ಕನ್ನಡ ನಟಿ ಪ್ರಿಯಾಂಕ ಮಲ್ನಾಡ್ ಕಾರು ಅಪಘಾತ; ಕೇರಳದ ಶ್ರೀ ಪದ್ಮನಾಭ ಸ್ವಾಮಿ ದೇಗುಲದಿಂದ ಹಿಂತುರುಗುವ ವೇಳೆ ಅವಘಡ
Jul 30, 2024 10:29 AM IST
ಕನ್ನಡ ನಟಿ ಪ್ರಿಯಾಂಕ ಮಲ್ನಾಡ್ ಕಾರು ಅಪಘಾತ; ದೇಗುಲದಿಂದ ಹಿಂತುರುಗುವ ಸಮಯದಲ್ಲಿ ಅವಘಡ
- Priyanka Malnad Car Accident:ಕನ್ನಡ ನಟಿ ಪ್ರಿಯಾಂಕ ಮಲ್ನಾಡ್ ಕೇರಳದ ತಿರುವನಂತಪುರಂ ಶ್ರೀ ಅನಂತಪದ್ಮನಾಭ ದೇಗುಲದಲ್ಲಿ ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡಿದೆ. ಈ ಕುರಿತು ಸ್ವತಃ ನಟಿ ಮಾಹಿತಿ ನೀಡಿದ್ದು, ದೇವರ ದಯೆಯಿಂದ ಬಚಾವ್ ಆಗಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ಕನ್ನಡ ನಟಿ ಪ್ರಿಯಾಂಕ ಮಲ್ನಾಡ್ ಅವರು ಕೇರಳದ ತಿರುವನಂತಪುರಂ ಶ್ರೀ ಅನಂತಪದ್ಮನಾಭ ದೇಗುಲದಲ್ಲಿ ದೇವರ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡಿದೆ. ಈ ಕುರಿತು ಸ್ವತಃ ನಟಿ ಮಾಹಿತಿ ನೀಡಿದ್ದು, ದೇವರ ದಯೆಯಿಂದ ಬಚಾವ್ ಆಗಿರುವುದಾಗಿ ತಿಳಿಸಿದ್ದಾರೆ.
"ಜುಲೈ 27, 2024ರಂದು 5 ಜನ ಕೇರಳದ ಅನಂತಪದ್ಮನಾಭ ಸ್ವಾಮಿ ದೇಗುಲದಲ್ಲಿ ಬೆಳಗ್ಗೆ 3 ಗಂಟೆಯ ದರ್ಶನ ಮುಗಿಸಿದೆವು. ಅದು ತುಂಬಾ ಅದ್ಭುತ ಅನುಭವ. ದೇವರ ದರ್ಶನ ಮುಗಿಸಿ ಹಿಂತುರುಗಿ ಬರುವ ಸಂದರ್ಭದಲ್ಲಿ ನಮ್ಮ ಕಾರಿಗೆ ಅಪಘಾತವಾಗವಾಯಿತು. ದೇವರ ದಯೆಯಿಂದ ನಾವು ಸೀಟ್ ಬೆಲ್ಟ್ ಧರಿಸಿದ್ದೆವು. ಕಾರಿನಲ್ಲಿ ಏರ್ ಬ್ಯಾಗ್‌ಗಳಿದ್ದವು. ನಾವು ಸುರಕ್ಷಿತವಾಗಿ ಉಳಿದೆವು. ದಯವಿಟ್ಟು ಯಾವಾಗಲೂ ಸೀಟ್ ಬೆಲ್ಟ್‌ಗಳನ್ನು ಧರಿಸಿ. ವಾಹನ ಚಾಲನೆ ಮಾಡುವಾಗ ನಿದ್ರೆ ಬರುತ್ತಿದ್ದರೆ ಬ್ರೇಕ್ ತೆಗೆದುಕೊಳ್ಳಿ" ಎಂದು ಪ್ರಿಯಾಂಕ ಮಲ್ನಾಡ್ ಪೋಸ್ಟ್ ಮಾಡಿದ್ದಾರೆ.
"ಈ ಸಂದರ್ಭದಲ್ಲಿ ತಕ್ಷಣ ಸಹಾಯ ಮಾಡಿದ ಮತ್ತು ಚಿಕಿತ್ಸೆ ನೀಡಿದ, ಸಹಾಯ ಮಾಡಿದ ಕೇರಳ ಜನರಿಗೆ ಮತ್ತು ಕೇರಳ ಪೊಲೀಸರಿಗೆ ಧನ್ಯವಾದಗಳು" ಎಂದು ಪ್ರಿಯಾಂಕ ಮಲ್ನಾಡ್ ಪೋಸ್ಟ್ ಮಾಡಿದ್ದಾರೆ. "ನಮ್ಮ ಹಿತಶಶತ್ರುಗಳ ಆಶೀರ್ವಾದ- ವಿದ್ ದಿ ಬ್ಲೆಸಿಂಗ್ ಆಫ್ ಅವರ್ ವೆಲ್ ವಿಶಿಂಗ್ ಹೇಟರ್ಸ್" ಎಂದೂ ಕ್ಯಾಪ್ಷನ್ ಬರೆದಿದ್ದಾರೆ. ಮಳೆಗಾಲದಲ್ಲಿ ವಾಹನ ಅಪಘಾತಗಳು ಹೆಚ್ಚಾಗುತ್ತಿದ್ದು, ದೂರ ಪ್ರಯಾಣ ಕೈಗೊಳ್ಳುವ ಸಂದರ್ಭದಲ್ಲಿ ಎಚ್ಚರಿಕೆಯಿಂದ ವಾಹನ ಸವಾರಿ ನಡೆಸಬೇಕಿದೆ.
ನಟಿ ಪ್ರಿಯಾಂಕ ಮಲ್ನಾಡ್ ಬಗ್ಗೆ
ಪ್ರಿಯಾಂಕ ಮಲ್ನಾಡ್ ಕನ್ನಡದ ಸಿನಿಮಾ ಮತ್ತು ಕಿರುತೆರೆ ನಟಿ. ಡಬಲ್ ಎಂಜಿನ್, ವೈರ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸುರಕ್ಷಿತ ವಾಹನ ಚಾಲನೆಗೆ ಸಲಹೆಗಳು
ಪ್ರಿಯಾಂಕ ಮಲ್ನಾಡ್ ಮತ್ತು ಇತರರು ರಾತ್ರಿ 3 ಗಂಟೆಗೆ ಕೇರಳದ ತಿರುವನಂತಪುರಂ ಅನಂತ ಪದ್ಮನಾಭ ದೇಗುಲದಲ್ಲಿ ದರ್ಶನ ಮಾಡಿ ವಾಪಸ್ ಬರುತ್ತಿದ್ದರು. ರಾತ್ರಿಯ ವೇಳೆ ವಾಹನ ಚಾಲನೆ ಮಾಡುವಾಗ ಚಾಲಕರಿಗೆ ನಿದ್ದೆ ಬರುವುದು, ತೂಕಡಿಕೆ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಕೆಲವೇ ಸೆಕೆಂಡ್ ಕಣ್ಣು ಮುಚ್ಚಿದರೂ ದೊಡ್ಡ ಅಪಘಾತವಾಗಬಹುದು ಎನ್ನುವುದಕ್ಕೆ ಈ ಅಪಘಾತವೇ ಸಾಕ್ಷಿ. ಹೀಗಾಗಿ, ರಾತ್ರಿ ವೇಳೆ ವಾಹನ ಚಾಲನೆ ಮಾಡುವವರು ಎಚ್ಚರಿಕೆಯಿಂದ ಇರಬೇಕು. ತೂಕಡಿಕೆಯ ಲಕ್ಷಣ ಬಂದರೆ ಒಂದಿಷ್ಟು ಹೊತ್ತು ವಾಹನವನ್ನು ಬದಿಗೆ ಹಾಕಿ ನಿದ್ದೆ ಮಾಡುವುದು ಉತ್ತಮ.
ರಾತ್ರಿ ಪ್ರಯಾಣಿಸುವ ಸಮಯದಲ್ಲಿ ಸೀಟ್ ಬೆಲ್ಟ್ ಧರಿಸಲು ಮರೆಯಬೇಡಿ. ಸೀಟ್ ಬೆಲ್ಟ್ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಈಗಿನ ಬಹುತೇಕ ಕಾರುಗಳು ನೋಡಲು ಆಕರ್ಷಕವಾಗಿರುತ್ತವೆ. ಆದರೆ, ಗಟ್ಟಿ ಮುಟ್ಟಾಗಿ ಇರುವುದಿಲ್ಲ. ಇಂತಹ ಸಮಯದಲ್ಲಿ ವಾಹನದಲ್ಲಿ ಸಾಕಷ್ಟು ಸುರಕ್ಷಿತ ಫೀಚರ್‌ಗಳು ಇರುವುದು ಉತ್ತಮ. ಚಾಲಕ ಮಾತ್ರವಲ್ಲದೆ ಪ್ರಯಾಣಿಕರಿಗೂ ಏರ್ ಬ್ಯಾಗ್ ಇರುವಂತಹ ಕಾರುಗಳನ್ನು ಖರೀದಿಸಲು ಆದ್ಯತೆ ನೀಡಿ.
ಮಳೆಗಾಲದಲ್ಲಿ ಗುಡ್ಡಕುಸಿತದಂತಹ ಘಟನೆಗಳು ನಡೆಯುತ್ತ ಇರುತ್ತವೆ. ರಾತ್ರಿ ಅಥವಾ ಹಗಲು ಹೊತ್ತಿನಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡಲು ಮರೆಯದಿರಿ.