logo
ಕನ್ನಡ ಸುದ್ದಿ  /  ಮನರಂಜನೆ  /  ಕಾಟೇರ ಪೈರಸಿ ಸಿನಿಮಾ ನೋಡಿದ್ರೆ 3 ವರ್ಷ ಜೈಲು, 10 ಲಕ್ಷ ದಂಡ; ದಯವಿಟ್ಟು ಆ ಒಂದು ತಪ್ಪು ಮಾಡಬೇಡಿ ಎಂದ ದರ್ಶನ್‌

ಕಾಟೇರ ಪೈರಸಿ ಸಿನಿಮಾ ನೋಡಿದ್ರೆ 3 ವರ್ಷ ಜೈಲು, 10 ಲಕ್ಷ ದಂಡ; ದಯವಿಟ್ಟು ಆ ಒಂದು ತಪ್ಪು ಮಾಡಬೇಡಿ ಎಂದ ದರ್ಶನ್‌

Praveen Chandra B HT Kannada

Jan 04, 2024 04:57 PM IST

google News

ಕಾಟೇರ ಪೈರಸಿ ಸಿನಿಮಾ ನೋಡಿದ್ರೆ 3 ವರ್ಷ ಜೈಲು, 10 ಲಕ್ಷ ದಂಡ

    • ಕಾಟೇರ ಸಿನಿಮಾ ಪೈರಸಿ ಮಾಡಬೇಡಿ, ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ ರೀಲ್ಸ್‌ ಮಾಡಿ ಆನ್‌ಲೈನ್‌ನಲ್ಲಿ ಹಂಚಬೇಡಿ ಎಂದು ನಟ ದರ್ಶನ್‌ ಮನವಿ ಮಾಡಿದ್ದಾರೆ. ಕಾಟೇರ ಸಿನಿಮಾ ಪೈರಸಿ ಮಾಡಿ ಸಿಕ್ಕಿ ಬಿದ್ದರೆ ಎಲ್ಲಾದರೂ ನಿಮ್ಮ ಅಪರಾಧ ಸಾಬೀತಾದರೆ ಭಾರತದ ಕಾಪಿರೈಟ್‌ ಮತ್ತು ಪೈರಸಿಗೆ ಸಂಬಂಧಪಟ್ಟ ಕಾನೂನಿನಡಿ 3 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಕಾಟೇರ ಪೈರಸಿ ಸಿನಿಮಾ ನೋಡಿದ್ರೆ 3 ವರ್ಷ ಜೈಲು, 10 ಲಕ್ಷ ದಂಡ
ಕಾಟೇರ ಪೈರಸಿ ಸಿನಿಮಾ ನೋಡಿದ್ರೆ 3 ವರ್ಷ ಜೈಲು, 10 ಲಕ್ಷ ದಂಡ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಕಾಟೇರ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ದರ್ಶನ್‌-ಆರಾಧನಾ ರಾಮ್‌ ನಟನೆಯ ತರುಣ್‌ ಸುಧೀರ್‌ ನಿರ್ದೇಶನದ ಈ ಚಿತ್ರ ಈಗಾಗಲೇ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಚಿತ್ರತಂಡಕ್ಕೆ ಪೈರಸಿ ಭಯವೂ ಕಾಡುತ್ತಿದೆ. ಈಗಿನ ಮೊಬೈಲ್‌ ಮತ್ತು ಹೈ ಸ್ಪೀಡ್‌ ಇಂಟರ್‌ನೆಟ್‌ ಕಾಲದಲ್ಲಿ ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ಪ್ರೇಕ್ಷಕರು ರೆಕಾರ್ಡ್‌ ಮಾಡುವ ಅಪಾಯವಿದೆ. ಈ ರೀತಿ ಪೈರಸಿ ಮಾಡಬೇಡಿ ಎಂದು ದಚ್ಚು ಮನವಿ ಮಾಡಿದ್ದಾರೆ.

ಪೈರಸಿ ಕುರಿತು ದರ್ಶನ್‌ ಮಾತು

ನಿನ್ನೆ ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿ ನಡೆದ ಸಕ್ಸಸ್‌ ಮೀಟ್‌ನಲ್ಲಿ ದರ್ಶನ್‌ ಅವರು ಕನ್ನಡ ಸಿನಿಮಾ ಪೈರಸಿ ಅಪಾಯದ ಕುರಿತೂ ಮಾತನಾಡಿದ್ದಾರೆ. "ಕಾಟೇರ ಸಿನಿಮಾ ಪೈರಸಿ ಮಾಡ್ತಾ ಇದ್ದಾರೆ. ಕೆಲವರು ಹೆಸರು ಹಾಕಿಕೊಂಡು ಪೈರಸಿ ಮಾಡ್ತಾ ಇದ್ದಾರೆ. ಮೊಬೈಲ್‌ನಲ್ಲಿ ಸಿನಿಮಾದ ತುಣುಕುಗಳನ್ನು ರೀಲ್ಸ್‌ ಮುಖಾಂತರ ಹಂಚುತ್ತಿದ್ದಾರೆ. ಮಾಡಿ, ಒಳ್ಳೆಯದು, ಎಲ್ಲಾದರೂ ಈ ರೀತಿ ಪೈರಸಿ ಮಾಡಿ, ಅಪ್ಪಿತಪ್ಪಿ ಸಿಕ್ಕಾಕ್ಕಿಕೊಂಡರೆ.... ಯಾರಿಗಾದರೂ ಗೊತ್ತಾದರೆ, ನಾನೇನೂ ಹೇಳೋದಿಲ್ಲ... ನಿಮ್ಮ ಫೋಟೋದ ಜತೆ ಯಾರಾದರೂ ಕಾಟೇರ ಸಿನಿಮಾ ಅಪ್ಲೋಡ್‌ ಮಾಡಿದ್ದರೆ ಅದಕ್ಕೆ ನೀವೇ ಜವಾಬ್ದಾರಿ, ಸೋಷಿಯಲ್‌ ಮೀಡಿಯಾ, ಆನ್‌ಲೈನ್‌ನಲ್ಲಿ ದಯವಿಟ್ಟು ಕಾಟೇರ ಸಿನಿಮಾವನ್ನು ಪೈರಸಿ ಮಾಡಬೇಡಿ" ಎಂದು ದರ್ಶನ್‌ ಮನವಿ ಮಾಡಿದ್ದಾರೆ.

"ದಯವಿಟ್ಟು ಪೈರಸಿ ಮಾಡಿ ಸಿಕ್ಕಾಕ್ಕಿಕೊಂಡು ಕಷ್ಟಕ್ಕೆ ಸಿಲುಕಬೇಡಿ. ತುಂಬಾ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಇಲ್ಲಿನ ಪ್ರತಿಯೊಬ್ಬರ ಶ್ರಮವೂ ಇದೆ. ಥಿಯೇಟರ್‌ನಲ್ಲಿ ನೋಡಿದಾಗ ಎಷ್ಟು ಚೆನ್ನಾಗಿ ಸಿನಿಮಾ ಕಾಣಿಸುತ್ತದೆ. ಮೊಬೈಲ್‌ನಲ್ಲಿ ಏನು ನೋಡುವಿರಿ. ಇದು ಕನ್ನಡದ ಸಿನಿಮಾ, ಬೇರೆ ಭಾಷೆಯ ಸಿನಿಮಾ ಮಾಡಿಲ್ಲ ಸ್ವಾಮಿ, ನಮ್ಮ ಭಾಷೆಯ ನಮ್ಮ ನೆಲದ ಸಿನಿಮಾ, ಇದನ್ನು ಪೈರಸಿ ಮಾಡಬೇಡಿ, ನಮ್ಮ ನೆಲಕ್ಕೆ ಬೆಲೆ ಕೊಡದೆ ಇದ್ದರೆ ಹೇಗೆ, ದಯವಿಟ್ಟು ಪೈರಸಿ ಮಾಡೋರಿಗೆ, ರೀಲ್ಸ್‌ ಮಾಡೋರಿಗೆ ಕೇಳೋದಿಷ್ಟೇ. ದಯವಿಟ್ಟು ಪೈರಸಿ ಮಾಡಬೇಡಿ. ಪೈರಸಿ ಮಾಡಿ ಸಿಕ್ಕಾಕ್ಕಿಕೊಳ್ಳಿ ಮತ್ತೆ... ಟಾಟಾ ಬಾಯ್‌ ಬಾಯ್‌ ಸೀಯು" ಎಂದು ತಮ್ಮದೇ ಶೈಲಿಯಲ್ಲಿ ದರ್ಶನ್‌ ವಾರ್ನಿಂಗ್‌ ನೀಡಿದ್ದಾರೆ.

ಕಾಟೇರ ಸಿನಿಮಾ ಪೈರಸಿ ಮಾಡಿದ್ರೆ ಶಿಕ್ಷೆಯೇನು?

ಕಾಟೇರ ಮಾತ್ರವಲ್ಲದೆ ಕನ್ನಡದ ಹಲವು ಸಿನಿಮಾಗಳು ಪೈರಸಿ ಕಾಟದಿಂದ ತತ್ತರಿಸಿವೆ. ಈ ಹಿಂದೆ ಅನೇಕ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸಕ್ಸಸ್‌ ಪಡೆಯಲು ಪೈರಸಿ ತಡೆಯಾಗಿತ್ತು. ಸದ್ಯ ಭಾರತದಲ್ಲಿ ಪೈರಸಿ ಕುರಿತು ಬಿಗಿ ಕಾನೂನು ಇದೆ. ಸಿನಿಮಾವನ್ನು ಪೈರಸಿ ಮಾಡೋರಿಗೆ ಮಾತ್ರವಲ್ಲದೆ ಪೈರಸಿ ಸಿನಿಮಾ ನೋಡುವವರಿಗೂ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಈಗಾಗಲೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಕಾಟೇರ ಸಿನಿಮಾದ ಪೈರಸಿ ಮಾಡುವವರಿಗೆ ಮತ್ತು ಪೈರಸಿ ಸಿನಿಮಾ ನೋಡುವವರಿಗೆ ಎಚ್ಚರಿಕೆ ನೀಡಿದ್ದಾರೆ. ಎಲ್ಲಾದರೂ ಕಾಟೇರ ಸಿನಿಮಾ ಪೈರಸಿ ಮಾಡಿದ್ರೆ/ಪೈರಸಿ ಸಿನಿಮಾ ನೋಡಿದರೆ, ಚಿತ್ರತಂಡ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.

1957ರ ಕಾಪಿರೈಟ್‌ ಕಾಯಿದೆಯಲ್ಲಿ ಪ್ರೈವೆಸಿ ವಿರುದ್ಧ ಕಾನೂನು ಬಿಗಿಗೊಳಿಸಲಾಗಿತ್ತು. ಯಾವುದೇ ಚಿತ್ರಮಂದಿರಗಳಲ್ಲಿ ಅಧಿಕೃತ ಪರವಾನಿಗೆ ಇಲ್ಲದೆ ಸಿನಿಮಾವನ್ನು ರೆಕಾರ್ಡ್‌ ಮಾಡುವುದು ಶಿಕ್ಷಾರ್ಹ ಅಪರಾಧ. ಈ ರೀತಿ ಮಾಡಿದವರಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಮತ್ತು 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.

ಪೈರಸಿ ಸಿನಿಮಾವನ್ನು ಆನ್‌ಲೈನ್‌ನಲ್ಲಿ ಹಂಚುವುದು ಮತ್ತು ನೋಡುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದೆ. ಸೆಕ್ಷನ್‌ 66ರಡಿ ಈ ರೀತಿ ತಪ್ಪು ಮಾಡಿದವರಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ. Cinematograph (Amendment) Bill, 2023ನಡಿ ಸಿನಿಮಾ ಪೈರಸಿ ಮಾಡುವವರಿಗೆ, ಪೈರಸಿ ಸಿನಿಮಾ ನೋಡುವವರಿಗೆ ಕಠಿಣ ಕ್ರಮಗಳು, ಶಿಕ್ಷೆಗಳನ್ನು ನೀಡಲಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ