ನ್ಯಾಯವನ್ನು ಕೋರ್ಟ್ ತೀರ್ಮಾನ ಮಾಡಲಿ ಎಂದ ನಟ ರಕ್ಷಿತ್ ಶೆಟ್ಟಿ; ಕಾಪಿರೈಟ್ ಅನುಮತಿ ಕೇಳಿದ್ರೆ ಅಷ್ಟೊಂದು ಹಣ ಕೇಳೋದ?
Aug 02, 2024 02:05 PM IST
ನ್ಯಾಯವನ್ನು ಕೋರ್ಟ್ ತೀರ್ಮಾನ ಮಾಡಲಿ ಎಂದ ನಟ ರಕ್ಷಿತ್ ಶೆಟ್ಟಿ
- ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಎರಡು ಹಳೆಯ ಹಾಡುಗಳನ್ನು ಅನುಮತಿ ಇಲ್ಲದೆ ಬಳಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ರಕ್ಷಿತ್ ಶೆಟ್ಟಿ ಯಶವಂತಪುರ ಪೊಲೀಸ್ ಸ್ಟೇಷನ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯವನ್ನು ನ್ಯಾಯಾಲಯ ತೀರ್ಮಾನ ಮಾಡಲಿ ಎಂದಿದ್ದಾರೆ.
ಬೆಂಗಳೂರು: ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಎರಡು ಹಳೆಯ ಹಾಡುಗಳನ್ನು ಅನುಮತಿ ಇಲ್ಲದೆ ಬಳಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ರಕ್ಷಿತ್ ಶೆಟ್ಟಿ ಯಶವಂತ ಪೊಲೀಸ್ ಸ್ಟೇಷನ್‌ಗೆ ಇಂದು ಆಗಮಿಸಿದ್ದು, ತನ್ನ ಹೇಳಿಕೆ ದಾಖಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ಪ್ರಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
"ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಕೋರ್ಟ್ ತೀರ್ಮಾನ ಮಾಡಲಿ. ಮೂರ್ನಾಲ್ಕು ಹಳೆ ಹಾಡುಗಳನ್ನ ಬ್ಯಾಕ್ ಗ್ರೌಂಡ್ ನಲ್ಲಿ ಬಳಸುವ ಸನ್ನಿವೇಶವಿತ್ತು. ಹಾಡುಗಳ ಬಳಕೆಗೆ ಪರ್ಮೀಷನ್ ತೆಗದುಕೊಳ್ಳೋದಕ್ಕೆ ರಾಜೇಶ್ ಅವರಿಗೆ ಹೇಳಿದ್ದೆ . ರಾಜೇಶ್ ಅವರು ಫೋನ್ ಮಾಡಿದಾಗ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟರು. ಅಷ್ಟು ಕೊಡುವ ಅವಶ್ಯಕತೆಯಿಲ್ಲ. ಮೂರ್ನಾಲ್ಕು ಬಾರಿ ಈ ಕುರಿತು ಮಾತುಕತೆಯಾಗಿತ್ತು" ಎಂದು ರಕ್ಷಿತ್ ಶೆಟ್ಟಿ ವಿವರ ನೀಡಿದ್ದಾರೆ.
"ಒಂದು ಹಾಡು ಬ್ಯಾಂಕ್ ಗ್ರೌಂಡ್ ನಲ್ಲಿ ಬಂದಿದೆ. ಅದು ಕಾಪಿ ರೈಟ್ ಉಲ್ಲಂಘನೆಯಲ್ಲ. ಕಾಪಿ ರೈಟ್ ಆ್ಯಕ್ಟ್ ಏನೇಳುತ್ತೆ ಎನ್ನುವುದನ್ನು ಕೋರ್ಟ್ ನಲ್ಲಿ ನೋಡೋಣ. ಕಾಪಿರೈಟ್ ಬಗ್ಗೆ ಸಿನಿಮಾದಲ್ಲಿರುವವರಿಗೆ ನಾಲೆಡ್ಜ್ ಇಲ್ಲಾ. ಹಳೇ ಸಿನಿಮಾ ಹಾಡುಗಳನ್ನು ಬಳಸಿಕೊಳ್ಳುವುದು ತಪ್ಪಾ?" ಎಂದು ರಕ್ಷಿತ್ ಶೆಟ್ಟಿ ಪ್ರಶ್ನಿಸಿದ್ದಾರೆ.
"ಈ ರೀತಿ ಹಳೆ ಹಾಡುಗಳ ಬಳಕೆ ಕುರಿತಂತೆ ವಿವಾದ ಕಿರಿಕ್ ಪಾರ್ಟಿಯಲ್ಲೂ ಆಗಿತ್ತು. ಈ ರೀತಿ ಬಳಕೆ ತಪ್ಪಲ್ಲ ಎಂದು ಕೋರ್ಟ್‌ನಿಂದ ತೀರ್ಪು ಬಂದಿತ್ತು. ಆ ಬಳಿಕ ಹೊರಗೆ ಸಂಧಾನದ ಮಾತುಕತೆಯಾಗಿತ್ತು. ಇಂದು ಪೊಲೀಸ್ ಸ್ಟೇಷನ್‌ನಲ್ಲಿ ಸ್ಟೇಟ್‌ಮೆಂಟ್ ನೀಡಿರುವೆ. ಮುಂದೆ ಕಾನೂನು ಹೋರಾಟ ಕೋರ್ಟ್‌ನಲ್ಲಿ ನಡೆಸಲಾಗುವುದು. ನಮಗೂ ಅರ್ಥವಾಗಲಿ ಯಾವುದೂ ಬಳಸಬೇಕು ಯಾವುದು ಬಳಸಬಾರದು ಅಂತಾ. ನಮ್ಮ ಪ್ರಕಾರ ಇದು ಸರಿ ಅಂತಾ ವಾದ ಮಾಡ್ತೀನಿ" ಎಂದು ಅವರು ಹೇಳಿದ್ದಾರೆ.