logo
ಕನ್ನಡ ಸುದ್ದಿ  /  ಮನರಂಜನೆ  /  ನಾನು ಹಣ್ಣಣ್ಣು ಮುದುಕಿ ಅಲ್ಲ, ಈಗ 86 ಅಷ್ಟೇ; ಅಳಿಸೋಕೆ ಮಾತ್ರವಲ್ಲ, ನಗಿಸೋಕೂ ಸೈ ಲೀಲಾವತಿ ಅಮ್ಮ

ನಾನು ಹಣ್ಣಣ್ಣು ಮುದುಕಿ ಅಲ್ಲ, ಈಗ 86 ಅಷ್ಟೇ; ಅಳಿಸೋಕೆ ಮಾತ್ರವಲ್ಲ, ನಗಿಸೋಕೂ ಸೈ ಲೀಲಾವತಿ ಅಮ್ಮ

HT Kannada Desk HT Kannada

Dec 08, 2023 07:50 PM IST

google News

ಕಾಮಿಡಿ ಪಾತ್ರಗಳನ್ನು ಹೆಚ್ಚು ಇಷ್ಟಪಡುತ್ತಿದ್ದ ಹಿರಿಯ ನಟಿ ಲೀಲಾವತಿ

  • Leelavathi: ನೀವು ಮತ್ತೆ ಆಕ್ಟಿಂಗ್‌ ಮಾಡಲು ನಾವು ಕಾಯುತ್ತಿದ್ದೇವೆ. ನೀವು ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆ ಎಂಬ ಪತ್ರಕರ್ತರ ಮಾತಿಗೆ, "ಹಾಗಂತ ನಾನು ಎಮ್ಮೆ ಆಗುವವರೆಗೂ ಬಿಡಬೇಡಿ" ಎಂದು ಹೇಳುವ ಮೂಲಕ ಲೀಲಾವತಿ ನಗೆ ಚಟಾಕಿ ಹಾರಿಸಿದ್ದರು. ಲೀಲಾವತಿ ಅವರ ಈ ವಿಡಿಯೋ ಈಗ ವೈರಲ್‌ ಆಗುತ್ತಿದೆ.‌

ಕಾಮಿಡಿ ಪಾತ್ರಗಳನ್ನು ಹೆಚ್ಚು ಇಷ್ಟಪಡುತ್ತಿದ್ದ ಹಿರಿಯ ನಟಿ ಲೀಲಾವತಿ
ಕಾಮಿಡಿ ಪಾತ್ರಗಳನ್ನು ಹೆಚ್ಚು ಇಷ್ಟಪಡುತ್ತಿದ್ದ ಹಿರಿಯ ನಟಿ ಲೀಲಾವತಿ

Leelavathi: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇಂದು ನಮ್ಮನ್ನು ಅಗಲಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ ಶುಕ್ರವಾರ, ಬಾರದ ಲೋಕಕ್ಕೆ ಪ್ರಯಾಣ ಬೆಳೆದಿದ್ದಾರೆ. ಡಾ. ರಾಜ್‌ಕುಮಾರ್‌ ಕಾಲದ ಮತ್ತೊಂದು ಕೊಂಡಿ ಇಂದು ಕಳಚಿದ್ದು ಕನ್ನಡ ಚಿತ್ರರಂಗ ನಿಜಕ್ಕೂ ಅನಾಥವಾಗಿದೆ.

ನಾಯಕಿ ನಟಿ, ಪೋಷಕ ಪಾತ್ರಗಳಲ್ಲಿ ಮಿಂಚಿದ ಲೀಲಾವತಿ

ಲೀಲಾವತಿ ಚಿತ್ರರಂಗದ ಆರಂಭದ ದಿನಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದರು. ಆದರೆ ನಂತರ ಅವರು ಪೋಷಕ ಪಾತ್ರಗಳಲ್ಲಿ ಮಿಂಚಿದರು. ಅಮ್ಮನಾಗಿ, ಘಾಟಿ ಮಹಿಳೆ ಆಗಿ, ಅತ್ತಿಗೆ ಆಗಿ, ಅಜ್ಜಿಯಾಗಿ ಅನೇಕ ಪಾತ್ರಗಳಲ್ಲಿ ಮಿಂಚಿದರು. ಆ ಸಮಯದಲ್ಲಿ ಲೀಲಾವತಿ ಹಾಗೂ ಡಾ. ರಾಜ್‌ಕುಮಾರ್‌ ಅವರ ಜೋಡಿ ಸೂಪರ್‌ ಹಿಟ್‌ ಎನಿಸಿಕೊಂಡಿತ್ತು. ಈ ಜೋಡಿ ತೆರೆ ಮೇಲೆ ಬಂದರೆ ಸಾಕು, ಜನರು ಶಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಲೀಲಾವತಿ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಲೀಲಾವತಿ ಅವರು ಸಿನಿ ಕರಿಯರ್‌ನಲ್ಲಿ ಎಲ್ಲಾ ಪಾತ್ರಗಳನ್ನೂ ನಿಭಾಯಿಸಿದ್ದಾರೆ. ಅದರೆ ಅವರಿಗೆ ಕಾಮಿಡಿ ಪಾತ್ರಗಳಲ್ಲಿ ನಟಿಸಬೇಕು ಎಂದು ಬಹಳ ಆಸೆ ಇತ್ತಂತೆ. ಆದರೆ ಅವರಿಗೆ ದೊರೆತಿದ್ದು ಮಾತ್ರ ಹೆಚ್ಚಾಗಿ ಕಣ್ಣೀರಿನ ಪಾತ್ರಗಳೇ.

ಲೀಲಾವತಿ ಕಾಮಿಡಿ ಪಂಚ್

ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗಲೂ ತಮಾಷೆಯಾಗಿ ಮಾತನಾಡುತ್ತಿದ್ದರು. ವರ್ಷದ ಹಿಂದೆ ನ್ಯೂಸ್‌ ಫಸ್ಟ್‌ ಕನ್ನಡ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಲೀಲಾವತಿ ಅಮ್ಮ, ಪತ್ರಕರ್ತರ ಪ್ರಶ್ನೆಗೆ ಕಾಮಿಡಿಯಾಗಿ ಉತ್ತರಿಸಿದ್ದರು. ಈಗಲೂ ನಿಮಗೆ ಆಕ್ಟಿಂಗ್‌ ಮಾಡುವ ಆಸೆ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, "ಆಕ್ಟಿಂಗ್‌ ಮಾಡೋಕೆ ಆಗೊಲ್ಲ ಅನ್ನೋಕೆ ನಾನೇನು ಹಣ್ಣಣ್ಣು ಮುದುಕೀನಾ ಇನ್ನೂ 86 ವರ್ಷ ವಯಸ್ಸಷ್ಟೇ, ಈಗಲೂ ನಿಮಗೆ ಯಾವ ರೀತಿಯ ಪಾತ್ರ ಬೇಕು ಕೇಳಿ ಮಾಡ್ತೀನಿ" ಎಂದಿದ್ದರು. ಆಯ್ತು, ನೀವು ಮತ್ತೆ ಆಕ್ಟಿಂಗ್‌ ಮಾಡಲು ನಾವು ಕಾಯುತ್ತಿದ್ದೇವೆ. ನೀವು ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆ ಎಂಬ ಪತ್ರಕರ್ತರ ಮಾತಿಗೆ, "ಹಾಗಂತ ನಾನು ಎಮ್ಮೆ ಆಗುವವರೆಗೂ ಬಿಡಬೇಡಿ" ಎಂದು ಹೇಳುವ ಮೂಲಕ ಲೀಲಾವತಿ ನಗೆ ಚಟಾಕಿ ಹಾರಿಸಿದ್ದರು. ಲೀಲಾವತಿ ಅವರ ಈ ವಿಡಿಯೋ ಈಗ ವೈರಲ್‌ ಆಗುತ್ತಿದೆ.‌

ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸಿದ ಮಹಾನ್‌ ನಟಿ

ಕಾಮಿಡಿ ಇಷ್ಟವಿದ್ದರೂ ತಮಗೆ ದೊರೆತ ಎಲ್ಲಾ ಪಾತ್ರಗಳಿಗೂ ಲೀಲಾವತಿ ನ್ಯಾಯ ಸಲ್ಲಿಸಿದ್ದಾರೆ. ಒಮ್ಮೆ ಲೀಲಾವತಿ ಅಳಲು ಆರಂಭಿಸಿದರೆ ಎದುರಿಗಿದ್ದವರು ಕಣ್ಣಂಚು ಕೂಡಾ ಒದ್ದೆಯಾಗುತ್ತಿತ್ತು. ಅಷ್ಟರ ಮಟ್ಟಿಗೆ ಅವರು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ, ಚಿಕ್ಕ ವಯಸ್ಸಿನಲ್ಲೇ ಅಪ್ಪ ಅಮ್ಮನನ್ನು ಕಳೆದುಕೊಂಡರು. ಊಟಕ್ಕೂ ಇಲ್ಲದೆ ಅವರಿವರ ಮನೆಯಲ್ಲಿ ಪಾತ್ರೆ ತೊಳೆದು ಜೀವನ ಸಾಗಿಸಿದ್ದೇನೆ ಎಂದು ಲೀಲಾವತಿ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ನಾಗಕನ್ನಿಕಾ ಚಿತ್ರದ ಸಣ್ಣ ಪಾತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದ ಲೀಲಾವತಿ, ನಂತರ ನಾಯಕಿ ಪಾತ್ರಗಳಿಗೆ ಶಿಫ್ಟ್‌ ಆದರು. ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಲೀಲಾವತಿ ಅವರಿಗೆ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ದೊರೆತಿತ್ತು. ಸುಮಾರು 5 ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ ಲೀಲಾವತಿ ಇಂದು ನಮ್ಮನ್ನು ಅಗಲಿರುವುದು ನೋವಿನ ಸಂಗತಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ