Kaatera Day 2 Collection: ಕಾಟೇರನ ಬೊಕ್ಕಸಕ್ಕೆ ಎರಡನೇ ದಿನವೂ ಹರಿದು ಬಂತು ಕೋಟಿ ಕೋಟಿ ಹಣ; ಎಷ್ಟಾಯ್ತು ಒಟ್ಟಾರೆ ಕಲೆಕ್ಷನ್?
Dec 31, 2023 11:04 AM IST
Kaatera Day 2 Collection: ಕಾಟೇರನ ಬತ್ತಳಿಕೆಗೆ ಎರಡನೇ ದಿನವೂ ಹರಿದು ಬಂತು ಕೋಟಿ ಕೋಟಿ ಹಣ; ಎಷ್ಟಾಯ್ತು ಒಟ್ಟಾರೆ ಕಲೆಕ್ಷನ್?
- Kaatera Day 2 Box Office Collection: ಕಾಟೇರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅಬ್ಬರದ ಪ್ರಚಾರದ ನಡುವೆ ರಾಜ್ಯಾದ್ಯಂತ ಸಿನಿಮಾ ನೋಡಿದ ಪ್ರೇಕ್ಷಕ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾನೆ. ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತ ಸಾಗುತ್ತಿದೆ ದರ್ಶನ್ ನಟನೆಯ ಕಾಟೇರ. ಕಲೆಕ್ಷನ್ ವಿಚಾರದಲ್ಲೂ ಕೋಟಿ ಕೋಟಿ ಕಮಾಯಿ ಮುಂದುವರಿಸಿದೆ.
Kaatera Day 2 Collection: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ನಟಿಸಿದ ಕಾಟೇರ ಸಿನಿಮಾ ಶುಕ್ರವಾರವಷ್ಟೇ ಬಿಡುಗಡೆಯಾಗಿ, ಎಲ್ಲೆಡೆಯಿಂದ ಮೆಚ್ಚುಗೆಯನ್ನೇ ಪಡೆಯುತ್ತಿದೆ. ಬಾಯಿ ಮಾತಿನ ಪ್ರಚಾರದಿಂದ ಹೆಚ್ಚೆಚ್ಚು ನೋಡುಗರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದೆ ಈ ಸಿನಿಮಾ. ಮೊದಲ ದಿನವೇ ದಾಖಲೆಯ 19.79 ಕೋಟಿ ಕಲೆಕ್ಷನ್ ಮಾಡಿ, ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ ಎನಿಸಿಕೊಂಡಿದ್ದರು ದರ್ಶನ್. ಇದೀಗ ಇದೇ ಕಾಟೇರ ಎರಡನೇ ದಿನವೂ ತನ್ನ ಆರ್ಭಟ ಮುಂದುವರಿಸಿದ್ದಾನೆ.
ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬಂದಿರುವ ಕಾಟೇರ ಚಿತ್ರವನ್ನು ಸದ್ಯ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭಿಸಿದ್ದ ಈ ಸಿನಿಮಾ, ರಾಜ್ಯದ ಹಲವೆಡೆ ಇಂದಿಗೂ ಹೌಸ್‌ಫುಲ್ ಪ್ರದರ್ಶನ ಮುಂದುವರಿಸಿದೆ. ಬಹುತೇಕ ಕಡೆಗಳಲ್ಲಿ ಮುಂಗಡ ಟಿಕೆಟ್ ಬುಕಿಂಗ್ ಸಹ ಕ್ಲೋಸ್ ಆಗಿದೆ. ಆ ಮಟ್ಟಿಗಿನ ಯಶಸ್ಸು ಪಡೆದುಕೊಂಡಿದೆ ಕಾಟೇರ. ಇದೀಗ ಎರಡನೇ ದಿನವೂ ಸ್ಕ್ರೀನ್‌ಗಳನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಕಲೆಕ್ಷನ್‌ನಲ್ಲೂ ಏರಿಕೆ ಕಂಡಿದೆ.
ಎರಡನೇ ದಿನದ ಗಳಿಕೆ ಎಷ್ಟು?
ಮೊದಲ ದಿನ ದಾಖಲೆಯ 19.79 ಕೋಟಿ ಗಳಿಕೆ ಕಂಡ ಕಾಟೇರ ಸಿನಿಮಾ ಎರಡನೇ ದಿನ 17.35 ಕೋಟಿ ಬಾಚಿಕೊಂಡಿದೆ. ಈ ಮೂಲಕ ಎರಡನೇ ದಿನಗಳಲ್ಲಿ 37.14 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದುಕೊಂಡಿದ್ದಾರೆ ದರ್ಶನ್. ಕರ್ನಾಟಕದಲ್ಲಷ್ಟೇ ಬಿಡುಗಡೆ ಆದ ಈ ಸಿನಿಮಾ ಇಂದು (ಭಾನುವಾರ) ಮೊದಲೆರಡು ದಿನಗಳಿಗಿಂತ ಹೆಚ್ಚು ಗಳಿಕೆ ಮಾಡಲಿದೆ ಎಂದು ಊಹಿಸಲಾಗಿದೆ. ರಜೆ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಜನ ಕುಟುಂಬದ ಜತೆಗೆ ಥಿಯೇಟರ್‌ಗೆ ಆಗಮಿಸಲಿದ್ದಾರೆ. ಮೂರನೇ ದಿನದ ಅಂದಾಜು ಲೆಕ್ಕ ಹಾಕಿದರೆ, 55 ಕೋಟಿ ಕಮಾಯಿ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಸೆಲೆಬ್ರಿಟಿಸ್‌ಗೆ ಧನ್ಯವಾದ ಅರ್ಪಿಸಿದ ದರ್ಶನ್
ರಾಜ್ಯಾದ್ಯಂತ ಎಲ್ಲೆಡೆಯಿಂದ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಟ ದರ್ಶನ್ ಸಿನಿಮಾ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. "ಏನೆಂದು ನಾ ಹೇಳಲಿ, ನಿಮ್ಮಯ ಪ್ರೀತಿ- ಆಶೀರ್ವಾದಕ್ಕೆ ಕೊನೆಯಲ್ಲಿ! ಧನ್ಯೋಸ್ಮಿ ಸೆಲೆಬ್ರಿಟಿಸ್! ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ. ಈ ಪ್ರೀತಿಯ ಚಪ್ಪಾಳೆ ನಮ್ಮ ಕಾಟೇರ ಚಿತ್ರತಂಡದ ಮನತುಂಬಿದೆ" ಎಂದು X ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
ಕಾಟೇರ ಚಿತ್ರದ ಕಥೆ ಏನು?
ಇದು 1974ರಲ್ಲಿ ನಡೆಯುವ ಕಥೆ. ಭೀಮನಹಳ್ಳಿಯಲ್ಲಿ ಕುಲುಮೆ ಕೆಲಸ ಮಾಡುವ ಕಟ್ಟುಮಸ್ತು ದೇಹದ ಯುವಕ ಕಾಟೇರ. ಆತನಿಗೆ ತನ್ನ ಕೆಲಸವೇ ದೈವ. ದುಡಿಮೆನೇ ಆತನ ಮನೆದೇವ್ರು. ಇಂತ ಭೀಮನಹಳ್ಳಿಯಲ್ಲಿ ಜಮಿನ್ದಾರಿಕೆ ಪದ್ಧತಿ ಚಾಲ್ತಿಯಲ್ಲಿರುತ್ತದೆ. ಕೃಷಿ ಮಾಡೋ ಕೃಷಿಕರು ಒಂದೆಡೆಯಾದರೆ, ಅವರ ಮೇಲೆ ಕುಳಿತ ಉಳ್ಳವರ ದಬ್ಬಾಳಿಕೆ ಮತ್ತೊಂದು ಕಡೆ. ಕಷ್ಟಪಟ್ಟು ಬೆಳೆದ ಬೆಳೆ ಕೈ ಸೇರದೆ, ಜಮಿನ್ದಾರನ ಹೊಟ್ಟೆ ಸೇರುತ್ತಿರುತ್ತದೆ. ಈ ಹೋರಾಟಕ್ಕೆ ಧುಮುಕುವ ಕಥಾನಾಯಕ ಕಾಟೇರ, ಆ ಸರ್ವಾಧಿಕಾರಿತನವನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದೇ ಕಾಟೇರನ ಒನ್ ಲೈನ್ ಸ್ಟೋರಿ.