Dr Rajkumar: ಅಣ್ಣಾವ್ರು ಇಲ್ಲವಾಗಿ ಇಂದಿಗೆ 18 ವರ್ಷ; ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜ್ ಸಮಾಧಿಗೆ ಅಭಿಮಾನಿ ದೇವರ ನಮನ
Apr 12, 2024 08:59 AM IST
Dr Rajkumar: ಅಣ್ಣಾವ್ರು ಇಲ್ಲವಾಗಿ ಇಂದಿಗೆ 18 ವರ್ಷ; ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜ್ ಸಮಾಧಿಗೆ ಅಭಿಮಾನಿ ದೇವರ ನಮನ
- ಡಾ. ರಾಜ್ ಅವರ 18ನೇ ಪುಣ್ಯತಿಥಿಯ ನಿಮಿತ್ತ ಕಂಠೀರವ ಸ್ಡುಡಿಯೋದಲ್ಲಿನ ಸಮಾಧಿಯತ್ತ ಅಭಿಮಾನಿಗಳ ದಂಡು ಆಗಮಿಸುತ್ತಿದೆ. ಇನ್ನೇನು ಕುಟುಂಬದಿಂದಲೂ ಪೂಜೆ ನೆರವೇರಲಿದೆ.
Dr Rajkumar: ಚಂದನವನದ ನಟಸಾರ್ವಭೌಮ, ವರನಟ, ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ವಿಜೇತ ಡಾ. ರಾಜ್‌ಕುಮಾರ್ ಅಗಲಿ ಇಂದಿಗೆ (ಏ.12) 18 ವರ್ಷಗಳೇ ಕಳೆದಿವೆ. ಇಂದಿಗೂ ಅವರ ಸಿನಿಮಾಗಳು, ಚಿತ್ರದ ಹಾಡುಗಳು, ಸಿನಿಮಾದ ಸಂಭಾಷಣೆಗಳು ಎಲ್ಲರಿಗೂ ಪ್ರೇರಣೆ. ನಿತ್ಯದ ಬದುಕಿಗೂ ಸ್ಫೂರ್ತಿ. ಇಂದಿನ ಅವರ ಪುಣ್ಯ ತಿಥಿ ನಿಮಿತ್ತ, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ಸಮಾಧಿಗೆ ವಿಶೇಷ ಪೂಜೆ ನೆರವೇರಲಿದೆ.
ಈಗಾಗಲೇ ಸಮಾಧಿಯನ್ನು ಶುಚಿಗೊಳಿಸಿ, ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಅಭಿಮಾನಿಗಳ ಆಗಮನವಾಗುತ್ತಿದೆ. ದೂರ ದೂರದಿಂದ ಎಷ್ಟೋ ಮಂದಿ ಆಗಮಿಸಿ ನೆಚ್ಚಿನ ನಟನ ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಇನ್ನೇನು ಕೆಲ ಹೊತ್ತಲ್ಲಿ, ಡಾ. ರಾಜ್ ಕುಟುಂಬದವರಿಂದಲೂ ವಿಶೇಷ ಪೂಜೆ ನೆರವೇರಲಿದೆ.
ನಟಿಸಿದ ಪ್ರತಿ ಸಿನಿಮಾಗಳಲ್ಲಿ ಮಾನವೀಯ ಮೌಲ್ಯಗಳನ್ನೇ ಸಾರಿದ ವರನಟ ಡಾ ರಾಜ್‌ಕುಮಾರ್, ಬದುಕಿದ ರೀತಿಯೂ ತುಂಬ ಸರಳ. ಬಣ್ಣದ ಲೋಕದಲ್ಲಿ ತರಹೇವಾರಿ ವೇಷ ಹಾಕಿದ ಅಣ್ಣಾವ್ರು, ನಿಜ ಜೀವನದಲ್ಲಿ ಶ್ವೇತ ವಸ್ತ್ರಧಾರಿಯಾಗಿ ಕಂಡಿದ್ದೇ ಹೆಚ್ಚು. ಯಾರೇ ಎದುರಾದರೂ, ಮಾತನಾಡುವ ಪರಿ ಮಾತ್ರ ಬದಲಾಗಿರಲಿಲ್ಲ. ಪುಟಾಣಿ ಮಕ್ಕಳಿಗೂ ಅಷ್ಟೇ ಗೌರವ ನೀಡುವ ವ್ಯಕ್ತಿತ್ವ ಅಣ್ಣಾವ್ರದ್ದು.
ಕುಟುಂಬದಿಂದ ಪೂಜೆ
ಪ್ರತಿ ವರ್ಷದಂತೆ ಈ ಸಲವೂ ಅಣ್ಣಾವ್ರ ಸಮಾಧಿಗೆ ರಾಜ್ ಕುಟುಂಬದ ಸದಸ್ಯರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇಷ್ಟದ ಅಡುಗೆಯನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಿದ್ದಾರೆ. ಅಭಿಮಾನಿ ಬಳಗದಿಂದಲೂ ಸಮಾಧಿ ಬಳಿ ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಎಂದಿನಂತೆ ನೇತ್ರದಾನ ನೋಂದಣಿ, ರಕ್ತದಾನ, ಅನ್ನದಾನವೂ ಇಡೀ ದಿನ ನೆರವೇರಲಿದೆ.
ಆವತ್ತಿನ ಸ್ಥಿತಿ ಹೇಗಿತ್ತು?
ಕಾಡುಗಳ್ಳ ವೀರಪ್ಪನ್ ಅಪಹರಣದ ಬಳಿಕ ರಾಜ್ ಮೊದಲಿನಂತಿರಲಿಲ್ಲ. ವಯಸ್ಸಹಜ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದವು. ಮಂಡಿನೋವು ಅಧಿಕವಾಯ್ತು. ಅದಕ್ಕಾಗಿ ಆಯುರ್ವೇದ ಚಿಕಿತ್ಸೆಯಲ್ಲಿದ್ದರು. ಹೀಗಿರುವಾಗಲೇ ಏ. 12ರ ಮಧ್ಯಾಹ್ನ 1:45ರ ಸುಮಾರಿಗೆ ಬರಸಿಡಿಲೊಂದು ಕರುನಾಡ ಜನತೆಗೆ ಅಪ್ಪಳಿಸಿತು. ಡಾ. ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿ ವ್ಯಾಪಕವಾಗಿ ಸದ್ದು ಮಾಡಿತು. ಅಭಿಮಾನಿ ವಲಯದಲ್ಲಿ ಶೋಕ ಮಡುಗಟ್ಟಿತ್ತು .
ಈ ಸಾವಿನ ನಡುವೆಯೂ ಸಾರ್ಥಕತೆ ಮೆರೆದ ಅಣ್ಣಾವ್ರು, ಸ್ವ-ಇಚ್ಛೆಯಂತೆ, ಮರಣೋತ್ತರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಅಣ್ಣಾವ್ರ ಪಾರ್ಥಿವ ಶರೀರವನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಲಕ್ಷಾಂತರ ಅಭಿಮಾನಿಗಳು ನೆಚ್ಚಿನ ನಟನಿಗೆ ಕಣ್ಣೀರ ವಿಚಾಯ ಹೇಳಿದರು.
2006ರ ಏಪ್ರಿಲ್ 13ರಂದು ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿನ ಕಂಠೀರವ ಸ್ಟುಡಿಯೋದಲ್ಲಿ ರಾಜ್‌ಕುಮಾರ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿತು. ಏ. 12 ಮತ್ತು 13 ಈ ಎರಡು ದಿನಗಳಲ್ಲಿ ಬೆಂಗಳೂರಿನ ಚಹರೆಯೇ ಬದಲಾಗಿತ್ತು. ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗೂ ಹಾನಿಯಾಗಿತ್ತು. ಪೊಲೀಸ್ ಇಲಾಖೆ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ವಿಫಲರಾದರು.