21 ದೇಶಗಳ 27 ಪತ್ರಕರ್ತರಿಗೆ ಧ್ರುವ ಸರ್ಜಾ ‘ಮಾರ್ಟಿನ್’ ಟೀಮ್‌ನಿಂದ ಭಾರತಕ್ಕೆ ಆಹ್ವಾನ; 13 ಭಾಷೆಗಳಲ್ಲಿ ಟ್ರೇಲರ್ ಲಾಂಚ್
Jul 31, 2024 06:30 AM IST
21 ದೇಶಗಳ 27 ಪತ್ರಕರ್ತರಿಗೆ ಧ್ರುವ ಸರ್ಜಾ ಮಾರ್ಟಿನ್ ಟೀಮ್‌ನಿಂದ ಆಹ್ವಾನ; 13 ಭಾಷೆಗಳಲ್ಲಿ ಟ್ರೇಲರ್ ಲಾಂಚ್
- ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದಿಂದ ಸರಣಿ ಅಪ್‌ಡೇಟ್‌ಗಳು ಹೊರಬಿದ್ದಿವೆ. ಅಕ್ಟೋಬರ್ 11ರಂದು ಪ್ಯಾನ್ ಇಂಡಿಯಾ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಸಿನಿಮಾ ರಿಲೀಸ್ ಆಗಲಿದೆ. ಅದರಂತೆ ಆಗಸ್ಟ್ 5ರಂದು 13 ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಲಿದೆ.
Martin Trailer Launch Update: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್‌ಗೆ ಹತ್ತಿರ ಬರುತ್ತಿದ್ದಂತೆ, ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದೆ. ವಿಎಫ್‌ಎಕ್ಸ್ ವಿಚಾರದಲ್ಲಿ ದೊಡ್ಡ ಲೂಟಿಯೇ ನಡೆದಿದೆ ಎಂದು ನಿರ್ಮಾಪಕ ಉದಯ್ ಮೆಹ್ತಾ ನಿರ್ದೇಶಕ ಎ.ಪಿ ಅರ್ಜುನ್ ವಿರುದ್ಧವೇ ಆರೋಪಿಸಿದ್ದರು. ಇದೀಗ ಅದೆಲ್ಲವೂ ಮುಗಿದ ಅಧ್ಯಾಯ. ಮುನಿಸು ಮರೆತು ಸಿನಿಮಾ ಬಗ್ಗೆ ಮಾಹಿತಿ ನೀಡಲೆಂದೇ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಟ್ರೇಲರ್ ಬಿಡುಗಡೆ ಯಾವಾಗ, ಪ್ರಮೋಷನ್ ವಿಚಾರ ಹೇಗಿರಲಿವೆ ಎಂಬಿತ್ಯಾದಿ ಅಪ್‌ಡೇಟ್‌ಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ.
ಆಗಸ್ಟ್ 5ರಂದು ಮಾರ್ಟಿನ್ ಟ್ರೇಲರ್
ಅಕ್ಟೋಬರ್ 11ರಂದು ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಈ ನಡುವೆ ಪ್ರಚಾರ ಕಣಕ್ಕಿಳಿದಿರುವ ತಂಡ, ಆಗಸ್ಟ್ 5ರಂದು ಸಂಜೆ 5;55ಕ್ಕೆ ಮಾರ್ಟಿನ್ ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ಸ್ವತಃ ಚಿತ್ರದ ನಾಯಕ ಧ್ರುವ ಸರ್ಜಾ ರಿವೀಲ್ ಮಾಡಿದ್ದಾರೆ.
13 ಭಾಷೆಗಳಲ್ಲಿ ಟ್ರೇಲರ್
ಈ ವರೆಗೂ ಪ್ಯಾನ್ ಇಂಡಿಯಾ ಸಿನಿಮಾಗಳೆಂದರೆ ಐದು ಭಾಷೆಗಳಲ್ಲಿ ಸಿನಿಮಾಗಳು ತೆರೆಗೆ ಬರುತ್ತಿದ್ದವು. ಅದರಂತೆ 5 ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಿದ ಉದಾಹರಣೆಗಳೇ ಹೆಚ್ಚು. ಆದರೆ, ಮಾರ್ಟಿನ್ ಮಾತ್ರ ಅದರಲ್ಲಿಯೂ ಕೊಂಚ ಡಿಫರೆಂಟ್. ಅಂದರೆ, ಒಂದಲ್ಲ ಎರಡಲ್ಲ ಬರೋಬ್ಬರಿ 13 ಭಾಷೆಗಳಲ್ಲಿ ಮಾರ್ಟಿನ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಜತೆಗೆ ಬಂಗಾಳಿ, ಕೊರಿಯಾ, ಅರೇಬಿಕ್, ರಷ್ಯನ್, ಚೈನೀಸ್, ಇಂಗ್ಲೀಷ್ ಸೇರಿ ಒಟ್ಟು 13 ಭಾಷೆಗಳಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ.
ಮುಂಬೈನಲ್ಲಿ ಟ್ರೇಲರ್ ಲಾಂಚ್
ಮಾರ್ಟಿನ್ ಸಿನಿಮಾದ ಟ್ರೇಲರ್‌ಅನ್ನು ಮುಂಬೈನಲ್ಲಿ ರಿಲೀಸ್ ಮಾಡಲು ನಿರ್ಮಾಪಕ ಉದಯ್ ಕೆ ಮೆಹ್ತಾ ಪ್ಲಾನ್ ಮಾಡಿದ್ದಾರೆ. ಅದರಂತೆ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ದೇಶದ ವಿವಿಧ ಮೂಲೆಗಳಿಂದ ಪತ್ರಕರ್ತರು ಆಗಮಿಸುತ್ತಿದ್ದರು. ಇದೀಗ ಮಾರ್ಟಿನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಾಗಿರುವುದರಿಂದ ವಿದೇಶಿ ಪತ್ರಕರ್ತರನ್ನೂ ಚಿತ್ರತಂಡ ಆಹ್ವಾನಿಸಿದೆ.
21 ದೇಶಗಳ 27 ಪತ್ರಕರ್ತರಿಗೆ ಆಹ್ವಾನ
ದೇಶದ ಬೇರೆ ಬೇರೆ ರಾಜ್ಯಗಳ ಸಿನಿಮಾ ಪತ್ರಕರ್ತರು ಮಾರ್ಟಿನ್ ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ಭಾಗವಹಿಸಲಿದ್ದಾರೆ. ಇವರುಗಳ ಜತೆಗೆ ಇಂಗ್ಲೆಂಡ್, ಅಮೇರಿಕಾ, ದುಬೈ, ಕೊರಿಯಾ, ರಷ್ಯಾ, ಮಲೇಷ್ಯಾ, ಜಪಾನ್ ಸೇರಿ 21 ದೇಶಗಳ ಒಟ್ಟು 27 ಸಿನಿಮಾ ಪತ್ರಕರ್ತರು ಭಾಗವಹಿಸಲಿದ್ದಾರೆ. ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಅಂತಾರಾಷ್ಟ್ರೀಯ ಸಿನಿಮಾ ಸುದ್ದಿಗೋಷ್ಠಿಯೊಂದನ್ನು ಕನ್ನಡದ ಸಿನಿಮಾ ಆಯೋಜನೆ ಮಾಡುತ್ತಿರುವುದು ಇದೇ ಮೊದಲಾಗಿದ್ದು, ಸ್ಯಾಂಡಲ್‌ವುಡ್ ಪಾಲಿಗಿದು ಹೆಗ್ಗಳಿಕೆಯ ವಿಷಯ.
ಆಗಸ್ಟ್ 4ರಂದೇ ಟ್ರೇಲರ್ ನೋಡಬಹುದು..
ಈ ಹಿಂದೆ ಇದೇ ಮಾರ್ಟಿನ್ ಸಿನಿಮಾದ ಟೀಸರ್‌ಅನ್ನು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಟ್ರೇಲರ್ ಸಹ ಒಂದು ದಿನ ಮುಂಚಿತವಾಗಿಯೇ ಬಿಡುಗಡೆ ಆಗಲಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡುವ ಮೂಲಕ ಪೇಡ್ ಶೋ ವ್ಯವಸ್ಥೆ ಮಾಡಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಇನ್ನು ರವಿ ಬಸ್ರೂರು ಸಂಗೀತ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ.