logo
ಕನ್ನಡ ಸುದ್ದಿ  /  ಮನರಂಜನೆ  /  ಸಿನಿ ಅಭಿಮಾನಿಗಳಿಗೆ ರವಿಚಂದ್ರನ್‌ ಹುಟ್ಟುಹಬ್ಬದ ಉಡುಗೊರೆ; 90 ರೂಗೆ ಚಿತ್ರಮಂದಿರಗಳಲ್ಲಿ ರವಿ ಮಾಮನ ಸಿನಿಮಾ ನೋಡಿ

ಸಿನಿ ಅಭಿಮಾನಿಗಳಿಗೆ ರವಿಚಂದ್ರನ್‌ ಹುಟ್ಟುಹಬ್ಬದ ಉಡುಗೊರೆ; 90 ರೂಗೆ ಚಿತ್ರಮಂದಿರಗಳಲ್ಲಿ ರವಿ ಮಾಮನ ಸಿನಿಮಾ ನೋಡಿ

Praveen Chandra B HT Kannada

May 30, 2024 10:38 AM IST

google News

ಸಿನಿ ಅಭಿಮಾನಿಗಳಿಗೆ ರವಿಚಂದ್ರನ್‌ ಹುಟ್ಟುಹಬ್ಬದ ಉಡುಗೊರೆ; 90 ರೂಗೆ ದಿ ಜಡ್ಜ್‌ಮೆಂಟ್‌ ನೋಡಿ

    • Ravichandran Birthday: ಇಂದು ರವಿಚಂದ್ರನ್‌ ಹುಟ್ಟುಹಬ್ಬ. ಈ ಪ್ರಯುಕ್ತ ದಿ ಜಡ್ಜ್‌ಮೆಂಟ್‌ ಸಿನಿಮಾವನ್ನು ಕೇವಲ 90 ರೂಪಾಯಿಗೆ ನೋಡುವ ಅವಕಾಶವನ್ನು ಚಿತ್ರತಂಡ ನೀಡಿದೆ. ಕರ್ನಾಟಕದ ಸಿಂಗಲ್‌ ಸ್ಕ್ರೀನ್‌ ಪರದೆಗಳಲ್ಲಿ ಈ ಆಫರ್‌ ನೀಡಲಾಗಿದೆ.
ಸಿನಿ ಅಭಿಮಾನಿಗಳಿಗೆ ರವಿಚಂದ್ರನ್‌ ಹುಟ್ಟುಹಬ್ಬದ ಉಡುಗೊರೆ; 90 ರೂಗೆ  ದಿ ಜಡ್ಜ್‌ಮೆಂಟ್‌ ನೋಡಿ
ಸಿನಿ ಅಭಿಮಾನಿಗಳಿಗೆ ರವಿಚಂದ್ರನ್‌ ಹುಟ್ಟುಹಬ್ಬದ ಉಡುಗೊರೆ; 90 ರೂಗೆ ದಿ ಜಡ್ಜ್‌ಮೆಂಟ್‌ ನೋಡಿ

ಬೆಂಗಳೂರು: ಇಂದು ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್‌ ರವಿಚಂದ್ರನ್‌ ಹುಟ್ಟುಹಬ್ಬ. ಕಳೆದ ವಾರ ರವಿಚಂದ್ರನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ದಿ ಜಡ್ಜ್‌ಮೆಂಟ್‌ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ರವಿಮಾಮನ ಹುಟ್ಟುಹಬ್ಬದ ಪ್ರಯುಕ್ತ ಇಂದು ದಿ ಜಡ್ಜ್‌ಮೆಂಟ್‌ ಸಿನಿಮಾವನ್ನು ಕೇವಲ 90 ರೂಪಾಯಿ ನೀಡಿ ನೋಡುವ ಅವಕಾಶವನ್ನು ಕರ್ನಾಟಕದ ಪ್ರೇಕ್ಷಕರಿಗೆ ಚಿತ್ರತಂಡ ನೀಡಿದೆ. ಕರ್ನಾಟಕದ ಯಾವುದೇ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿಯೂ ದಿ ಜಡ್ಜ್‌ಮೆಂಟ್‌ ಸಿನಿಮಾವನ್ನು ಇಷ್ಟು ಕಡಿಮೆ ದರಕ್ಕೆ ಟಿಕೆಟ್‌ ಕೊಂಡು ನೋಡುವ ಅವಕಾಶ ನೀಡಲಾಗಿದೆ.

ಏಕಪರದೆ ಚಿತ್ರಮಂದಿರಗಳಲ್ಲಿ ಮಾತ್ರ

ರವಿಚಂದ್ರನ್‌ ನಟನೆಯ ದಿ ಜಡ್ಜ್‌ಮೆಂಟ್‌ ಸಿನಿಮಾವನ್ನು ಕರ್ನಾಟಕದ ಏಕಪರದೆ ಚಿತ್ರಮಂದಿರಗಳಲ್ಲಿ ಮಾತ್ರ ಇಂದು 90 ರೂ.ಗೆ ನೋಡಬಹುದು. ಮಾಲ್‌, ಮಲ್ಟಿಫ್ಲೆಕ್ಸ್‌ಗಳಲ್ಲಿ ಈ ಅವಕಾಶ ದೊರಕದು. ಕೆಲವು ಮಾಲ್‌ ಮಲ್ಟಿಫ್ಲೆಕ್ಸ್‌ಗಳಲ್ಲಿ ನಾಳೆ ವಿಶ್ವ ಸಿನಿಮಾ ದಿನದ ಅಂಗವಾಗಿ ಮೇ 31ರಂದು 90 ರೂಪಾಯಿಗೆ ಸಿನಿಮಾ ನೋಡುವ ಅವಕಾಶವಿದೆ. ಇಂದು ರವಿಚಂದ್ರನ್‌ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕದ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಕಡಿಮೆ ದರದಲ್ಲಿ ದಿ ಜಡ್ಜ್‌ಮೆಂಟ್‌ ಸಿನಿಮಾವನ್ನು ನೋಡಬಹುದಾಗಿದೆ.

ದಿ ಜಡ್ಜ್‌ಮೆಂಟ್‌ ಸಿನಿಮಾ

ವಿ. ರವಿಚಂದ್ರನ್‌, ರಂಗಾಯಣ ರಘು, ಧನ್ಯಾ ರಾಮ್‌ ಕುಮಾರ್‌, ದಿಗಂತ್‌, ಕೃಷ್ಣ ಹೆಬ್ಬಾಳೆ, ಲಕ್ಷ್ಮೀ ಸೇರಿದಂತೆ ಹಲವು ಜನರು ನಟಿಸಿರುವ ದಿ ಜಡ್ಜ್‌ಮೆಂಟ್‌ ಸಿನಿಮಾ ಕಳೆದ ವಾರ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿತ್ತು. ದಿ ಜಡ್ಜ್‌ಮೆಂಟ್‌ ಸಿನಿಮಾಕ್ಕೆ ಗುರುರಾಜ್‌ ಕುಲಕರ್ಣಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದು ಕೋರ್ಟ್‌ ಡ್ರಾಮ. ಈ ಸಿನಿಮಾದ ಕುರಿತು ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಿ ಜಡ್ಜ್‌ಮೆಂಟ್‌ ಸಿನಿಮಾದ ಕಥೆಯೇನು?

ಇದು ನ್ಯಾಯಾಲಯದಲ್ಲಿ ನಡೆಯುವ ವಾದ ವಿವಾದವನ್ನು ಪ್ರಮುಖವಾಗಿಟ್ಟುಕೊಂಡ ಸಿನಿಮಾ. ರೈತಪರ ಹೋರಾಟಗಾರ್ತಿಯೊಬ್ಬರ ಕೊಲೆಯಲ್ಲಿ ಪ್ರಕರಣಕ್ಕೆ ಸಂಬಂಧವೇ ಇಲ್ಲದೆ ಬ್ಯಾಂಕ್‌ ಅಧಿಕಾರಿಯೊಬ್ಬರನ್ನು ಆರೋಪಿಯಾಗಿ ಮಾಡಲಾಗುತ್ತದೆ. ಆತನಿಗೆ ನ್ಯಾಯ ಕೊಡುವ ವಿಷಯವೇ ಈ ಸಿನಿಮಾದ ಪ್ರಮುಖ ಅಂಶ. ರವಿಚಂದ್ರನ್‌ ಇಲ್ಲಿ ಲಾಯರ್‌ ಆಗಿದ್ದಾರೆ. ದಿಗಂತ ಜೈಲು ಸೇರಿದ ಬ್ಯಾಂಕ್‌ ಅಧಿಕಾರಿಯಾಗಿದ್ದಾರೆ. ಚಿತ್ರವು ಮುಂದೇನಾಗಬಹುದು ಎಂದು ಊಹಿಸುವಂತೆ ಇದೆ. ವಾದ ವಿವಾದಗಳ ಸನ್ನಿವೇಶ ಒಂದಿಷ್ಟು ಬೋರ್‌ ಹೊಡೆಯಬಹುದು ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ರವಿಚಂದ್ರನ್‌ ಹುಟ್ಟುಹಬ್ಬ

ಕ್ರೇಜಿಸ್ಟಾರ್‌ ರವಿಚಂದ್ರನ್‌ 1961 ಮೇ 30ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದರು. ಇವರ ತಂದೆ ಎನ್‌. ವೀರಸ್ವಾಮಿ ಸಿನಿಮಾ ಪ್ರೊಡ್ಯುಸರ್‌ ಆಗಿದ್ದರು. ಪ್ರೇಮಿಗಳ ದಿನದಂದು ರವಿಚಂದ್ರನ್‌ ಸುಮತಿಯನ್ನು ವಿವಾಹವಾದರು. ಅಂದರೆ, ಫೆಬ್ರವರಿ 14, 1986ರಂದು ವಿವಾಹವಾದರು. ಇವರ ಮಗಳ ಹೆಸರು ಗೀತಾಂಜಲಿ. ಮನೋರಂಜನ್‌ ಮತ್ತು ವಿಕ್ರಮ್‌ ಇವರ ಇನ್ನಿಬ್ಬರು ಮಕ್ಕಳು. ಮನೋರಂಜನ್‌ 2017ರಲ್ಲಿ ಸಾಹೇಬ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ