ಬ್ಲಿಂಕ್‌ಗೆ ಬಹುಪರಾಕ್ ಸಿಗ್ತಿದ್ದಂತೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್ ಶೆಟ್ಟಿ
May 18, 2024 09:15 PM IST
ಬ್ಲಿಂಕ್‌ಗೆ ಬಹುಪರಾಕ್ ಸಿಗ್ತಿದ್ದಂತೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್ ಶೆಟ್ಟಿ
- ದೀಕ್ಷಿತ್ ಶೆಟ್ಟಿ ನಟನೆಯ ಬ್ಲಿಂಕ್ ಸಿನಿಮಾಕ್ಕೆ ಒಟಿಟಿಯಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಗುತ್ತಿದೆ. ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಇದೇ ಹೈಪ್‌ಅನ್ನು ಎನ್‌ಕ್ಯಾಶ್ ಮಾಡಿಕೊಂಡಿರುವ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ತಂಡ ಚಿತ್ರದ ಹೊಸ ಲುಕ್ ಬಿಡುಗಡೆ ಮಾಡಿದೆ.
Bank of Bhagyalakshmi: ಕನ್ನಡದಲ್ಲಿ ದಿಯಾ ಸಿನಿಮಾ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ನಟ ದೀಕ್ಷಿತ್ ಶೆಟ್ಟಿ, ಆ ಸಿನಿಮಾ ಬಳಿಕ ಟಾಲಿವುಡ್‌ನಲ್ಲೂ ದಸರಾ ಚಿತ್ರದ ಮೂಲಕ ಕಮಾಲ್ ಮಾಡಿದರು. ಈಗ ದೀಕ್ಷಿತ್ ಶೆಟ್ಟಿ ನಟನೆಯ ಬ್ಲಿಂಕ್ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಬಳಿಕ ಒಟಿಟಿಯಲ್ಲಿಯೂ ಸದ್ಯ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟನೆಗೂ ಮೆಚ್ಚುಗೆ ಸಿಗುತ್ತಿದೆ. ಆ ಚಿತ್ರದ ನಿರ್ದೇಶಕ ಸಾಹಸಕ್ಕೂ ಎಲ್ಲೆಡೆಯಿಂದ ಬಹುಪರಾಕ್ ಸಿಗುತ್ತಿದೆ. ಇದೇ ಹೈಪ್‌ಅನ್ನು ಎನ್‌ಕ್ಯಾಶ್ ಮಾಡಿಕೊಂಡಿರುವ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ತಂಡ ಚಿತ್ರದ ಹೊಸ ಲುಕ್ ಬಿಡುಗಡೆ ಮಾಡಿದೆ. ಗನ್ ಹಿಡಿದು ಖದರ್ ಅಲ್ಲಿ ನಿಂತಿದ್ದಾರೆ ದೀಕ್ಷಿತ್.
ರಂಗಿ ತರಂಗ, ಅವನೇ ಶ್ರೀಮನ್ನಾರಾಯಣ ಸಿನಿಮಾ ಖ್ಯಾತಿಯ ನಿರ್ಮಾಪಕ ಹೆಚ್.ಕೆ ಪ್ರಕಾಶ್ ತಮ್ಮ ನಿರ್ಮಾಣದ 5 ನೇ ಚಿತ್ರದ ಪೋಸ್ಟರ್ ಇತ್ತೀಚಿಗೆ ಬಿಡುಗಡೆಯಾಗಿದೆ. ದಿಯಾ , ದಸರಾ, KTM ಹಾಗೂ ಬ್ಲಿಂಕ್ ಅಭಿನಯಕ್ಕೆ ಹೆಸರು ಮಾಡಿದ ಮೇಲೆ ತೆಲುಗು, ಮಲಯಾಳಂಗಳಲ್ಲಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಬೃಂದಾ ಆಚಾರ್ಯ ಈ ಚಿತ್ರದ ನಾಯಕಿ. ಪ್ರೇಮಂ ಪೂಜ್ಯಂ ಹಾಗೂ ಕೌಸಲ್ಯ ಸುಪ್ರಜಾ ಯಶಸ್ಸಿನ ಬಳಿಕ ಬೃಂದಾ ಆಚಾರ್ಯ ಸನ್ ಆಫ್ ಸತ್ಯಮೂರ್ತಿ ಚಿತ್ರದಲ್ಲಿ ಬಿಜಿ ಆಗಿದ್ದಾರೆ.
ಹಾಸ್ಯ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ..
ಹಾಸ್ಯ ಪಾತ್ರದ ಹುಡುಕಾಟದಲ್ಲಿದ್ದ ನಟ ದೀಕ್ಷಿತ್ ಶೆಟ್ಟಿ ಬಯಸಿದಂತೆ ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನ ಚಿತ್ರದಲ್ಲಿ ವಿಭಿನ್ನ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ದಿಯಾ, ದಸರಾ, ಬ್ಲಿಂಕ್ ಯಶಸ್ಸಿನ ಬಳಿಕ ಸಾಲು ಸಾಲು ಅವಕಾಶಗಳನ್ನು ಪಡೆದ ದೀಕ್ಷಿತ್, ಸದ್ಯ ತಮಿಳು , ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಅಭಿಷೇಕ್ ನಿರ್ದೇಶನದ ಸಿನಿಮಾ
ಚಿತ್ರಕ್ಕೆ ನವ ನಿರ್ದೇಶಕ ಅಭಿಷೇಕ M ಅವರ ನಿರ್ದೇಶನವಿದೆ. ನಿರ್ದೇಶಕ ಸಿಂಪಲ್ ಸುನಿ ಜೊತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ', ‘ಬಹುಪರಾಕ್' ಮತ್ತು ‘ಆಪರೇಷನ್ ಅಲಮೇಲಮ್ಮ' ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಹಾಗೂ ಕೆಲ ಸಿನಿಮಾಗಳಿಗೆ ಸಂಕಲನ ಮಾಡಿದ ಅನುಭವ ಇವರಿಗಿದೆ. 'ಪಿನಾಕ' ಎಂಬ VFX ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಮೂಲಕ ಚೊಚ್ಚಲ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ.
ಬ್ಯಾಂಕ್ ದರೋಡೆಗೆ ಹೊರಟವರ ಕಥೆ
ಬ್ಯಾಂಕ್‌ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಹಾಸ್ಯ ಪ್ರಧಾನ ಕಥಾಹಂದರ ಈ ಚಿತ್ರ ಒಳಗೊಂಡಿದೆ. ಸಹಕಲಾವಿದರಾಗಿ ಸಾಧುಕೋಕಿಲ, ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ, ಭರತ್, ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಮುಂತಾದ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ
ಶೀಘ್ರದಲ್ಲಿ ತೆರೆಗೆ
ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗ ಸುತ್ತ 80 ಪ್ರತಿಶತ ಚಿತ್ರೀಕರಣ ಮುಗಿದಿದೆ. ಮುಂದಿನ ತಿಂಗಳಿನೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಆದಷ್ಟು ಬೇಗ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ. ದೀಕ್ಷಿತ್ ಕನ್ನಡದ ಜತೆಗೆ ತೆಲುಗಿನಲ್ಲೂ ಗುರುತಿಸಿಕೊಂಡಿದ್ದಾರೆ. ಹಾಗಾಗಿಯೇ ನಿರ್ಮಾಪಕರು ಚಿತ್ರವನ್ನು ಕನ್ನಡದ ಜೊತೆಗೆ ತೆಲುಗಿನಲ್ಲಿ ತೆರೆಮೇಲೆ ತರಲು ಸಜ್ಜಾಗಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ನಿರ್ದೇಶನ, ರಘು ಮೈಸೂರ್ ಕಲಾ ನಿರ್ದೇಶನ, ಭೂಷಣ್ ಮಾಸ್ಟರ್ ನೃತ್ಯ ಈ ಚಿತ್ರಕ್ಕಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)