Kaatera: ‘ಕಾಟೇರ ಟೈಟಲ್ ಇಟ್ಟಿದ್ದೂ ನಾನೇ, ಕಥೆ ಬರೆಸಿದ್ದೂ ನಾನೇ’; ದರ್ಶನ್ ಸಿನಿಮಾ ಬಗ್ಗೆ ‘ರಾಬರ್ಟ್’ ನಿರ್ಮಾಪಕ ಉಮಾಪತಿ ಮಾತು
Jan 21, 2024 03:58 PM IST
Kaatera: ‘ಕಾಟೇರ ಟೈಟಲ್ ಇಟ್ಟಿದ್ದೂ ನಾನೇ, ಕಥೆ ಬರೆಸಿದ್ದೂ ನಾನೇ’; ದರ್ಶನ್ ಸಿನಿಮಾ ಬಗ್ಗೆ ‘ರಾಬರ್ಟ್’ ನಿರ್ಮಾಪಕ ಉಮಾಪತಿ ಹೇಳಿದ್ದೀಗೆ
- ದರ್ಶನ್ ನಾಯಕನಾಗಿ ನಟಿಸಿರುವ ಕಾಟೇರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈಗ ಇದೇ ಚಿತ್ರದ ಶೀರ್ಷಿಕೆ ಕೊಟ್ಟಿದ್ದು ಮತ್ತು ಕಥೆ ಬರೆಸಿದ್ದು ನಾನೇ ಎಂದು ಹೇಳಿದ್ದಾರೆ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ.
Kaatera: ಸ್ಯಾಂಡಲ್‌ವುಡ್‌ನಲ್ಲಿ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಕಾಟೇರ ಸಿನಿಮಾ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾಗಿ ಇಂದಿಗೆ ಬರೋಬ್ಬರಿ 25 ದಿನಗಳನ್ನು ಪೂರೈಸಿದರೂ, ಇಂದಿಗೂ ಅದೇ ಗತ್ತಿನಲ್ಲಿ ಚಿತ್ರಮಂದಿರದಲ್ಲಿ ಮುನ್ನುಗ್ಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ 200 ಪ್ಲಸ್ ಕೋಟಿ ಗಳಿಕೆ ಕಂಡೂ ಯಶಸ್ಸಿನ ಪ್ರಯಾಣ ಮುಂದುವರಿಸಿದೆ.
ನಿರ್ದೇಶಕ ತರುಣ್ ಸುಧೀರ್ ಚೌಕ ಮತ್ತು ರಾಬರ್ಟ್ ಬಳಿಕ ಕಾಟೇರವನ್ನು ಗೆಲ್ಲಿಸಿದ್ದಾರೆ. ಈ ಮೂಲಕ ಮೂರನೇ ಹಿಟ್ ಚಿತ್ರವನ್ನು ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ ಕಾಟೇರ ಕರುನಾಡಿನ ಕಥೆ ಎಂದೇ ಹೇಳಿಕೊಂಡು, 70ರ ಕಾಲಘಟ್ಟಕ್ಕೆ ನೋಡುಗರನ್ನು ಕರೆದೊಯ್ದಿತ್ತು. ಕಥೆ, ಸಂಭಾಷಣೆ, ಮೇಕಿಂಗ್‌ನಿಂದಲೂ ಗಮನ ಸೆಳೆದಿತ್ತು.
ಇದೀಗ ಇದೇ ಕಾಟೇರ ಕರುನಾಡಲ್ಲಿ ಮೋಡಿ ಮಾಡಿದೆ. ವಿದೇಶಗಳಲ್ಲೂ ಅದೇ ಅಬ್ಬರವನ್ನು ಮುಂದುವರಿಸುತ್ತಿದೆ. ಇದೆಲ್ಲದರ ಜತೆಗೆ ಪರಭಾಷೆಗಳಿಗೂ ತೆರಳಲು ಡಬ್ಬಿಂಗ್ ಕೆಲಸದಲ್ಲಿ ಬಿಜಿಯಾಗಿದೆ ಚಿತ್ರಂಡ. ಇದೀಗ ಇದೇ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ಕಂಡು ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೈಟಲ್ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಕಾಟೇರ ಟೈಟಲ್ ಕೊಟ್ಟಿದ್ದೇ ನಾನು..
"ಕಾಟೇರ ಕಥೆ ಬರೆಸಿದವನು ನಾನು. ನನಗೆ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಹೋಗಬೇಕು. ಮಕ್ಕಳಿಗೆ ಪರೀಕ್ಷೆ ತಯಾರಿ ನಡೀತಿತ್ತು. ಕಾಟೇರ ಟೈಟಲ್ ಇಟ್ಟವನು ನಾನೇ, ಕಥೆ ಬರೆಸಿದವನು ನಾನೇ. ಇರಲಿ ತೊಂದರೆ ಇಲ್ಲ. ಏಕೆಂದರೆ, ಯಾರ್ಯಾರಿಗೆ ಏನೆಲ್ಲ ಧಕ್ಕಬೇಕು ಅಂತ ಇರುತ್ತೋ ಅದು ಧಕ್ಕುತ್ತೆ. ನನ್ನ ಖುಷಿ ಏನು ಅಂದ್ರೆ ನನ್ನ ಜಡ್ಜ್‌ಮೆಂಟ್ ಎಲ್ಲೂ ರಾಂಗ್ ಆಗಿಲ್ಲ ಅಂತ. ಒಬ್ಬ ನಿರ್ಮಾಪಕನಾಗಿ ಒಳ್ಳೆ ಸ್ಕ್ರಿಪ್ಟ್ ಆಯ್ಕೆ ಮಾಡಿದ ಖುಷಿಯಿದೆ"
"ರಾಬರ್ಟ್ ರಿಲೀಸ್ ಆಗಿರಲಿಲ್ಲ. ನಾವು ತರುಣ್ ಕೂತ್ಕೊಂಡು ರೈಟರ್‌ಗಳನ್ನೆಲ್ಲ ಒಂದು ಕಡೆ ಸೇರಿಸಿ 'ಕಾಟೇರ' ಕಥೆ ಬರೆಸಿದ್ವಿ. ಖುಷಿಯಿದೆ. ನನಗೆ ರಾಕ್‌ಲೈನ್ ಸರ್ ಅಂದ್ರೆ ಅಷ್ಟೇ ಪ್ರೀತಿಯಿದೆ. ಒಂದು ಬ್ಯಾನರ್ ನಡೆಸಿಕೊಂಡು ಹೋಗ್ತಿದ್ದೇನೆ ಎಂದರೆ ಮೂವರು ವ್ಯಕ್ತಿಗಳನ್ನು ನೆನಪಿಸಿಕೊಳ್ಳುತ್ತೇನೆ. ವೀರಾಸ್ವಾಮಿ, ಪಾರ್ವತಮ್ಮ ರಾಜ್‌ಕುಮಾರ್ ಮತ್ತು ರಾಕ್‌ಲೈನ್. ನಮಗೆ ಸದ್ಯ ಕಾಣುವವರು ರಾಕ್‌ಲೈನ್ ಅವರು. ಅವರ ಬ್ಯಾನರ್ ನಮ್ಮ ಬ್ಯಾನರ್ ಇದ್ದಂತೆ.
ಕಾಟೇರ ನೀವೇ ಮಾಡಬೇಕಿತ್ತು ಎಂಬುದರ ಬಗ್ಗೆ ಮಾತನಾಡಿದ ಉಮಾಪತಿ, "ಕಾಟೇರ ವಿಚಾರದಲ್ಲಿ ನನ್ನ ಜಡ್ಜ್‌ಮೆಂಟ್ ಎಲ್ಲೂ ತಪ್ಪಲಿಲ್ಲ. ಯಾರ್ಯಾರಿಗೆ ಏನು ದಕ್ಕಬೇಕೋ ಅದು ದಕ್ಕುತ್ತದೆ. ಕಥೆ ಮಾಡಿಕೊಂಡ್ವಿ, ದರ್ಶನ್ ಸರ್ ಇಲ್ಲ ಇದು ಈ ಬ್ಯಾನರ್‌ನಲ್ಲಿ ನಿರ್ಮಾಣ ಆಗಬೇಕು ಅಂತ ಅವರು ನಿರ್ಧರಿಸಿದ್ರು. ಆಗಿದೆ ಅಷ್ಟೇ" ಎಂದಿದ್ದಾರೆ ಉಮಾಪತಿ.
ಕಾಟೇರ ಟೈಟಲ್ ಕೊಟ್ಟಿದ್ದು ದರ್ಶನ್ ಎಂದ ತರುಣ್!
ಕಾಟೇರ ಟೈಟಲ್ ಕೊಟ್ಟಿದ್ದು ನಾನು ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳುತ್ತಿದ್ದರೆ, ಮತ್ತೊಂದು ಕಡೆ ಇದೇ ಕಾಟೇರ ಟೈಟಲ್ ಕೊಟ್ಟಿದ್ದು ದರ್ಶನ್ ಅವರು ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ. ಪವರ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ.
ಹೀಗೆ ಟೈಟಲ್ ವಿಚಾರವಾಗಿ ಪ್ರಶ್ನೆ ಎದುರಾದಾಗ ಉತ್ತರಿಸಿದ ಅವರು, “ಕಾಟೇರ ಟೈಟಲ್ ದರ್ಶನ್ ಅವರೇ ಕೊಟ್ಟಿದ್ದೆ. ಆ ಟೈಟಲ್ ಇಟ್ಟು ಅನೌನ್ಸ್ ಮಾಡಿದ ಮೇಲೆ ಆಕಸ್ಮಿಕ ಚಿತ್ರದಲ್ಲಿಯೂ ತೂಗುದೀಪ ಶ್ರೀನಿವಾಸ್ ಅವರು ಕಾಟಯ್ಯ ಅನ್ನೋ ಹೆಸರಿನ ಪಾತ್ರ ಮಾಡಿದ್ದಾರೆ ಎಂಬುದು ಗೊತ್ತಾಯಿತು. ಒಂದು ರೀತಿ ಎಲ್ಲವೂ ಕಾಕತಾಳೀಯ” ಎಂದಿದ್ದಾರೆ ತರುಣ್.