logo
ಕನ್ನಡ ಸುದ್ದಿ  /  ಮನರಂಜನೆ  /  ಜುಲೈ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಮುಂದಿನ ವರ್ಷ ನೋಡೋಣ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್‌; ಕಾರಣವೇನು?

ಜುಲೈ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಮುಂದಿನ ವರ್ಷ ನೋಡೋಣ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್‌; ಕಾರಣವೇನು?

Praveen Chandra B HT Kannada

Jun 30, 2024 09:17 PM IST

google News

ಜುಲೈ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಮುಂದಿನ ವರ್ಷ ನೋಡೋಣ ಎಂದ ಗಣೇಶ್‌

    • Golden Star Ganesh Birthday: ಸ್ಯಾಂಡಲ್‌ವುಡ್‌ನ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರಿಗೆ ಈ ವರ್ಷವೂ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣವೇನು ಎಂದೂ  ವಿವರಿಸಿದ್ದಾರೆ. ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇರುವ ಕಡೆಯಿಂದಲೇ ನನ್ನನ್ನು ಹರಸಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.
ಜುಲೈ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಮುಂದಿನ ವರ್ಷ ನೋಡೋಣ ಎಂದ ಗಣೇಶ್‌
ಜುಲೈ 2ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ, ಮುಂದಿನ ವರ್ಷ ನೋಡೋಣ ಎಂದ ಗಣೇಶ್‌

ಬೆಂಗಳೂರು: ಕನ್ನಡ ನಟ ಗೊಲ್ಡನ್‌ ಸ್ಟಾರ್‌ ಗಣೇಶ್‌ ಈ ವರ್ಷವೂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ವರ್ಷ ಹುಟ್ಟುಹಬ್ಬ ಆಚರಿಸದೆ ಇರಲು ಕಾರಣವನ್ನೂ ಗಣೇಶ್‌ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ. " ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ.ಆದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ" ಎಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ಟ್ವೀಟ್‌ ಮಾಡಿದ್ದಾರೆ.

"ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಮುಂದಿನ ವರ್ಷ ಖಂಡಿತ ಒಟ್ಟಿಗೇ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ್" ಎಂದು ಟ್ವೀಟ್‌ ಮಾಡಿದ್ದಾರೆ.

 

ಹಲವು ಬಾರಿ ಹುಟ್ಟುಹಬ್ಬ ಕ್ಯಾನ್ಸಲ್‌

2019ರಲ್ಲಿ ನಟ ಗಣೇಶ್‌ ಅವರು ತನ್ನ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಕೆಲವು ವಾರಗಳ ಹಿಂದೆ ತಂದೆ ಅಗಲಿದ ಕಾರಣ ಹುಟ್ಟುಹಬ್ಬ ಕ್ಯಾನ್ಸಲ್‌ ಮಾಡಿಕೊಂಡಿದ್ದರು. 2021ರಲ್ಲೂ ಕೊರೊನಾದಿಂದ ಜಗತ್ತು ನೋವಿನಲ್ಲಿರುವ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ.

ಗೋಲ್ಡನ್‌ ಸ್ಟಾರ್‌ ಗಣೇಶ್‌ ಮೂಲ ಹೆಸರು ಗಣೇಶ್‌ ಕಿಶಾನ್‌. ಇವರು ನಟ, ನಿರ್ದೇಶಕ, ನಿಮಾಪಕ ಮತ್ತು ಟಿವಿ ನಿರೂಪಕರಾಗಿ ಜನಪ್ರಿಯತೆ ಪಡೆದಿದ್ದಾರೆ. ಫಿಲ್ಮ್‌ ಫೇರ್‌ ಅವಾರ್ಡ್‌ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಗಣೇಶ್‌ ಜುಲೈ 2, 1980ರಂದು ಜನಿಸಿದರು.

2006ರ ಮುಂಗಾರು ಮಳೆ ಸಿನಿಮಾದ ಮೂಲಕ ಗಣೇಶ್‌ ಜನಪ್ರಿಯತೆ ಪಡೆದರು. ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ನಿರ್ಮಿಸಿದ ಸಿನಿಮಾವದು. ಆ ಸಮಯದಲ್ಲಿ ಸುಮಾರು 85 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಚಿತ್ರಮಂದಿರಗಳಲ್ಲಿ 865 ದಿನಗಳ ಕಾಲ ಪ್ರದರ್ಶನ ಕಂಡಿತು. ಒಂದು ವರ್ಷ ಮಲ್ಟಿಫ್ಲೆಕ್ಸ್‌ನಲ್ಲಿ ನಿರಂತರವಾಗಿ ತೆರೆಕಂಡ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೂ ಮುಂಗಾರು ಮಳೆ ಪಾತ್ರವಾಗಿತ್ತು. ಈ ಸಿನಿಮಾದ ಮೂಲಕ ಗಣೇಶ್‌ ಗೋಲ್ಡನ್‌ ಸ್ಟಾರ್‌ ಆಗಿ ಹೊರಹೊಮ್ಮಿದರು.

ಗಾಳಿಪಟ ಮತ್ತು ಮಳೆಯಲ್ಲಿ ಜೊತೆಯಲಿ ಚಿತ್ರಕ್ಕಾಗಿ ನಿರಂತರವಾಗಿ ಎರಡು ಬಾರಿ ಅತ್ಯುತ್ತಮ ನಟ ಫಿಲ್ಮ್‌ ಫೇರ್‌ ಪ್ರಶಸ್ತಿ ಪಡೆದರು. ಚೆಲುವಿನ ಚಿತ್ತಾರದ ಬಳಿಕ ಮುಂಗಾರು ಮಳೆ ಸಿನಿಮಾ ದೊಡ್ಡಮಟ್ಟದ ಯಶಸ್ಸು ಕಂಡಿತ್ತು. ಇದಾದ ಬಳಿಕ ಕೃಷ್ಣ, ರೋಮಿಯೋ, ಶ್ರಾವಣಿ ಸುಬ್ರಹ್ಮಣ್ಯ, ಝೂಮ್‌, ಚಮಕ್‌, 99, ಗಾಳಿಪಟ 2, ಟ್ರಿಪಲ್‌ ರೈಡಿಂಗ್‌ ಚಿತ್ರಗಳಲ್ಲಿ ನಟಿಸಿದರು.

ಗಣೇಶ್‌ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಅಡಕಮಾರನಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ನೇಪಾಳ ಮೂಲದವರು. ತಾಯಿ ಕರ್ನಾಟಕದವರು. ಇವರಿಗೆ ಮಹೇಶ್‌ ಮತ್ತು ಉಮೇಶ್‌ ಎಂಬ ಇಬ್ಬರು ಸಹೋದರರು ಇದ್ದಾರೆ. ಮಹೇಶ್‌ ಅವರು ನಮಕ್‌ ಹರಾಮ್‌ ಎಂಬ ಕನ್ನಡ ಚಿತ್ರದಲ್ಲಿ ನಟಿಸಿದರು. ಗಣೇಶ್‌ ಅವರು ಶಿಲ್ಪ ಬಾರ್ಕೂರ್‌ ಅವರನ್ನು ವಿವಾಹವಾದರು. ಇವರಿಗೆ ಚರಿತ್ರೇಯ ಗಣೇಶ್‌ ಮತ್ತು ವಿಹಾನ್‌ ಗಣೇಶ್‌ ಎಂಬ ಇಬ್ಬರು ಮಕ್ಕಳಿದ್ದಾರೆ.

ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ "ಕೃಷ್ಣಂ ಪ್ರಣಯ ಸಖಿ" ಸಿನಿಮಾವು ಇದೇ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ