ಬೆನ್ನಹುರಿಯಲ್ಲಿ ನಡುಕ ಹುಟ್ಟಿಸುವ ಹಾರರ್ ಥ್ರಿಲ್ಲರ್ ಕಮರೊಟ್ಟು 2 ಟ್ರೇಲರ್ ಬಿಡುಗಡೆ; ಗೆಳೆಯನ ಸಿನಿಮಾಕ್ಕೆ ಅಜಯ್‌ರಾವ್ ಸಾಥ್
Feb 13, 2024 02:24 PM IST
ಕಮರೊಟ್ಟು 2 ಟ್ರೇಲರ್ ಬಿಡುಗಡೆ
- Kamarottu 2 Kannada Movie: 'ಕಮರೊಟ್ಟು ಚೆಕ್ ಪೋಸ್ಟ್ , ಕಥೆ ಹೇಳಿ ಸಿನಿ ಪ್ರೇಮಿಗಳನ್ನು ರಂಜಿಸಿದ್ದ ನಿರ್ದೇಶಕ ಪರಮೇಶ್ ನಾಲ್ಕು ವರ್ಷದ ಬಳಿಕ ಕಮರೊಟ್ಟು 2 ಸಿನಿಮಾದ ಮೂಲಕ ಬರುತ್ತಿದ್ದಾರೆ. ಇದೀಗ ಕಮರೊಟ್ಟು 2 ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿಯೇ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸುವ ಅಂಶಗಳು ಸಾಕಷ್ಟಿದೆ.
ಬೆಂಗಳೂರು: 'ಕಮರೊಟ್ಟು ಚೆಕ್ ಪೋಸ್ಟ್ , ಕಥೆ ಹೇಳಿ ಸಿನಿ ಪ್ರೇಮಿಗಳನ್ನು ರಂಜಿಸಿದ್ದ ನಿರ್ದೇಶಕ ಪರಮೇಶ್ ನಾಲ್ಕು ವರ್ಷದ ಬಳಿಕ ಸೀಕ್ವೆಲ್ ಕಥೆ ಮೂಲಕ "ಕಮರೊಟ್ಟು 2" ಸಿನಿಮಾದೊಂದಿಗೆ ಬಂದಿದ್ದಾರೆ. 'ಕಮರೊಟ್ಟು 2' ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ನೋಡುಗರಿಗೆ ತುಸುಭೀತಿ ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ನಿರ್ದೇಶಕ ಪರಮೇಶ್ ಅವರ ಪ್ರಯತ್ನಕ್ಕೆ ಗೆಳೆಯ ಅಜಯ್ ರಾವ್ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎನ್‌ಎಂ ಸುರೇಶ್ ಬೆಂಬಲ ನೀಡಿದ್ದು, 'ಕಮರೊಟ್ಟು 2' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಅಜಯ್ ರಾವ್ ಏನಂದ್ರು?
"ನನ್ನ ಪ್ರೀತಿಯ ಗೆಳೆಯನಗೋಸ್ಕರ ಇವತ್ತು ನಾನು ಇಲ್ಲಿ ಬಂದಿದ್ದು ಸಿನಿಮಾವನ್ನು ನಾನು ನೋಡಿದ್ದು ಟೆಕ್ನಿಕಲ್ ಆಗಿ ಸಿನಿಮಾ ಅದ್ಬುತವಾಗಿ ಮೂಡಿ ಬಂದಿದೆ. ಪ್ರೇಕ್ಷಕರು ಸೀಟಿನ ತುತ್ತ ತುದಿಯಲ್ಲಿ ಕುಂತು ನೋಡುವಂತಹ ಥ್ರಿಲ್ಲರ್ ಸಿನಿಮಾ ಇದಾಗಿದೆ, ಕೆಲವೊಂದು ದೃಶ್ಯಗಳು ಟೆಕ್ನಿಕಲಿ ಅದ್ಭುತವಾಗಿ ಮೂಡಿ ಬಂದಿದ್ದು ಇದನ್ನು ಹೇಗೆ ಚಿತ್ರಣ ಮಾಡಿದ್ದಾರೆ ಎಂಬ ಕುತೂಹಲ ನನಗೆ ಮೂಡಿದೆ, ಹಾಗಾಗಿ ಪರಮೇಶ್ ಒಳ್ಳೆಯ ನಿರ್ದೇಶಕ ಎಂದು ಪ್ರತಿಯೊಂದು ದೃಶ್ಯದಲ್ಲೂ ಕಾಣುತ್ತದೆ. ಸಿನಿಮಾ ಬಹಳ ಇಷ್ಟವಾಗಿದೆ.
ಈ ಒಂದು ಸಂದರ್ಭದಲ್ಲಿ ಅಜಯ್ ರಾವ್ ಅವರು ಸಿನಿಮಾವನ್ನು ನೋಡಿದ ಮೇಲೆ ಪ್ರಿಯಾಂಕಾ ಮೇಡಂ ರವರು ಅದ್ಭುತವಾಗಿ ಕಾಣುತ್ತಿದ್ದು ನಾನು ಅವರ ದೊಡ್ಡ ಅಭಿಮಾನಿಯಾದೆ ಎಷ್ಟೋ ಜನ ಸುಂದರ ನಟಿಯರಲ್ಲಿ ಪ್ರಿಯಾಂಕ ಮೇಡಂ ಮೊದಲಿಗರಲ್ಲಿ ನಿಲ್ಲುತ್ತಾರೆ" ಎಂದು ಅಜಯ್ ರಾವ್ ಹೇಳಿದ್ದಾರೆ.
"ಒಟ್ಟಾರೆ ಕಮರೊಟ್ಟು 2 ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು ಜನರ ಮನಸ್ಸನ್ನು ಗೆದ್ದೇ ಗೆಲ್ಲುತ್ತದೆ, ಈ ಚಿತ್ರಕ್ಕೆ ಜನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ.ಹೀರೋ ಬೇಗ ಪ್ರಚಾರಕ್ಕೆ ಬರುತ್ತೇವೆ ಆದರೆ ತೆರೆ ಹಿಂದೆ ಕೆಲಸ ಮಾಡುವ ಇಂತಹ ಟೆಕ್ನಿಷಿಯನ್ ಗಳು ಮುಂದೆ ಬರುವುದಿಲ್ಲ ಪರಮೇಶ್ ಅವರಲ್ಲಿ ಸಿನಿಮಾ ಪ್ರೀತಿ ಹೆಚ್ಚಿದೆ ಅವರು ಒಬ್ಬ ರೈತರು ಕೂಡ ಯಾವುದೇ ಬೆಂಬಲವಿಲ್ಲದೆ ಅವರು ಬೆಳೆದು ಬಂದಿದ್ದಾರೆ ಇಂದು ಈ ಚಿತ್ರ ಅವರಿಗೆ ದೊಡ್ಡ ಯಶಸ್ಸನ್ನು ತಂದುಕೊಡುತ್ತದೆ ಎಂಬ ನಂಬಿಕೆ ನನಗಿದೆ ನನ್ನ ಗೆಳೆಯ ಪರಮೇಶ್ ರವರಿಗೆ ಶುಭವನ್ನು ಹಾರೈಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.
"ಒಂದೊಂದು ದೃಶ್ಯವು ಹಾಲಿವುಡ್ ಸಿನಿಮಾದಂತೆ ಕಾಣುತ್ತಿದ್ದು ಪರಮೇಶ್ ಕೆಲಸ ಮನಮುಟ್ಟುವಂತಿದೆ ಅವರಿಗೆ ಯಶಸ್ವಿಯಾಗಲಿ" ಎಂದು ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎನ್‌ಎಂ ಸುರೇಶ್ ಹೇಳಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್ ಅನಿಸಿಕೆ
"ಈ ಸಿನಿಮಾದಲ್ಲಿ ನನಗೆ ಸೂಕ್ತವಾದ ಪಾತ್ರ ಮಾಡಿಸಿದ್ದಾರೆ ಎಷ್ಟರ ಮಟ್ಟಿಗೆ ಮಾಡಿದ್ದೇನೆ ಅನ್ನೋದನ್ನ ನೀವು ನೋಡಿ ಹೇಳಬೇಕು. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ನಮ್ಮ ನಿರ್ದೇಶಕ ಪರಮೇಶ್ ನನ್ನ ಮನಸ್ಸಿಗೆ ಯಾಕೆ ಹತ್ತಿರ ಅಂದರೆ, ನಮ್ಮ ತಂದೆ ತೀರಿ ಹೋದಾಗ ಅವತ್ತಿನ ದಿನ ಹೇಗಿತ್ತು ಅನ್ನೋದು ನಿಮಗೆ ಗೊತ್ತು. ಸೆಕ್ಷನ್ 144 ಜಾರಿಯಲ್ಲಿತ್ತು ಅಲ್ಲಿ ಸೆರೆ ಹಿಡಿಯಲು ಕ್ಯಾಮೆರಾ ಮ್ಯಾನ್ ಆಗಿ ಬಂದಿದ್ದರು, ಆಗ ನನಗೆ ಪರಿಚಯ ಆದರು. ಇಂದು ಇಡೀ ನಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದಾರೆ. ನನ್ನ ಗೆಳೆಯನು ಹೌದು. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ" ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
ಪ್ರಿಯಾಂಕ ಉಪೇಂದ್ರ ಮಾತು
"ಅಜಯ್ ಅವರು ತುಂಬಾ ಪಾಸಿಟಿವ್ ಆಗಿ ಇರ್ತಾರೆ. ಅವರು ಟ್ರೈಲರ್ ಲಾಂಚ್ ಗೆ ಬಂದಿದ್ದು ಖುಷಿ ಕೊಟ್ಟಿದೆ. ನಾನು ಜಾಸ್ತಿ ಮಾತಾಡಲ್ಲ. ನನ್ನ ಮೂವಿಗಳನ್ನು ನೋಡಿರ್ತೀರ. ನಾನು ಒಪ್ಪಿಕೊಂಡಾದ ಮೇಲೆ ಎಲ್ಲರೂ ಕುಟುಂಬದ ತರ ಇರುತ್ತೇವೆ, ನೀವು ಹೇಳಬೇಕು ಟ್ರೈಲರ್ ಹೇಗಿದೆ ಎಂದು ಈ ಚಿತ್ರ ಒಪ್ಪಲು ನಿರ್ದೇಶಕ ಪರಮೇಶ್ ಅವರು ಕಾರಣ. ನನಗೆ 3 ಗಂಟೆ ನರೇಷನ್ ಕೊಟ್ಟರು. ಡೀಟೇಲ್ ಆಗಿ ನನ್ನ ಪಾತ್ರದ ಬಗ್ಗೆ ಹೇಳಿ ಕೊಟ್ಟರು. ಅವರಲ್ಲಿ ಒಬ್ಬ ಅದ್ಭುತವಾದ ನಿರ್ದೇಶಕನನ್ನು ನೋಡಿದೆ, ಫೈನಲ್ ಔಟ್ಪುಟ್ ನೋಡಿ ನನಗೆ ಬಹಳ ಖುಷಿಯಾಗಿದೆ" ಎಂದು ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.
"ಕನಸು ಪಿಕ್ಚರ್ಸ್ ಸಂಸ್ಥೆಯ ನಿರ್ಮಾಪಕರಾದ ಪವನ್ ಗೌಡ ಅವರು ನನ್ನ ಗೆಳೆಯರು ಆಗಿದ್ದರಿಂದ ನನ್ನ ಈ ಸಿನಿಮಾ ಕಥೆಗೆ ಸಾತ್ ಕೊಟ್ಟಿದ್ದಾರೆ ಮತ್ತು 'ಕಮರೊಟ್ಟು 2' ಸಿನೆಮಾ ಕಂಟೆಂಟ್, ಥ್ರಿಲ್ಲರ್, ಸಸ್ಪೆನ್ಸ್, ಪ್ಯಾರ ನಾರ್ಮಲ್ ಆಗಿರುತ್ತದೆ. ಚಿತ್ರದ ಕಥೆಗೆ ತ್ರೀ ಡೈಮೆನ್ಷನ್ ರೂಪವಿದೆ. ಪ್ರೇಕ್ಷಕರಿಗೆ ಚಿತ್ರದ ಸ್ಕ್ರೀನ್ ಪ್ಲೇ ವಿನೂತನವಾದ ಅನುಭವವನ್ನು ಕೊಡುತ್ತದೆ. 'ಕಮರೊಟ್ಟು ಚೆಕ್ ಪೋಸ್ಟ್' ಚಿತ್ರವನ್ನು ನೋಡಿ ಗೆಲ್ಲಿಸಿದ ನನಗೆ ಈ ಚಿತ್ರ ಅದಕ್ಕೂ ಮೂರು ಪಟ್ಟು ಮೀರಿ ಅದ್ಬುತವಾಗಿ ಮೂಡಿ ಬಂದಿದೆ. ಸದ್ಯಕ್ಕೆ ಸಿನಿಮಾದ ಟ್ರೈಲರ್ ಎ2 ಮ್ಯೂಸಿಕ್ ನಲ್ಲಿ ಇದ್ದು, ಪ್ರೇಕ್ಷಕರಿಗಾಗಿ ಆದಷ್ಟು ಬೇಗ ಚಿತ್ರಮಂದಿರಕ್ಕೆ ಬರುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇವೆ" ಎಂದು ಚಿತ್ರದ ನಿರ್ದೇಶಕರಾದ ಪರಮೇಶ್ ಹೇಳಿದರು.