logo
ಕನ್ನಡ ಸುದ್ದಿ  /  ಮನರಂಜನೆ  /  Spb Death Anniversary: ಎಸ್‌.ಪಿ ಬಾಲಸುಬ್ರಮಣ್ಯಂ ಇಲ್ಲದ ಮೂರು ವರ್ಷ; ಕನ್ನಡದಲ್ಲಿ ಇವರ ಹೆಸರಿನಲ್ಲಿದೆ ವಿಶೇಷ ದಾಖಲೆ

SPB Death Anniversary: ಎಸ್‌.ಪಿ ಬಾಲಸುಬ್ರಮಣ್ಯಂ ಇಲ್ಲದ ಮೂರು ವರ್ಷ; ಕನ್ನಡದಲ್ಲಿ ಇವರ ಹೆಸರಿನಲ್ಲಿದೆ ವಿಶೇಷ ದಾಖಲೆ

Sep 25, 2023 06:54 PM IST

google News

SPB Death Anniversary: ಎಸ್‌.ಪಿ ಬಾಲಸುಬ್ರಮಣ್ಯಂ ಇಲ್ಲದ ಮೂರು ವರ್ಷ; ಕನ್ನಡದಲ್ಲಿ ಇವರ ಹೆಸರಿನಲ್ಲಿದೆ ವಿಶೇಷ ದಾಖಲೆ

    • ಗಾನ ಗಂಧರ್ವ ಎಸ್‌ಪಿ ಬಾಲಸುಬ್ರಮಣ್ಯಂ ಇಲ್ಲವಾಗಿ ಇಂದಿಗೆ ಮೂರು ವರ್ಷಗಳು ಕಳೆದವು. ಶರೀರ ಇಲ್ಲವಾದರೂ, ಅವರ ಗಾಯನದ ಶಾರೀರ ಮಾತ್ರ ನಮ್ಮೆಲ್ಲರ ನಡುವೆ ಇನ್ನೂ ಜೀವಂತವಾಗಿದೆ. 
SPB Death Anniversary: ಎಸ್‌.ಪಿ ಬಾಲಸುಬ್ರಮಣ್ಯಂ ಇಲ್ಲದ ಮೂರು ವರ್ಷ; ಕನ್ನಡದಲ್ಲಿ ಇವರ ಹೆಸರಿನಲ್ಲಿದೆ ವಿಶೇಷ ದಾಖಲೆ
SPB Death Anniversary: ಎಸ್‌.ಪಿ ಬಾಲಸುಬ್ರಮಣ್ಯಂ ಇಲ್ಲದ ಮೂರು ವರ್ಷ; ಕನ್ನಡದಲ್ಲಿ ಇವರ ಹೆಸರಿನಲ್ಲಿದೆ ವಿಶೇಷ ದಾಖಲೆ

SPB Death Anniversary: ದೇಶ ಕಂಡ ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಮಣ್ಯಂ ನಮ್ಮ‌ ನಡುವೆ ಇಲ್ಲದೆ ಮೂರು ವರ್ಷಗಳು ಕಳೆದವು. ಗಾಯನದ ಜತೆಗೆ ನಟರಾಗಿ, ಸಂಗೀತ ಸಂಯೋಜಕರಾಗಿ, ನಿರೂಪಕರಾಗಿ, ತೀರ್ಪುಗಾರರಾಗಿ, ಡಬ್ಬಿಂಗ್‌ ಕಲಾವಿದರಾಗಿ, ಸಿನಿಮಾ ನಿರ್ಮಾಪಕನಾಗಿ ಹೀಗೆ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದಾರೆ ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಮಣ್ಯಂ. ಗಾಯನದ ವಿಚಾರದಲ್ಲಿ ಭಾರತದ 16ಕ್ಕೂ ಅಧಿಕ ಭಾಷೆಗಳಲ್ಲಿ ಧ್ವನಿ ನೀಡಿದ್ದಾರೆ ಈ ಗಾಯಕ.

ಆ ಪೈಕಿ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೇ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 1966ರಲ್ಲಿ ಬಾಲಸುಬ್ರಮಣ್ಯಂ ಅವರು, ಘಂಟಸಾಲಾ ಮತ್ತು ಎಸ್.ಪಿ. ಕೋದಂಡಪಾಣಿ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದರು. ಇಬ್ಬರಿಂದಲೂ ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ಕೋದಂಡಪಾಣಿಯವರು ತಮ್ಮ ತೆಲುಗು ಚಿತ್ರ ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣದಲ್ಲಿ ಎಸ್‌ಪಿಬಿಗೆ ಹಾಡಲು ಅವಕಾಶ ನೀಡಿದರು. ಅಂದಿನಿಂದ ಸುದೀರ್ಘ 5 ದಶಕಗಳ ಕಾಲ ಗಾಯನ ಕ್ಷೇತ್ರಕ್ಕೆ ತಮ್ಮನ್ನು ತಾವು ಮುಡಿಪಾಗಿಟ್ಟರು.

ಕನ್ನಡದಲ್ಲಿ ಚಿತ್ರಗೀತೆಗಳ ದಾಖಲೆ

1967 ನಕ್ಕರೆ ಅದೇ ಸ್ವರ್ಗ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಎಸ್‌ಪಿಬಿ, ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಎಸ್‌ಪಿಬಿ ಭಾರತದ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆ ಪೈಕಿ 1981ರ ಫೆಬ್ರವರಿ 8ರಂದೇ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಬರೋಬ್ಬರು 27 ಕನ್ನಡ ಗೀತೆಗಳನ್ನು ಹಾಡಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನೂ ಈ ವರೆಗೂ ಯಾರೂ ಮುರಿದಿಲ್ಲ. ಅದೇ ರೀತಿ ಒಂದೇ ದಿನದಲ್ಲಿ ತಮಿಳಿನಲ್ಲಿ 19 ಹಾಗೂ ಹಿಂದಿಯಲ್ಲಿ 16 ಹಾಡುಗಳನ್ನು ಹಾಡಿ ದಾಖಲೆ ಬರೆದಿದ್ದಾರೆ.

ಸಾವಿರಾರು ಪ್ರಶಸ್ತಿಗಳು

ಸಾವಿರಾರು ಹಾಡುಗಳ ಜತೆಗೆ ಅಸಂಖ್ಯ ಪ್ರಶಸ್ತಿಗಳೂ ಇವರನ್ನು ಅರಸಿ ಬಂದಿವೆ. ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ, ಪದ್ಮ ವಿಭೂಷಣ, ಪದ್ಮ ಭೂಷಣ ಸೇರಿ ಫಿಲಂಫೇರ್‌, ನಂದಿ ಅವಾರ್ಡ್‌ ಸೇರಿ ಪ್ರತಿಷ್ಠಿತ ಪುರಸ್ಕಾರಗಳೂ ಇವರಿಗೆ ಒಲಿದಿವೆ.

ಆಂಧ್ರ ಮೂಲದ ಬ್ರಾಹ್ಮಣ ಕುಟುಂಬದ ಗಾಯಕ

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತೆಲುಗು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಸಾಂಬಮೂರ್ತಿ, ಓರ್ವ ಹರಿಕಥಾ ಕಲಾವಿದ. ನಾಟಕಗಳಲ್ಲಿಯೂ ನಟಿಸುತ್ತಿದ್ದರು. ಅವರ ತಾಯಿ ಶಕುಂತಲಮ್ಮ. ಅವರಿಗೆ ಎಸ್.ಪಿ.ಶೈಲಜಾ ಸೇರಿದಂತೆ ಇಬ್ಬರು ಸಹೋದರರು ಮತ್ತು ಐವರು ಸಹೋದರಿಯರು. ಎಸ್‌ಪಿಬಿ ಅವರ ಪುತ್ರ ಎಸ್‌ಪಿ ಚರಣ್ ಕೂಡ ಖ್ಯಾತ ಗಾಯಕ.

ಕರೊನಾ ಕಾಲದಲ್ಲಿ ಕೊನೆಯುಸಿರು

74ರ ಇಳಿವಯಸ್ಸಿನಲ್ಲಿದ್ದ ಎಸ್‌.ಪಿ ಬಾಲಸುಬ್ರಮಣ್ಯಂಗೆ ಕರೊನಾ ಕಾಲಘಟ್ಟದಲ್ಲಿ ಅನಾರೋಗ್ಯಕ್ಕೀಡಾದರು. ಕರೊನಾ ಸಹ ಅವರನ್ನು ಮತ್ತಷ್ಟು ನಿತ್ರಾಣರನ್ನಾಗಿ ಮಾಡಿತು. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಚೆನ್ನೈನ ಕಾಸಗಿ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಿದರೂ, ಗಾಯಕನನ್ನು ಮರಳಿ ಬದುಕಿಸಲಾಗಲಿಲ್ಲ. 2020ರ ಸೆಪ್ಟೆಂಬರ್‌ 25ರಂದು ಎಸ್‌ಪಿಬಿ ನಿಧನರಾದರು. ಅವರ ಸಾವಿಗೆ ಇಡೀ ದೇಶವೇ ಕಣ್ಣೀರು ಹಾಕಿತ್ತು.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ