜೊತೆಯಾಗಿ, ಪ್ರೇಕ್ಷಕರಿಗೆ ಊಹಿಸಲಸಾಧ್ಯ ಮನರಂಜನೆಯ ರಸದೂಟವನ್ನು ಉಣಿಸಲಿದ್ದಾರೆ.
ಯಾವ ತಂಡಕ್ಕೆ ಯಾರು ನಾಯಕರು?
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಮುಂಬೈ ಹೀರೋಸ್ ತಂಡಕ್ಕೆ ಸಲ್ಮಾನ್ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ರಿತೇಶ್ ದೇಶಮುಖ್ ಈ ತಂಡದ ನಾಯಕ. ಸೋಹೈಲ್ ಖಾನ್, ಮುಂಬೈ ಹೀರೊಸ್ ತಂಡದ ಮಾಲೀಕರಾಗಿದ್ದಾರೆ. ‘ತೆಲುಗು ವಾರಿಯರ್ಸ್’ ತಂಡಕ್ಕೆ ವೆಂಕಟೇಶ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅಖಿಲ್ ಅಕ್ಕಿನೇನಿ ‘ತೆಲುಗು ವಾರಿಯರ್ಸ್’ ತಂಡದ ನಾಯಕ. ‘ಕರ್ನಾಟಕ ಬುಲ್ಡೋಜರ್ಸ್’ ತಂಡಕ್ಕೆ ಕಿಚ್ಚ ಸುದೀಪ್ ನಾಯಕನಾಗಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 10 ಅನ್ನು ಈಗಷ್ಟೇ ಮುಗಿಸಿರುವ ಸುದೀಪ್, ಮತ್ತೊಮ್ಮೆ ಸಿಸಿಎಲ್ 10 ಮೂಲಕ ಜಿಯೊಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮೋಹನ್‌ಲಾಲ್ ಸಹ ಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡಕ್ಕೆ ಇಂದ್ರಜಿತ್ ನಾಯಕರಾಗಿದ್ದಾರೆ. ‘ಭೋಜಪುರಿ ದಬಾಂಗ್ಸ್’ ತಂಡಕ್ಕೆ ಮನೋಜ್ ತಿವಾರಿ ನಾಯಕರಾಗಿದ್ದಾರೆ. ‘ಪಂಜಾಬ್ ದೆ ಶೇರ್’ ತಂಡಕ್ಕೆ ಸೋನು ಸೂದ್ ನಾಯಕರಾಗಿದ್ದಾರೆ. ಬೋನಿ ಕಪೂರ್ ಮಾಲೀಕರಾಗಿರುವ ‘ಬೆಂಗಾಲ್ ಟೈಗರ್ಸ್’ ತಂಡಕ್ಕೆ ಜಿಸ್ಸು ಸೆನ್‌ಗುಪ್ತ ನಾಯಕರಾಗಿದ್ದಾರೆ.
ಸಿಸಿಎಲ್ ಜೊತೆಗಿನ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯಿಸಿರುವ ಜಿಯೊಸಿನಿಮಾದ ಬ್ಯುಸಿನೆಸ್ ಹೆಡ್ ಫರ್ಜಾದ್ ಪಾಲಿಯಾ, ‘ಜಿಯೊಸಿನಿಮಾ ವೇದಿಕೆಗೆ ಎಲ್ಲೆಡೆಯಿಂದ ಅದ್ಭುತವಾದ ಮೆಚ್ಚುಗೆ ದೊರಕುತ್ತಿದ್ದು, ಕ್ರಿಡೆ ಮತ್ತು ಮನರಂಜನೆಗೆ ಬೇರೆಲ್ಲೂ ಸಿಗದ ಅದ್ಭುತ ಪ್ರತಿಕ್ರಿಯೆ ಜಿಯೊಸಿನಿಮಾಗೆ ದೊರಕುತ್ತಿದೆ. ನಮಗೆ ಸಿಗುತ್ತಿರುವ ಅಪ್ರತಿಮವಾದ ವ್ಯೂವರ್‍ಷಿಪ್ ಅದಕ್ಕೆ ಪುರಾವೆಯಾಗಿದೆ ಎಂದಿದ್ದಾರೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ (ಸಿಸಿಎಲ್) ಸಂಸ್ಥಾಪಕರಾದ ವಿಷ್ಣು ಇಂದುರಿ ಕೂಡ ಈ ಸಹಭಾಗಿತ್ವದ ಬಗ್ಗೆ ಉತ್ಸಾಹದ ಮಾತುಗಳಾಡಿದ್ದಾರೆ. ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಸಾಂಸ್ಕೃತಿಕ ಹೆಗ್ಗುರುತಾಗಿ ಹೊರಹೊಮ್ಮುತ್ತಿದೆ. ಇದರ ಹತ್ತನೇ ಸೀಸನ್ ಅನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಯೊಸಿನಿಮಾ ಜೊತೆಗೆ ಕೈಜೋಡಿಸಿರುವುದು ನಿಜಕ್ಕೂ ನಮಗೆ ಸಂತೋಷದ ಸಂಗತಿ. ಕ್ರೀಡೆ ಮತ್ತು ಮನರಂಜನೆಯ ಈ ಸಂಯೋಜನೆಯ ಸಿಸಿಎಲ್ ಮೂಲಕ ದೇಶದಾದ್ಯಂತ ಅಭಿಮಾನಿಗಳ ಮನಸೂರೆಗೊಳ್ಳಲು ನಾವು ಕಾಯುತ್ತಿದ್ದೇವೆ’ ಎಂದಿದ್ದಾರೆ.