ಹ್ಯಾಟ್ರಿಕ್ ಹೀರೋ ಶಿವಣ್ಣನ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಈಗ ನಿರ್ಮಾಪಕಿ; ಫೈರ್‌ಫ್ಲೈ ಸಿನಿಮಾದ ಕುರಿತು ಇಲ್ಲಿದೆ ಮಾಹಿತಿ
Mar 11, 2024 02:49 PM IST
ಹ್ಯಾಟ್ರಿಕ್ ಹೀರೋ ಶಿವಣ್ಣನ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಈಗ ನಿರ್ಮಾಪಕಿ
- ಸ್ಯಾಂಡಲ್‌ವುಡ್‌ನ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಮಗಳು ನಿವೇದಿತಾ ಶಿವರಾಜ್ ಕುಮಾರ್ ಇದೀಗ ಫೈರ್ ಫ್ಲೈ ಎಂಬ ಚೊಚ್ಚಲ ಸಿನಿಮಾದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು: ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಮಗಳು ನಿವೇದಿತಾ ಶಿವರಾಜ್ ಕುಮಾರ್ ಈ ಹಿಂದೆ ವೆಬ್ ಸರಣಿ ಮಾಡಿದ್ದರು. ಇದೀಗ ಇದೇ ಮೊದಲ ಬಾರಿಗೆ ಫೈರ್ ಫ್ಲೈ ಎಂಬ ಸಿನಿಮಾ ಮಾಡುತ್ತಿದ್ದಾರೆ. ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಿವೇದಿತಾ ಒಡೆತನದ ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಬ್ಯಾನರ್ ಮೂಲಕ ಮೂಡಿಬಂದಿರುವ ಫೈರ್ ಫ್ಲೈ ಬೆಳಕಿನ ಹಬ್ಬ ದೀಪಾವಳಿಗೆ ದರ್ಶನ ಕೊಡಲಿದೆ. ಶಿವರಾಜ್ ಕುಮಾರ್ ಅವರ ನಾಗವಾರ ನಿವಾಸದಲ್ಲಿ ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಲಾಗಿದೆ.
ಕೊನೆಯ ಹಂತದಲ್ಲಿದೆ ಚಿತ್ರೀಕರಣ
"ವೆಬ್ ಸೀರಿಸ್ ಮಾಡಿದ ಮೇಲೆ ಸಿನಿಮಾ ಮಾಡಬೇಕು ಅಂತಾ ತುಂಬಾ ಆಸಕ್ತಿ ಇತ್ತು. ವಂಶಿ ಅವರು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯಿತು. ಒಳ್ಳೆ ಟೆಕ್ನಿಕಲ್ ಟೀಂ ತೆಗೆದುಕೊಂಡು ಮಾಡಬೇಕು ಎಂದು ಚಿತ್ರ ಮಾಡಿದ್ದೇವೆ. ಕಥೆ ತುಂಬಾ ಸರಳವಾಗಿದ್ದರೂ, ಅವರು ಕಥೆ ಹೇಳಿದ ರೀತಿ ತುಂಬಾ ಇಷ್ಟವಾಯ್ತು. ಹೊಸ ಪ್ರಯೋಗ ಮಾಡಿದ್ದೇನೆ. ಕೊನೆಯ ಹಂತದ ಚಿತ್ರೀಕರಣ ಶುರು ಮಾಡುತ್ತಿದ್ದೇವೆ. ದೀಪಾವಳಿ ಸಿನಿಮಾ ಬಿಡುಗಡೆಯಾಗಲಿದೆ" ಎಂದು ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್ ಹೇಳಿದ್ದಾರೆ.
"ಎಲ್ಲರ ಜೀವನದಲ್ಲಿಯೂ ಒಂದು ಪಾಯಿಂಟ್ ಇರುತ್ತದೆ. ನಾವು ಡೆಡ್ ಎಂಡ್ ಅಂದುಕೊಂಡಿರುತ್ತೇವೆ. ಒಂದು ಹೋಪ್ ಹಾಗೂ ಮೊಟಿವೇಷನ್ ಗೆ ಕಾಯುತ್ತಾ ಇರುತ್ತೇವೆ. ಆ ಟೈಮ್ ನಲ್ಲಿ ಹೋಪ್ ಎಂಬ ಬೆಳಕು ಎಲ್ಲಿಂದಲೋ ಬರಲ್ಲ ನಮ್ಮಿಂದಲೇ ಬರಬೇಕು ಎಂಬುದೇ ಫೈರ್ ಫ್ಲೈ. ಅದಕ್ಕೆ ಈ ಟೈಟಲ್ ಇಟ್ಟಿದ್ದೇವೆ. ನಿವೇದಿತಾ ಮೇಡಂಗೆ ಧನ್ಯವಾದ. ಇದಕ್ಕಿಂತ ಮೊದಲು ಎರಡು ಮೂರು ಕಥೆ ಚರ್ಚೆ ಮಾಡಿದ್ದೇವು. ಆದರೆ ಅವರು ರಿಜೆಕ್ಟ್ ಮಾಡಿದರು. ಈ ಕಥೆ ಒಪ್ಪಿಕೊಂಡಿದ್ದಕ್ಕೆ ನನಗೆ ಖುಷಿಯಾಯ್ತು. ಯಾಕೆಂದರೆ ನನ್ನಲ್ಲಿ ಕೆಲ ಬದಲಾವಣೆ ಆಯ್ತು. ಟೆಕ್ನಿಕಲ್ ಸ್ಟ್ರಾಂಗ್ ಹಾಗೂ ಸಿಂಪಲ್ ಸಿನಿಮಾದೊಂದಿಗೆ ಬರುತ್ತಿದ್ದೇವೆ. ಇದೇ ದೀಪಾವಳಿಗೆ ಚಿತ್ರ ಬರುತ್ತಿದೆ. ಇಡೀ ಸಿನಿಮಾದಲ್ಲಿ ನಾನು ಒಬ್ಬನೇ ಹೊಸುಬ.ಆದರೆ ಆ ರೀತಿ ಫೀಲ್ ನನಗೆ ಬಂದೇ ಇಲ್ಲ. ಇಷ್ಟು ಜನ ಸಿಕ್ಕಿದ್ದು, ಶ್ರೀಮುತ್ತು ಸಿನಿ ಸರ್ವೀಸ್ ನಿಂದ. ನಾನು ಬೇರೆ ನಿರ್ಮಾಪಕರ ಜೊತೆ ಕೈ ಜೋಡಿಸಿದ್ದರೇ ಡೇಟ್ಸ್ ಕೂಡ ಸಿಕ್ಕುತ್ತಿರಲಿಲ್ಲ" ಎಂದು ನಟ ಕಂ ನಿರ್ದೇಶಕ ವಂಶಿ ಹೇಳಿದ್ದಾರೆ.
‘ಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಪುನೀತ್ ರಾಜ್‌ಕುಮಾರ್ ಅವರ ‘ಪಿಆರ್‌ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಯಾಬಜಾರ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ , ‘ಪೆಂಟಗನ್’ ಚಿತ್ರದಲ್ಲೂ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಿದ್ದರು. ಈಗ ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.
ಶಿವರಾಜ್ ಕುಮಾರ್ ಅವರು ಯಾವಾಗಲೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರ ರೀತಿಯೇ ನಿವೇದಿತಾ ಶಿವರಾಜ್ಕುಮಾರ್ ಕೂಡ ಹೊಸಬರಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಈ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ‘ಫೈರ್ ಫ್ಲೈ’ ಚಿತ್ರಕ್ಕೆ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆಯ ಬರೆದಿದ್ದಾರೆ.