Ravichandran: ನನ್ನಮ್ಮನಿಗೆ ನಾನು ಬೇಡವಾಗಿದ್ದೆ, ನನ್ನ ಅಬಾರ್ಷನ್‌ಗಾಗಿ ಪಪ್ಪಾಯ ತಿಂದಿದ್ರು! ಕಾರಣ ತಿಳಿಸಿದ ರವಿಚಂದ್ರನ್
Nov 10, 2023 09:22 AM IST
Ravichandran: ನನ್ನಮ್ಮನಿಗೆ ನಾನು ಬೇಡವಾಗಿದ್ದೆ, ನನ್ನ ಅಬಾರ್ಷನ್‌ಗಾಗಿ ಪಪ್ಪಾಯ ತಿಂದಿದ್ರು! ಕಾರಣ ತಿಳಿಸಿದ ರವಿಚಂದ್ರನ್
- ಸ್ಯಾಂಡಲ್‌ವುಡ್ ಕ್ರೇಜಿಸ್ಟಾರ್ ರವಿಚಂದ್ರನ್, ತಮ್ಮ ಹುಟ್ಟಿನ ಬಗ್ಗೆ ಮಾತನಾಡಿದ್ದಾರೆ. ಕತಾರ್‌ನಲ್ಲಿ ಕನ್ನಡ ಸಂಘದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಎಲ್ಲೂ ಹೇಳದ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Crazy Star Ravichandran: ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳ ಜತೆಗೆ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ಭರ್ಜರಿ ಬ್ಯಾಚುಲರ್ ಶೋಗಾಗಿ ಮಲೇಷ್ಯಾದಲ್ಲಿ ಒಂದಷ್ಟು ದಿನಗಳ ಕಾಲ ಇಡೀ ತಂಡದ ಜತೆಗೆ ಕಾಲ ಕಳೆದು, ಅಲ್ಲಿಯೇ ಸ್ಪರ್ಧಿಗಳಿಗೆ ಟಾಸ್ಕ್ ನೀಡುತ್ತ, ಸರಿ ತಪ್ಪುಗಳನ್ನು ತಿದ್ದುತ್ತ ಶೋ ಮುನ್ನಡೆಸಿದ್ದರು. ಇದೀಗ ಇದೇ ಕ್ರೇಜಿಸ್ಟಾರ್ ವಿದೇಶಿ ನೆಲದಲ್ಲಿ ಕನ್ನಡದ ಬಾವುಟ ಹಾರಿಸಿ, ಹಳೇ ದಿನಗಳನ್ನು ಮೆಲುಕು ಹಾಕಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅಂದರೆ ಮೊದಲಿಗೆ ನೆನಪಾಗುವುದು ಸ್ಯಾಂಡಲ್‌ವುಡ್‌ನ ರೊಮ್ಯಾಂಟಿಕ್ ಹೀರೋ. ತಮ್ಮ ಸಿನಿಮಾಗಳ ಮೂಲಕ, ಆ ಸಿನಿಮಾಗಳ ಹಾಡುಗಳ ಮೂಲಕವೇ ಇಂದಿಗೂ ಅವರು ಹಚ್ಚ ಹಸಿರು. ವಯಸ್ಸಾದರೂ, ಯುವ ಮನಸ್ಸುಗಳಿಗೆ ಇಂದಿಗೂ ರವಿಮಾಮ ಎಂದರೆ ಇಷ್ಟ. ಅದರಂತೆ, ಕತಾರ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ, ಅಲ್ಲಿನ ಕನ್ನಡದ ಯುವ ಮನಸ್ಸುಗಳನ್ನು ತಮ್ಮ ಸ್ಫೂರ್ತಿದಾಯಕ ಮಾತಿನಿಂದಲೇ ಗಮನ ಸೆಳೆದಿದ್ದಾರೆ.
ಕತಾರ್‌ನಲ್ಲಿ ಕನ್ನಡ ರಾಜ್ಯೋತ್ಸವ
68ನೇ ಕನ್ನಡ ರಾಜ್ಯೋತ್ಸವನ್ನು ಇತ್ತೀಚೆಗಷ್ಟೇ ಕತಾರ್‌ನ ಕರ್ನಾಟಕ ಸಂಘ ಅಷ್ಟೇ ಅದ್ಧೂರಿಯಾಗಿ ಆಚರಿಸಿತು. ದೋಹಾದ ಡಿಪಿಎಸ್ ಶಾಲೆಯ ಸಭಾಂಗಣದಲ್ಲಿ ಕಲರ್‌ಫುಲ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್, ಹಿರಿಯ ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ), ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಮಣಿಕಂಠನ್, ಉಪಾಧ್ಯಕ್ಷರು ಸುಬ್ರಮಣ್ಯ ಹೆಬ್ಬಾಗಿಲು ಸೇರಿ ಹಲವರು ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಚಂದ್ರನ್ ತಮ್ಮ ವೃತ್ತಿ ಬದುಕಿನ ಹಾದಿಯನ್ನು ಮೆಲುಕು ಹಾಕಿದರು.
ನಿಮ್ಮ ಚಪ್ಪಾಳೆಗೆ ನಾನು ಸದಾ ಹಂಬಲಿಸ್ತೀನಿ
"ನೀವು ಕಿಂಗ್ ಥರ ಬೆಳೆದಿದ್ದೀರಾ ಸರ್, ನಿಮ್ಮನ್ನು ಹಾಗೆಯೇ ಟ್ರೀಟ್ ಮಾಡ್ತಿವಿ ಎಂದವರೇ ಹೆಚ್ಚು. ಆಗ ನಾನು ಅವರಿಗೆ ಹೇಳುತ್ತಿದ್ದೆ. ನಾನು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿಲ್ಲ. ಬದಲಿಗೆ ಚಿನ್ನದ ಹೃದಯಗಳ ಜತೆಗೆ ಹುಟ್ಟಿದ್ದೇನೆ. ಜೀವನ ಪೂರ್ತಿ ನಾನು ಹಂಬಲಿಸುವುದು ಏನೆಂದರೆ, ಯಾರಾದ್ರೂ ನನ್ನ ತಂದೆಯಷ್ಟು ಪ್ರೀತಿ ಕೊಡ್ತಾರಾ? ಎಂದು ಹುಡುಕಿದಾಗ, ಈ ರೀತಿಯ ಚಪ್ಪಾಳೆಯೇ ನನಗೆ ಹುಮ್ಮಸ್ಸು ಕೊಡುತ್ತದೆ" ಎಂದಿದ್ದಾರೆ.
ಯಶಸ್ಸನ್ನು ಸಂಭ್ರಮಿಸಿಲ್ಲ..
"ನಾನು ಈ ಸನ್ಮಾನಕ್ಕೆ ಈ ವರೆಗೂ ಬಂದೇ ಇಲ್ಲ. ಈ ವರೆಗೂ ಮಾಡಿರುವ ಸಿನಿಮಾ ನೋಡಿ ನನ್ನನ್ನು ಇಲ್ಲಿ ಕರೆಸಿಲ್ಲ. ಮತ್ತೆ ಪ್ರೇಮಲೋಕ ಸಿನಿಮಾ ಮಾಡಿ ಅನ್ನೋ ಕಾರಣಕ್ಕೆ ನಾನಿಲ್ಲಿ ಬಂದಿದ್ದೇನೆ. ಮಾಡಿರೋ ಕೆಲಸಕ್ಕೆ ಸನ್ಮಾನ ನಮಗ್ಯಾರಿಗೂ ಬೇಕಿಲ್ಲ. ಮುಂದಕ್ಕೆ ಮಾಡಿ ಸರ್ ಅನ್ನೋರು ಬೇಕು. ನಾನು ಹಂಸಲೇಖ ಸೇರಿ ಪ್ರೇಮಲೋಕ ಸಿನಿಮಾ ಮಾಡಿದಾಗ ಅದರ ಗೆಲುವನ್ನೂ ಹೆಗಲ ಮೇಲೆ ಹೊತ್ತೊಯ್ಯಲು ಸಮಯ ಇರಲಿಲ್ಲ. ಅದಾದ ಮೇಲೆ ರಣಧೀರ, ಕಿಂದರಿಜೋಗಿ, ರಾಮಾಚಾರಿ, ಹೀಗೆ ಸಾಲು ಸಾಲು ಸಿನಿಮಾ ನೀಡುತ್ತಲೇ ಬಂದ್ವಿ. ಆದರೆ, ಆ ಯಶಸ್ಸನ್ನು ಸಂಭ್ರಮಿಸಲ ಸಮಯ ಇರಲಿಲ್ಲ" ಎಂದಿದ್ದಾರೆ.
ನನ್ನ ಜೀವನವೇ ಹೋರಾಟ
"ನನ್ನ ಜೀವನವೇ ಹೋರಾಟದಿಂದ ಶುರುವಾಗಿದ್ದು. ನನ್ನಮ್ಮ ನನ್ನ ಅಬಾರ್ಷನ್ ಮಾಡಬೇಕೆಂದು ಪಪ್ಪಾಯ ತಿಂದಿದ್ದರು. ಅಂದ್ರೆ, ಮಕ್ಕಳು ಸಾಕು. ನಾನು ಬೇಡ ಅಂತ ಆ ನಿರ್ಧಾರಕ್ಕೆ ಬಂದಿದ್ದರು. ಅದನ್ನೂ ಮೀರಿ ಬಂದವನು ನಾನು. ಈಗಲೂ ಹೋರಾಡುತ್ತಿದ್ದೇನೆ. ತಾಯಿ ಗರ್ಭ ಗೆದ್ದು ಬಂದವನಿಗೆ, ಈ ಭೂಮಿಯನ್ನ ಗೆಲ್ಲೋಕೆ ಆಗೋದಿಲ್ವಾ? ಸಿನಿಮಾ ಇಂಡಸ್ಟ್ರಿಗೆ ಬಂದಾಗಲೂ, ನಿನಗೇನು ಗೊತ್ತಾಗಲ್ಲ ಸುಮ್ನಿರು ಎಂದು ಕೆಲವರು ಹೇಳಿದ್ರು. ಆಗಲೇ ಪ್ರೇಮ ಲೋಕ ಸಿನಿಮಾ ಮಾಡಿದ್ದೆ" ಎಂದು ಹಳೆಯದನ್ನು ನೆನಪಿಸಿಕೊಂಡಿದ್ದಾರೆ.