ಧರ್ಮಬೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕೆ ಡಿಂಗ್ರಿ ನಾಗರಾಜ್ ಪುತ್ರ ಹೀರೋ!; AI ಲುಕ್‌ನಲ್ಲಿ ರಾಜವರ್ಧನ್ ಫೋಟೋಗಳು ವೈರಲ್
May 29, 2024 03:21 PM IST
ಧರ್ಮಬೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕೆ ಡಿಂಗ್ರಿ ನಾಗರಾಜ್ ಪುತ್ರ ಹೀರೋ!; AI ಲುಕ್‌ನಲ್ಲಿ ರಾಜವರ್ಧನ್ ಫೋಟೋಗಳು ವೈರಲ್
- ಧರ್ಮಬೀರು ನಾಡಪ್ರಭು ಕೆಂಪೇಗೌಡ ಸಿನಿಮಾದ ಶೀರ್ಷಿಕೆ ಪೋಸ್ಟರ್ ಈ ಹಿಂದೆಯೇ ರಿಲೀಸ್ ಆಗಿದೆ. ಇದೀಗ ಇದೇ ಚಿತ್ರದ ಹೀರೋ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅವರ ಕೆಂಪೇಗೌಡ ಲುಕ್‌ನ AI ಫೋಟೋಗಳು ವೈರಲ್ ಆಗುತ್ತಿವೆ.
Dharmabeeru nadaprabhu kempegowda: ಕೆಲ ತಿಂಗಳ ಹಿಂದಷ್ಟೇ ನಾಡಪ್ರಭು ಕೆಂಪೇಗೌಡರ ಕುರಿತ ಸಿನಿಮಾ ಘೋಷಣೆ ಮಾಡಿದ್ದರು ನಿರ್ದೇಶಕ ದಿನೇಶ್ ಬಾಬು. ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ, ಒಂದಷ್ಟು ಸಂಚಲನವನ್ನೂ ಸೃಷ್ಟಿಸಿದ್ದರು. ಹೀಗೆ ಪೋಸ್ಟರ್ ಬಿಡುಗಡೆ ಆದ ಬಳಿಕ ಟಿ.ಎಸ್. ನಾಗಾಭರಣ ಅವರಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಿಂದ ತಡೆಯಾಜ್ಞೆಯನ್ನೂ ತಂದಿದ್ದರು. ಇದೀಗ ಇಷ್ಟೆಲ್ಲ ಸದ್ದು ಗದ್ದಲದ ನಡುವೆ, ಇದೇ ಕೆಂಪೇಗೌಡ ಸಿನಿಮಾದಿಂದ ಹೊಸ ಅಪ್‌ಡೇಟ್ ಹೊರಬಿದ್ದಿದೆ.
ಕನ್ನಡದಲ್ಲಿ ಈ ವರೆಗೂ ನಾಡಪ್ರಭು ಕೆಂಪೇಗೌಡ ಅವರ ಜೀವನ ಮತ್ತು ಸಾಧನೆಯ ಕುರಿತಾಗಿ ಪೂರ್ಣ ಪ್ರಮಾಣದ ಸಿನಿಮಾ ನಿರ್ಮಾಣವಾಗಿರಲಿಲ್ಲ. ಆ ಕೊರತೆಯನ್ನು ನೀಗಿಸುವ ಉದ್ದೇಶಕ್ಕೆ. ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರವರ ಜೀವನ ಚರಿತ್ರೆಯನ್ನು ಧರ್ಮಬೀರು ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಬೆಳ್ಳಿತೆರೆ ಮೇಲೆ ತರಲು ತೆರೆಮರೆಯಲ್ಲಿಯೇ ಸಿದ್ಧತೆ ನಡೆಸಿದ್ದಾರೆ ನಿರ್ದೇಶಕ ದಿನೇಶ್ ಬಾಬು. ಈ ಹಿಂದೆ ಶೀರ್ಷಿಕೆ ಅನಾವರಣವಾಗಿ ಕುತೂಹಲ ಮೂಡಿಸಿದ್ದ ಈ ಸಿನಿಮಾ ಇದೀಗ ನಾಯಕ ನಟನ ವಿಚಾರವಾಗಿ ಸುದ್ದಿಯಲ್ಲಿದೆ.
ಧರ್ಮಬೀರು ನಾಡಪ್ರಭು ಕೆಂಪೇಗೌಡ ಸಿನಿಮಾ ಘೋಷಣೆ ಆದಾಗ ಈ ಚಿತ್ರದ ಹೀರೋ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅದಕ್ಕೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ನಿರ್ದೇಶಕರೂ ಅದನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಇದೇ ಸಿನಿಮಾದ ಹೀರೋ ಯಾರು ಎಂಬ ಬಗ್ಗೆ ಸುಳಿವು ಸಿಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಧರ್ಮಬೀರು ನಾಡಪ್ರಭು ಕೆಂಪೇಗೌಡ ಚಿತ್ರದ ನಾಯಕ ಇವರೇ ಎಂಬಂಥ ಒಂದಷ್ಟು ಫೋಟೋಗಳು ವೈರಲ್ ಆಗಿವೆ. ಹಾಗಾದರೆ, ಕೆಂಪೇಗೌಡ ಪಾತ್ರದಲ್ಲಿ ಕಾಣಿಸಿಕೊಳ್ಳುವವರು ಯಾರು? ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್.
ವೈರಲ್ ಆಗ್ತಿವೆ AI ಫೋಟೋಗಳು
ಸದ್ಯ ಸಿನಿಮಾ ಘೋಷಣೆ ಮಾಡಿರುವ ನಿರ್ದೇಶಕ ದಿನೇಶ್ ಬಾಬು, ಈ ಹಿಂದೆ ಬಿಚ್ಚುಗತ್ತಿ ಹೆಸಿನ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾದಲ್ಲಿ ಇದೇ ರಾಜವರ್ಧನ್ ನಾಯಕನಾಗಿ ನಟಿಸಿದ್ದರು. ಈಗ ಕೆಂಪೇಗೌಡ ಚಿತ್ರಕ್ಕೂ ಇದೇ ರಾಜವರ್ಧನ್ ಹೀರೋ ಎಂಬ ಚರ್ಚೆ ಶುರುವಾಗಿದೆ. ಬಿಚ್ಚುಗತ್ತಿ ಬರಮಣ್ಣನಾಗಿ ಮಿಂಚಿದ್ದ ರಾಜವರ್ಧನ್ ಈಗ ಕೆಂಪೇಗೌಡನಾಗಿ ತಮ್ಮ ಖದರ್ ತೋರಿಸಲಿದ್ದಾರೆ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ AI ತಂತ್ರಜ್ಞಾನ ಬಳಸಿ ರಾಜವರ್ಧನ್ ಚಹರೆಯ ಫೋಟೋಗಳು ಕುತೂಹಲ ಮೂಡಿಸಿವೆ.
ನಿರ್ಮಾಪಕರೇ ಈ ಚಿತ್ರದ ಸಂಗೀತ ನಿರ್ದೇಶಕರು
ವೃತ್ತಿಯಲ್ಲಿ ವೈದ್ಯರಾಗಿರುವ ಕಿರಣ್ ತೋಟಂಬೈಲ್ ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕೆಂಪೇಗೌಡ ಮೆಡಿಕಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುವಾಗಲೇ ಮುಂದೊಂದು ದಿನ ಕೆಂಪೇಗೌಡರ ಸಿನಿಮಾ ಮಾಡಬೇಕು ಅಂದುಕೊಂಡಿದ್ದರಂತೆ. ಅಂದು ಅಂದುಕೊಂಡಂತೆ ಈಗ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಬರೀ ನಿರ್ಮಾಣ ಮಾಡುವುದಷ್ಟೇ ಅಲ್ಲದೆ, ಈ ಚಿತ್ರಕ್ಕೆ ಸಂಗೀತವನ್ನೂ ನೀಡಲಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇದ್ದಾರೆ?
ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಈ ಚಿತ್ರಕ್ಕೆ ಕಥೆ ಬರೆದಿದ್ದು, ಸಂಕೇತ್ ಎಂವೈಎಸ್ ಈ ಸಿನಿಮಾಗೆ ಕ್ಯಾಮೆರಾ ಹಿಡಿಯಲಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಹಾಗೂ ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಒದಗಿಸಲಿದ್ದಾರೆ. ಮಾಸ್ತಿ ಹಾಗೂ ರಘು ನಿಡುವಳ್ಳಿ ಸಂಭಾಷಣೆ ಧರ್ಮಬೀರು ನಾಡಪ್ರಭು ಕೆಂಪೇಗೌಡ ಚಿತ್ರಕ್ಕಿರಲಿದೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಮೇ ಅಥವಾ ಜೂನ್ ತಿಂಗಳಲ್ಲಿ ಮುಹೂರ್ತ ಮುಗಿಸಿ ಶೂಟಿಂಗ್‌ಗೂ ಚಾಲನೆ ನೀಡಲಿದೆ ಚಿತ್ರತಂಡ.