logo
ಕನ್ನಡ ಸುದ್ದಿ  /  ಮನರಂಜನೆ  /  Leelavathi: ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಲೀಲಾವತಿ ನೆನಪುಗಳು ಅಮರ; ಸಿಎಂ, ಸಚಿವರು ಸೇರಿ ಹಲವು ಗಣ್ಯರ ಸಂತಾಪ

Leelavathi: ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಲೀಲಾವತಿ ನೆನಪುಗಳು ಅಮರ; ಸಿಎಂ, ಸಚಿವರು ಸೇರಿ ಹಲವು ಗಣ್ಯರ ಸಂತಾಪ

HT Kannada Desk HT Kannada

Dec 08, 2023 10:33 PM IST

google News

ಕನ್ನಡದ ಹಿರಿಯ ನಟಿ ಲೀಲಾವತಿ

  • ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳು ಮತ್ತು ಅನೇಕ ಗಣ್ಯರು ನುಡಿನಮನ ಸಲ್ಲಿಸಿದ್ದಾರೆ. ಯಾರ ಸಂದೇಶ ಏನಿದೆ ಇಲ್ಲಿದೆ ವಿವರ.

ಕನ್ನಡದ ಹಿರಿಯ ನಟಿ ಲೀಲಾವತಿ
ಕನ್ನಡದ ಹಿರಿಯ ನಟಿ ಲೀಲಾವತಿ

ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ನಟಿ ಲೀಲಾವತಿ ಅವರು ಇಂದು (ಡಿ.8) ವಿಧಿವಶರಾದರು. ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಡಾ.ರಾಜಕುಮಾರ್ ಅವರ ಬಹುತೇಕ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ, ಬಳಿಕ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದ ಲೀಲಾವತಿ ಅವರು ಸಮಾಜಮುಖಿ ಕಾರ್ಯಚಟುವಟಿಕೆಗಳ ಮೂಲಕ ಗಮನಸೆಳೆದವರು. ಹೀಗಾಗಿ, ಸಮಾಜದ ಎಲ್ಲ ರಂಗದವರ ಪ್ರೀತಿ ಪಾತ್ರರಾಗಿದ್ದವರು ಎಂದು ಗಣ್ಯರು ಸ್ಮರಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ನುಡಿ

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದೆ.

ಹಲವು ದಶಕಗಳ ಕಾಲ ತಮ್ಮ‌ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ.

ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮಾತೃಸದೃಶ ಕಲಾವಿದೆ ಇನ್ನು ನೆನಪು - ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಲೀಲಾವತಿ ಅವರು ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದಕ್ಷಿಣ ಭಾರತದ ಸುಮಾರು 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಅವರ ಅಗಲಿಕೆಯಿಂದ ಕಲಾಪ್ರಪಂಚ ತನ್ನ ಮಾತೃಸದೃಶ ಕಲಾವಿದೆಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿ ವರ್ಗದವರಲ್ಲಿ ಸಂತಾಪಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿನಮನ

ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಲೀಲಾವತಿ ನಿಧನರಾಗಿರುವ ಸುದ್ದಿ ಕೇಳಿ ಮುನಸ್ಸಿಗೆ ದುಖವಾಯಿತು. ಅವರ ಅಗಲಿಕೆಯಿಂದ ಕನ್ನಡ ನಾಡು ಹಾಗೂ ಕಲಾರಂಗ ಒಬ್ಬ ಮನೆಯ ಹಿರಿಯರನ್ನು ಕಳೆದುಕೊಂಡು ಬಡವಾದಂತಾಗಿದೆ.

ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ರಾಜಕುಮಾರ್ ಸೇರಿದಂತೆ ಎಲ್ಲ ದಿಗ್ಗಜ ನಟರೊಂದಿಗೆ ವಿಭಿನ್ನ ಪಾತ್ರಗಳನ್ನು ಮಾಡಿ ಎಲ್ಲರ ಮನೆ ಮಾತಾಗಿದ್ದರು.

ಅವರ ಪುತ್ರ ವಿನೋದ್ ರಾಜ್ ಅವರಿಗೆ ತಾಯಿಯ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ‌ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಂಬನಿ

ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು, ಬಹುಭಾಷಾ ಕಲಾವಿದೆ ಲೀಲಾವತಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

ಕನ್ನಡ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು, ಬಹುಭಾಷಾ ಕಲಾವಿದರಾದ ಲೀಲಾವತಿ ಅವರ ನಿಧನದ ವಾರ್ತೆ ಕೇಳಿ ಬಹಳ ನೋವುಂಟಾಯಿತು. ನಾಯಕಿಯಾಗಿ ಮಾತ್ರವಲ್ಲದೆ, ಪೋಷಕ ಪಾತ್ರಗಳಿಗೂ ಜೀವ ತುಂಬಿ ಬೆಳ್ಳಿತೆರೆಯ ಮೇಲೆ ಅವುಗಳ ಹೆಜ್ಜೆಗುರುತುಗಳು ಮೂಡುವಂತೆ ಮಾಡಿದವರು ಅವರು. ಅಮ್ಮ, ಅಕ್ಕ, ಅತ್ತೆ ಸೇರಿ ಅನೇಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಭಕ್ತ ಕುಂಬಾರ, ವೀರ ಕೇಸರಿ, ಭಾಗ್ಯದೇವತೆ, ಸೋತು ಗೆದ್ದವಳು, ನಂದಾದೀಪ, ವಿಧಿ ವಿಲಾಸ, ಸಂತ ತುಕಾರಾಂ, ರಣಧೀರ ಕಂಠೀರವ ಸೇರಿ ಅವರು ನಟಿಸಿದ್ದ ಅನೇಕ ಚಿತ್ರಗಳು ಕನ್ನಡಿಗರ ಮನೆ ಮನಗಳನ್ನು ತುಂಬಿರುತ್ತವೆ ಎಂದಿರುವ ಅವರು; ಲೀಲಾವತಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಪುತ್ರ ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.

ಖ್ಯಾತ ನಟಿ ಲೀಲಾವತಿ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ

ಕನ್ನಡ ಚಿತ್ರರಂಗಕ್ಕೆ 50 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದ ಲೀಲಾವತಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸದಾಕಾಲ ರೈತರ ಬಗ್ಗೆ ಕಾಳಜಿ ಹೊಂದಿದ್ದರು. ತಮ್ಮದೇ ಹಣದಲ್ಲಿ ಪಶುಚಿಕಿತ್ಸಾ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ ಎಂದು ಸ್ಮರಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅವರ ನಿಧನದ ಸುದ್ದಿ ಕೇಳಿ ತೀವ್ರ ನೋವಾಯಿತು ಎಂದಿದ್ದಾರೆ.

ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ