Kichcha Sudeep Birthday: ಕತ್ತಲು ಆಗಸದಲ್ಲಿ ಡ್ರೋನ್ ಬೆಳಕಿನಾಟದಲ್ಲಿ ಮೂಡಿದ ಕಿಚ್ಚ; ಪತ್ನಿಯಿಂದ ಸುದೀಪ್‌ಗೆ ವಿಶೇಷ ಬರ್ತ್‌ಡೇ ಗಿಫ್ಟ್
Sep 02, 2023 10:56 AM IST
Kichcha Sudeep Birthday: ಕತ್ತಲು ಆಗಸದಲ್ಲಿ ಡ್ರೋನ್ ಬೆಳಕಿನಾಟದಲ್ಲಿ ಮೂಡಿದ ಕಿಚ್ಚ; ಪತ್ನಿಯಿಂದ ಸುದೀಪ್‌ಗೆ ವಿಶೇಷ ಬರ್ತ್‌ಡೇ ಶುಭಾಶಯ
- ನಟ ಸುದೀಪ್ ಅಭಿಮಾನಿಗಳೀಗ ಕಿಚ್ಚೋತ್ಸವದ ಗುಂಗಿನಲ್ಲಿದ್ದಾರೆ. ನೆಚ್ಚಿನ ನಟನ ಬರ್ತ್‌ಡೇಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಈ ನಡುವೆ ಪತಿಗೆ ವಿಶೇಷ ಉಡುಗೊರೆ ನೀಡಿದ್ದಾರೆ ಪ್ರಿಯಾ ಸುದೀಪ್.
Kichcha Sudeep Birthday: ಕರುನಾಡಲ್ಲಿ ಕಿಚ್ಚ ಸುದೀಪ್ ಅವರ 50ನೇ ವರ್ಷದ ಬರ್ತ್‌ಡೇ ಸಂಭ್ರಮ ಜೋರಾಗಿದೆ. ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಶುಕ್ರವಾರ ತಡರಾತ್ರಿ ಹಬ್ಬವನ್ನೇ ಆಚರಿಸಿದ್ದಾರೆ ಸುದೀಪ್ ಅಭಿಮಾನಿಗಳು. ಬೃಹತ್ ವೇದಿಕೆಯ ಮೇಲೆ ಸುದೀಪ್ ಆಗಮಿಸುತ್ತಿದ್ದಂತೆ, ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ ಫ್ಯಾನ್ಸ್. ಇದೇ ವೇಳೆ ಮ್ಯಾಕ್ಸ್ ಚಿತ್ರದ ಶೀರ್ಷಿಕೆ ಟೀಸರ್ ಸಹ ಎಲ್ಲರನ್ನು ರಂಜಿಸಿದೆ. ಇದೆಲ್ಲದಕ್ಕಿಂತ ಹೆಚ್ಚು ಗಮನ ಸೆಳೆದಿದ್ದು, ಪತ್ನಿ ಪ್ರಿಯಾ ಸುದೀಪ್ ನೀಡಿದ ವಿಶೇಷ ಉಡುಗೊರೆ.
ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರ ಬರ್ತ್‌ಡೇಗೆ ಚಂದನವನದ ಸಿನಿಮಾ ಮಂದಿಯಿಂದಲೂ ಶುಭಾಶಯ ಸಂದಾಯವಾಗಿತ್ತಿದೆ. ಇದರ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿ ವಲಯದಿಂದಲೂ ಶುಭಾಶಯಗಳ ಸುರಿಮಳೆಯೇ ಸುರಿದು ಬರುತ್ತಿದೆ. ನಂದಿ ಲಿಂಕ್ ಮೈದಾನದಲ್ಲಿ ನೆಚ್ಚಿನ ನಟನಿಗೆ ಬರ್ತ್‌ಡೇ ಶುಭಕೋರಲು ಅಭಿಮಾನಿಗಳ ದಂಡೇ ಆಗಮಿಸಿತ್ತು. ಈ ವೇಳೆ ಸುದೀಪ್ ಪತ್ನಿ ಪ್ರಿಯಾ ಡ್ರೋನ್ ಲೈಟ್ಸ್ ಬೆಳಕಿನಲ್ಲಿ ಪತಿಗೆ ಬರ್ತ್‌ಡೇ ವಿಶ್ ತಲುಪಿಸಿದ್ದಾರೆ.
ಆಕಾಶದಲ್ಲಿ ಮೂಡಿದ ಸುದೀಪ್
ಬರ್ತ್‌ಡೇಗೂ ಮುನ್ನ ಪತಿ ಸುದೀಪ್‌ಗೆ ವಿಶೇಷ ಉಡಗೊರೆ ನೀಡುವುದಾಗಿ ಪ್ರಿಯಾ ಹೇಳಿಕೊಂಡಿದ್ದರು. ಅದರಂತೆ, ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಎಲ್ಲರಿಗೂ ಅಚ್ಚರಿ ಕಾದಿತ್ತು. ಸ್ಪೇಷಲ್ ಡ್ರೋನ್ ಶೋ ಮೂಲಕ ಆಕಾಶದಲ್ಲಿ ಲೇಸರ್ ಬೆಳಕಿನಲ್ಲಿ ಕಿಚ್ಚನಿಗೆ ಶುಭಾಶಯ ಕೋರಿದರು. ಸುದೀಪ್ ಚಿತ್ರಗಳು ಆಕಾಶದಲ್ಲಿ ತೇಲಿದವು. ಡ್ರೋನ್ ಲೈಟ್ಸ್ ಕಿಚ್ಚನ ಚಿತ್ತಾರ ಬಿಡಿಸಿದವು. ಹ್ಯಾಪಿ ಬರ್ತ್‌ಡೇ ಕಿಚ್ಚ, ಕಿಚ್ಚ ಕಿಚ್ಚ ಕಿಚ್ಚ, ಕಿಚ್ಚ ಸುದೀಪ್ ಹೀಗೆ ಡ್ರೋನ್ ಲೈಟಿಂಗ್‌ನ ಅಕ್ಷರಗಳೂ ನೆರೆದ ಅಭಿಮಾನಿಗಳನ್ನು ಪುಳಕಗೊಳಿಸಿದವು.
ಮ್ಯಾಕ್ಸ್ ಶೀರ್ಷಿಕೆ ಲಾಂಚ್
ಸೆ. 2ರ ಬರ್ತ್‌ಡೇ ಪ್ರಯುಕ್ತ ಮಧ್ಯರಾತ್ರಿ 2 ಗಂಟೆಗೆ ಶೀರ್ಷಿಕೆ ರಿವೀಲ್ ಮಾಡಿದೆ ಚಿತ್ರತಂಡ. ಶೀರ್ಷಿಕೆ ಟೀಸರ್‌ನಲ್ಲಿ ನಾಯಕನನ್ನು ವರ್ಣನೆ ಮಾಡುವ, ಅವನೆಷ್ಟು ಡೇಂಜರಸ್ ಎಂಬುದನ್ನು ಪೊಲೀಸರ ಕಡೆಯಿಂದ ಡೈಲಾಗ್ ಹೇಳಿಸಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ. "ಬರೋರೆಲ್ಲ ಜ್ವಾಲಾಮುಖಿಯಿಂದ ತಪ್ಪಿಸಿಕೊಳ್ಳಬಹುದು, ಭೂಕಂಪದಿಂದ ತಪ್ಪಿಸಿಕೊಳ್ಳಬಹುದು, ಚಂಡಮಾರುತದಿಂದಲೂ ತಪ್ಪಿಸಿಕೊಳ್ಳಬಹುದು, ಸುನಾಮಿಯಿಂದ ಕೂಡ ತಪ್ಪಿಸಿಕೊಳ್ಳಬಹುದು. ಆದರೆ, ಇವನ ಹತ್ತಿರ ತಗ್ಲಾಕ್ಕೊಂಡರೆ, ಸಾವೇ ಇಲ್ಲ ಅಂತ ವರ ತಗೊಂಡು ಹುಟ್ಟಿದವನೂ ಕೂಡ ಸತ್ತ.." ಎಂಬ ಡೈಲಾಗ್ ಮ್ಯಾಕ್ಸ್ ಎಷ್ಟು ಅಪಾಯಕಾರಿ ಎಂದು ತಿಳಿಯುತ್ತದೆ.
ಮತ್ತೆ ನಿರ್ದೇಶನಕ್ಕೆ ಸುದೀಪ್
ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸುದೀರ್ಘ ಒಂಭತ್ತು ವರ್ಷಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ ಸುದೀಪ್. ಬರ್ತ್‌ಡೇಗೆ ಒಂದು ದಿನ ಮುಂಚಿತವಾಗಿಯೇ ಈ ವಿಚಾರ ಇದೀಗ ಹೊರಬಿದ್ದಿದ್ದು, ಫ್ಯಾನ್ಸ್ ವಲಯ ಪುಳಕಗೊಂಡಿದೆ. ಈ ಹಿಂದೆ ಅಂದರೆ, 2014ರಲ್ಲಿ ತೆರೆಗೆ ಬಂದಿದ್ದ ಮಾಣಿಕ್ಯ ಸಿನಿಮಾಕ್ಕೆ ಸುದೀಪ್ ಆಕ್ಷನ್ ಕಟ್ ಹೇಳಿದ್ದರು. ಅದಾದ ಬಳಿಕ ನಿರ್ದೇಶನದಿಂದ ದೂರವೇ ಉಳಿದಿದ್ದರು. ಇದೀಗ 50 ಬರ್ತ್‌ಡೇಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಈ ಚಿತ್ರದಲ್ಲಿ ಅವರೇ ನಾಯಕನಾಗಿಯೂ ನಟಿಸಲಿದ್ದಾರೆ.