logo
ಕನ್ನಡ ಸುದ್ದಿ  /  ಮನರಂಜನೆ  /  ಇವರು ಸನಾತನ ಪದ ಹಿಡಿದ ದ್ವೇಷದ ವರ್ತಕರು; ಬಿಜೆಪಿಗರ ಮಾತಿಗೆ ನಟ ಕಿಶೋರ್‌ ಧರ್ಮ ಪಾಠ!

ಇವರು ಸನಾತನ ಪದ ಹಿಡಿದ ದ್ವೇಷದ ವರ್ತಕರು; ಬಿಜೆಪಿಗರ ಮಾತಿಗೆ ನಟ ಕಿಶೋರ್‌ ಧರ್ಮ ಪಾಠ!

Sep 06, 2023 12:09 PM IST

google News

ಇವರು ಸನಾತನ ಪದ ಹಿಡಿದ ದ್ವೇಷದ ವರ್ತಕರು; ಬಿಜೆಪಿಗರ ಮಾತಿಗೆ ನಟ ಕಿಶೋರ್‌ ಧರ್ಮ ಪಾಠ!

    • ಸನಾತನ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ನಟ ಉದಯನಿಧಿ ಸ್ಟಾಲಿನ್‌ ಹೇಳಿಕೆ ಸಂಬಂಧಿಸಿದಂತೆ ಪ್ರಕಾಶ್‌ ರಾಜ್‌ ಧ್ವನಿಗೂಡಿಸಿದ್ದರು. ಈಗ ಬಹುಭಾಷಾ ನಟ ಕಿಶೋರ್‌ ಸಹ ಮಾತನಾಡಿದ್ದಾರೆ. ಕೇಂದ್ರ ಮತ್ತು ಮೋದಿ ವಿರುದ್ಧ ಸುದೀರ್ಘವಾಗಿಯೇ ಟೀಕೆ ಮಾಡಿದ್ದಾರೆ. 
ಇವರು ಸನಾತನ ಪದ ಹಿಡಿದ ದ್ವೇಷದ ವರ್ತಕರು; ಬಿಜೆಪಿಗರ ಮಾತಿಗೆ ನಟ ಕಿಶೋರ್‌ ಧರ್ಮ ಪಾಠ!
ಇವರು ಸನಾತನ ಪದ ಹಿಡಿದ ದ್ವೇಷದ ವರ್ತಕರು; ಬಿಜೆಪಿಗರ ಮಾತಿಗೆ ನಟ ಕಿಶೋರ್‌ ಧರ್ಮ ಪಾಠ!

Sanatana Dharma: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್ ಬಹಿರಂಗ ವೇದಿಕೆಯಲ್ಲಿ ಸನಾತನ ಧರ್ಮದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದಿದ್ದರು. ಅದನ್ನು ವಿರೋಧಿಸುವುದಕ್ಕಿಂತ ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಎಲ್ಲೆಡೆ ವೈರಲ್‌ ಆಗಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ನಟ ಪ್ರಕಾಶ್‌ ರಾಜ್‌ ಸೇರಿ ಸಾಕಷ್ಟು ಮಂದಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ನಟ ಕಿಶೋರ್‌ ಸಹ ಪ್ರತಿಕ್ರಿಯಿಸಿದ್ದಾರೆ.

ನಟ ಕಿಶೋರ್‌ ನಟನೆಯ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಚರ್ಚೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ. ತಮ್ಮ ಅನಿಸಿಕೆ, ಅಭಿಪ್ರಾಯ, ನಿಲುವುಗಳನ್ನು ಜಾಲತಾಣದ ಗೋಡೆಗೆ ಅಂಟಿಸಿ, ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತಿರುತ್ತಾರೆ. ಅದರಲ್ಲೂ ಪ್ರಧಾನಿ ಮೋದಿ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಬಗ್ಗೆ ಸದಾ ಟೀಕೆ ಮಾಡುವ ಕಿಶೋರ್‌ ಇದೀಗ ಸನಾತನ ಧರ್ಮದ ವಿಚಾರವಾಗಿ ದೇಶದಲ್ಲಿ ಎದ್ದಿರುವ ಪರ ವಿರೋಧ ಚರ್ಚೆಯ ಬಗ್ಗೆ ಮಾತನಾಡಿದ್ದಾರೆ.

ನಟ ಕಿಶೋರ್‌ ಹೇಳಿದ್ದೇನು?

ಇಷ್ಟೂ ದಿನ ಹಿಂದೂ ಹಿಂದೂ ಎಂದು ಅರಚುತಿದ್ದವರೆಲ್ಲ ಯಾಕೋ ಆ ಪದ ಬಿಟ್ಟೇ ಬಿಟ್ಟರೆನಿಸುತ್ತಿಲ್ಲವೇ? ಹಾಗಾದರೆ ನಾವು ಹಿಂದೂಗಳಲ್ಲವೇ? ಇದಾವುದು ಹೊಸ ಧರ್ಮ ? ಸನಾತನ??

ಕೆಲಸ ಮಾಡಲು ಯೋಗ್ಯತೆಯಿಲ್ಲದೆ ಈ ಪದಗಳ ರಾಜಕೀಯ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿರುವವರನ್ನು ಇದರ ಸಂಪೂರ್ಣ ನಿಖರ ಅರ್ಥ ಹೇಳಲು ಕೇಳಿಬಿಡಿ ಸಾಕು..

ವಾಟ್ಸಾಪ್ ವಿಶ್ವವಿದ್ಯಾಲಯದಿಂದ ಹೊರಬಂದು , ಹಿಂದೂ ಪದದ ನಿಜ ಅರ್ಥ, ಮೂಲ, ಅದರ ಹಿಂದಿನ ದ್ವೇಷದ ರಾಜಕೀಯ ಪ್ರಚಲಿತವಾಗುತ್ತಿದ್ದಂತೆ ಅದನ್ನು ಬಿಟ್ಟು ಸನಾತನ ಪದ ಹಿಡಿದ ದ್ವೇಷದ ವರ್ತಕರು ಅದನ್ನೂ ರಾಜಕೀಯ ಲಾಭಕ್ಕಾಗಿ ಬಳಸಿದ್ದೇ ಈ ಅನವಶ್ಯಕ ಚರ್ಚೆಗೆ ಕಾರಣ. ರಾಜಕೀಯದ ದೃಷ್ಟಿಯಿಂದ ಉದಯನಿಧಿಯವರ ಭಾಷಾಪ್ರಯೋಗದ ತೀಕ್ಷ್ಣತೆ ಸ್ವಲ್ಪ ಕಡಿಮೆಯಾಗಬಹುದಿತ್ತೆನಿಸಿದರೂ ಅವರು ಖಂಡಿಸಿದ್ದು ಇವರ ದ್ವೇಷದ ಜಾತಿವಾದದ, ಅಸ್ಪೃಷ್ಯತೆಯ, ಅಸಮಾನತೆಯ ವೈದಿಕ ರಾಜಕೀಯವು ಕಿಡ್ನಾಪ್ ಮಾಡಿದ ಸನಾತನವನ್ನು, ಆದಿ ಅಂತ್ಯವಿಲ್ಲದ ಸನಾತನ ಪದವನ್ನಲ್ಲವೆಂಬುದು ಸ್ಪಷ್ಟ ..

ಅದನ್ನು ಸನಾತನಿಗಳ ಮಾರಣಹೋಮಕ್ಕೆ ಹೋಲಿಸಿದ ಇವರ ದ್ವೇಷದ ವಕ್ತಾರನಿಗೆ ಇವರ ಪಕ್ಷದ ಪ್ರಧಾನಿ ಊರಲ್ಲೆಲ್ಲ ಕಾಂಗ್ರೆಸ್ ಮುಕ್ತವೆಂದು ಕೂಗಾಡುತ್ತ ತಿರುಗಿದಾಗ ಕಾಂಗ್ರೆಸಿಗರ ಮಾರಣಹೋಮಕ್ಕೆ ಕರೆ ನೀಡಿದ್ದರೇ ಕೇಳಬೇಕಲ್ಲ..

ಧರ್ಮವೆನ್ನುವುದು ಅಧರ್ಮದ ವಿರುದ್ಧ ಪದವಾದರೆ, ಅಧರ್ಮವೆನ್ನುವುದು ಕೆಟ್ಟ ಕೆಲಸವೆಂದಾದರೆ, ಒಳ್ಳೆಯ ಕೆಲಸ ಮಾಡುವುದಷ್ಟೇ ಧರ್ಮವೇ ಹೊರತು ಹಲವು ನಂಬಿಕೆಯ ಮೂಟೆಗಳಲ್ಲ.

ಈ ದಾರಿತಪ್ಪಿಸುವ ಧರ್ಮಾಂಧ ರಾಜಕೀಯದಲ್ಲಿ ನಮ್ಮ ಜ್ವಲಂತ ಸಮಸ್ಯೆಗಳೂ , ಜಾತಿವಾದದ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ರೌರ್ಯದ, ಅಸಮಾನತೆಯ ಸಮಸ್ಯೆಗಳೆಲ್ಲ ಕೊಚ್ಚಿ ಹೋಗುವ ಮುನ್ನ ಎಚ್ಚರಗೊಳ್ಳುವ. ಮನುಷ್ಯರನ್ನು ಮನುಷ್ಯರಾಗಿ, ಕಾಣುವ ಮನುಷ್ಯ ಧರ್ಮದವರಾಗುವ. ವಿಶ್ವಮಾನವರಾಗುವ" ಎಂದು ಕಿಶೋರ್‌ ಬರೆದುಕೊಂಡಿದ್ದಾರೆ.

ಪ್ರಕಾಶ್‌ ರಾಜ್‌ ಹೇಳಿಕೆ

ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ, ನಟ ಪ್ರಕಾಶ್‌ ರಾಜ್‌ ಹೇಳಿಕೆ ನೀಡಿದ್ದಾರೆ. ನಾನು ನನ್ನ ಅಪ್ಪ ಅಮ್ಮನಿಗೆ ಹುಟ್ಟಿದ್ದೆನೆಯೇ ಹೊರತು ಸನಾತನ ಧರ್ಮಕ್ಕಲ್ಲ ಎಂದಿದ್ದಾರೆ. “ನಿಮಗೆ ಗೊತ್ತಿರಲಿ, ನಾವು ಗೌರಿಯನ್ನು ಹೂಳಲಿಲ್ಲ. ಬಿತ್ತಿದ್ದೇವೆ. ಆ ಒಂದು ಧ್ವನಿಯನ್ನು ಅಡಗಿಸಿದ್ದಕ್ಕೆ, ನೂರಾರು ಗೌರಿಯರಾಗಿ ನಾವು ಹುಟ್ಟಿದ್ದೇವೆ. ದೇಶಕ್ಕೆ ಗಾಯವಾದಾಗ ನಾವು ಮೌನವಾಗಿರುವುದು ಸರಿಯಲ್ಲ. ಅದು ಇಡೀ ದೇಶವನ್ನೇ ಸುಡುತ್ತದೆ. ಮೊದಲು ನಾವು ಧ್ವನಿ ಎತ್ತಬೇಕು. ಪ್ರಶ್ನೆ ಮಾಡಬೇಕು. ಹಾಗೆ ಪ್ರಶ್ನೆ ಮಾಡಿದರೆ ಕೆಲವರು ಕೈಯಲ್ಲಿ ಆಯುಧ ಹಿಡಿದು ಬರುತ್ತಾರೆ. ಹಾಗೆ ಬರುವವರು ಧೀರರಲ್ಲ, ಹೇಡಿಗಳು” ಎಂದು ಪ್ರಕಾಶ್‌ ಹೇಳಿದ್ದಾರೆ.

“ಇದೇ ವೇಳೆ ನಾನು ಇಲ್ಲಿಗೆ ಬರುವ ಮುನ್ನ ಖಾಸಗಿ ಚಾನೆಲ್​ನಲ್ಲಿ ಸಂದರ್ಶನಕ್ಕೆ ಹೋಗಿದ್ದೆ, ಅಲ್ಲಿ ಅದಾಲತ್​ ನಡೆಸುತ್ತೇವೆ ಎಂದು ಹೇಳಿದ್ದರು. ಸುಮಾರು 30 ಮಂದಿ ಇದ್ದರು, ಅವರೆಲ್ಲರು ಕಾವಿ ಧರಿಸಿದ್ದರು. ಅದರಲ್ಲೊಬ್ಬ ನೀವು ಕಾಂಗ್ರೆಸ್​​ನವರ ಎಂದ, ಅದಕ್ಕೆ ನಾನು ನಿಮ್ಮ ಪಕ್ಷದ ವಿರೋಧಿ ಎಂದೆ. ಮತ್ತೊಬ್ಬ ನೀವು ಸನಾತನ ಧರ್ಮ ಅಲ್ವಾ ಎಂದು ಪ್ರಶ್ನೆ ಕೇಳಿದಾ, ಅದಕ್ಕೆ ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಾನು ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ” ಎಂದು ಪ್ರಕಾಶ್​ ರಾಜ್ ಹೇಳಿಕೆ ನೀಡಿದ್ದಾರೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ