logo
ಕನ್ನಡ ಸುದ್ದಿ  /  ಮನರಂಜನೆ  /  Vishnuvardhan: ವಿಷ್ಣುವರ್ಧನ್‌ ಪುಣ್ಯಭೂಮಿಗೆ ರಾಜಧಾನಿಯಲ್ಲಿಲ್ಲ ಅಂಗೈಯಗಲ ಜಾಗ! ಹೋರಾಟಕ್ಕೆ ಕಿಚ್ಚ, ಧನಂಜಯ್‌ ಬೆಂಬಲ

Vishnuvardhan: ವಿಷ್ಣುವರ್ಧನ್‌ ಪುಣ್ಯಭೂಮಿಗೆ ರಾಜಧಾನಿಯಲ್ಲಿಲ್ಲ ಅಂಗೈಯಗಲ ಜಾಗ! ಹೋರಾಟಕ್ಕೆ ಕಿಚ್ಚ, ಧನಂಜಯ್‌ ಬೆಂಬಲ

Dec 17, 2023 10:25 AM IST

google News

Vishnuvardhan: ವಿಷ್ಣುವರ್ಧನ್‌ ಪುಣ್ಯಭೂಮಿಗೆ ರಾಜಧಾನಿಯಲ್ಲಿಲ್ಲ ಅಂಗೈಯಗಲ ಜಾಗ! ಹೋರಾಟಕ್ಕೆ ಕಿಚ್ಚ, ಧನಂಜಯ್‌ ಬೆಂಬಲ

    • ಡಾ. ವಿಷ್ಣುವರ್ಧನ್‌ ಅಭಿಮಾನಿ ಸಂಘಗಳ ಒಕ್ಕೂಟದ ವತಿಯಿಂದ ಇಂದು (ಡಿ. 17) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸಾಹಸಸಿಂಹನ ಅಪಾರ ಅಭಿಮಾನಿಗಳು ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಇದೀಗ ಇದೇ ಹೋರಾಟಕ್ಕೆ ಕನ್ನಡ ಚಿತ್ರರಂಗದ ಹಲವು ಕಲಾವಿದರು ಕೈ ಜೋಡಿಸಿದ್ದಾರೆ.
Vishnuvardhan: ವಿಷ್ಣುವರ್ಧನ್‌ ಪುಣ್ಯಭೂಮಿಗೆ ರಾಜಧಾನಿಯಲ್ಲಿಲ್ಲ ಅಂಗೈಯಗಲ ಜಾಗ! ಹೋರಾಟಕ್ಕೆ ಕಿಚ್ಚ, ಧನಂಜಯ್‌ ಬೆಂಬಲ
Vishnuvardhan: ವಿಷ್ಣುವರ್ಧನ್‌ ಪುಣ್ಯಭೂಮಿಗೆ ರಾಜಧಾನಿಯಲ್ಲಿಲ್ಲ ಅಂಗೈಯಗಲ ಜಾಗ! ಹೋರಾಟಕ್ಕೆ ಕಿಚ್ಚ, ಧನಂಜಯ್‌ ಬೆಂಬಲ

Vishnuvardhan: ಕನ್ನಡ ಚಿತ್ರರಂಗ ಜನಪ್ರಿಯ ನಟ, ಸಾಹಸ ಸಿಂಹ ಡಾ. ವಿಷ್ಣುವರ್ಧನ್‌ ನಮ್ಮ ನಡುವೆ ಇಲ್ಲವಾಗಿ 14 ವರ್ಷಗಳೇ ಕಳೆದಿವೆ. ಆದರೆ, ಇಂದಿಗೂ ಅವರನ್ನು ಸ್ಮರಿಸುವ, ಅವರನ್ನು ಕಾಣುವ ಒಂದೇ ಒಂದು ತುಂಡು ಜಾಗ ರಾಜಧಾನಿಯಲ್ಲಿಲ್ಲ. ಅವರನ್ನು ಅಂತ್ಯಸಂಸ್ಕಾರ ಮಾಡಿದ ಜಾಗವನ್ನು ಅಭಿವೃದ್ದಿಪಡಿಸಲು ಸರ್ಕಾರಗಳು ಮುಂದಾಗಿಲ್ಲ. ಈ ಬಗ್ಗೆಯೇ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಮನವಿ ಮಾಡಿದರೂ, ಅಭಿಮಾನ್ ಸ್ಟುಡಿಯೋದಲ್ಲಿನ ಪುಣ್ಯಭೂಮಿ ಗೊಂದಲ ಮಾತ್ರ ಇನ್ನೂ ಬಗೆಹರಿದಿಲ್ಲ. ಇದೀಗ ಮತ್ತೊಂದು ಹೋರಾಟದ ಕಿಚ್ಚು ಭುಗಿಲೆದ್ದಿದೆ.

ಡಾ. ವಿಷ್ಣುವರ್ಧನ್‌ ಅಭಿಮಾನಿ ಸಂಘಗಳ ಒಕ್ಕೂಟದ ವತಿಯಿಂದ ಇಂದು (ಡಿ. 17) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸಾಹಸಸಿಂಹನ ಅಪಾರ ಅಭಿಮಾನಿಗಳು ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಇದೀಗ ಇದೇ ಹೋರಾಟಕ್ಕೆ ಕನ್ನಡ ಚಿತ್ರರಂಗದ ಹಲವು ಕಲಾವಿದರು ಕೈ ಜೋಡಿಸಿದ್ದಾರೆ. ಆ ಪೈಕಿ ಕಿಚ್ಚ ಸುದೀಪ್‍ ಮತ್ತು ಡಾಲಿ ಧನಂಜಯ್‌ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ವಿಷ್ಣುವರ್ಧನ್ ಅಂತ್ಯ ಸಂಸ್ಕಾರವಾದ ಜಾಗದಲ್ಲಿ ಪುಣ್ಯಭೂಮಿ ಆಗಬೇಕು ಎಂದು ವಿಷ್ಣು ಅಭಿಮಾನಿಗಳು ಈ ಹಿಂದಿನಿಂದಲೂ ಸರ್ಕಾರಗಳಿಗೆ ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ, ಅದಕ್ಕೆ ಈ ವರೆಗೂ ಉತ್ತರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವೀರಕಪುತ್ರ ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 6 ಗಂಟೆ ತನಕ ಪ್ರತಿಭಟನೆ ನಡೆಯಲಿದ್ದು, ಕನ್ನಡಪರ ಸಂಘಟನೆಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ಸೇರಿ ವಿಷ್ಣು ಆಪ್ತರು ಸೇರಿ ಹಲವರು ಭಾಗವಹಿಸುತ್ತಿದ್ದಾರೆ. ಒಂದು ವೇಳೆ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ, ದೆಹಲಿಯಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದಿದ್ದಾರೆ.

ಕಿಚ್ಚ ಸುದೀಪ್‌ ಮಾತು ಹೀಗಿದೆ

ವಿಷ್ಣು ಅಭಿಮಾನಿಗಳ ಹೋರಾಟಕ್ಕೆ ನಟ ಕಿಚ್ಚ ಸುದೀಪ್‌ ಬೆಂಬಲ ಸೂಚಿಸಿದ್ದಾರೆ. "ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ" ಎಂದಿದ್ದಾರೆ.

ಧನಂಜಯ್‌ ಹೇಳಿದ್ದೇನು?

ವಿಷ್ಣು ಅಭಿಮಾನಿಗಳ ಹೋರಾಟಕ್ಕೆ ನಟ ಡಾಲಿ ಧನಂಜಯ ಬೆಂಬಲ ಸೂಚಿಸಿದ್ದಾರೆ. "ಕನ್ನಡ ಚಿತ್ರರಂಗದ ಮೇರು ನಟರು, ಹಿರಿಯಣ್ಣರಲ್ಲಿ ಒಬ್ಬರಾದ ಡಾ.ವಿಷ್ಣು ಸರ್ ಪುಣ್ಯಭೂಮಿಗೆ ರಾಜಧಾನಿಯಲ್ಲಿ ಅಂಗೈಯಗಲ ಜಾಗವಿಲ್ಲವೆಂಬುದು ಯಾಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕೂಡಲೇ ಡಾ.ವಿಷ್ಣು ಸರ್ ಪುಣ್ಯಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುವೆ. ಅವರ ಅಭಿಮಾನಿಗಳ ಹೋರಾಟದಲ್ಲಿ ನಾನೂ ಇದ್ದೇನೆ. ಈ ವಿಷಯ ಬೇಗ ಸುಖಾಂತ್ಯ ಕಾಣಲಿ" ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ