ನಾನು ಮೌನಿ ನೀನು ಮೌನಿ ಹೃದಯದ ನಡುವೆ ಮಾತೋ ಮಾತು... ಕವಿರಾಜ್ ಬರೆದ ಈ ಹಾಡು ಯಾವ ಸಿನಿಮಾದ್ದು ಹೇಳಿನೋಡೋಣ
Jan 15, 2024 01:56 PM IST
ದಿ ಸಿನಿಮಾದ ಹಾಡಿನ ಲಿರಿಕ್ಸ್- ನಾನು ಮೌನಿ ನೀನು ಮೌನಿ ಹೃದಯದ ನಡುವೆ ಮಾತೋ ಮಾತು
- ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಿನಿಮಾವೊಂದರ ಹಾಡು ಬಿಡುಗಡೆಯಾಗಿದೆ. ಜನಪ್ರಿಯ ಚಿತ್ರಸಾಹಿತಿ ಕವಿರಾಜ್ ಬರೆದಿರುವ "ನಾನು ಮೌನಿ ನೀನು ಮೌನಿ ಹೃದಯದ ನಡುವೆ ಮಾತೋ ಮಾತು" ಎಂಬ ಹಾಡಿನ ಕನ್ನಡ ಲಿರಿಕ್ಸ್ ಇಲ್ಲಿದೆ.
ಕನ್ನಡದ ಜನಪ್ರಿಯ ಚಿತ್ರಸಾಹಿತಿ ಕವಿರಾಜ್ ಬರೆದ ಹೊಸ ಸಿನಿಮಾ ಹಾಡೊಂದು ಬಿಡುಗಡೆಯಾಗಿದೆ. ದಿ ಎಂಬ ಹೆಸರಿನ ಹೊಸಬರ ಸಿನಿಮಾಕ್ಕೆ ಕವಿರಾಜ್ ಹಾಡು ಬರೆದಿದ್ದಾರೆ. ನಾನು ಮೌನಿ ನೀನು ಮೌನಿ ಹೃದಯದ ನಡುವೆ ಮಾತೋ ಮಾತು ಎಂಬ ಹಾಡು ಪ್ರೇಮಿಗಳಿಗೆ ಮೋಡಿ ಮಾಡುವಂತೆ ಇದೆ. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಒಂದಷ್ಟು ವರ್ಷಗಳ ಅನುಭವವಿರುವ ವಿನಯ್ ದಿ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಹೀರೋ ಕೂಡ ಇವರೇ.
ಇದೀಗ ದಿ ಸಿನಿಮಾದ ನಾನು ಮೌನಿ ನೀನು ಮೌನಿ ಹೃದಯದ ನಡುವೆ ಮಾತೋ ಮಾತು ಎಂಬ ಹಾಡು ಬಿಡುಗಡೆಯಾಗಿದೆ. ಯೂಟ್ಯೂಬ್‌ನಲ್ಲಿ ಈ ಹಾಡಿನ ಲಿರಿಕಲ್ ವಿಡಿಯೋ ಹಲವು ಸಾವಿರ ವೀಕ್ಷಣೆ ಪಡೆದುಕೊಳ್ಳುತ್ತಿದೆ. ಈ ಹಾಡಿನ ಸಾಹಿತ್ಯವನ್ನು ಎಚ್‌ಟಿ ಕನ್ನಡದ ಓದುಗರಿಗಾಗಿ ಇಲ್ಲಿ ನೀಡಲಾಗಿದೆ. ಲಿರಿಕಲ್ ವಿಡಿಯೋ ನೋಡಿಕೊಂಡು ನೀವು ಕೂಡ ಈ ಹಾಡನ್ನು ಹಾಡಲು ಪ್ರಯತ್ನಿಸಬಹುದು.
ನಾನು ಮೌನಿ ಹಾಡಿನ ಲಿರಿಕ್ಸ್
ನಾನು ಮೌನಿ ನೀನು ಮೌನಿ
ಹೃದಯದ ನಡುವೆ ಮಾತೋ ಮಾತು
ನಾನು ಮೌನಿ ನೀನು ಮೌನಿ
ಹೃದಯದ ನಡುವೆ ಮಾತೋ ಮಾತು
ಕನಸು ಮಾರುವ ಸಂತೆ
ನಿನ್ನ ಕಣ್ಣಲ್ಲಿ ನಡೆದಂತೆ
ಏನೋ ನಡೆದಿದೆ ಒಳಗೆ..
ನಿನ್ನ ಸನಿಹಕೆ ಕಳೆದೋಗಿದೆ
ಭುಜಕ್ಕೆ ಭುಜ ತಾಗಿಸಿ ನಡೆಯುವ
ಸಮಯದಿ ದಾರಿ ಮುಗಿಯಲೆ ಬಾರದು... ಬಾರದು
ಉಸಿರ... ತುಸು ಸೋಕಿಸಿ
ಪಿಸುಪಿಸು ನುಡಿಯುವ ಗುಟ್ಟು ಮುಗಿಯಲೇ ಬಾರದು.. ಬಾರದು...
ಆಸೆಗಳ ಮೆರವಣಿಗೆ ಸಾಗುತ್ತಿದೆ ಎದೆಯೊಳಗೆ
ನನಗೂ ನಿನಗೂ ನಡುವೆ ಬೀಸೋಗಾಳಿಗೂ....
ಈಗ ಜಾಗವಿಲ್ಲವೇ....
ಆಸೆಗಳ ಮೆರವಣಿಗೆ ಸಾಗುತ್ತಿದೆ ಎದೆಯೊಳಗೆ
ನನಗೂ ನಿನಗೂ ನಡುವೆ ಬೀಸೋಗಾಳಿಗೂ....
ಈಗ ಜಾಗವಿಲ್ಲವೇ....
ಏನೋ ಆಗಿದೆ... ಒಳಗೆ, ನಿನ್ನ ಸನಿಹಕ್ಕೆ ಕಳೆದೋಗಿದೆ....
ಸನಿಹ ಇರೋ ವೇಳೆಯ...
ಮಧುರ ಸುಮಧುರ ಸಡಗರ
ಯಾವ ಕನಸಿಗೂ ನಿಲುಕದು...
ಎದೆಯ ಬಿಳಿ ಹಾಳೆಯ...
ನೀನೇ ಹಾಡುವ ಎಲ್ಲಾ ಪದಗಳು
ನಿನ್ನದು... ನಿನ್ನದು....
ಕೊನೆ ಉಸಿರು ಇರೋವವರೆಗೂ...
ಈ ಜಗದ ಕೊನೆವರೆಗೂ
ಜೊತೆಗೂ ಇರುವೆ ಹೀಗೆ...
ಏನೇ ಆದರೂ ದೂರ ಹೋಗದಂತೆಯೇ...
ಹುಣ್ಣಿಮೆಯ ಮೀರಿಸುವ... ಹೊಂಬೆಳಕು ನಿನ್ನಲಿದೆ
ಸರಿವ ಸಮಯ ನಿನ್ನಲ್ಲಿ ಇಲ್ಲೇ ಈಗಲೇ...
ಮುಂದೆ ಹೋಗದಂತೆ...
ನಾನೂ ಮೌನಿ ನೀನು ಮೌನಿ...
ಹೃದಯದ ನಡುವೆ ಮಾತೂ ಮಾತು...
ನಾನೂ ಮೌನಿ ನೀನು ಮೌನಿ...
ಹೃದಯದ ನಡುವೆ ಮಾತೂ ಮಾತು…
ನಾನೂ ಮೌನಿ ನೀನು ಮೌನಿ... ಎಂಬ ಹಾಡನ್ನು ಸಾಯಿ ವಿಘ್ನೇಶ್ ಮಧುರ ಕಂಠದಲ್ಲಿ ಹಾಡಿದ್ದಾರೆ. ಈ ಹಾಡಿಗೆ ಸ್ಟೀವನ್ ಸತೀಶ್ ಸಂಗೀತ ನೀಡಿದ್ದಾರೆ. ಈ ಹಾಡಿನ ಲಿರಿಕ್ಸ್‌ನಲ್ಲಿ ನಾಯಕ ಮತ್ತು ನಾಯಕಿಯಾಗಿ ವಿನಯ್ ಹಾಗೂ ದಿಶಾ ಹೆಜ್ಜೆ ಹಾಕಿದ್ದಾರೆ. ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.