‘ಡಿ ಬಾಸ್ ಹೊರ ಬಂದ್ಮೇಲೆ ಉತ್ತರ ಸಿಗುವ ರೀತಿಯಲ್ಲೇ ಸಿಗುತ್ತೆ’ ಉಮಾಪತಿ ವಿರುದ್ಧ ದರ್ಶನ್ ಫ್ಯಾನ್ಸ್ ಓಪನ್ ಬೆದರಿಕೆ!
Jun 19, 2024 02:27 PM IST
‘ಡಿ ಬಾಸ್ ಹೊರ ಬಂದ್ಮೇಲೆ ಉತ್ತರ ಸಿಗುವ ರೀತಿಯಲ್ಲೇ ಸಿಗುತ್ತೆ’ ಉಮಾಪತಿ ವಿರುದ್ಧ ದರ್ಶನ್ ಫ್ಯಾನ್ಸ್ ಓಪನ್ ಬೆದರಿಕೆ!
- ಸಾರ್ವಜನಿಕ ವೇದಿಕೆ ಮೇಲೆ ಉಮಾಪತಿ ಅವರಿಗೆ ಲೇ ತಗಡೇ, ಗುಮ್ಮುಸ್ಕೋತಿಯಾ ಎಂದಿದ್ದ ದರ್ಶನ್ ವಿರುದ್ಧ ಇದೀಗ ಅದೇ ಉಮಾಪತಿ ಶ್ರೀನಿವಾಸ್ ಗೌಡ ತಿರುಗಿ ಬಿದ್ದಿದ್ದಾರೆ. ದರ್ಶನ್ ಅವರಿಂದ ಏನೆಲ್ಲ ಸಮಸ್ಯೆ ಅನುಭವಿಸಿದ್ದೇನೆ ಎಂಬುದನ್ನು ಹೇಳಿಕೊಳ್ಳುತ್ತಿದ್ದಂತೆ, ದರ್ಶನ್ ಫ್ಯಾನ್ಸ್ ಬಹಿರಂಗವಾಗಿಯೇ ಇವರಿಗೆ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ.
Darshan Fans threaten: ನಟ ದರ್ಶನ್ ಮತ್ತು ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ನಡುವಿನ ಸಮರ ಮತ್ತೆ ಮುಂದುವರಿದಿದೆ. ಕೊಲೆ ಆರೋಪದಲ್ಲಿ ಬಂಧನವಾಗುತ್ತಿದ್ದಂತೆ ನಟ ದರ್ಶನ್ ವಿರುದ್ಧ ಜಿದ್ದಿಗೆ ಬಿದ್ದಂತೆ, ಹಳೇ ಘಟನಾವಳಿಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದಾರೆ ಉಮಾಪತಿ ಶ್ರೀನಿವಾಸ್ ಗೌಡ. "ಮಾರುತಿ ಕಾರಲ್ಲಿ ಹೋಗುವವನಿಗೆ ಒಂದು ನ್ಯಾಯ. ಲ್ಯಾಂಬೊರ್ಗಿನಿಯಲ್ಲಿ ಹೋಗುವವನಿಗೆ ಒಂದು ನ್ಯಾಯ ಅಂತ ಯಾವತ್ತೂ ಇರಬಾರದು" ಎಂದೆಲ್ಲ ಹೇಳಿಕೆ ನೀಡಿದ್ದರು. ದರ್ಶನ್ ವಿರುದ್ಧ ಸರಣಿ ಆರೋಪಗಳನ್ನೂ ಮಾಡುತ್ತಿದ್ದಾರೆ. ನಿರ್ಮಾಪಕರ ಈ ಆರೋಪವೇ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ.
ಕಾಟೇರ ಸಿನಿಮಾ ಯಶಸ್ಸಿನ ಬಳಿಕ ಸಾರ್ವಜನಿಕ ವೇದಿಕೆ ಮೇಲೆ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಲೇ ತಗಡೇ, ಗುಮ್ಮುಸ್ಕೋತಿಯಾ ಎಂದು ದರ್ಶನ್ ಜರಿದಿದ್ದರು. ಇದೀಗ ಅದೇ ಉಮಾಪತಿ ಶ್ರೀನಿವಾಸ್ ಗೌಡ ದರ್ಶನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ದರ್ಶನ್ ಅವರಿಂದ ಏನೆಲ್ಲ ಸಮಸ್ಯೆ ಅನುಭವಿಸಿದ್ದೇನೆ ಎಂಬುದನ್ನು ಸುದ್ದಿ ಮಾಧಯಮಗಳಿಗೆ ಹೇಳಿಕೊಳ್ಳುತ್ತಿದ್ದಂತೆ, ದರ್ಶನ್ ಫ್ಯಾನ್ಸ್ ಬಹಿರಂಗವಾಗಿಯೇ ಇವರಿಗೆ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ. ಏನಿದೆ ಬೆದರಿಕೆ ಟ್ವಿಟ್‌ನಲ್ಲಿ? ಇಲ್ಲಿದೆ ಓದಿ.
ಉಮಾಪತಿಗೆ ಬೆದರಿಕೆ ಹಾಕಿದ ದರ್ಶನ್ ಫ್ಯಾನ್ಸ್
Thoogudeepa D Team R ಟ್ವಿಟ್ಟರ್ ಖಾತೆಯಿಂದ ಬೆದರಿಕೆಯ ಪೋಸ್ಟ್ ಮಾಡಲಾಗಿದೆ. ಆ ಪೋಸ್ಟ್‌ನಲ್ಲಿ ಈ ರೀತಿ ಬರೆಯಲಾಗಿದೆ. "ಉಮಾಪತಿ ಅವರೇ ನೀವು ಆಡಿರುವ ಮಾತುಗಳಿಗೆ ಡಿ ಬಾಸ್ ರವರು ಹೊರ ಬಂದಮೇಲೆ ಉತ್ತರ ಸಿಗುವ ರೀತಿಯಲ್ಲೇ ಸಿಗುತ್ತೆ.. ಅದು ಆಗಿರಲಿ ಬಿಡಿ! 2021 ಫೆಬ್ರವರಿ 15 ಮಡಿಕೇರಿಯಲ್ಲಿ ರಾತ್ರಿ ಸರಿ ಸುಮಾರು 10 ರಿಂದ 11ರ ಸಮಯ, ರಾಬರ್ಟ್ ಚಿತ್ರದ ಟ್ರೈಲರ್ ಅನ್ನು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗಾಗಿ ಮುಂಚಿತವಾಗಿ ಡಿ ಬಾಸ್ ರವರು ಬಿಡುಗಡೆಯನ್ನು ನಿಮ್ಮ ಕೈನಿಂದಲೇ ಮಾಡಿಸ್ತಾರೆ, ಅದು ಕೂಡ ದೊಡ್ಡ ಪರದೆ ಮೇಲೆ… ಮಾಡುವ ಮುನ್ನ ನಮ್ಮ ನಿರ್ಮಾಪಕರ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು, ಟ್ರೈಲರ್ ಬಿಡುಗಡೆ ಮಾಡಲು ಒಂದು ಷರತ್ತು ಹಾಕುತ್ತಾರೆ. ಆ ಷರತ್ತು ಏನು ಅಂತ ನಿಮಗೆ ಮರೆತು ಹೋಗಿರಬಹುದು.
ಆದರೆ ನಾವು ಆ ಷರತ್ತು ಮರೆತಿಲ್ಲ, ಟ್ರೈಲರ್ ಬಿಡುಗಡೆ ಮಾಡ್ಬೇಕು ಅಂದ್ರೆ ನಮ್ಮ ನಿರ್ಮಾಪಕರ ಕೈಗೆ ನಿಮ್ಮ ಕೈಲಿ ಎಷ್ಟು ಹಣ ಕೊಡೋಕೆ ಆಗುತ್ತೋ ಅಷ್ಟು ಕೊಡಿ ಅಂದಾಗ ಕೇವಲ 45 ನಿಮಿಷಗಳ ಒಳಗೆ ಬರೋಬ್ಬರಿ 2 ಲಕ್ಷ ರೂ. ಸಂಗ್ರಹಣೆ ಆದಂತ ಹಣ ಕೊಟ್ಟೆವು. ಅದಕ್ಕೆ ಇನ್ನು ಸ್ವಲ್ಪ ತನ್ನ ಕೈನಿಂದ ಕೊಟ್ಟು ಹಣದಲ್ಲಿ, ತುಮಕೂರು ಸಿದ್ದಗಂಗಾ ಮಠಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಡಲಾಯ್ತು. ಅದು ಕೂಡ ನಿಮ್ಮ ಕೈನಿಂದಲೇ ಶಿರಾ ಅಭಿಮಾನಿ ಸಂಘದವರಿಗೆ ಕೊಡಿಸಿದ್ದು ಮರೆತು ಹೋಯಿತಾ ಸಾರ್. ಚೆನ್ನಾಗಿದ್ದಾಗ ಜತೆಯಲ್ಲಿ ಚನ್ನಾಗಿ ತಿಂದು ತೇಗಿ, ಈಗ ಆ ಮನುಷ್ಯನ ಮೇಲೆ ವಿಷ ಕಕ್ಕುವ ನಿಮಗೆ ನರಸಿಂಹ ಒಳ್ಳೆಯದು ಮಾಡಲಿ" ಎಂದು ಪೋಸ್ಟ್ ಹಾಕಿಕೊಂಡು ಡಿಲೀಟ್ ಮಾಡಿದ್ದಾರೆ.
ಕಾಲ ಕಾಯ್ದು ಬಾಲ ಕುಯ್ಯಬೇಕು.. ಉಮಾಪತಿ ಮಾತುಗಳು
ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಉಮಾಪತಿ ಶ್ರೀನಿವಾಸ್ ಗೌಡ, "ತಾಳ್ಮೆ ಅನ್ನೋದು ತುಂಬ ಮುಖ್ಯ. ಕಾಲ ಕಾಯ್ದು ಬಾಲ ಕುಯ್ಯಬೇಕು ಅನ್ನೋ ಮಾತನ್ನು ನಾನು ನಂಬೋನು, ಮನುಷ್ಯನಿಗೆ ತಾಳ್ಮೆ ಬಹು ಮುಖ್ಯ. ತಾಳ್ಮೆ ಕಳೆದುಕೊಂಡರೆ ಏನಾಗುತ್ತದೆ, ತಾಳ್ಮೆಯಿಂದ ಕಾದರೆ ಏನಾಗುತ್ತದೆ ಎಂಬುದೇ ಅಂದು ನಾನು ಹಾಕಿದ ಪೋಸ್ಟ್‌ನ ಹಿನ್ನೆಲೆ.
- ನಾವು ಒಂದು ಕಾಲದಲ್ಲಿ ನಾವು ಚೆನ್ನಾಗಿದ್ವಿ. ಆದರೆ ಕಾಲಾನಂತರ ದೇವ್ರೇ ನಮ್ಮನ್ನ ದೂರ ಮಾಡಿದೆ. ಬಾರಪ್ಪ ನೀನು ಸೇರಬೇಕಾಗಿರುವುದು ಆ ಗುಂಪಿಗಲ್ಲ. ನೀನು ಬಾಳಿ ಬದುಕುವಂಥವನು ಎಂದು ಹೊರಗಡೆ ಕರೆದುಕೊಂಡು ಬಂದ.
- ಮಾಡಿರುವ ಕೃತ್ಯವನ್ನು ಯಾರೂ ಒಪ್ಪಿಕೊಳ್ಳುವಂಥದ್ದಲ್ಲ. ಈ ಹಿಂದೆ ಏನೆಲ್ಲ ಸಮಸ್ಯೆ ಬಂದಿತ್ತೋ, ಆವತ್ತು ಇದೇ ರೀತಿ ಧ್ವನಿ ಎತ್ತಿದ್ರೆ, ಇಲ್ಲಿಯವರೆಗೂ ಬರ್ತಾಯಿರಲಿಲ್ಲ.
- ಗಿಡವಾಗಿ ಬಗ್ಗದು ಮರವಾಗಿ ಬಗ್ಗಿತೇ ಅನ್ನೋ ಮಾತಂತೆ, ಮನುಷ್ಯ ಆದವನು ತಿದ್ದಿಕೊಳ್ಳುವುದನ್ನು ಕಲೀಯಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಏಕೆ? ಅದೇ ರೀತಿ ಮನುಷ್ಯ ಆದವನು ಮರೆಯುವಂಥ ಗುಣ ಇಟ್ಟುಕೊಳ್ಳಬೇಕು.
- ಮಾಡಿದ್ದುಣ್ಣೋ ಮಾರಾಯ ಅನ್ನೋ ಮಾತಂತೆ ಅವರು ಮಾಡಿದ್ದು ಅವರು ಅನುಭವಿಸ್ತಾರೆ. ಸಾಧ್ಯವಾದಷ್ಟು ಪುಣ್ಯ ಜಾಸ್ತಿ ಮಾಡಿಕೊಳ್ಳುತ್ತ ಹೋಗಬೇಕು.
- ದೊಡ್ಡವರಿಗೂ ಒಂದೇ ಚಿಕ್ಕವರಿಗೂ ಒಂದೇ. ಒಂದು ತಲೆಯಲ್ಲಿ ಇಟ್ಕೊಳ್ಳಿ, ಮಾರುತಿ ಕಾರಲ್ಲಿ ಹೋಗುವವನಿಗೆ ಒಂದು ನ್ಯಾಯ. ಲ್ಯಾಂಬೊರ್ಗಿನಿಯಲ್ಲಿ ಹೋಗುವವನಿಗೆ ಒಂದು ನ್ಯಾಯ ಅಂತ ಯಾವತ್ತೂ ಇರಬಾರದು.
- ಸಂವಿಧಾನ ಬರೀಬೇಕಾದರೆ, ಡಾ, ಬಿ.ಆರ್ ಅಂಬೇಡ್ಕರ್ ಅವರು ಯಾರನ್ನೂ ತಲೆಯಲ್ಲಿ ಇಟ್ಟುಕೊಂಡು ಬರೆದಿಲ್ಲ. ಇವತ್ತು ಆ ಸಂವಿಧಾನಕ್ಕೆ ಆ ಗೌರವ ಸಿಕ್ಕಿದೆ. ನಾವು ನಂಬಿಕೊಂಡು ಬಂದವರಿಗೆ, ತಿನ್ನೋ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡಬಾರದು.