ರಣಾಕ್ಷನಾಗಿ ಬಂದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೀರುಂಡೆ ರಘು; ಇದು ದೇವರು- ದೆವ್ವದ ನಡುವಿನ ಸಂಘರ್ಷದ ಕಥೆ
Sep 15, 2024 04:41 PM IST
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೀರುಂಡೆ ರಘು ನಟನೆಯ ರಣಾಕ್ಷ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
- Comedy Khiladigalu Seerunde Raghu: ಕಾಮಿಡಿ ಕಿಲಾಡಿಗಳು, ರಾಜಾ ರಾಣಿ ಶೋ ಮೂಲಕ ಗಮನ ಸೆಳೆದ ನಟ ಸೀರುಂಡೆ ರಘು, ಇದೀಗ ನಾಯಕನಾಗಿ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ಇತ್ತೀಚೆಗಷ್ಟೇ ರಣಾಕ್ಷ ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು, ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
Ranaksha Movie Trailer: ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ನಾಯಕನಾಗಿ ನಟಿಸಿರುವ ರಣಾಕ್ಷ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ದೇವರು, ದೆವ್ವದ ನಡುವಿನ ಸಂಘರ್ಷದ ಸುತ್ತ ನಡೆಯೋ ಸಸ್ಪೆನ್ಸ್ , ಥ್ರಿಲ್ಲರ್ ಜಾನರರ್‌ನ ಈ ಚಿತ್ರ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದ್ದು, ಇನ್ನೇನು ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ಆಗಮಿಸಲಿದೆ. ಇತ್ತೀಚೆಗಷ್ಟೇ ಈ ಚಿತ್ರದ ಬಗ್ಗೆ ಮಾಹಿತಿ ನೀಡಲೆಂದೇ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು.
ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯವಾದ ನಟ ಸೀರುಂಡೆ ರಘು ಈ ಸಿನಿಮಾ ಬಗ್ಗೆ ಮಾತನಾಡಿದರು. "ನಾನು ಕೂಡ ಮಾಧ್ಯಮದಲ್ಲಿ ಕೆಲಸ ಮಾಡಿದವನು. ಜತೆಗೆ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ಇದೀಗ ರಣಾಕ್ಷ ಸಿನಿಮಾ ಮೂಲಕ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. 4 ಜನ ಸ್ನೇಹಿತರ ಜೊತೆ ಸಾಗುವ ಪಾತ್ರ. ಕೊನೆಯಲ್ಲಿ ಅದೇನೆಂದು ರಿವೀಲ್ ಆಗುತ್ತೆ. ನಿಮ್ಮೆಲ್ಲರ ಪ್ರೀತಿ ಸಹಕಾರವಿರಲಿ ಎಂದರು ರಘು.
ದೇವರು- ದೆವ್ವದ ನಡುವಿನ ಸಂಘರ್ಷದ ಕಥೆ
ರಾಘವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. "ಇದು ನನ್ನ ಎರಡನೇ ಚಿತ್ರ. ಕಲಾವಿದನಾಗಿ ಬಂದವನು ನಿರ್ದೇಶಕನಾಗಿದ್ದೇನೆ. ಪ್ರೊಡ್ಯೂಸರ್‌ಗೆ ಒಂದು ಲೈನ್ ಹೇಳಿದಾಗ ಏನೂ ಕೇಳದೆ ಒಪ್ಪಿದರು. ರಣಾಕ್ಷ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಫ್ಯಾಮಿಲಿ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರವಿದು. ದೇವರು ದೆವ್ವ ಎರಡರ ನಡುವಿನ ಸಂಘರ್ಷವೇ ಚಿತ್ರದ ಕಾನ್ಸೆಪ್ಟ್. ಯಾವುದೇ ಮಂತ್ರ, ತಂತ್ರ, ಶಕ್ತಿ ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು. ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ" ಎಂದರು ರಾಘವ್
ನಿರ್ಮಾಪಕರು ಹೇಳಿದ್ದೇನು?
"6ರಿಂದ 80 ವರ್ಷದವರೂ ಕೂತು ನೋಡುವಂಥ, ಹಳ್ಳಿ ಸೊಗಡಿನ ಕೌಟುಂಬಿಕ ಕಥಾನಕ ಇರೋ ಚಿತ್ರವಿದು. ಸಿನಿಮಾ ನೋಡಿ ನೀವೆಲ್ಲ ಗೆಲ್ಲಿಸಿದರೆ, ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆಯಿದೆ. ಕುಚುಕು ಸ್ನೇಹಿತ ಉಮಾಮಹೇಶ್ವರ ನಮ್ಮಜೊತೆಗಿದ್ದಾರೆ. ಹಣ ಗಳಿಸೋ ಉದ್ದೇಶದಿಂದ ಈ ಸಿನಿಮಾ ಮಾಡಿಲ್ಲ. ರಘು ತುಂಬಾ ಚೆನ್ನಾಗಿ ಪಾತ್ರ ಮಾಡಿದ್ದಾರೆ. ಸಕಲೇಶಪುರದಲ್ಲಿ ಶೂಟ್ ಮಾಡುವಾಗ ತುಂಬಾ ಪೆಟ್ಡು ತಿಂದಿದ್ದಾರೆ. ಅಲ್ಲದೆ ಇಬ್ಬರು ಹೊಸ ಹುಡುಗಿಯರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಆಲಾಪ್ ಮಾತು ಕಮ್ಮಿ, ಆದರೆ ಅದ್ಬುತವಾಗಿ ಮ್ಯೂಸಿಕ್ ಮಾಡಿದ್ದಾರೆ ಎಂದರು ನಿರ್ಮಾಪಕ ರಾಮು.
ನಾಯಕಿ ರಕ್ಷಾ ಮಾತನಾಡುತ್ತಾ ನಾನು ಮುಗ್ಧ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ ಇದು ನನ್ನ ಮೊದಲ ಚಿತ್ರ ಎಂದರು. ಚಿತ್ರಕ್ಕೆ ಸಂಗೀತ ನೀಡಿರುವ ವಿಶಾಲ್ ಆಲಾಪ್ ಮಾತನಾಡಿ, ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಸಂಗೀತ ನೀಡುವುದು ನನಗೆ ಚಾಲೆಂಜ್ ಆಗಿತ್ತು. ಪ್ರತಿ ಹಾಡು ವಿಭಿನ್ನವಾಗಿ ಮೂಡಿ ಬಂದಿದೆ ಎಂದರು. ಸಕಲೇಶಪುರ, ಹೊನ್ನಾವರ, ಮೂಡಬಿದಿರೆ, ಕಾರ್ಕಳ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಮೂರು ಸಾಹಸ ದೃಶ್ಯಗಳಿವೆ.