logo
ಕನ್ನಡ ಸುದ್ದಿ  /  ಮನರಂಜನೆ  /  ಅರ್ಜುನ ಆನೆಗೆ ಕಾಟೇರ ಅರ್ಪಣೆ; ದರ್ಶನ್‌ ಫಾರ್ಮ್‌ಹೌಸ್‌ನಲ್ಲಿವೆ ಹಲವು ಪ್ರಾಣಿಪಕ್ಷಿ, ವನ್ಯಜೀವಿ ಫೋಟೋಗ್ರಫಿ ದಚ್ಚುಗೆ ಅಚ್ಚುಮೆಚ್ಚು

ಅರ್ಜುನ ಆನೆಗೆ ಕಾಟೇರ ಅರ್ಪಣೆ; ದರ್ಶನ್‌ ಫಾರ್ಮ್‌ಹೌಸ್‌ನಲ್ಲಿವೆ ಹಲವು ಪ್ರಾಣಿಪಕ್ಷಿ, ವನ್ಯಜೀವಿ ಫೋಟೋಗ್ರಫಿ ದಚ್ಚುಗೆ ಅಚ್ಚುಮೆಚ್ಚು

Praveen Chandra B HT Kannada

Dec 30, 2023 10:55 AM IST

google News

ಅರ್ಜುನ ಆನೆಗೆ ಕಾಟೇರ ಅರ್ಪಣೆ; ದರ್ಶನ್‌ ಫಾರ್ಮ್‌ಹೌಸ್‌ನಲ್ಲಿವೆ ಹಲವು ಪ್ರಾಣಿಗಳು

  • ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌- ಆರಾಧನಾ ರಾಮ್‌ ನಟಿಸಿರುವ ಕಾಟೇರ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ. ಕಾಟೇರ ಸಿನಿಮಾ ಆರಂಭದಲ್ಲಿ ಚಿತ್ರವನ್ನು ಇತ್ತೀಚಿಗೆ ಮೃತಪಟ್ಟ ಅರ್ಜುನಾ ಆನೆಗೆ ಅರ್ಪಿಸಿದ್ದು ಎಲ್ಲರ ಗಮನ ಸೆಳೆದಿದೆ. ದರ್ಶನ್‌ ಅವರ ಪ್ರಾಣಿ ಪ್ರೇಮ, ವನ್ಯಜೀವಿಗಳ ಆಸಕ್ತಿ ಕುರಿತು ಒಂದಿಷ್ಟು ವಿವರ ಇಲ್ಲಿದೆ.

ಅರ್ಜುನ ಆನೆಗೆ ಕಾಟೇರ ಅರ್ಪಣೆ; ದರ್ಶನ್‌ ಫಾರ್ಮ್‌ಹೌಸ್‌ನಲ್ಲಿವೆ ಹಲವು ಪ್ರಾಣಿಗಳು
ಅರ್ಜುನ ಆನೆಗೆ ಕಾಟೇರ ಅರ್ಪಣೆ; ದರ್ಶನ್‌ ಫಾರ್ಮ್‌ಹೌಸ್‌ನಲ್ಲಿವೆ ಹಲವು ಪ್ರಾಣಿಗಳು

ಚಾಲೆಂಜಿಂಗ್‌ ಸ್ಟಾರ್‌ ಅಭಿನಯದ ಕಾಟೇರ ಸಿನಿಮಾ 2023ರ ಅಂತ್ಯದಲ್ಲಿ ಆಗಮಿಸಿ ಚಿತ್ರಮಂದಿರಗಳಲ್ಲು ಧೂಳೆಬ್ಬಿಸುತ್ತಿದೆ. ಸಮಗ್ರ ಕಥೆಯಿರುವ ರೈತರ ಬಗ್ಗೆ ಕಾಳಜಿ ಇರುವ ಈ ಚಿತ್ರದ ಆರಂಭದಲ್ಲಿಯೇ ಇತ್ತೀಚೆಗೆ ಮೃತಪಟ್ಟ ಅರ್ಜುನಾ ಆನೆಯನ್ನು ನೆನಪಿಸಿಕೊಂಡಿರುವುದು ಪ್ರಾಣಿಪ್ರಿಯರನ್ನು ಆಕರ್ಷಿಸಿದೆ. ದರ್ಶನ್‌ಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಅವರ ಫಾರ್ಮ್‌ಹೌಸ್‌ನಲ್ಲಿ ಕುದುರೆಗಳು, ವಿಶೇಷ ತಳಿಯ ಹಸುಗಳು ಸೇರಿದಂತೆ ಹಲವು ಪ್ರಾಣಿಗಳು ಇವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಗೆ ವನ್ಯಜೀವಿ ಫೋಟೋಗ್ರಫಿ ಕುರಿತೂ ಅಪರಿಮಿತ ಆಸಕ್ತಿ.

ಮೈಸೂರಿನ ಅರ್ಜುನ ಆನೆಗೆ ಕಾಟೇರ ಸಿನಿಮಾ ಅರ್ಪಣೆ

ಇತ್ತೀಚೆಗೆ ಹಾಸನ ಅರಣ್ಯದಲ್ಲಿ ಕಾಡಾನೆ ಸರೆ ಸಂದರ್ಭ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಅರ್ಜುನ ಆನೆ ಮೃತಪಟ್ಟಾಗ ಕನ್ನಡಿಗರು ಕಣ್ಣೀರಿಟ್ಟಿದ್ದರು. ಎಂಟು ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತು ನಡೆದಿದ್ದ ಅರ್ಜುನನ ಸಾವು ಎಲ್ಲರಿಗೂ ಆಘಾತ ತಂದಿತ್ತು. ನಿನ್ನೆ ಬಿಡುಗಡೆಯಾದ ಕಾಟೇರ ಸಿನಿಮಾದಲ್ಲಿ ಅರ್ಜುನಾ ಆನೆಯನ್ನು ನೆನಪಿಸಿಕೊಳ್ಳಲಾಗಿತ್ತು. ಕಾಟೇರ ಸಿನಿಮಾವನ್ನು ಅರ್ಜುನಾ ಆನೆಗೆ ಅರ್ಪಣೆ ಮಾಡಿರುವುದು ವಿಶೇಷವಾಗಿತ್ತು. ಚಿತ್ರದ ಆರಂಭದಲ್ಲಿಯೇ ಸಿನಿಪ್ರೇಕ್ಷಕರಿಗೆ ಈ ವಿಷಯ ಇಷ್ಟವಾಗಿತ್ತು. ನಾಡ ದೇವಿ ಚಾಮುಂಡಿಯ ಅಂಬಾರಿಯನ್ನು ಹೊತ್ತು ದಸರೆಯ ವೈಭವವನ್ನು ಜಗತ್ತಿನಾದ್ಯಂತ ಕಣ್ತುಂಬಿಸಿ ಕಣ್ಮರೆಯಾದ ದೈತ್ಯ ಮತ್ತು ದೈವ ಜೀವ ಅರ್ಜುನ- ಇದಕ್ಕೆ ನಮ್ಮ ಕಾಟೇರ ಚಿತ್ರ ಅರ್ಪಣೆ" ಎಂದು ಚಿತ್ರದ ಆರಂಭದಲ್ಲಿ ತೋರಿಸಲಾಯಿತು.

ದರ್ಶನ್‌ ಬಳಿ ಇವೆ ಹಲವು ಪ್ರಾಣಿಗಳು

ಕನ್ನಡ ನಟ ದರ್ಶನ್‌ ಅವರ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ವಿವಿಧ ತಳಿಯ ದನಗಳು, ಆಡುಗಳು, ಕುದುರೆಗಳು ಸೇರಿದಂತೆ ಹಲವು ಬಗೆಯ ಪ್ರಾಣಿಗಳು ಇವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕುದುರೆ ರೈಡ್‌ ಸ್ಕೂಲ್‌ ಉದ್ಘಾಟನೆಯ ಸಂದರ್ಭದಲ್ಲಿ ನನ್ನ ಬಳಿ ಹದಿನೈದು ಕುದುರೆಗಳು ಇವೆ ಎಂದಿದ್ದರು. ಪ್ರಿನ್ಸ್‌ ದರ್ಶನ್‌ರ ಅಚ್ಚುಮೆಚ್ಚಿನ ಕುದುರೆ. ತನ್ನ ಫಾರ್ಮ್‌ಹೌಸ್‌ನಲ್ಲಿರುವ ಪ್ರಾಣಿಗಳನ್ನು ಅತೀವವಾಗಿ ಪ್ರೀತಿಸುವ ದರ್ಶನ್‌ ಅವರು ಹಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಮೈಸೂರು ಮೃಗಾಲಯದಲ್ಲಿ ಸುತ್ತಾಡುವಾಗ ಹಲವು ಪ್ರಾಣಿಗಳನ್ನು ದರ್ಶನ್‌ ದತ್ತು ತೆಗೆದುಕೊಂಡಿರುವುದು ನಿಮ್ಮ ಅರಿವಿಗೆ ಬರಬಹುದು. ಜನರಿಗೂ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡುತ್ತ ಇರುತ್ತಾರೆ. ಕೆಲವು ವರ್ಷಗಳ ಹಿಂದೆ ಝೂಸ್‌ ಫಾರ್‌ ಕರ್ನಾಟಕ ಅಭಿಯಾನದಡಿ ಇವರು ಮಾಡಿದ ಮನವಿಗೆ ಸ್ಪಂದಿಸಿ ಕರ್ನಾಟಕದ ಆರು ಮೃಗಾಲಯಗಳಿಂದ ಆರು ಸಾವಿರ ಜನರು ಪ್ರಾಣಿ ಪಕ್ಷಿಗಳನ್ನು ದತ್ತು ತೆಗೆದುಕೊಂಡಿದ್ದರು.

ವನ್ಯಜೀವಿ ಫೋಟೋಗ್ರಫಿ ಕುರಿತು ಆಸಕ್ತಿ

ದರ್ಶನ್‌ಗೆ ವನ್ಯಜೀವಿ ಫೋಟೋಗ್ರಫಿ ಕುರಿತು ಅತೀವ ಆಸಕ್ತಿ ಇದೆ. ವನ್ಯಜೀವಿ ಛಾಯಾಗ್ರಹಣಕ್ಕೆ ಪೂರಕವಾಗಿ ಅವರಲ್ಲಿ ವಿಶೇಷ ಕ್ಯಾಮೆರಾ, ಲೆನ್ಸ್‌ಗಳೂ ಇವೆ. ಸಮಯ ಸಿಕ್ಕಾಗ ವನ್ಯಜೀವಿ ಫೋಟೋಗ್ರಫಿಗೆ ತೆರಳುತ್ತಾರೆ.

ವನ್ಯಜೀವಿ ಪ್ರೀತಿ ಮತ್ತು ವಿವಾದಗಳು

ನಟ ದರ್ಶನ್‌ ಸುತ್ತ ಸದಾ ವಿವಾದ ಇದ್ದೇ ಇರುತ್ತದೆ. ಕರ್ನಾಟಕದಲ್ಲಿ ಎಲ್ಲಿ ವಿವಾದ ನಡೆಯಲಿ ಅದು ಕೊನೆಗೆ ದರ್ಶನ್‌ ಬಳಿ ಬರುತ್ತದೆ ಎನ್ನುವಂತಾಗಿದೆ. ಇತ್ತೀಚೆಗೆ ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ ಅವರು ಹುಲಿ ಉಗುರು ಪ್ರಕರಣದಲ್ಲಿ ಪೊಲೀಸ್‌ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ದರ್ಶನ್‌ ಬಳಿಯೂ ಹುಲಿ ಉಗುರು ಇದೆಯೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ದರ್ಶನ್‌ ಮನೆಗೆ ಆಗಮಿಸಿದ್ದರು. ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ದರ್ಶನ್‌ ತಮ್ಮ ಬಳಿ ಇರುವ ವಿಶೇಷ ಪ್ರಭೇದ ಪಕ್ಷಿಗಳ ಪರಿಚಯ ಮಾಡಿಕೊಟ್ಟಿದ್ದರು. ಇದಾದ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ದರ್ಶನ್‌ ಫಾರ್ಮ್‌ಹೌಸ್‌ಗೆ ದಾಳಿ ನಡೆಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ