ನಾಯಿ ಮೇಲೆ ಆನೆ ದಾಳಿ ಮಾಡಿದಂತೆ ಆಯ್ತು; ದರ್ಶನ್ ಕೇಸ್ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯ
Jun 22, 2024 05:29 PM IST
ದರ್ಶನ್ ಕೇಸ್ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯ
- ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ದರ್ಶನ್ ಕುರಿತು ಟಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ. ದೊಡ್ಡ ಗಾತ್ರದ ಆನೆಯು ಸಣ್ಣ ಗಾತ್ರದ ನಾಯಿ ಮೇಲೆ ದಾಳಿ ಮಾಡಿದಂತೆ ಆಯ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಕನ್ನಡ ನಟ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ. ದೊಡ್ಡ ಆನೆಯು ಚಿಕ್ಕ ನಾಯಿ ಮೇಲೆ ದಾಳಿ ಮಾಡಿದಂತೆ ಇದೆ ಎಂದು ಅವರು ಹೇಳಿದ್ದಾರೆ. ಈ ಹಿಂದೆಯೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದರು.
ರಾಮ್ ಗೋಪಾಲ್ ವರ್ಮಾ ಏನಂದ್ರು?
"ರೇಣುಕಾ ಸ್ವಾಮಿ ಮೇಲೆ ದರ್ಶನ್ ದಾಳಿ ಮಾಡಿರುವುದು, ಆನೆಯು ಒಂದು ನಾಯಿ ಮೇಲೆ ದಾಳಿ ಮಾಡಿದಂತೆ ಇದೆ... ನಾಯಿ ಎಂದು ಅವಹೇಳನಕಾರಿಯಾಗಿ ನಾನು ಇಲ್ಲಿ ಹೇಳಿಲ್ಲ, ಗಾತ್ರದ ವಿಷಯದಲ್ಲಿ ಹೇಳಿದ್ದೇನೆ. ನಾಯಿ ಬೊಗಳಿತು ಎಂದು ಆನೆಯು ನಾಯಿ ಮೇಲೆ ದಾಳಿ ಮಾಡಿದ್ರೆ ಏನಾಗಬಹುದು? ಖಂಡಿತಾ ಸಾವು ಉಂಟಾಗಬಹುದು" ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಯೂಟ್ಯೂಬ್ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ ದರ್ಶನ್ ಪ್ರಕರಣದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. "ಇದು ಕೋಪದ ಕೈಗೆ ಬುದ್ದಿ ಕೊಟ್ಟ ಪರಿಣಾಮವಾಗಿ ನಡೆದಿರುವ ಘಟನೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕೆಟ್ಟ ಟ್ರೋಲ್‌ಗಳನ್ನು ನೋಡಿದಾಗಲೂ ಇದೇ ರೀತಿಯ ಕೋಪ ಬರಬಹುದು. ಈ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿರುವುದರಿಂದ ಹೆಚ್ಚು ಹೇಳುವುದಿಲ್ಲ. ಆದರೆ, ನನ್ನ ಅಂದಾಜಿನ ಪ್ರಕಾರ ದರ್ಶನ್‌ಗೆ ಬಹುಶಃ ಆತನನ್ನು ಕೊಲೆ ಮಾಡುವ ಯೋಜನೆ ಇದ್ದಿರಲಿಕ್ಕಿಲ್ಲ. ಈಗ ನಾನು ತುಂಬಾ ಪವರ್‌ಫುಲ್ ಆಗಿದ್ದಾಗ, ಯಾರಾದರೂ ನನ್ನ ಬಗ್ಗೆ ಹೇಳಿದಾಗ, ನನ್ನಲ್ಲಿನ ಕೋಪ ಸ್ಫೋಟಗೊಳ್ಳುತ್ತದೆ. ಆ ಕೋಪವನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ನನ್ನ ಎದುರು ಯಾರಾದರೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಒಂದು ಏಟು ಕೊಟ್ಟು ಹೋಗಬಹುದು. ಆದರೆ, ಆ ರೀತಿ ಮಾಡುವವ ನನ್ನ ಮುಂದೆ ಇಲ್ಲದೆ ಇದ್ದರೆ, ಇಮೇಲ್ ಅಥವಾ ಎಸ್‌ಎಂಎಸ್ ಮಾಡಿದರೆ ನಾನು ಅದನ್ನು ಕಡೆಗಣಿಸಬಹುದು" ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
"ಪವಿತ್ರಾ ಗೌಡಗೆ ಯಾರೋ ಕೆಟ್ಟ ಸಂದೇಶ ಕಳುಹಿಸಿದ್ದು, ಅದನ್ನು ಇವರ ಗಮನಕ್ಕೆ ತಂದದ್ದು, ಪಾಠ ಕಲಿಸಲು ಮುಂದಾಗಿದ್ದು, ಅದಾದ ಬಳಿಕ ನಡೆದದ್ದು, ಹೀಗೆಲ್ಲ ಆಗುತ್ತೆ ಎಂದು ಯಾರೂ ಅಂದುಕೊಂಡಿರಲಿಕ್ಕಿಲ್ಲ. ಸಿನಿಮಾದಲ್ಲಿ ಮೊದಲು ಸ್ಕ್ರಿನ್‌ಪ್ಲೇ ಬರೆಯುತ್ತಾರೆ. ಬಳಿಕ ಆಕ್ಟಿಂಗ್ ಮಾಡುತ್ತಾರೆ. ಈ ಪ್ರಕರಣದಲ್ಲಿ ಇದು ಉಲ್ಟಾ ಆಗಿದೆ. ಮೊದಲು ನಟನೆ ಬಳಿಕ ಸಂಭಾಷಣೆ ಬರೆದಂತೆ ಆಗಿದೆ. ಕೊಲೆ ಮಾಡಿಯಾಗಿದೆ, ಬಳಿಕ ಶವವನ್ನು ಏನು ಮಾಡಬೇಕು, ಈ ಪ್ರಕರಣದಿಂದ ಹೇಗೆ ಬಚಾವಾಗುವುದು... ಇಂತಹ ಸ್ಕ್ರೀನ್‌ಪ್ಲೇಯನ್ನು ಮತ್ತೆ ಬರೆಯಲು ಯತ್ನಿಸಲಾಗಿದೆ. ಆದರೆ, ಇದು ಸಾಧ್ಯವಿಲ್ಲ. ಈಗಿನ ಜಗತ್ತನ್ನು ನಾವು ಒಪ್ಪಿಕೊಂಡಿದ್ದೇವೆ. ಟ್ರೋಲ್‌ಗಳು ನಮ್ಮ ಬದುಕಿನ ಭಾಗವಾಗಿವೆ. ಅದನ್ನು ಒಪ್ಪಿಕೊಳ್ಳಬೇಕು. ನಾನು ಏನು ಟ್ವೀಟ್ ಮಾಡಿದರೂ ಅದರಲ್ಲಿ ಶೇಕಡ 90 ಕಾಮೆಂಟ್‌ಗಳು ಕೆಟ್ಟದಾಗಿಯೇ ಇರುತ್ತವೆ. ಇಂತಹ ವಿಷಯಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದೇ ತಪ್ಪು. ಟ್ರೋಲರ್‌ಗಳು ನಿಜಕ್ಕೂ ಇಂತಹ ವಿಷಯಗಳನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕೆಂದು ಟ್ರೋಲರ್‌ಗಳು ಬಯಸುತ್ತಾರೆ" ಹೀಗೆ ಆರ್‌ಜಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ.