logo
ಕನ್ನಡ ಸುದ್ದಿ  /  ಮನರಂಜನೆ  /  Darshan: ಮಳೆಗಾಲ ಶುರುವಾಗುತ್ತಿದೆ, ದಸರಾ ಅಂಬಾರಿ ಆನೆ ಅರ್ಜುನನಿಗೆ ಸಮಾಧಿ ನಿರ್ಮಾಣ ಯಾವಾಗ? ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪ್ರಶ್ನೆ

Darshan: ಮಳೆಗಾಲ ಶುರುವಾಗುತ್ತಿದೆ, ದಸರಾ ಅಂಬಾರಿ ಆನೆ ಅರ್ಜುನನಿಗೆ ಸಮಾಧಿ ನಿರ್ಮಾಣ ಯಾವಾಗ? ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪ್ರಶ್ನೆ

Praveen Chandra B HT Kannada

May 03, 2024 09:02 AM IST

google News

ಅರ್ಜುನನಿಗೆ ಸಮಾದಿ ನಿರ್ಮಾಣ ಯಾವಾಗ? ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪ್ರಶ್ನೆ

    • Challenging Star Darshan: ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಮೃತಪಟ್ಟ ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿ ಬೇಗನೇ ನಿರ್ಮಿಸಿ ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮನವಿ ಮಾಡಿದ್ದಾರೆ. ಮಳೆಗಾಲ ಆರಂಭವಾಗುತ್ತಿದೆ, ಸಮಾಧಿ ನಿರ್ಮಾಣ ಶುರುವಾಗಲಿ ಎಂದು ಅವರು ಹೇಳಿದ್ದಾರೆ.
ಅರ್ಜುನನಿಗೆ ಸಮಾದಿ ನಿರ್ಮಾಣ ಯಾವಾಗ? ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪ್ರಶ್ನೆ
ಅರ್ಜುನನಿಗೆ ಸಮಾದಿ ನಿರ್ಮಾಣ ಯಾವಾಗ? ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪ್ರಶ್ನೆ

ಬೆಂಗಳೂರು: ಕಳೆದ ವರ್ಷ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಮೃತಪಟ್ಟ ದಸರಾ ಅಂಬಾರಿ ಆನೆ ಅರ್ಜುನನ ಸಮಾಧಿಗೆ ದಿಕ್ಕು ದೆಸೆ ಇಲ್ಲದೆಂತೆ ಭಾಸವಾಗುತ್ತಿದೆ ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಳೆಗಾಲ ಶುರುವಾಗುವ ಮುನ್ನ ಸಮಾದಿ ನಿರ್ಮಾಣ ಕೆಲಸ ಆರಂಭವಾಗಲಿ ಎನ್ನುವುದು ನನ್ನ ಕೋರಿಕೆ ಎಂದು ಅವರು ಪೋಸ್ಟ್‌ ಮಾಡಿದ್ದಾರೆ. ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ಮೈಸೂರು ದಸರಾದಲ್ಲಿ ಎಂಟು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ದುರ್ಮರಣಕ್ಕೀಡಾಗಿತ್ತು. ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಯುವಾಗ ಒಂಟಿ ಸಲಗದೊಂದಿಗೆ ನಡೆದ ಸಂಘರ್ಷದಲ್ಲಿ ತಿವಿತಕ್ಕೊಳಗಾಗಿ ಮೃತಪಟ್ಟಿತ್ತು.

ದರ್ಶನ್‌ ಹೇಳಿದ್ದೇನು?

"ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು" ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ದರ್ಶನ್‌ ಪೋಸ್ಟ್‌ಗೆ ಸಾಕಷ್ಟು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. "ನಿಮ್ಮ ಈ ಸಾಮಾಜಿಕ ಕಳಕಳಿಗೆ ಈ ನಿಮ್ಮ ಸೆಲೆಬ್ರಿಟಿಗಳು ಸದಾ ಸಿದ್ದ. ಪುಣ್ಯಾತ್ಮ ಕಣಯ್ಯ ನೀನು" "ಇದೇ ಕಾರಣಕ್ಕೇ ಬಾಸ್ ನಿಮ್ಮನ್ನ ಇಷ್ಟ ಪಡೋದು" "ಕೆಲವರು ತಾವು ತಮ್ಮ ಹೆಂಡ್ತಿ ಮಕ್ಕು ಚೆನ್ನಾಗಿದ್ರೆ ಸಾಕು ಅಂಥ ಯೋಚೆ ಮಾಡ್ತಿದ್ರೆ, ಅಲ್ಲೊಬ್ಬನ ಹೃದಯ ಮೂಕ ಪ್ರಾಣಿಗೆ ನ್ಯಾಯ ಕೊಡ್ಸೋಕೆ ಮಿಡಿತಿತ್ತು,, ನಿಜ್ವಾಗ್ಲೂ ನೀವು ದೇವ್ರು ಕಣಯ್ಯಾ " "ಎಲ್ಲಾ ಇರೋವರೆಗೂ ಅಷ್ಟೇ... ಸತ್ತಮೇಲೆ ಬೆಲೆನೆ ಇಲ್ಲ.. ಅರ್ಜುನನ ಮರೆತೇ ಬಿಟ್ರು.. ಅರಣ್ಯ ಇಲಾಖೆ ಮತ್ತು ಸರ್ಕಾರ.. ಅರ್ಜುನ ನಿಗೆ ಒಂದು ಗೂಡು ಕಟ್ಟುವ ಕೆಲಸ ಮಾಡಿ... ನೀವು ಮಾಡಿರುವ ತಪ್ಪಿಗೆ ಪ್ರಾಯಶ್ಚಿತವಾದ್ರು ಸಿಗುತ್ತೆ" "ಮೂಕ ಪ್ರಾಣಿಗಳ ಪಾಲಿನ ಪುಣ್ಯಾತ್ಮ ಡಿ ಬಾಸ್" ಎಂದೆಲ್ಲ ದರ್ಶನ್‌ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಕಾಟೇರ ಸಿನಿಮಾ ಅರ್ಪಣೆ

ಚಾಲೆಂಜಿಂಗ್‌ ಸ್ಟಾರ್‌ ಅಭಿನಯದ ಕಾಟೇರ ಸಿನಿಮಾ ಬಿಡುಗಡೆಗೆ ಕೆಲವು ದಿನಗಳ ಮುನ್ನ ದಸರಾ ಅಂಬಾರಿ ಆನೆ ಅರ್ಜುನಾ ಮೃತಪಟ್ಟಿತ್ತು. ಕಾಟೇರ ಸಿನಿಮಾವನ್ನು ಮೃತಪಟ್ಟ ಅರ್ಜುನ ಆನೆಗೆ ಅರ್ಪಿಸಲಾಗಿತ್ತು. "ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೈತ್ಯ ಮತ್ತು ದೈವ ಜೀವ ಅರ್ಜುನ- ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ" ಎಂದು ಕಾಟೇರ ಸಿನಿಮಾದ ಆರಂಭದಲ್ಲಿ ತೋರಿಸಲಾಗಿತ್ತು.

ಪ್ರಾಣಿಪ್ರಿಯ ದರ್ಶನ್‌

ವನ್ಯಜೀವಿಗಳು ಮತ್ತು ಇತರೆ ಪ್ರಾಣಿಗಳ ಬಗ್ಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಎಲ್ಲಿಲ್ಲದ ಅಕ್ಕರೆ. ದರ್ಶನ್‌ ಅವರ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ವಿವಿಧ ತಳಿಯ ದನಗಳು, ಆಡುಗಳು, ಕುದುರೆಗಳು ಸೇರಿದಂತೆ ಸಾಕಷ್ಟು ಪ್ರಾಣಿಗಳಿವೆ. ಕುದುರೆ ರೈಡ್‌ ಸ್ಕೂಲ್‌ ಉದ್ಘಾಟನೆಯ ಸಂದರ್ಭದಲ್ಲಿ ನನ್ನ ಬಳಿ ಹದಿನೈದು ಕುದುರೆಗಳು ಇವೆ ಎಂದಿದ್ದರು. ಪ್ರಿನ್ಸ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ರ ಅಚ್ಚುಮೆಚ್ಚಿನ ಕುದುರೆ. ತನ್ನ ಫಾರ್ಮ್‌ಹೌಸ್‌ನಲ್ಲಿರುವ ಪ್ರಾಣಿಗಳನ್ನು ಅತೀವವಾಗಿ ಪ್ರೀತಿಸುವ ದರ್ಶನ್‌ ಅವರು ಮೃಗಾಲಯಗಳ ಹಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಮೈಸೂರು ಮೃಗಾಲಯದಲ್ಲಿ ಸುತ್ತಾಡುವಾಗ ಹಲವು ಪ್ರಾಣಿಗಳನ್ನು ದರ್ಶನ್‌ ದತ್ತು ತೆಗೆದುಕೊಂಡಿರುವುದು ನಿಮ್ಮ ಅರಿವಿಗೆ ಬರಬಹುದು. ಜನರಿಗೂ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡುತ್ತ ಇರುತ್ತಾರೆ. ಕೆಲವು ವರ್ಷಗಳ ಹಿಂದೆ ಝೂಸ್‌ ಫಾರ್‌ ಕರ್ನಾಟಕ ಅಭಿಯಾನದಡಿ ದರ್ಶನ್‌ ಮಾಡಿದ ಮನವಿಗೆ ಸ್ಪಂದಿಸಿ ರಾಜ್ಯದ ಆರು ಮೃಗಾಲಯಗಳಿಂದ ಆರು ಸಾವಿರ ಜನರು ಪ್ರಾಣಿ ಪಕ್ಷಿಗಳನ್ನು ದತ್ತು ತೆಗೆದುಕೊಂಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ