Kichcha Sudeep: ಬಗೆಹರಿಯದ ಸುದೀಪ್ -ನಿರ್ಮಾಪಕ ಕುಮಾರ್ ಅಡ್ವಾನ್ಸ್ ವಿವಾದಕ್ಕೆ ಶಿವಣ್ಣ, ರವಿಚಂದ್ರನ್ ಮಧ್ಯಸ್ಥಿಕೆ
Jul 09, 2023 12:24 PM IST
ಬಗೆಹರಿಯದ ಸುದೀಪ್ -ನಿರ್ಮಾಪಕ ಕುಮಾರ್ ಅಡ್ವಾನ್ಸ್ ವಿವಾದಕ್ಕೆ ಶಿವಣ್ಣ, ರವಿಚಂದ್ರನ್ ಮಧ್ಯಸ್ಥಿಕೆ
- ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್ ಕುಮಾರ್ ನಡುವಿನ ಹಣಕಾಸಿನ ವ್ಯವಹಾರ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಇದೀಗ ನಟ ಶಿವಣ್ಣ ಮತ್ತು ರವಿಚಂದ್ರನ್ ಅವರನ್ನು ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿದ್ದಾರೆ.
Kichcha Sudeep: ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ. ಎನ್ ಕುಮಾರ್ ನಡುವಿನ ಹಣಕಾಸಿನ ವಿಚಾರ ಇನ್ನೂ ಮುಗಿಯುವ ಸೂಚನೆ ಸಿಕ್ಕಿಲ್ಲ. ಕಳೆದೊಂದು ವಾರದಿಂದ ಚರ್ಚೆಯಲ್ಲಿರುವ ಈ ವಿಚಾರ ಇದೀಗ ಕಾನೂನಾತ್ಮಕ ಹೋರಾಟಕ್ಕೂ ಮುಂದುವರಿದಿದೆ. ಹೀಗೆ ಮುಂದುವರಿದ ಈ ಹಗ್ಗ ಜಗ್ಗಾಟಕ್ಕೆ ಇತೀಶ್ರ ಹಾಡಲು ಹಿರಿಯ ನಟರಾದ ಶಿವರಾಜ್‌ಕುಮಾರ್ ಮತ್ತು ರವಿಚಂದ್ರನ್ ಅವರನ್ನೇ ಆಹ್ವಾನಿಸಲಾಗಿದೆ.
ಕಳೆದ ಏಳೆಂಟು ವರ್ಷಗಳ ಹಿಂದೆ ನಟ ಸುದೀಪ್, ಮುಂಗಡ ಹಣ ಪಡೆದು ಈವರೆಗೂ ಸಿನಿಮಾ ಕಾಲ್‌ಶೀಟ್ ನೀಡದೇ ಸತಾಯಿಸುತ್ತಿದ್ದಾರೆ ಎಂದು ಫಿಲಂ ಚೇಂಬರ್‌ನಲ್ಲಿ ನಿರ್ಮಾಪಕ ಕುಮಾರ್ ದೂರು ನೀಡಿದ್ದು. ಸಮಸ್ಯೆ ಬಗೆಹರಿಸಿಕೊಡುವಂತೆಯೂ ಪತ್ರಿಕಾಗೋಷ್ಠಿ ಮೂಲಕ ಮನವಿ ಮಾಡಿದ್ದರು. ಇದಾದ ಬಳಿಕ ಕಿಚ್ಚ ಸುದೀಪ್, ಕುಮಾರ್‌ಗೆ ತಮ್ಮ ವಕೀಲರಿಂದ ನೋಟೀಸ್ ರವಾನಿಸಿದ್ದರು.
ಇದನ್ನೂ ಓದಿ: ನಟನೆ ಜೊತೆಗೆ ಸೈಡ್ ಬ್ಯುಸಿನೆಸ್‌ನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ನಾಲ್ವರು ನಟಿಯರು
ನಾನೇನು ತಪ್ಪು ಮಾಡಿಲ್ಲ
ಇದೀಗ ನೋಟೀಸ್ ಕಳುಹಿಸಿದ ಬಗ್ಗೆ ಸೇರಿ ಹಲವು ವಿಚಾರಗಳನ್ನು ಮತ್ತೆ ಸುದ್ದಿಗೋಷ್ಠಿಯಲ್ಲಿ ಮುಂದಿಟ್ಟ ನಿರ್ಮಾಪಕ ಕುಮಾರ್, ಚಿತ್ರೋದ್ಯಮದಲ್ಲಿ ನಿರ್ಮಾಪಕ ತುಂಬ ಮುಖ್ಯ. ನಾನು ಸಿನಿಮಾ ಸಲುವಾಗಿ ಸುದೀಪ್ ಅವರಿಗೆ ಮುಂಗಡ ಹಣ ನೀಡಿದ್ದೇನೆ. ಸಿನಿಮಾ ಮಾಡಬೇಕು, ಸ್ಪಂದಿಸಿ ಎಂದಿದ್ದೆ. ಅಷ್ಟೇ. ಹಾಗಂತ ನಾನೇನು ತಪ್ಪು ಮಾತನಾಡಿಲ್ಲ. ಈ ನೋಟೀಸ್ ಸಹ ನನಗೆ ತಲುಪಿಲ್ಲ. ವಾಟ್ಸಾಪ್ ಮೂಲಕ ಬಂದಿದ್ದನ್ನು ಗಮನಿಸಿದ್ದೇನೆ" ಎಂದಿದ್ದಾರೆ.
ಮುಂದುವರಿದು ಮಾತನಾಡಿರುವ ಕುಮಾರ್, ನಟ ಸುದೀಪ್ ಅವರು ಈ ವರೆಗೂ 45 ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೆ ನಟಿಸಿದ ಎಲ್ಲ 45 ಸಿನಿಮಾಗಳ ಒಡಂಬಡಿಕೆ ಪತ್ರ ಅವರ ಬಳಿ ಇವೆಯೇ? ಕಾನೂನು ಎಲ್ಲರಿಗೂ ಒಂದೇ. ನಿರ್ಮಾಪಕರ ಸಂಘ ಮತ್ತು ವಾಣಿಜ್ಯ ಮಂಡಳಿ ಏನು ನಿರ್ಧಾರ ತೆಗೆದುಕೊಳ್ಳಲಿದೆಯೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ಮುತ್ತತ್ತಿ ಸತ್ಯರಾಜು ಸಿನಿಮಾದ ಶೀರ್ಷಿಕೆ ನೋಂದಾಯಿಸಲು ಹೇಳಿದ್ದೇ ಸುದೀಪ್. ಈ ಸಂಬಂಧ ಖುದ್ದು ಸುದೀಪ್ ಮನೆಗೂ ಹೋಗಿದ್ದೆ. ರವಿಚಂದ್ರನ್ ಅವರಿಂದಲೂ ಹೇಳಿಸಿದ್ದೆ" ಎಂದಿದ್ದಾರೆ.
ಇದನ್ನೂ ಓದಿ: ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಕೇಸ್, 10 ಕೋಟಿ ಪರಿಹಾರ ಕೇಳಿದ ಸುದೀಪ್; ಲೀಗಲ್ ನೋಟೀಸ್ ಕಾಪಿ ಇಲ್ಲಿದೆ
ರವಿಚಂದ್ರನ್- ಶಿವಣ್ಣ ಮಧ್ಯಸ್ಥಿಕೆ
ಇದು ಇಬ್ಬರೂ ಕುಳಿತು ಮಾತನಾಡಿಕೊಂಡು ಬಗೆಹರಿಸಿಕೊಳ್ಳಬೇಕಿರುವ ವಿಚಾರ. ಆದರೆ, ಇದು ನಿರ್ಮಾಪಕರ ಸಂಘದ ವರೆಗೂ ಬಂದಿದ್ದರಿಂದ ಸಭೆ ಮಾಡಬೇಕಾಯಿತು. ಕುಮಾರ್ ಅವರು ಅನ್ಯಾಯವಾಗಿದೆ ಎಂದಿದ್ದಾರೆ. ಏನೇ ಇರಲಿ, ಕಾನೂನಾತ್ಮಕ ಹೋರಾಟ ಬಿಟ್ಟು ಭಾವನಾತ್ಮಕವಾಗಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಈ ಬಿಕ್ಕಟ್ಟು ಬಗೆಹರಿಯಲು ನಾವೀಗ ಶಿವರಾಜ್‌ಕುಮಾರ್ ಮತ್ತು ರವಿಚಂದ್ರನ್ ಅವರನ್ನು ಆಹ್ವಾನಿಸುತ್ತೇವೆ. ಮುಂದೆ ನಿಂತು ಸಮಸ್ಯೆ ಇತ್ಯರ್ಥ ಮಾಡಿಕೊಡಿ ಎಂದು ಮನವಿ ಮಾಡಲಿದ್ದೇವೆ" ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿದ್ದಾರೆ.
10 ಕೋಟಿಯ ಮಾನನಷ್ಟ ಕೇಸ್
ಮುಂಗಡ ಹಣ ಪಡೆದು ಕಾಲ್ ಶೀಟ್ ನೀಡದೇ ನಟ ಸುದೀಪ್ ಸತಾಯಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಆರೋಪ ಮಾಡಿದ್ದ ನಿರ್ಮಾಪಕ ಎಂ.ಎನ್ ಕುಮಾರ್ ವಿರುದ್ಧ ಶನಿವಾರವಷ್ಟೇ ಕಿಚ್ಚ ಸುದೀಪ್, ಲೀಗಲ್ ನೋಟೀಸ್ ರವಾನಿಸಿ, ಮಾನ ಹಾನಿ ಮಾಡಿದ್ದಕ್ಕೆ ಪರಿಹಾರ ರೂಪದಲ್ಲಿ 10 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು.
ತಮ್ಮ ವ್ಯಕ್ತಿತ್ವ ಮೂಲಕವೇ ಇತರರಿಗೂ ಸ್ಫೂರ್ತಿಯಾಗಿರುವ ಸುದೀಪ್ ಅವರು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 2 ದಶಕ ಪೂರೈಸಿದ್ದಾರೆ. ತಮ್ಮ ಅತ್ಯುತ್ತಮ ಕೆಲಸಗಳಿಂದಲೇ ನಾಡಿನ ಪ್ರತಿ ಮನೆಮನಗಳಲ್ಲೂ ಜನಜನಿತರಾಗಿದ್ದಾರೆ. ಇವರ ಈ ವೃತ್ತಿ ಬದುಕಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಸಮ್ಮಾನಗಳೂ ಲಭಿಸಿವೆ. ಹೀಗಿರುವಾಗ ನೀವು ನಮ್ಮ ಕಕ್ಷಿದಾರರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಅವರ ಘನತೆಗೆ ಧಕ್ಕೆ ತಂದಿದ್ದೀರಿ. ಈ ಹಿನ್ನೆಲೆಯಲ್ಲಿ ನಮ್ಮ ಕಕ್ಷಿದಾರರ ಮಾನ ಹಾನಿ ಮಾಡಿದ್ದಕ್ಕೆ ಮತ್ತು ಸುಳ್ಳು ಆರೋಪಗಳನ್ನು ಹೊರಿಸಿದ್ದಕ್ಕೆ ಪರಿಹಾರದ ರೂಪದಲ್ಲಿ 10 ಕೋಟಿ ನೀಡಿ ಹಾನಿಯನ್ನು ತುಂಬಿಕೊಡಬೇಕು ಎಂದು ನೋಟಿಸ್‌ನಲ್ಲಿ ನಮೂದಿಸಲಾಗಿತ್ತು.