Darshan: ‘ಆ ಯಮ ಕರೆದ್ರೂ, ಅಮ್ಮನ ಕೆಲಸ ಮುಗಿಸಿಯೇ ನಾನು ಬರೋದು ಅಂತ ಹೇಳ್ತಿನಿ’; ಸುಮಲತಾ ಬಗ್ಗೆ ದರ್ಶನ್ ಮಾತು
Apr 04, 2024 06:30 AM IST
Darshan: ‘ಆ ಯಮ ಕರೆದ್ರೂ, ಅಮ್ಮನ ಕೆಲಸ ಮುಗಿಸಿಯೇ ನಾನು ಬರೋದು ಅಂತ ಹೇಳ್ತಿನಿ’; ಸುಮಲತಾ ಬಗ್ಗೆ ದರ್ಶನ್ ಮಾತು
- ಮಂಡ್ಯದಲ್ಲಿ ಸುಮಲತಾ ಬೆಂಬಲಿಗರ ಬಹಿರಂಗ ಸಭೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ಈ ವೇಳೆ ಸುಮಲತಾ ಅಮ್ಮನ ಬಗ್ಗೆಯೂ ಅವರು ಮಾತನಾಡಿದ್ದಾರೆ. ಆ ಯಮನ ಕರೆದರೂ, ಅಮ್ಮನ ಕೆಲಸ ಮುಗಿಸಿಯೇ ಬರುತ್ತೇನೆ ಎಂದು ಹೇಳಿದ್ದಾರೆ.
Darshan abou Sumalatha Ambareesh: ದೇಶದಲ್ಲೀಗ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲೂ ಕರ್ನಾಟಕದಲ್ಲೂ ಅದು ಬಿಸಿಲಿನಷ್ಟೇ ಬಿರುಸು ಪಡೆದುಕೊಂಡಿದೆ. ಇನ್ನು ಕೆಲವೆಡೆ ಅಸಮಾಧಾನದ ಹೊಗೆ ಭುಗಿಲೆದ್ದರೆ, ಕಟ್ಟಿದ ಪಕ್ಷ ಬಿಟ್ಟು, ಬಂಡಾಯವೆದ್ದವರೂ ಈ ಸಲ ಕಣದಲ್ಲಿದ್ದಾರೆ. ಇದೆಲ್ಲದರ ನಡುವೆ ಒಂದಷ್ಟು ರೋಚಕತೆ ಮೂಡಿಸಿತ್ತು ಮಂಡ್ಯ ಲೋಕಸಭಾ ಕ್ಷೇತ್ರ. ಈಗ ಇದೇ ಕ್ಷೇತ್ರದಲ್ಲಿ ಬೆಂಬಲಿಗರ ಸಭೆ ಮಾಡಿದ್ದಾರೆ ಸಂಸದೆ ಸುಮಲತಾ ಅಂಬರೀಶ್.
ಸುಮಲತಾ ಅಂಬರೀಶ್ ಬಿಜೆಪಿ ಸೇರುವುದು ಅಧಿಕೃತವಾಗಿದೆ. ಇನ್ನೇನು ಶೀಘ್ರದಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಜತೆಗೆ ಮಂಡ್ಯದಿಂದಲೂ ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದೂ ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನಟ ದರ್ಶನ್ ಸಹ ಭಾಗವಹಿಸಿದ್ದರು. ಅಮ್ಮನ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು. ಅಮ್ಮ ಒಬ್ಬ ಇಂಡಿಪೆಂಡೆಂಟ್ ಅಭ್ಯರ್ಥಿಯಾಗಿ ಗೆದ್ದು ಮಾಡಿದ ಸೇವೆ ಸಣ್ಣದೇನಲ್ಲ. ಸಂಸದರು ಅಷ್ಟು ಕೆಲಸ ಮಾಡುವುದೇ ದೊಡ್ಡದು ಎಂದಿದ್ದಾರೆ.
ಐದು ವರ್ಷಗಳ ಹಿಂದೆ ಮಂಡ್ಯದ ಪ್ರತಿ ಹಳ್ಳಿಯಲ್ಲೂ ಅಲ್ಲಿನ ತಾಯಿಂದಿರು ಪ್ರಚಾರಕ್ಕೆ ಬಂದಾಗ ಆರತಿ ಮಾಡಿ, ನಿಮಗೆ ಒಳ್ಳೆದಾಗುತ್ತೆ ಹೋಗ್ರಪ್ಪ ಎಂದು ಹರಸಿದ್ದರು. ಅವರ ಮಾತು ಸುಳ್ಳಾಗಲಿಲ್ಲ. ಹಾಗೇ ಹಾರೈಸಿದವರ ಪಾದಗಳಿಗೆ ನನ್ನ ನಮಸ್ಕಾರಗಳು. ಆ ಸಮಯದಲ್ಲಿ ನಮಗೆ ಕೊಟ್ಟ ಪ್ರೀತಿ ಅಷ್ಟಿಷ್ಟಲ್ಲ. ಹೀಗಿರುವಾಗ, ಈಗ ಆ ಯಮ ಬಂದು ನನ್ನನ್ನು ಕರೆದರೂ, 'ಸ್ವಲ್ಪ ಇರಪ್ಪ, ನಮ್ಮ ಅಮ್ಮನ ಕೆಲಸ ಇದೆ. ಅದನ್ನು ಮುಗಿಸಿಯೇ ನಾನು ಬರೋದು..' ಅಂತ ಹೇಳ್ತೇನೆ. ಏಕೆಂದರೆ, ಆ ಮನೆ ನಮಗೆ ಅಷ್ಟು ಕೊಟ್ಟಿದೆ. ಅಷ್ಟೊಂದು ಒಡನಾಟ ಆ ಮನೆ ಜತೆಗಿದೆ" ಎಂದಿದ್ದಾರೆ ದರ್ಶನ್.
ಯಮ ಕರೆದರೂ, ಅವನೂ ವೇಟ್ ಮಾಡಬೇಕು..
ಕಳೆದ ಸಲದ ಪ್ರಚಾರದ ವೇಳೆ, ನನ್ನ ಬಲಗೈ ಮುರಿದಿತ್ತು, ಈಗ ಎಡಗೈಗೆ ಸಮಸ್ಯೆಯಾಗಿದೆ. ಅಷ್ಟಕ್ಕೂ ಮಂಗಳವಾರವೇ (ಏ. 2) ನನ್ನ ಕೈ ಆಪರೇಷನ್ ಇತ್ತು. ಆದರೆ, ಅಮ್ಮನಿಗೆ ಡೇಟ್ ಕೊಟ್ಟುಬಿಟ್ಟಿದ್ದೀನಿ. ಅದು ಮುಗಿಸಿ ಬಂದು ಆಪರೇಷನ್ ಮಾಡಿಸ್ಕೋತಿನಿ ಅಂತ ಡಾಕ್ಟರ್‌ಗೆ ಹೇಳಿದ್ದೇನೆ. ಈಗ ಅಮ್ಮನ ಕೆಲಸಕ್ಕೆಂದೇ ಮಂಡ್ಯಕ್ಕೆ ಬಂದಿದ್ದೇನೆ. ಇವತ್ತು ರಾತ್ರಿ ಆಸ್ಪತ್ರೆಗೆ ಅಡ್ಮಿಟ್ ಆಗಿ, ನಾಳೆ ಬೆಳಗ್ಗೆ ಆಪರೇಷನ್ ಮಾಡಿಸಿಕೊಳ್ಳುವೆ. ಇನ್ನೊಂದು ವಿಷ್ಯಾ ಏನೆಂದರೆ, ನಾನು ಹೋಗಬೇಕಾದರೆ, ನನಗೆ ಸ್ವಲ್ಪ ಜಾಗ ಮಾಡಿಕೊಡಿ. ಯಾವುದೇ ಕಾರಣಕ್ಕೂ ದಯವಿಟ್ಟು ನನ್ನ ಕೈ ಎಳೆಯಬೇಡಿ ಎಂದು ನಾನು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ದಯಮಾಡಿ" ಎಂದು ಮನವಿ ಮಾಡಿದ್ದಾರೆ.
ಅಮ್ಮನ ನಿರ್ಧಾರಕ್ಕೆ ನನ್ನ ಬೆಂಬಲ ಇದ್ದೇ ಇರುತ್ತೆ
ಒಬ್ಬ ಇಂಡಿಪೆಂಡೆಂಟ್ ಸಂಸದರು ಇಷ್ಟೊಂದು ಕೆಲಸ ಮಾಡುವುದು ತುಂಬ ದೊಡ್ಡ ಕೆಲಸ. ಈ ಐದು ವರ್ಷದಲ್ಲಿ ಅಮ್ಮ ಏನೆಲ್ಲ ಮಾಡಿದ್ದಾರೆ ಎಂಬುದು ನಿಮಗೆ ಗೊತ್ತಿದೆ. ನೀವೆಲ್ಲ ನೋಡಿದ್ದೀರಿ. ನಾನಿಲ್ಲಿ ರಾಜಕೀಯ ಮಾತನಾಡಲ್ಲ. ಒಂದೇ ಮಾತಿನಲ್ಲಿ ಮುಗಿಸುವುದಾದರೆ, ಅಮ್ಮನ ನಿರ್ಧಾರಕ್ಕೆ ನನ್ನ ಬೆಂಬಲ ಸದಾ ಇದ್ದೇ ಇರುತ್ತೆ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾನು ಅವರ ಜತೆಗೆ ನಿಲ್ಲುತ್ತೇನೆ. ಅದು ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲಿ. ಏಕೆಂದರೆ, ಮಕ್ಕಳು ಎಂದಾಗ, ನಾವೂ ಅವರ ಮಕ್ಕಳೇ. ಮನೇ ಮಕ್ಕಳ ರೀತಿಯೇ ಇರಬೇಕು. ತಾಯಿ ಯಾವತ್ತಿದ್ದರೂ ತಾಯಿಯೇ. ನಾವಿರೋವರೆಗೂ ತಾಯಿನೇ ಎಂದೂ ಹೇಳಿದ್ದಾರೆ.
ಹಾಳು ಬಾವಿಗೆ ಬೀಳು ಅಂದ್ರೂ ಜಿಗಿತೀವಿ
ಅಮ್ಮ ಕಣ್ಮುಚ್ಚಿ ಹಾಳು ಬಾವಿಗೆ ಬೀಳು ಅಂದ್ರು ನಾನು ಬೀಳುತ್ತೇನೆ. ಒಟ್ಟಿನಲ್ಲಿ ಅಮ್ಮ ಏನು ಹೇಳ್ತಾರೋ ಅದನ್ನು ಶಿರಸಾವಹಿಸಿ ಪಾಲಿಸುವುದಷ್ಟೇ ನನ್ನ ಮತ್ತು ನನ್ನ ತಮ್ಮನ ಕೆಲಸ. ಅಷ್ಟೊಂದು ಗಾಢವಾದ ಬಾಂಧವ್ಯ ನಮಗೂ ಆ ಮನೆಗೂ ಇದೆ. ಅಮ್ಮನ ನಿರ್ಧಾರಕ್ಕೆ ನಾನು ನನ್ನ ತಮ್ಮ (ಅಭಿಷೇಕ್) ಇಬ್ಬರೂ ಬದ್ಧರು. ಈ ಐದು ವರ್ಷ ಏನು ಪ್ರೀತಿ ತೋರಿಸಿದ್ದೀರೋ ಎಲ್ಲರಿಗೂ ಧನ್ಯವಾದಗಳು" ಎಂದಿದ್ದಾರೆ ದರ್ಶನ್.