logo
ಕನ್ನಡ ಸುದ್ದಿ  /  ಮನರಂಜನೆ  /  Children's Day: ಮಕ್ಕಳ ದಿನಾಚರಣೆಯಂದು ಮಕ್ಕಳು ನೋಡಬಹುದಾದ 10 ಕನ್ನಡ ಸಿನಿಮಾಗಳು; ಚಿನ್ನಾರಿಮುತ್ತಾದಿಂದ ಸರ್ಕಾರಿ ಹಿಪ್ರಾ ಶಾಲೆಯವರೆಗೆ

Children's day: ಮಕ್ಕಳ ದಿನಾಚರಣೆಯಂದು ಮಕ್ಕಳು ನೋಡಬಹುದಾದ 10 ಕನ್ನಡ ಸಿನಿಮಾಗಳು; ಚಿನ್ನಾರಿಮುತ್ತಾದಿಂದ ಸರ್ಕಾರಿ ಹಿಪ್ರಾ ಶಾಲೆಯವರೆಗೆ

Praveen Chandra B HT Kannada

Nov 14, 2023 09:46 AM IST

google News

Children's day: ಮಕ್ಕಳ ದಿನಾಚರಣೆಯಂದು ಮಕ್ಕಳು ನೋಡಬಹುದಾದ 10 ಕನ್ನಡ ಸಿನಿಮಾಗಳು

    • Kannada Films to watch on Childrens day: ನವೆಂಬರ್‌ 14 ಎಲ್ಲೆಡೆ ಮಕ್ಕಳ ದಿನಾಚರಣೆಯ ಸಂಭ್ರಮ. ಮಕ್ಕಳ ದಿನಾಚರಣೆಯಂದು ಮಕ್ಕಳು ಖುಷಿಯಿಂದ ನೋಡಬಹುದಾದ ಸಿನಿಮಾಗಳು ಸಾಕಷ್ಟಿವೆ. ಅವುಗಳಲ್ಲಿ ಕೆಲವು ಸಿನಿಮಾಗಳ ವಿವರ ಇಲ್ಲಿದೆ.
Children's day: ಮಕ್ಕಳ ದಿನಾಚರಣೆಯಂದು ಮಕ್ಕಳು ನೋಡಬಹುದಾದ 10 ಕನ್ನಡ ಸಿನಿಮಾಗಳು
Children's day: ಮಕ್ಕಳ ದಿನಾಚರಣೆಯಂದು ಮಕ್ಕಳು ನೋಡಬಹುದಾದ 10 ಕನ್ನಡ ಸಿನಿಮಾಗಳು

ಮಕ್ಕಳ ದಿನಾಚರಣೆಯಂದು ಮಕ್ಕಳ ಸಿನಿಮಾ ನೋಡಲು ಬಯಸುವವರಿಗೆ ಕನ್ನಡದಲ್ಲಿ ಹಲವು ಚಲನಚಿತ್ರಗಳಿವೆ. ಹಲವು ಹೊಸ ಮತ್ತು ಹಳೆಯ ಕನ್ನಡ ಚಿತ್ರಗಳಲ್ಲಿ ಮಕ್ಕಳಿಗೆ ಮನರಂಜನೆ, ನೀತಿ ಎಲ್ಲವೂ ಇದೆ. ಈಗಿನ ಕಾಲದ ಮಕ್ಕಳು ಯೂಟ್ಯೂಬ್‌, ಮೊಬೈಲ್‌ ಗೇಮ್ಸ್‌ಗಳಲ್ಲಿ ಕಾಲ ಕಳೆಯುತ್ತಿದ್ದು, ಮನರಂಜನೆಗೆ ಅಡ್ಡಿಯಿಲ್ಲ. ಇಂತಹ ಮಕ್ಕಳನ್ನು ಮಕ್ಕಳ ದಿನಾಚರಣೆಯಂದು ಒಟ್ಟಾಗಿ ಕೂರಿಸಿ ಮಕ್ಕಳ ಸಿನಿಮಾಗಳನ್ನು ತೋರಿಸಬಹುದು. ಮಕ್ಕಳ ಜತೆಗೆ ನೀವೂ ಕುಳಿತು ನೋಡಬಹುದು. ಸ್ಯಾಂಡಲ್‌ವುಡ್‌ನಲ್ಲಿ ಪ್ರತಿವರ್ಷ ಕೆಲವು ಮಕ್ಕಳ ಚಿತ್ರಗಳು ಬಿಡುಗಡೆಯಾಗುತ್ತವೆ. ಮಕ್ಕಳ ಹೊಸ ಚಲನಚಿತ್ರಗಳ ಕುರಿತು ನಿಮಗೆ ಸಾಕಷ್ಟು ಮಾಹಿತಿ ಇರಬಹುದು. ಇಲ್ಲಿ ಮಕ್ಕಳ ಹಳೆಯ ಚಲನಚಿತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಗುಬ್ಬಚ್ಚಿಗಳು

ಇದು 2008ರ ಕನ್ನಡ ಚಲನಚಿತ್ರ. ಅಭಯ ಸಿಂಹ ನಟನೆಯ ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು. ಈ ಚಿತ್ರ ಲಾಸ್‌ ಏಂಜೆಲ್ಸ್‌ ಮತ್ತು ಟೊರಾಂಟೊದಲ್ಲಿ ಬಿಡುಗಡೆಯಾದ ಬಳಿಕ ಸಾಕಷ್ಟು ಜನಮೆಚ್ಚುಗೆ ಪಡೆಯಿತು. ಇಲಾ ಮತ್ತು ಅನಿರುದ್ಧ್‌ ಎಂಬ ಇಬ್ಬರ ಮಕ್ಕಳ ಕತೆಯಿದು. ನಗರೀಕರಣ, ನಿಸರ್ಗದ ಕುರಿತು ಜಾಗೃತಿ ಮೂಡಿಸುವ ಮಕ್ಕಳ ಚಲನಚಿತ್ರ ಇದಾಗಿದೆ.

ಚಿನ್ನಾರಿ ಮುತ್ತಾ

ವಿಜಯ ರಾಘವೇಂದ್ರ ನಟನೆಯ 1993ರ ಚಿನ್ನಾರಿ ಮುತ್ತಾ ಚಿತ್ರ ನಿಮಗೆ ನೆನಪಿರಬಹುದು. ಮಕ್ಕಳ ದಿನಾಚರಣೆಯಂದು ತಪ್ಪದೇ ನೋಡಬಹುದಾದ ಚಿತ್ರವಿದು. ಬಡ ಬಾಲಕನೊಬ್ಬ ಕೋಚ್‌ ನೆರವಿನಿಂದ ಸಾಧನೆ ಮಾಡುವ ಕಥೆಯಿದು. ಇಲ್ಲಿ ಅವಿನಾಶ್‌ ಅವರು ಕೋಚ್‌ ಆಗಿ ಅದ್ಭುತವಾಗಿ ನಟಿಸಿದ್ದಾರೆ. ಇದು ಸ್ಪೂರ್ತಿದಾಯಕ ಸಿನಿಮಾ, ಮಕ್ಕಳು ಖುಷಿಯಿಂದ ನೋಡಬಹುದಾದ ಮಕ್ಕಳ ಚಲನಚಿತ್ರ ಇದಾಗಿದೆ.

 

ಬೆಟ್ಟದ ಹೂವು

ಮಕ್ಕಳ ದಿನಾಚರಣೆಯಂದು ದಿವಂಗತ ಪುನೀತ್‌ ರಾಜ್‌ ಕುಮಾರ್‌ ಅವರ ಹಲವು ಚಲನಚಿತ್ರಗಳು ನೆನಪಾಗಬಹುದು. ಬೆಟ್ಟದ ಹೂವು 1985ರ ಚಲನಚಿತ್ರ. ಎನ್‌ ಲಕ್ಷ್ಮೀನಾರಾಯಣ್‌ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್‌ ನಟನೆ ಅದ್ಭುತ. ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಈ ಚಿತ್ರದಲ್ಲಿ ಪುನೀತ್‌ ರಾಜ್‌ ಕುಮಾರ್‌ ಬಡ ಬಾಲಕ ರಾಮುವಾಗಿ ಕಾಣಿಸಿಕೊಂಡಿದ್ದರು.

ನಾಗರಹೊಳೆ

ಇದು 1977ರ ಚಲನಚಿತ್ರ. ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ಈ ಚಿತ್ರವು ಮಕ್ಕಳ ಅಡ್ವೇಂಚರ್‌ ಚಲನಚಿತ್ರವಾಗಿದೆ. ನಾಗರಹೊಳೆ ನ್ಯಾಷನಲ್‌ ಪಾರ್ಕ್‌ನೊಳಗೆ ಶೂಟಿಂಗ್‌ ಮಾಡಲಾದ ಈ ಚಿತ್ರದಲ್ಲಿ ವಿಷ್ಣುವರ್ಧನ್‌, ಅಂಬರೀಶ್‌, ಭಾರತಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಳೆಯ ಮಕ್ಕಳ ಸಾಹಸಮಯ ಚಿತ್ರವನ್ನು ಯೂಟ್ಯೂಬ್‌ನಲ್ಲಿ ನೋಡಿ ಆನಂದಿಸಬಹುದು.

 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಎಂಬ ಕನ್ನಡ ಚಿತ್ರವು ಸಾಕಷ್ಟು ಜನಮೆಚ್ಚುಗೆ ಪಡೆದ ಚಿತ್ರವಾಗಿದೆ. ರಿಷಬ್‌ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಕೇರಳ ಗಡಿಯಲ್ಲಿರುವ ಕನ್ನಡ ಶಾಲೆಯೊಂದನ್ನು ಉಳಿಸುವ ಕಾಳಜಿ ಇತ್ತು. ಈ ಚಿತ್ರದಲ್ಲಿ ಸಾಕಷ್ಟು ಹಾಸ್ಯ, ಮಕ್ಕಳ ತುಂಟತನ, ಪ್ರೀತಿ ಎಲ್ಲವೂ ಇತ್ತು. ಮಕ್ಕಳ ದಿನಾಚರಣೆಯಂದು ಈ ಚಿತ್ರವನ್ನು ನೋಡಿದರೆ ಸಖತ್‌ ಮನರಂಜನೆ ಗ್ಯಾರಂಟಿ.

ಸಿಂಹದ ಮರಿ ಸೈನ್ಯ

ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್‌ ಸರ್ಜಾ, ಅಮ್ರೀಶ್‌ ಪುರಿ, ಮಾಸ್ಟರ್‌ ಭಾನುಪ್ರಕಾಶ್‌, ಮಾಸ್ಟರ್‌ ಬಿಆರ್‌ ಪ್ರಸ್ನ ಕುಮಾರ್‌, ಇಂದಿರಾ, ರೇಖಾ, ಮಾಸ್ಟರ್‌ ಟಿಎಸ್‌ ದಿನೇಶ್‌ ಬಾಬು, ಸುಂದರ್‌ ಕೃಷ್ಣ ಅರಸ್‌ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ್ಲಿ ಅಮ್ರೀಶ್‌ ಪುರಿ ಅವರು ವಿಲನ್‌ ರೋಲ್‌ ಮಾಡಿದ್ದರು. ಈ ಚಿತ್ರದ ಮೂಲಕ ಅರ್ಜುನ್‌ ಸರ್ಜಾ ಅವರು ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಧೈರ್ಯವಂತ ಮಕ್ಕಳ ಗುಂಪಿನ ಸಾಹಸಮಯ ಚಿತ್ರವಿದು.

ಪುಟಾಣಿ ಏಜೆಂಟ್‌ 123

ಕನ್ನಡದಲ್ಲಿ ಮಕ್ಕಳಿಗಾಗಿ ಸಾಕಷ್ಟು ಹಳೆಯ ಚಲನಚಿತ್ರಗಳಿವೆ. 1979ರ ಪುಟಾಣಿ ಏಜೆಂಟ್‌ 123 ಚಿತ್ರವನ್ನು ಗೀತಾಪ್ರಿಯಾ ನಿರ್ದೇಶಿಸಿದ್ದಾರೆ. ಮಾಸ್ಟರ್‌ ರಾಮಕೃಷ್ಣ, ಮಾಸ್ಟರ್‌ ಭಾನು ಪ್ರಕಾಶ್‌, ಇಂದಿರಾ ಜತೆಗೆ ರೆಬಲ್‌ ಸ್ಟಾರ್‌ ಅಂಬರೀಶ್‌, ಮಂಜುಲಾ, ಶ್ರೀನಾಥ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೊಟ್ರೇಶಿ ಕನಸು

1994ರಲ್ಲಿ ಬಿಡುಗಡೆಯಾದ ಕೊಟ್ರೇಶಿ ಕನಸು ಕೂಡ ಮಕ್ಕಳ ಚಲನಚಿತ್ರವಾಗಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ವಿಜಯ್‌ ರಾಘವೇಂದ್ರ ನಟನೆಗೆ ಬೆಸ್ಟ್‌ ಚೈಲ್ಡ್‌ ಆರ್ಟಿಸ್ಟ್‌ ಪ್ರಶಸ್ತಿ ದೊರಕಿತ್ತು.

ಕೇರ್‌ ಆಫ್‌ ಫುಟ್‌ಪಾತ್‌

ಜಗತ್ತಿನ ಯುವ ನಿರ್ದೇಶಕ ಮತ್ತು ನಟ್‌ ಮಾಸ್ಟರ್‌ ಕಿಶನ್‌ ನಿರ್ದೇಶನದ ಈ ಚಿತ್ರ ಗಿನ್ನೇಶ್‌ ದಾಖಲೆ ಮಾಡಿತ್ತು. ಸುದೀಪ್‌ ಮತ್ತು ಜಾಕೀ ಶ್ರಾಫ್‌ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಕುಕು

ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ಮಾಸ್ಟರ್‌ ವಿಜಯ್‌, ಬೇಬಿ ವಿನಿತಾ, ಸಾಗರ್‌ ನಾಗಭೂಷನ, ರಂಗಸಾಯಿ, ಚಂದ್ರಲೇಖಾ ಮುಂತಾದವರು ನಟಿಸಿದ್ದಾರೆ

ಇವು ಕೆಲವು ಅತ್ಯುತ್ತಮ ಕನ್ನಡ ಮಕ್ಕಳ ಚಲನಚಿತ್ರಗಳಿಗೆ ಉದಾಹರಣೆಗಳು. ಪ್ರಸಾದ್‌, ಮಕ್ಕಳಿರವ್ವ ಮನೆತುಂಬಾ, ಕುಳ್ಳ ಏಜೆಂಟ್‌ ೦೦೦, ಕಳಸಪುರದ ಹುಡುಗರು, ಮಕ್ಕಳ ರಾಜ್ಯ, ನಕ್ಕರೆ ಅದೇ ಸ್ವರ್ಗ, ಮಕ್ಕಳೇ ಮನೆಗೆ ಮಾಣಿಕ್ಯ, ನಮ್ಮ ಮಕ್ಕಳು, ಅರಿವು, ದಂಗೆ ಎದ್ದ ಮಕ್ಕಳ, ನಾನು ಸಚಿನ್‌ ತಂಡೂಲ್ಕರ್‌ ಅಲ್ಲ, ಮಂಕು ತಿಮ್ಮ, ಪ್ರಚಂಡ ಪುಟಾಣಿಗಳು, ಮಕ್ಕಳೇ ದೇವರು, ಮೃಗಾಲಯ, ಶಾಂಭಾವಿ, ಚುಕ್ಕಿ ಚಂದ್ರಮ, ಜಂಬೂ ಸವಾರಿ, ಭುವನೇಶ್ವರಿ, ಮಕ್ಕಳ ಸಾಕ್ಷಿ, ಬಾಲಾ ನಾವಿಕ, ಪುಟ್ಟಿ, ಕಲರವ, ತುತ್ತೂರಿ, ಕೀರ್ತಿಗೊಬ್ಬ, ಪುಟಾಣಿ ಪೋರ್ಸ್‌, ಬೆಟ್ಟದಪುರದ ದಿಟ್ಟ ಮಕ್ಕಳು, ಪುಟಾಣಿ ಪಾರ್ಟಿ, 106 ಕನಸು, ನನ್ನ ಗೋಪಾಲ, ಬಾಲ್‌ ಪೆನ್‌, ನರಸಜ್ಜನ ನರ್ಸರಿ ಹೀಗೆ ಲೆಕ್ಕವಿಲ್ಲದ ಒಳ್ಳೊಳ್ಳೆಯ ಕನ್ನಡ ಮಕ್ಕಳ ಚಲನಚಿತ್ರಗಳಿದ್ದು, ಮಕ್ಕಳ ದಿನಾಚರಣೆಯಂದು ತಪ್ಪದೇ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ