ನಟಿ ಸೌಂದರ್ಯ ದುರಂತ ಸಾವಿನ ಬಳಿಕ ಹರಿದಾಡಿದ ಆ ಸುದ್ದಿ ಸುಳ್ಳಿನ ಕಂತೆಯೇ ಹೊರತು ನಿಜವಲ್ಲ! ಕುಟುಂಬದಿಂದಲೇ ಸ್ಪಷ್ಟನೆ
Jul 17, 2024 08:08 PM IST
ನಟಿ ಸೌಂದರ್ಯ ದುರಂತ ಸಾವಿನ ಬಳಿಕ ಹರಿದಾಡಿದ ಆ ಸುದ್ದಿ ಸುಳ್ಳಿನ ಕಂತೆಯೇ ಹೊರತು ನಿಜವಲ್ಲ! ಕುಟುಂಬದಿಂದಲೇ ಸ್ಪಷ್ಟನೆ
- ನಟಿ ಸೌಂದರ್ಯ ಸಾವಿಗೆ ಆಪ್ತಮಿತ್ರ ಚಿತ್ರದ ನಾಗವಲ್ಲಿ ಪಾತ್ರವೇ ಕಾರಣ, ಹೆಬ್ಬಾಳದ ಬಳಿ ಆಕೆಯ ಆತ್ಮ ಈಗಲೂ ಇದೆ, ಸೌಂದರ್ಯ ನಿಧನರಾದಾಗ ಅವರು ಗರ್ಭಿಣಿ ಎಂದೆಲ್ಲ ಸುದ್ದಿ ಸಂಚಲನ ಸೃಷ್ಟಿಸಿದ್ದವು. ಆ ವದಂತಿಗಳ ಬಗ್ಗೆ ಸೌಂದರ್ಯ ಅವರ ಅಣ್ಣನ ಪತ್ನಿ ನಿರ್ಮಲಾ ಅಮರನಾಥ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
Actress Soundarya: ಕನ್ನಡ ಮಾತ್ರವಲ್ಲ ಸೌತ್ ಚಿತ್ರರಂಗದಲ್ಲಿಯೇ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದರು ನಟಿ ಸೌಂದರ್ಯ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಮನ್ನಣೆಯನ್ನೂ ಗಿಟ್ಟಿಸಿಕೊಂಡಿದ್ದರು. ಸ್ಟಾರ್ ನಟರ ಜತೆಗೆ ಸಾಲು ಸಾಲು ಸಿನಿಮಾಗಳು, ಬಿಜಿ ಶೆಡ್ಯೂಲ್ಗಳು. ಆದರೆ, ಕೇವಲ 27ನೇ ವಯಸ್ಸಲ್ಲಿಯೇ ಅದ್ಯಾಕೋ ನಟಿ ಸೌಂದರ್ಯ ಅವಸರ ಮಾಡಿ ಹೊರಟು ಹೋದರು. ಎಲೆಕ್ಷನ್ ಪ್ರಚಾರಕ್ಕೆಂದು ತೆರಳುವ ವೇಳೆ ಹೆಲಿಕಾಪ್ಟರ್ ಕ್ರ್ಯಾಶ್ ಆಗಿ ಹೆಬ್ಬಾಳ ಬಳಿ ಸುಟ್ಟು ಕರಕಲಾಗಿದ್ದರು. ಅವರ ದುರಂತ ಸಾವಿನ ಬಳಿಕ ಹರಿದಾಡಿದ ಸುದ್ದಿಗಳು ಮಾತ್ರ ಒಂದೆರಡಲ್ಲ!
ಅದು 2004ರ ಸಮಯ. ಏಪ್ರಿಲ್ 17ರಂದು ಚಿತ್ರೋದ್ಯಮದಲ್ಲಿ ಕಂಡು ಕೇಳರಿಯದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿತ್ತು. ಬಹುಭಾಷಾ ನಟಿ ಸೌಂದರ್ಯ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅಂದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು ಸುರಸುಂದರಿಯ ಆ ಸಾವು. 20 ವರ್ಷಗಳ ಹಿಂದೆ ಅಂದರೆ, 2004ರ ಏ. 17ರಂದು ಬೆಂಗಳೂರಿನಿಂದ ತೆಲಂಗಾಣದ ಕರೀಂನಗರಕ್ಕೆ ಅಣ್ಣ ಅಮರನಾಥ್ ಜತೆಗೆ ಬಿಜೆಪಿ ಪಕ್ಷದ ಪ್ರಚಾರಕ್ಕೆ ಹೊರಡಲು ಹೆಲಿಕಾಪ್ಟರ್ ಏರಿದ್ದರು. ಆದರೆ ದುರದೃಷ್ಟವಶಾತ್ ಅವರಿದ್ದ ಹೆಲಿಕಾಪ್ಟರ್ ಜಕ್ಕೂರು ಏರ್ಫೀಲ್ಡ್ನಲ್ಲಿ ಕ್ರ್ಯಾಶ್ ಆಗಿ ನೆಲಕ್ಕುರುಳಿತ್ತು.
ಸಾವಿನ ನಡುವೆ ವದಂತಿಗಳಿಗೆ ಆಹಾರವಾಗಿದ್ದ ನಟಿ
ಹಾಗೇ ವಿಮಾನ ಅಪಘಾತದಲ್ಲಿ ನಟಿ ಸೌಂದರ್ಯ ದುರಂತ ಸಾವಿಗೀಡಾದರು. ಭಾರತೀಯ ಚಿತ್ರೋದ್ಯಮವೇ ಅವರ ಸಾವಿಗೆ ಕಂಬನಿ ಮಿಡಿಯಿತು. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನಟಿಯ ಜೀವನ ಅಂತ್ಯವಾಗಿದ್ದು ಅವರ ಅಭಿಮಾನಿವಲಯದಲ್ಲೂ ಅರಗಿಸಿಕೊಳ್ಳಲಾಗಲಿಲ್ಲ. ಸಾವಿನ ನೋವಲ್ಲಿಯೂ ಬಗೆಬಗೆ ವದಂತಿಗಳೂ ಸದ್ದು ಮಾಡಿದವು. ನಟಿ ಸೌಂದರ್ಯ ಮೂರು ತಿಂಗಳ ಗರ್ಭಿಣಿಯಾಗಿದ್ದರು ಎಂಬ ಮಾತುಗಳೂ ಮುನ್ನೆಲೆಗೆ ಬಂದಿದ್ದವು. ಇದರ ಜತೆಗೆ ಆಪ್ತಮಿತ್ರ ಸಿನಿಮಾದ ನಾಗವಲ್ಲಿ ಎಫೆಕ್ಟ್ ಎಂದೂ ಕೆಲವರು ಆಡಿಕೊಂಡರು. ಆದರೆ, ಇದೀಗ ಈ ಘಟನೆ ಬಗ್ಗೆ ಸೌಂದರ್ಯ ಅವರ ಅಣ್ಣ ಅಮರನಾಥ್ ಪತ್ನಿ ನಿರ್ಮಲಾ ಅಮರನಾಥ್ ಆರ್ಜೆ ರಾಜೇಶ್ ಅವರ ಯೂಟ್ಯೂಬ್ಗೆ ನೀಡಿದ ಸಂದರ್ಶನದಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಸೌಂದರ್ಯ ಗರ್ಭಿಣಿ ಆಗಿರಲಿಲ್ಲ..
“ಸೌಂದರ್ಯ ನಿಧನಳಾದಾಗ ಆಕೆ ಗರ್ಭಿಣಿ ಎಂಬುದೆಲ್ಲ ಕಟ್ಟುಕಥೆ. ಅಂಥ ಧೈರ್ಯ ಅವಳಿಗೂ ಬಂದಿರಲಿಲ್ಲ. ಅಲ್ಲಿಯವರೆಗೂ ಅವಳು ಸಿನಿಮಾ ಶೂಟಿಂಗ್ನಲ್ಲಿಯೇ ಬಿಜಿಯಾಗಿದ್ದಳು. ಪತಿ ರಘು ಜತೆ ಸಮಯ ಕಳೆದಿದ್ದೇ ಕಡಿಮೆ. ಇಬ್ಬರೂ ಹೆಚ್ಚು ಸಮಯ ಒಂದಾಗಿರಲು ಆಗ್ತಿರಲಿಲ್ಲ. ಸಿನಿಮಾ ಅಂತಲೇ ಸೌಂದರ್ಯ ಬಿಜಿಯಾಗಿರುತ್ತಿದ್ದಳು. ವಿದೇಶದಲ್ಲಿ ಸಿನಿಮಾ ಶೂಟಿಂಗ್ ಇತ್ತು ಎಂಬ ಕಾರಣಕ್ಕೆ ಇಬ್ಬರೂ ಅಲ್ಲಿಗೆ ಹೋಗಿ ಬಂದರು ಅಷ್ಟೇ. ಅದನ್ನು ಬಿಟ್ಟರೆ ಇಬ್ಬರೂ ಒಟ್ಟಿಗೆ ಹೆಚ್ಚು ಸಮಯ ಕಳೆದಿಲ್ಲ”
"ಮಗು ಮಾಡಿಕೊಳ್ಳಬೇಕು ಅನ್ನೋ ವಿಚಾರ ರಘು ಮತ್ತು ಸೌಂದರ್ಯ ಇಬ್ಬರಿಗೂ ಬಂದಿರಲಿಲ್ಲ. ಅಷ್ಟಕ್ಕೂ ಇಬ್ಬರೂ ಸೆಟಲ್ ಆಗಿರಲಿಲ್ಲ. ಆವಾಗೆಲ್ಲ ಇದೀಗ ಮದುವೆ ಆಗಿದೆ ಅನ್ನೋ ಫೀಲ್ ಮಾಡಿಕೊಳ್ಳುತ್ತಿದ್ದರೇ ವಿನಃ ಮಕ್ಕಳ ಬಗ್ಗೆ ಯೋಚಿಸಿರಲಿಲ್ಲ. ಒಟ್ಟಿಗೆ ದೀಪಾವಳಿ ಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ್ವಿ. ಅದೇ ಆಕೆಯ ಕೊನೇ ಹಬ್ಬ. ನಾವ್ಯಾರೂ ಅಂದುಕೊಂಡಿರಲಿಲ್ಲ ಇದು ಅವಳ ಕೊನೆ ಹಬ್ಬ ಅಂತ"
ಸುಳ್ಳು ಸುದ್ದಿಗಳೇ ಹೆಚ್ಚು ನೋವು ಕೊಟ್ಟವು..
"ಆಕೆ ಹೆಲಿಕಾಪ್ಟರ್ ಕ್ರ್ಯಾಶ್ನಲ್ಲಿ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಸಾಕಷ್ಟು ಸುಳ್ಳು ಸುದ್ದಿಗಳು ನಮ್ಮ ಗಮನಕ್ಕೂ ಬಂದವು. ಬೇರೆ ಬೇರೆ ಭಾಷೆಯ ಸಿನಿಮಾ ಮಂದಿಯೂ ಬಗೆಬಗೆ ಮಾತುಗಳನ್ನಾಡಿದರು. ಇನ್ನು ಕೆಲವರು ಆಪ್ತಮಿತ್ರ ಸಿನಿಮಾದ ನಾಗವಲ್ಲಿಯ ಪಾತ್ರವೂ ಇದಕ್ಕೆ ಕಾರಣ ಎಂದರು. ಆದರೆ ಇದೆಲ್ಲ ಸುಳ್ಳು. ಕೆಲವು ಮಾಧ್ಯಮದವರು ಹೆಬ್ಬಾಳದ ಬಳಿ ಸೌಂದರ್ಯ ಆತ್ಮ ಇದೆ ಎಂದೆಲ್ಲ ಸುದ್ದಿ ಮಾಡಿದ್ರು. ನೇರವಾಗಿ ಸುದ್ದಿವಾಹಿನಿಗಳಿಗೆ ಫೋನ್ ಮಾಡಿ, ಸತ್ಯ ತಿಳಿದು ಹಾಕಿ ಎಂದೂ ಹೇಳಿದ್ದೆ. ನಾನ್ಸೆನ್ಸ್ ಮಾತುಗಳಿಂದ ಕುಟುಂಬಕ್ಕೆ ತುಂಬ ದುಃಖವಾಯ್ತು" ಎಂದು ಅಂದಿನ ನೋವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ ನಿರ್ಮಲಾ ಅಮರನಾಥ್.