Rekha Vedavyas: ಅರೇ.. ಹುಚ್ಚ ಖ್ಯಾತಿಯ ರೇಖಾ ಆರೋಗ್ಯವಾಗಿದ್ದಾರಾ, ಇಷ್ಟೇಕೆ ಸಣ್ಣಗಾದ್ರು? ಹರಿದಾಡ್ತಿವೆ ಬಗೆ ಬಗೆ ಗುಮಾನಿ
Sep 14, 2023 02:22 PM IST
Rekha Vedavyas: ಅರೇ.. ಹುಚ್ಚ ಖ್ಯಾತಿಯ ರೇಖಾ ಆರೋಗ್ಯವಾಗಿದ್ದಾರಾ, ಇಷ್ಟೇಕೆ ಸಣ್ಣಗಾದ್ರು? ಹರಿದಾಡ್ತಿವೆ ಬಗೆ ಬಗೆ ಗುಮಾನಿ
- ಹುಚ್ಚ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೇಖಾ ವೇದವ್ಯಾಸ್, ಸದ್ಯ ಸಿನಿಮಾರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಆಗಾಗ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಈ ನಟಿ, ಇದೀಗ ಅಚ್ಚರಿಯ ಲುಕ್‌ನಲ್ಲಿ ಪ್ರತ್ಯಕ್ಷರಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ.
Rekha Vedavyasa: ಸ್ಯಾಂಡಲ್‌ವುಡ್‌ನಲ್ಲಿ ಹುಚ್ಚ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದವರು ನಟಿ ರೇಖಾ ವೇದವ್ಯಾಸ್. ಕಿಚ್ಚ ಸುದೀಪ್ ಅವರ ಜತೆಗೆ ನಾಯಕಿಯಾಗಿ ನಟಿಸುವ ಮೂಲಕ ಮೊದಲ ಸಿನಿಮಾದಲ್ಲಿಯೇ ಎಲ್ಲರಿಂದ ಮೆಚ್ಚುಗೆ ಜತೆಗೆ ಹಲವು ಅವಕಾಶಗಳನ್ನೂ ಪಡೆದುಕೊಂಡಿದ್ದರು ಈ ನಟಿ. ಕನ್ನಡದ ಜತೆಗೆ ತೆಲುಗು ಸಿನಿಮಾಕ್ಷೇತ್ರವೂ ಇವರನ್ನು ಸೆಳೆಯಿತು. ಅಲ್ಲಿಯೂ ಒಂದಷ್ಟು ಸಿನಿಮಾ ಮಾಡಿದರು. ವರ್ಷಗಳು ಉರುಳಿದಂತೆ, ಸಿನಿಮಾ ಪ್ರಮಾಣ ಕಡಿಮೆಯಾದರೂ, ಬಣ್ಣದ ಲೋಕದ ನಂಟು ಮಾತ್ರ ಅವರನ್ನು ಬಿಡಲಿಲ್ಲ.
2001ರಲ್ಲಿ ಬಂದ ಹುಚ್ಚ ಚಿತ್ರದ ಬಳಿಕ, ಚಿತ್ರ, ತುಂಟಾಟ ಸಿನಿಮಾಗಳಲ್ಲಿ ನಟಿಸುತ್ತಲೇ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ಬಿಜಿಯಾದರು. 2006ರಲ್ಲಿ ಬಂದ ಚೆಲ್ಲಾಟ ಸಿನಿಮಾ ಮತ್ತೊಂದು ಬ್ರೇಕ್ ತಂದುಕೊಟ್ಟಿತು. ಹೀಗೆ ಸಾಗಿದ ಅವರ ಸಿನಿಮಾ ಪ್ರಯಾಣ, ಕನ್ನಡದಲ್ಲಿ ಕೊನೆಯದಾಗಿ 2014ರಲ್ಲಿ ಬಂದ ತುಳಸಿ ಚಿತ್ರದಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಈ ವರೆಗೂ ಬೇರಾವ ಸಿನಿಮಾಗಳಲ್ಲಿ ರೇಖಾ ಕಾಣಿಸಿಕೊಂಡಿಲ್ಲ. ಇದೀಗ ತೂಕ ಇಳಿಸಿಕೊಂಡು ನೋಡುಗರಿಗೆ ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚಿನ ಕೆಲ ವರ್ಷಗಳಿಂದ ಸಿನಿಮಾದಿಂದ ದೂರ ಉಳಿದು, ಕಿರುತೆರೆಯ ಹಲವು ಶೋಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಈ ನಟಿ. ಇದೀಗ ತೆಲುಗಿನ ಶೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ಕಾಣಿಸಿಕೊಂಡಿದ್ದೇ ತಡ, ಒಂದು ಕ್ಷಣ ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಅವರ ಅವತಾರ ನೋಡಿದ ಮರುಕ್ಷಣವೇ, ರೇಖಾ ಆರೋಗ್ಯವಾಗಿದ್ದಾರಾ? ಎಂಬ ಅನುಮಾನ ಮೂಡುತ್ತದೆ. ಅಂದರೆ, ದೇಹದ ತೂಕವನ್ನು ವಿಪರೀತವಾಗಿ ಕಡಿತಗೊಳಿಸಿದ್ದಾರೆ ರೇಖಾ. ಅದ್ಯಾವ ಮಟ್ಟಿಗೆ ಎಂದರೆ, ನೋಡಿದ ತಕ್ಷಣ ಇವರು ರೇಖಾನಾ? ಎಂಬಷ್ಟರ ಮಟ್ಟಿಗೆ ಬದಲಾಗಿದ್ದಾರೆ.
ಸಿನಿಮಾ ಮಂದಿ ಫಿಟ್ ಇದ್ದಷ್ಟು ಮತ್ತು ದೇಹ ಸೌಂದರ್ಯ ಕಾಪಾಡಿಕೊಂಡಷ್ಟು ಬಾಳಿಕೆ ಹೆಚ್ಚು. ಹಾಗಾಗಿ ಡಯಟ್, ಫಿಟ್‌ನೆಸ್, ಅದೂ ಇದೂ ಎಂದೆಲ್ಲ ಸಾಕಷ್ಟು ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿರುತ್ತಾರೆ. ದೇಹ ತೂಕ ಹೆಚ್ಚಳ, ಕಡಿಮೆ ಮಾಡಿಕೊಂಡ ಸಾಕಷ್ಟು ಸೆಲೆಬ್ರಿಟಿಗಳು ಉದಾಹರಣೆ ರೀತಿ ಕಣ್ಣಿಗೆ ಕಾಣಿಸುತ್ತಾರೆ. ಇದೀಗ ನಟಿ ರೇಖಾ ಸಹ ಹತ್ತಾರು ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ತೆಲುಗು ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುವ ಶ್ರೀದೇವಿ ಡ್ರಾಮಾ ಕಂಪನಿಯಲ್ಲಿ ಪ್ರತ್ಯಕ್ಷರಾಗಿದ್ದು, ಈ ಶೋನ ಪ್ರೋಮೋ ರಿಲೀಸ್ ಆಗಿದೆ.
ಶ್ರೀದೇವಿ ಡ್ರಾಮಾ ಕಂಪನಿ ಶೋಗೆ ಗೆಸ್ಟ್ ಆಗಿ ಬಂದ ರೇಖಾ ಅವರನ್ನು ನೋಡಿದ ಎಷ್ಟೋ ಮಂದಿಯೇ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಶೋದಲ್ಲಿ ಭಾಗವಹಿಸಿದ ಕೆಲವರು, ನಿಮ್ಮನ್ನು ನೋಡಿ ಖುಷಿಯಾಯ್ತು ಜತೆಗೆ ನಿಮ್ಮನ್ನು ಈ ರೀತಿ ನೋಡಿ ಶಾಕ್ ಆಗಿದೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ರೇಖಾ, ಇದೆಲ್ಲ ಘಟಿಸಿದ್ದು ಅನಿರೀಕ್ಷಿತ ಎಂದಿದ್ದಾರೆ. ಸದ್ಯ ಹೊರಬಿದ್ದ ಪ್ರೋಮೋಗೆ ಬಗೆಬಗೆ ಕಾಮೆಂಟ್‌ಗಳು ಹರಿದು ಬಂದಿವೆ. ರೇಖಾ ಅವರು ಆರೋಗ್ಯವಾಗಿದ್ದಾರಾ? ಇಷ್ಟೇಕೆ ಸಣ್ಣಗಾಗಿದ್ದಾರೆ? ಅತಿಯಾದ ಡಯಟ್ ಒಳ್ಳೆಯದಲ್ಲ, ನಿಮ್ಮನ್ನು ಈ ರೀತಿ ನೋಡಲು ಆಗುತ್ತಿಲ್ಲ ಹೀಗೆ ಸಾಕಷ್ಟು ಮಂದಿ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ರೇಖಾ, ಕಳೆದ ಕೆಲ ವರ್ಷಗಳಿಂದ ಸಿನಿಮಾ ಅಂಗಳದಿಂದ ದೂರವೇ ಉಳಿದಿದ್ದಾರೆ. ಈ ನಡುವೆ ಅವರ ದೇಹದ ತೂಕವೂ ಹೆಚ್ಚಾಗಿತ್ತು. ಮಾನಸಿಕವಾಗಿಯೂ ಕೊಂಚ ಬಳಲಿದ್ದರು. ಇದೆಲ್ಲದರಿಂದ ಹೊರಬರಬೇಕೆಂಬ ನಿಟ್ಟಿನಲ್ಲಿ ಡಯಟ್ ಸಹ ಆರಂಭಿಸಿದ್ದರು. ಆದರೆ, ಇದೀಗ ಈ ಮಟ್ಟದಲ್ಲಿ ತೂಕ ಕಳೆದುಕೊಂಡಿದ್ದು ಮಾತ್ರ ಹಲವು ಅನುಮಾನಗಳನ್ನೇ ಮೂಡಿಸಿದೆ. ತಮ್ಮ ಆರೋಗ್ಯದ ಬಗ್ಗೆ ಭಾನುವಾರ ಪ್ರಸಾರವಾಗುವ ಶ್ರೀದೇವಿ ಡ್ರಾಮಾ ಕಂಪನಿ ಶೋನಲ್ಲಿಯೇ ಅವರೇ ಬಹಿರಂಗಪಡಿಸಲಿದ್ದಾರೆ.
ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ