ದುನಿಯಾ ವಿಜಯ್ ನಟನೆಯ ಭೀಮ ಅಡಲ್ಟ್ ಮೂವಿ; 18 ವರ್ಷ ವಯಸ್ಸಿನೊಳಗಿನವರಿಗೆ ಚಿತ್ರಮಂದಿರಕ್ಕೆ ನೋ ಎಂಟ್ರಿ
Aug 08, 2024 06:38 PM IST
ದುನಿಯಾ ವಿಜಯ್ ನಟನೆಯ ಭೀಮ ಅಡಲ್ಟ್ ಮೂವಿ; 18 ವರ್ಷ ವಯಸ್ಸಿನೊಳಗಿನವರಿಗೆ ನೋ ಎಂಟ್ರಿ
- Dunia Vijay Bheema Movie: ದುನಿಯಾ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ ಭೀಮ ನಾಳೆ ಅಂದರೆ ಆಗಸ್ಟ್ 9ರಂದು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ, ಇದು ಎ ಸರ್ಟಿಫಿಕೇಟ್ ಸಿನಿಮಾವಾಗಿದೆ. ವಯಸ್ಕರಿಗೆ ಮಾತ್ರ ಚಿತ್ರಮಂದಿರಕ್ಕೆ ಎಂಟ್ರಿ ನೀಡಲಾಗುತ್ತದೆ ಎಂದು ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ತಾಣಗಳು ಎಚ್ಚರಿಸಿವೆ.
ಬೆಂಗಳೂರು: ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಚಿತ್ರಗಳೆಂದರೆ ಹುಡುಗರಿಗೆ ಅಚ್ಚುಮೆಚ್ಚು. ಸಲಗ, ಕನಕ, ಮಾಸ್ತಿಗುಡಿ, ದನ ಕಾಯೋನು, ರಿಂಗ್ ರೋಡ್, ದಕ್ಷ, ಸಿಂಹಾದ್ರಿ, ಶಿವಾಜಿನಗರ, ಜಯಮ್ಮನ ಮಗ, ಭೀಮಾ ತೀರದಲ್ಲಿ, ಜರಾಸಂಧ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಐತಲಕ್ಕಡಿ, ದೇವ್ರು, ತಾಕತ್, ಜಂಗ್ಲಿ, ಸ್ಲಂ ಬಾಲಾ, ಅವ್ವ, ಗೆಳೆಯ, ಯುಗ, ದುನಿಯಾ ಹೀಗೆ ಹತ್ತು ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಯುವ ಜನತೆಯ ಮನಗೆದ್ದಿದ್ದಾರೆ. ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಹೇಳಿಕೊಳ್ಳುವಂತಹ ಪ್ರಮುಖ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಿಲ್ಲ. ಈ ಆಗಸ್ಟ್ ತಿಂಗಳಲ್ಲಿ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ರಿಲೀಸ್ ಆಗುತ್ತಿದ್ದು, ಸಾಕಷ್ಟು ಜನರು ಈ ಚಿತ್ರ ನೋಡಲು ಕಾಯುತ್ತಿದ್ದಾರೆ. ಆದರೆ, ಈ ಸಿನಿಮಾ ನೋಡಲು ಕನಿಷ್ಠ 18 ವರ್ಷ ಆಗಿರಬೇಕಾಗಿರುವುದು ಕಡ್ಡಾಯ. ಅದಕ್ಕಿಂತ ಕಡಿಮೆ ವಯಸ್ಸಿನ ದುನಿಯಾ ವಿಜಯ್ ಅಭಿಮಾನಿಗಳು ಈ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಯಾಕೆಂದರೆ ಈ ಸಿನಿಮಾಕ್ಕೆ ದೊರಕಿರುವುದು "ಎ" ಸರ್ಟಿಫಿಕೇಟ್.
ಭೀಮ ಸಿನಿಮಾ ವಯಸ್ಕರಿಗೆ ಮಾತ್ರ
ವಯಸ್ಕರಿಗೆ ಮಾತ್ರ ಎಂದು ಕೇಳಿ ತಪ್ಪು ತಿಳಿದುಕೊಳ್ಳಬಾರದು. ಈ ಸಿನಿಮಾದಲ್ಲಿ ಕ್ರೌರ್ಯದ ದೃಶ್ಯಗಳು ಜಾಸ್ತಿ ಇರುವ ಕಾರಣ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವಾಗ "ಈ ಸಿನಿಮಾ ಎ ರೇಟ್ ಪಡೆದಿದೆ. 18 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಿಗೆ ಮಾತ್ರ. ಚಿತ್ರಮಂದಿರಗಳಿಗೆ ಬರುವಾಗ ವ್ಯಾಲಿಡ್ ಆದ ವಯಸ್ಸಿನ ಮಾಹಿತಿ ನೀಡುವ ದಾಖಲೆ ಪತ್ರಗಳನ್ನು ತರಬೇಕು. ಐಡಿ ಕಾರ್ಡ್ ತರದೆ ಇರುವ ಕಿರಿಯರಿಗೆ ಸಿನಿಮಾ ಥಿಯೇಟರ್‌ನೊಳಗೆ ಪ್ರವೇಶ ನೀಡಲಾಗುವುದಿಲ್ಲ. ಆನ್‌ಲೈನ್ ಟಿಕೆಟ್ ಬುಕ್ ಮಾಡಿದ್ರೂ ರಿಫಂಡ್ ನೀಡೋದಿಲ್ಲ" ಎಂದು ಬುಕ್ ಮೈ ಶೋನಲ್ಲಿ ಎಚ್ಚರಿಕೆಯ ಸೂಚನೆ ಬರುತ್ತದೆ.
ಟಿಕೆಟ್ ಬುಕ್ ಮಾಡುವ ಮುನ್ನ ಈ ಸೂಚನೆ ಮಾತ್ರವಲ್ಲದೆ ಅದಕ್ಕೂ ಮುನ್ನವೇ 18 ವಯಸ್ಸಿಗಿಂತ ಮೇಲ್ಪಟ್ಟವರಿಗೆ ಮಾತ್ರ ಎಂಬ ಸೂಚನೆ ನೀಡಲಾಗಿದೆ. ಹೀಗಾಗಿ, ದುನಿಯಾ ವಿಜಯ್ ಅವರ ಕಿರಿಯ ಅಭಿಮಾನಿಗಳಿಗೆ ಈ ಸಿನಿಮಾ ಸದ್ಯ ನೋಡುವುದು ಕಷ್ಟವಾಗಬಹುದು. ಎ ಬಿ ಸಿ ರೂಲ್ಸ್ ಎಲ್ಲಾ ನಮ್ಮಲ್ಲಿಲ್ಲ ಎಂದು ಕೇರ್ ಮಾಡದ ಚಿತ್ರಮಂದಿರಗಳಲ್ಲಿ ಮಾತ್ರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಈ ಕಿರಿಯ ಅಭಿಮಾನಿಗಳಿಗೆ ಎಂಟ್ರಿ ದೊರಕಬಹುದೇನೋ. ಆದರೆ, ಈ ಎ ಸರ್ಟಿಫಿಕೇಟ್‌ನ ನಿಯಮ ವಿಶೇಷವಾಗಿ 18 ತುಂಬದ ವಿದ್ಯಾರ್ಥಿಗಳಿಗೆ (ಈ ವೀಕೆಂಡ್‌ಗೆ ಭೀಮ ಸಿನಿಮಾ ನೋಡೋಣ ಗುರು ಎನ್ನೋರಿಗೆ) ಬೇಸರ ತರಿಸಬಹುದು.
ನಾಳೆ ಕರ್ನಾಟಕದ ಚಿತ್ರಮಂದಿರಗಳಲ್ಲಿ ಭೀಮನ ಹವಾ
ಹೌದು, ನಾಳೆ ಭೀಮ ಸಿನಿಮಾ ಬಿಡುಗಡೆಯಾಗುತ್ತಿದೆ. ಇದರ ಜತೆಗೆ ಜೀನಿಯಸ್ ಮುತ್ತಾ ಎಂಬ ಚಿತ್ರವೂ ಬಿಡುಗಡೆಯಾಗುತ್ತಿದೆ. ಆದರೆ, ಭೀಮ ಸಿನಿಮಾವು ಕರ್ನಾಟಕದದ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಯುವ ಜನತೆಯ ಮಾದಕ ದ್ರವ್ಯ ವ್ಯಸನದ ಕಥೆಯಿದೆ. ಸಾಮಾಜಿಕ ಸಂದೇಶವೂ ಇರಲಿದೆ. ಇದೇ ಕಾರಣಕ್ಕೆ ಈ ಸಿನಿಮಾವನ್ನು ತಪ್ಪದೇ ನೋಡಿ ಎಂದು ದುನಿಯಾ ವಿಜಯ್ ಇತ್ತೀಚೆಗೆ ಕೇಳಿಕೊಂಡಿದ್ದಾರೆ. ಈಗ ಯುವ ಜನಾಂಗ ಅದರಲ್ಲೂ 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನವರೂ ಮಾದಕ ದ್ರವ್ಯಗಳ ದಾಸರಾಗುತ್ತಿದ್ದಾರೆ. ಆದರೆ, 18 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನವರಿಗೆ ಸದ್ಯ ಈ ಸಿನಿಮಾಕ್ಕೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮಾಡುವ ವೆಬ್‌ಗಳ ಪ್ರಕಾರ "ನೋ ಎಂಟ್ರಿ".