ದರ್ಶನ್ ನೋಡಲು ಜೈಲಿಗೆ, ರೇಣುಕಾಸ್ವಾಮಿ ಕುಟುಂಬ ನೋಡಲು ಚಿತ್ರದುರ್ಗಕ್ಕೆ ನಾನ್ಯಾಕೆ ಹೋದೆ? ವಿವರಿಸಿದ ನಟ ವಿನೋದ್ ರಾಜ್
Jul 29, 2024 12:55 PM IST
ರೇಣುಕಾಸ್ವಾಮಿ ಕುಟುಂಬ ನೋಡಲು ಚಿತ್ರದುರ್ಗಕ್ಕೆ ನಾನ್ಯಾಕೆ ಹೋದೆ? ವಿವರಿಸಿದ ನಟ ವಿನೋದ್ ರಾಜ್
- Actor Darshan Case: ಇತ್ತೀಚೆಗೆ ನಟ ವಿನೋದ್ ರಾಜ್ ಜೈಲಿನಲ್ಲಿರುವ ದರ್ಶನ್ ಮತ್ತು ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗಿದ್ದರು. "ಈ ಭೇಟಿಯನ್ನು ನಾನು ರಾಜಿ ಸಂಧಾನಕ್ಕೆ ಹೋಗಿದ್ದೆ ಎಂಬರ್ಥದಲ್ಲಿ ಇದನ್ನು ಬಿಂಬಿಸಲಾಗುತ್ತಿದೆ" ಎಂದು ವಿನೋದ್ ರಾಜ್ ಬೇಸರವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರರು ನ್ಯಾಯಾಂಗ ಬಂಧನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಅವರನ್ನು ಇತ್ತೀಚೆಗೆ ನಟ ವಿನೋದ್ ರಾಜ್ ಭೇಟಿಯಾಗಿದ್ದರು. ಇದಾದ ಬಳಿಕ ಚಿತ್ರದುರ್ಗಕ್ಕೆ ತೆರಳಿ ಮೃತ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗಿದ್ದರು. ಆದರೆ, ಈ ಭೇಟಿಯ ಹಿಂದೆ "ರಾಜಿ ಸಂಧಾನ" ಕಾರಣವಿದೆ ಎಂದು ಹೇಳಲಾಗಿತ್ತು. ಇದಕ್ಕೆ ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದು, ನನ್ನ ಭೇಟಿಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
"ನಾಲ್ಕೈದು ದಿನಗಳ ಹಿಂದೆ ನಾನು ದರ್ಶನ್ ಅವರನ್ನು ಭೇಟಿಯಾಗಲು ಹೋಗಿದ್ದೆ. ಇದಾದ ಬಳಿಕ ಸುಮಾರು ಎರಡು ದಿನ ಕಳೆದು ಮೃತಪಟ್ಟ ರೇಣುಕಾಸ್ವಾಮಿ ಮನೆಗೆ ಹೋಗಿದ್ದೆ. ಆದರೆ, ಮಾಧ್ಯಮಗಳನ್ನು ನೋಡಿದ ಬಳಿಕ ನನಗೆ ಅರ್ಥವಾದದ್ದು ಏನೆಂದರೆ ನಾನು ರಾಜಿ ಸಂಧಾನಕ್ಕೆ ಹೋಗಿರುವೆ ಎಂದು ಹೇಳಲಾಗುತ್ತಿದೆ" ಎಂದು ವಿನೋದ್ ರಾಜ್ ಹೇಳಿದ್ದಾರೆ.
"ಆದರೆ, ರಾಜಿ ಸಂಧಾನಕ್ಕೆ ನಾನು ಹೋಗಿಲ್ಲ. ಖಂಡಿತವಾಗಿಯೂ ಇಂತಹ ಕೆಲಸ ಮಾಡಿಲ್ಲ. ದರ್ಶನ್ ಒಬ್ಬರು ಕಲಾವಿದರ. ನನಗೆ ಪರಿಚಯ ಇರುವ ವ್ಯಕ್ತಿ. ಇದೇ ಕಾರಣಕ್ಕೆ ಭೇಟಿ ಮಾಡಿ ಬಂದಿದೆ. ಇದೇ ಸಮಯದಲ್ಲಿ ರೇಣುಕಾಸ್ವಾಮಿ ಅವರ ಪತ್ನಿ ಗರ್ಭಿಣಿ. ಮುಂದೆ ಹುಟ್ಟಲಿರುವ ಮಗುವಿಗೆ ಏನಾದರೂ ಒಳ್ಳೆಯದು ಮಾಡಬೇಕೆಂದುಕೊಂಡು ಕೈಲಾದು ಮಾಡಿಬಂದಿದೆ. ಬೇರೆ ಯಾವುದೇ ಕಾರಣ ಇಲ್ಲ. ರಾಜಿ ಸಂಧಾನಕ್ಕೆ ನಾನು ಹೋಗಿಲ್ಲ. ಅದು ಸಾಧ್ಯ ಕೂಡ ಇಲ್ಲ" ಎಂದು ವಿನೋದ್ ರಾಜ್ ಸ್ಪಷ್ಟಪಡಿಸಿದ್ದಾರೆ.
ಸಿದ್ಧರೂಢ ಸುಳ್ಳು ಹೇಳಿದ್ರ?
ಇತ್ತೀಚೆಗೆ ಜೈಲಿನಿಂದ ಹೊರಬಂದ ತುರುವನೂರು ಸಿದ್ಧಾರೂಢ ಎಂಬ ಕೈದಿಯು ತಾನು ದರ್ಶನ್‌ರನ್ನು ಭೇಟಿಯಾಗಿದ್ದೆ ಎಂದು ಹೇಳಿದ್ದರು. ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಸಿದ್ಧಾರೂಢ ಹೇಳಿದ ಮಾತುಗಳೆಲ್ಲವನ್ನೂ ಪೊಲೀಸ್ ಅಧಿಕಾರಿಗಳು ಗಮನಿಸಿದ್ದಾರೆ. ಈ ಕುರಿತು ಮಾಹಿತಿ ನೀಡುವಂತೆ ಪರಪ್ಪನ ಅಗ್ರಹಾರ ಜೈಲಿನ ಪೊಲೀಸರಿಗೆ ಸೂಚನೆ ನೀಡಿದ್ದಾರೆ. "ದರ್ಶನ್ ಸೆಲ್‌ಗೆ ಯಾರಿಗೂ ಪ್ರವೇಶ ನೀಡಲಾಗಿಲ್ಲ" ಎಂದು ಜೈಲು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕಾರಣದಿಂದ ವಿಚಾರಣೆಗೆ ಹಾಜರಾಗುವಂತೆ ಸಿದ್ದಾರೂಢನಿಗೆ ಸೂಚಿಸಲಾಗಿದೆ. ಮಾಧ್ಯಮಗಳ ಎದುರು ಈತ ಸುಳ್ಳು ಹೇಳಿರುವನೇ ಎಂಬ ಸಂದೇಹ ಎಲ್ಲೆಡೆ ಮೂಡಿದೆ.
"ನಾನು ಜುಲೈ 8ನೇ ತಾರೀಕು ಜೈಲು ಅಧಿಕಾರಿಗಳ ಅನುಮತಿ ಪಡೆದು ನಟ ದರ್ಶನ್‌ರನ್ನು ಭೇಟಿಯಾದೆ. ನನಗೆ ಅಲ್ಲಿ ದರ್ಶನ್ ಸರ್ ಅವರನ್ನು ನೋಡಿದಾಗ ಬೇಸರವಾಯಿತು. ನಾನು ನಿಮ್ಮ ಅಭಿಮಾನಿ ಎಂದಾಗ ಅವರು ತಬ್ಬಿಕೊಂಡರು. ಯಾಕೆ ನೀನು ಇಲ್ಲಿರುವೆ ಎಂದೆಲ್ಲ ಕೇಳಿದರು. ಅವರಿಗೆ ಪಿರಾಮಿಡ್ ಧ್ಯಾನ ಹೇಳಿಕೊಟ್ಟೆ. ನನಗೆ ಧ್ಯಾನ ಗೊತ್ತಿಲ್ಲ ಅಂದ್ರು. ಮಾಡಿ ಸಾರ್, ಚೆನ್ನಾಗಿರುತ್ತದೆ, ಇಲ್ಲಿಗೆ ಇದು ಅಗತ್ಯ ಎಂದೆ. ಅವರು ಒಪ್ಪಿಕೊಂಡರು. ಹತ್ತು ನಿಮಿಷ ಧ್ಯಾನ ಮಾಡಿದ್ರು. "ಇದು ಚೆನ್ನಾಗಿದೆ ಕಣೋ, ಕಂಟಿನ್ಯೂ ಮಾಡ್ತಿನಿ ಎಂದ್ರು" ಎಂದು ಜೈಲಿನಿಂದ ಬಿಡುಗಡೆಗೊಂಡ ಖೈದಿ ಸಿದ್ಧಾರೂಢ ಹೇಳಿದ್ದರು.