logo
ಕನ್ನಡ ಸುದ್ದಿ  /  ಮನರಂಜನೆ  /  ಬ್ಯಾಚುಲರ್‌ ಪಾರ್ಟಿ, ಉಪಾಧ್ಯಕ್ಷ, ಕೇಸ್‌ ಆಫ್‌ ಕೊಂಡಾಣ; ಈ ವಾರ ಚಿತ್ರಮಂದಿರದಲ್ಲಿ 6 ಕನ್ನಡ ಸಿನೆಮಾ ನೋಡೋಣ

ಬ್ಯಾಚುಲರ್‌ ಪಾರ್ಟಿ, ಉಪಾಧ್ಯಕ್ಷ, ಕೇಸ್‌ ಆಫ್‌ ಕೊಂಡಾಣ; ಈ ವಾರ ಚಿತ್ರಮಂದಿರದಲ್ಲಿ 6 ಕನ್ನಡ ಸಿನೆಮಾ ನೋಡೋಣ

Praveen Chandra B HT Kannada

Jan 24, 2024 05:28 PM IST

google News

ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಕನ್ನಡ ಸಿನೆಮಾಗಳು

    • Kannada movies released this week: ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಹಲವು ಸಿನೆಮಾಗಳು ಬಿಡುಗಡೆಯಾಗುತ್ತಿವೆ. ಬಹುನಿರೀಕ್ಷಿತ ಬ್ಯಾಚುಲರ್‌ ಪಾರ್ಟಿ ನಾಳೆ ಬಿಡುಗಡೆಯಾದರೆ, ಕೇಸ್‌ ಆಫ್‌ ಕೊಂಡಾಣ, ಮೂರನೇ ಕೃಷ್ಣಪ್ಪ ಸೇರಿದಂತೆ ಹಲವು ಕನ್ನಡ ಸಿನೆಮಾಗಳು ಬಿಡುಗಡೆಯಾಗುತ್ತಿವೆ.
 ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಕನ್ನಡ ಸಿನೆಮಾಗಳು
ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಕನ್ನಡ ಸಿನೆಮಾಗಳು

ಬೆಂಗಳೂರು: ಗಣರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಈ ಬಾರಿ ಸ್ಯಾಂಡಲ್‌ವುಡ್‌ನಲ್ಲಿ ಹಲವು ಕನ್ನಡ ಸಿನೆಮಾಗಳು ಬಿಡುಗಡೆಯಾಗುತ್ತಿವೆ. ರಕ್ಷಿತ್‌ ಶೆಟ್ಟಿ ಪರಂವಃ ಸ್ಟುಡಿಯೋದ ಬ್ಯಾಚುಲರ್‌ ಪಾರ್ಟಿ ಜನವರಿ 26ರಂದು ಬಿಡುಗಡೆಯಾಗುತ್ತಿದೆ. ಗುರುವಾರ ರಾತ್ರಿಯೇ ಕೆಲವು ಥಿಯೇಟರ್‌ಗಳಲ್ಲಿ ಪ್ರೀಮಿಯರ್‌ ಶೋ ಪ್ರದರ್ಶನಗೊಳ್ಳಲಿದೆ. ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಚಿಕ್ಕಣ್ಣ ಅವರು ನಾಯಕ ನಟನಾಗಿ ಬಡ್ತಿ ಪಡೆಯುತ್ತಿರುವ "ಉಪಾಧ್ಯಕ್ಷ" ಸಿನೆಮಾವು ತೆರೆ ಕಾಣಲಿದೆ. ಇದೇ ಸಮಯದಲ್ಲಿ ವಿಜಯ್‌ ರಾಘವೇಂದ್ರ ನಟನೆಯ ಕೇಸ್‌ ಆಫ್‌ ಕೊಂಡಾಣ ಬಿಡುಗಡೆಯಾಗಲಿದೆ.

ಈ ವಾರ ಬಿಡುಗಡೆಯಾಗುವ ಕನ್ನಡ ಸಿನೆಮಾಗಳು

ಬ್ಯಾಚುಲರ್‌ ಪಾರ್ಟಿ- ಜನವರಿ 26ರಂದು ಬಿಡುಗಡೆ

ಬಹುನಿರೀಕ್ಷಿತ ಬ್ಯಾಚುಲರ್‌ ಪಾರ್ಟಿ ಸಿನೆಮಾ ಜನವರಿ 26ರಂದು ಬಿಡುಗಡೆಯಾಗುತ್ತಿದೆ. ಅಭಿಜಿತ್‌ ಮಹೇಶ್‌ ನಿರ್ದೇಶನದ ಈ ಚಿತ್ರದಲ್ಲಿ ದಿಗಂತ್‌, ಯೋಗಿ ಹಾಗೂ ಅಚ್ಯುತ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಹಲವು ಹಾಸ್ಯ ನಟರು ಅತಿಥಿ ಪಾತ್ರದಲ್ಲೂ ನಟಿಸಿದ್ದಾರೆ. ಅಂದರೆ, ಲೂಸಿಯಾ ಪವನ್‌ ಕುಮಾರ್‌, ಮಠ ಗುರುಪ್ರಸಾದ್‌, ನಾ. ಸೋಮೇಶ್ವರ, ಶೈನ್‌ ಶೆಟ್ಟಿ ಹಾಗೂ ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್‌ ಮುಂತಾದ ನಟರು ಇದ್ದಾರೆ. ಹೀಗಾಗಿ, ಪ್ರೇಕ್ಷಕರಿಗೆ ಹಾಸ್ಯದ ರಸದೌತಣವೇ ಇರುವ ನಿರೀಕ್ಷೆಯಿದೆ. ಬ್ಯಾಚುಲರ್‌ ಪಾರ್ಟಿ ಸಿನಿಮಾದಲ್ಲಿ ಕಿರಿಕ್‌ ಪಾರ್ಟಿಯಲ್ಲಿ ನಟಿಸಿದ ಹಲವು ಕಲಾವಿದರು, ತಂತ್ರಜ್ಞರು ಇದ್ದಾರೆ. ಕಿರಿಕ್‌ ಪಾರ್ಟಿ ಬಳಿಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಸಿನೆಮಾ ಇದಾಗಿದೆ.

ಕಿರಿಕ್‌ ಪಾರ್ಟಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಅಭಿಜಿತ್‌ ಮಹೇಶ್‌ ನಿರ್ದೇಶನದಲ್ಲಿ ಬ್ಯಾಚುಲರ್‌ ಪಾರ್ಟಿ ತಯಾರಾಗಿದೆ. ಹೀಗಾಗಿ, ಈ ಬಾರಿ ಪಾರ್ಟಿ ಜೋರಾಗಿಯೇ ಇರುವ ನಿರೀಕ್ಷೆ ಇದೆ ಎಂದು ಇತ್ತೀಚೆಗೆ ರಿಷಬ್‌ ಶೆಟ್ಟಿ ಊಹಿಸಿದ್ದರು.

ಉಪಾಧ್ಯಕ್ಷ ಸಿನೆಮಾ ಈ ಶುಕ್ರವಾರ ಬಿಡುಗಡೆ

ಕನ್ನಡ ಹಾಸ್ಯ ನಟ ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಸಿನೆಮಾ ಈ ವಾರ ಬಿಡುಗಡೆಯಾಗುತ್ತಿದೆ. ಕಾಮಿಡಿ ನಟನಾಗಿ ಗುರುತಿಸಿಕೊಂಡಿರುವ ಚಿಕ್ಕಣ್ಣ ಈ ಸಿನೆಮಾದ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿತ್ತು. ಉಪಾಧ್ಯಕ್ಷ ಸಿನೆಮಾ ಜನವರಿ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಈ ಸಿನೆಮಾ ನಿರ್ಮಿಸಿದ್ದಾರೆ. ಉಪಾಧ್ಯಕ್ಷ, ಅಧ್ಯಕ್ಷ ಚಿತ್ರದ ಮುಂದುವರೆದ ಭಾಗ ಎಂದು ಮಾತು ಆರಂಭಿಸಿದ ನಿರ್ದೇಶಕ ಅನಿಲ್ ಕುಮಾರ್, ಅಧ್ಯಕ್ಷ ಚಿತ್ರದ ಕಥೆ ಎಲ್ಲಿಗೆ ನಿಂತಿತ್ತೊ ಉಪಾಧ್ಯಕ್ಷ ಚಿತ್ರದ ಕಥೆ ಅಲ್ಲಿಂದ ಆರಂಭವಾಗುತ್ತದೆ ಎಂದು ಇತ್ತೀಚೆಗೆ ನಿರ್ಮಾಪಕ ಉಮಾಪತಿ ಮಾಹಿತಿ ನೀಡಿದ್ದಾರೆ.

ಕೇಸ್‌ ಆಫ್‌ ಕೊಂಡಾಣ

ಈ ವಾರ ಜನವರಿ 26ರಂದು ಕನ್ನಡ ನಟ ವಿಜಯ ರಾಘವೇಂದ್ರ ಮತ್ತು ಭಾವನಾ ಮೆನನ್‌ ನಟಿಸಿರುವ ಕೇಸ್‌ ಆಫ್‌ ಕೊಂಡಾಣ ಎಂಬ ಚಿತ್ರ ಬಿಡುಗಡೆಯಾಗುತ್ತಿದೆ. ಇದು ದೇವಿಪ್ರಸಾದ್‌ ಶೆಟ್ಟಿ ನಿರ್ದೇಶನದ ಸಿನೆಮಾ. ಇದು ತನಿಖಾ ಸಿನೆಮಾ. ಬೆಂಗಳೂರಿನ ಕೊಂಡಾಣ ಎಂಬ ಕಾಲ್ಪನಿಕ ಸ್ಥಳದಲ್ಲಿ ಈ ಸಿನೆಮಾ ಶೂಟಿಂಗ್‌ ಮಾಡಲಾಗಿದೆ. ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಕಥೆಯನ್ನು ಸಿನೆಮಾ ಹೊಂದಿದೆ. ಹೈಪರ್‌ಲಿಂಕ್ ನಿರೂಪಣೆಯನ್ನು ಕೇಸ್ ಆಫ್ ಕೊಂಡಾಣ ಸಿನೆಮಾ ಹೊಂದಿದೆ. ಖುಷಿ ರವಿ ಮತ್ತು ರಂಗಾಯಣ ರಘು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಕೋಳಿ ಎಸ್ರು ಮತ್ತು ಹದಿನೇಳೆಂಟು

'ಕೋಳಿ ಎಸ್ರು' ಮತ್ತು 'ಹದಿನೇಳೆಂಟು' ಚಲನಚಿತ್ರಗಳು ಸಿನಿಮಾಗಳೂ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿವೆ. ಈ ಸಿನೆಮಾಗಳು ಈ ವಾರ ಜನವರಿ 26ರಂದು ತೆರೆ ಕಾಣಲಿವೆ. ಚಂಪಾ.ಪಿ. ಶೆಟ್ಟಿ ನಿರ್ದೇಶನದ ಕೋಳಿ ಎಸ್ರು ಹಾಗೂ ಪೃಥ್ವಿ ಕೊಣನೂರು ನಿರ್ದೇಶಿಸಿರುವ ಹದಿನೇಳೆಂಟು ಚಿತ್ರಗಳನ್ನು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದು. ಕಾ.ತ. ಚಿಕ್ಕಣ್ಣನವರ ಕತೆಯಾಧಾರಿತ ಕೋಳಿ ಎಸ್ರು ಚಿತ್ರದ ಕತೆ ಮೈಸೂರಿನ ಗ್ರಾಮೀಣ ಭಾಗದಲ್ಲಿ ಶೂಟಿಂಗ್‌ ಆಗಿದೆ. ಮಂಡ್ಯದ ಗ್ರಾಮೀಣ ಭಾಗದ ಕಲಾವಿದರೇ ಸಿನಿಮಾದಲ್ಲಿ ನಟಿಸಿದ್ದಾರೆ.

ಮೂರನೇ ಕೃಷ್ಣಪ್ಪ

ತುಕಾಲಿ ಸಂತೋಷ್, ಉಗ್ರಂ ಮಂಜು ಮುಂತಾದ ಕಲಾವಿದರು ನಟಿಸಿರುವ ಮೂರನೇ ಕೃಷ್ಣಪ್ಪ ಸಿನೆಮಾ ಈ ವಾರ ತೆರೆ ಕಾಣುತ್ತಿದೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಹೊತ್ತು ಬಂದಿರುವ ಈ ಚಿತ್ರದಲ್ಲಿ ಸಂಪತ್ ಮೈತ್ರೀಯಾ, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಶ್ರೀಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ರೆಡ್ ಡ್ರಾಗ್ಯನ್ ಫಿಲಂಸ್‌ ಪ್ರೊಡಕ್ಷನ್ ಹೌಸ್ ಎರಡನೇ ಕೊಡುಗೆಯೇ ಈ ಮೂರನೇ ಕೃಷ್ಣಪ್ಪ. ಈ ಹಿಂದೆ ರಿಲ್ಯಾಕ್ಸ್ ಸತ್ಯ ಚಿತ್ರವನ್ನು ಇದೇ ಪ್ರೊಡಕ್ಷನ್ ನಡಿ ಮೋಹನ್ ರೆಡ್ಡಿ ಜಿ, ರವಿಶಂಕರ್ ನಿರ್ಮಿಸಿದ್ದರು.

(This copy first appeared in Hindustan Times Kannada website. To read more like this please logon to kannada.hindustantime.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ