logo
ಕನ್ನಡ ಸುದ್ದಿ  /  ಮನರಂಜನೆ  /  ಮಲಯಾಳಂ ಸಿನಿಮಾದವರು ಏನು ಮಾಡಿದ್ರೂ ಉಘೇ ಉಘೇ, ಕನ್ನಡ ಸಿನಿಮಾದಲ್ಲಿ ಟ್ಯೂನ್‌ ಹೋಲಿಕೆ ಇದ್ರೂ ಕೇಸ್‌, ಯಾಕೆ ಹೀಗೆ? ಕವಿರಾಜ್‌ ಪ್ರಶ್ನೆ

ಮಲಯಾಳಂ ಸಿನಿಮಾದವರು ಏನು ಮಾಡಿದ್ರೂ ಉಘೇ ಉಘೇ, ಕನ್ನಡ ಸಿನಿಮಾದಲ್ಲಿ ಟ್ಯೂನ್‌ ಹೋಲಿಕೆ ಇದ್ರೂ ಕೇಸ್‌, ಯಾಕೆ ಹೀಗೆ? ಕವಿರಾಜ್‌ ಪ್ರಶ್ನೆ

Praveen Chandra B HT Kannada

May 16, 2024 01:10 PM IST

google News

ಮಲಯಾಳಂ ಸಿನಿಮಾದವರು ಏನು ಮಾಡಿದ್ರೂ ಉಘೇ ಉಘೇ, ಕನ್ನಡದಲ್ಲಿ ಟ್ಯೂನ್‌ ಹೋಲಿಕೆ ಕಂಡ್ರೂ ಕೇಸ್‌

    • Manjumel Boys vs The cave rescue: ಇತ್ತೀಚಿಗೆ ಬಿಡುಗಡೆಯಾದ ಮಂಜುಮ್ಮೆಲ್‌ ಬಾಯ್ಸ್‌ ಮತ್ತು ನೆಟ್‌ಫ್ಲಿಕ್ಸ್‌ ವೆಬ್‌ ಸರಣಿ ದಿ ಕೇವ್‌ ರಿಸ್ಕ್ಯೂಗೂ ಹೋಲಿಕೆ ಇದೆಯೇ? "ಮಲಯಾಳಂನಲ್ಲಿ ಏನೇ ಮಾಡಿದ್ರೂ ಹೊಗಳುವ ವಿಮರ್ಶಕರು ಕನ್ನಡ ಸಿನಿಮಾವನ್ನು ಭೂತಗನ್ನಡಿ ಹಿಡಿದು ವಿಮರ್ಶಿಸುತ್ತಾರೆ" ಎಂದು ಖೇದ ವ್ಯಕ್ತಪಡಿಸಿದ್ದಾರೆ ಕನ್ನಡ ಗೀತರಚನೆಕಾರ ಕವಿರಾಜ್‌.
ಮಲಯಾಳಂ ಸಿನಿಮಾದವರು ಏನು ಮಾಡಿದ್ರೂ ಉಘೇ ಉಘೇ, ಕನ್ನಡದಲ್ಲಿ ಟ್ಯೂನ್‌ ಹೋಲಿಕೆ ಕಂಡ್ರೂ ಕೇಸ್‌
ಮಲಯಾಳಂ ಸಿನಿಮಾದವರು ಏನು ಮಾಡಿದ್ರೂ ಉಘೇ ಉಘೇ, ಕನ್ನಡದಲ್ಲಿ ಟ್ಯೂನ್‌ ಹೋಲಿಕೆ ಕಂಡ್ರೂ ಕೇಸ್‌

ಬೆಂಗಳೂರು: ಈ ವರ್ಷ ಬಿಡುಗಡೆಯಾದ ಹಲವು ಮಲಯಾಳಂ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್‌ ಆಗುತ್ತಿವೆ. ಆವೇಶಂ, ಮಂಜುಮ್ಮೆಲ್‌ ಬಾಯ್ಸ್‌ನಂತಹ ಸಿನಿಮಾಗಳು ನೂರು ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡುತ್ತವೆ. ಆದರೆ, ಬ್ಲಿಂಕ್‌ನಂತಹ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಆದಾಯ ತರುವಲ್ಲಿ ಸೋಲುತ್ತಿವೆ. ಮಲಯಾಳಂ ಭಾಷೆಯ ಕೆಲವೊಂದು ಸಿನಿಮಾಗಳು ಅಷ್ಟಕ್ಕಷ್ಟೇ ಇದ್ದರೂ ಸೋಷಿಯಲ್‌ ಮೀಡಿಯಾದ ಹೈಪ್‌ ಮತ್ತು ವಿಮರ್ಶೆಕರ ಅತ್ಯುತ್ತಮ ವಿಮರ್ಶೆಯಿಂದಾಗಿ ಗೆಲುವು ಪಡೆಯುತ್ತಿವೆ ಎಂಬ ದೂರುಗಳಿವೆ. ಮಲಯಾಳಂ ಚಿತ್ರರಂಗ ನೀಡಿರುವ ಹಲವು ಒಳ್ಳೆಯ ಸಿನಿಮಾಗಳ ಪ್ರಭೆಯಿಂದಾಗಿ ಕೆಲವು ಸಾಮಾನ್ಯ ಸಿನಿಮಾಗಳ ಕುರಿತೂ ಹೆಚ್ಚು ಹೈಪ್‌ ಮಾಡಲಾಗುತ್ತಿದೆ ಎಂಬ ಅಭಿಪ್ರಾಯಗಳಿವೆ.

ಥಿಯೇಟರ್‌ಗಳಲ್ಲಿ ನೂರಾರು ಕೋಟಿ ಗಳಿಕೆ ಮಾಡಿದ ಸಿನಿಮಾವನ್ನು ಒಟಿಟಿಯಲ್ಲಿ ನೋಡಿದಾಗ "ಇದರಲ್ಲಿ ಅಂತಹದ್ದು ಏನಿದೆ?" ಎಂದು ಸಾಕಷ್ಟು ಮಂದಿ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಮಲಯಾಳಂ ಸಿನಿಮಾಗಳಿಗೆ ದೊರಕುವ ಹೈಪ್‌, ಹೊಗಳಿಕೆ ಕನ್ನಡ ಚಿತ್ರಗಳಿಗೆ ದೊರಕುತ್ತಿಲ್ಲ ಎಂಬ ಬೇಸರವೂ ಸಾಕಷ್ಟು ಜನರಲ್ಲಿದೆ. ಈ ವರ್ಷ ಹಲವು ಒಳ್ಳೆಯ ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದರೂ "ಜನರ ಒಳ್ಳೆಯ ಮಾತು ಮತ್ತು ವಿಮರ್ಶೆ"ಯ ಕೊರತೆಯಿಂದ ಅಂದುಕೊಂಡಷ್ಟು ಗಳಿಕೆ ಮಾಡಿಲ್ಲ. ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಇಂತಹದ್ದೇ ಬೆಳವಣಿಗೆಯ ಕುರಿತು ಸಿನಿಮಾ ಕ್ಷೇತ್ರದಲ್ಲಿರುವವರು ಆಗಾಗ ಮಾತನಾಡುತ್ತಿದ್ದಾರೆ. ಇದೀಗ ಕನ್ನಡದ ಜನಪ್ರಿಯ ಗೀತಸಾಹಿತಿ ಕವಿರಾಜ್‌ ಸೋಷಿಯಲ್‌ ಮೀಡಿಯಾದಲ್ಲಿ ಇಂತಹದ್ದೇ ಬೇಸರ ವ್ಯಕ್ತಪಡಿಸಿದ್ದಾರೆ.

ಗೀತಸಾಹಿತಿ ಕವಿರಾಜ್‌ ಹೇಳಿದ್ದೇನು?

ಕವಿರಾಜ್‌ ಅವರು ನೆಟ್‌ಫ್ಲಿಕ್ಸ್‌ನಲ್ಲಿರುವ ವೆಬ್‌ ಸರಣಿ "ದಿ ಕೇವ್‌ ರಿಸ್ಕ್ಯೂ"ಯ ಫೋಟೋ ಹಂಚಿಕೊಂಡಿದ್ದಾರೆ. ಈ ವೆಬ್‌ ಸರಣಿಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೂಚ್ಯವಾಗಿ ಈ ವೆಬ್‌ ಸರಣಿಗೂ ಇತ್ತೀಚೆಗೆ ಬಿಡುಗಡೆಯಾದ ಮಲಯಾಳಂನ ಬದುಕುಳಿಯುವ ಕಥೆಯ ಸಿನಿಮಾ "ದಿ ಮಂಜುಮ್ಮೆಲ್‌ ಬಾಯ್ಸ್‌"ಗೂ ಇರುವ ಹೋಲಿಕೆಯನ್ನು ತೋರಿಸಿದ್ದಾರೆ.

"ಟ್ರಿಪ್ ಹೋದ ತೈವಾನಿನ ಫುಟ್ಬಾಲ್ ತಂಡವೊಂದು ಒಂದು ಗುಹೆ ಒಳಗೆ ಸಿಕ್ಕಿ ಹಾಕಿಕೊಳ್ಳುತ್ತದೆ . ಅವರನ್ನು ರಕ್ಷಿಸುವ ಪ್ರಯತ್ನಗಳ ಕಥೆ. ಒಂದು ಹಂತದಲ್ಲಿ ರಕ್ಷಣಾ ತಂಡ ಅವರು ಬದುಕಿರುವುದು ಅಸಾಧ್ಯ ಎಂದು ಕೈ ಚೆಲ್ಲುತ್ತದೆ . ಅದರಲ್ಲಿ ಒಬ್ಬನಿಗೆ ತನ್ನ ಬಾಲ್ಯದ ಅಭದ್ರತೆಯ ಘಟನೆಗಳು ಆಗಾಗ ನೆನಪಾಗಿ ಕಾಡುತ್ತವೆ . ಅದರಲ್ಲಿ ಒಂದು ಅವನು ನೀರಿನಲ್ಲಿ ಬಿದ್ದಾಗ ಯಾರೋ ರಕ್ಷಿಸಿರುವುದು . ಅದರಲ್ಲಿ ಒಬ್ಬನಿಗೆ ತಾವೆಲ್ಲ ಬದುಕುವ ಬಗ್ಗೆ ಯಾವುದೇ ಭರವಸೆ ಇಲ್ಲ . ಗುಹೆಯೊಳಗೆ ನೀರು ನುಗ್ಗಲು ಶುರು ಆಗುತ್ತದೆ . ಇದೊಂದು 2022ರಲ್ಲಿ ಬಿಡುಗಡೆ ಆದ ನೆಟ್ ಫ್ಲಿಕ್ಸ್ ಅಲ್ಲಿ ಲಭ್ಯ ಇರುವ ಸೀರೀಸ್ . ಇದಿಷ್ಟು ಈವರೆಗೆ ನೋಡಿದ್ದು , ಮುಂದೇನಾಗುತ್ತೋ ನೋಡಬೇಕು . ಇದು ಕೂಡ ನೈಜ ಘಟನೆಯ ಸ್ಪೂರ್ತಿ ಅಂತೆ . ನಮ್ಮ ಸಿನಿಮಾಗಳಿಗೆ ಮಾತ್ರ ನಮ್ಮ ವಿಮರ್ಶಕರು ಭೂತಗನ್ನಡಿ ಹಿಡಿದು ನೋಡುವುದೇನೋ . ಮಲಯಾಳಂ ಅವರು ಏನ್ ಮಾಡಿದ್ರು ಉಘೇ ಉಘೇ . ಅವರು ಅಷ್ಟೇ ಒಂದೇ ರಾಗದಲ್ಲಿ ಹಾಡಿನ ಟ್ಯೂನ್ ಇದ್ದರು ಸಾಕು . ನಮ್ಮದು ಕದ್ದರು ಅಂತ ಕೇಸ್ ಹಾಕುತ್ತಾರೆ" ಎಂದು ಕವಿರಾಜ್‌ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಮಂಜುಮ್ಮೆಲ್‌ ಬಾಯ್ಸ್‌ ಕಥೆಯೂ ಇದೇ ರೀತಿ ಇದೆ. ಕಂದಕಕ್ಕೆ ಬಿದ್ದ ಗೆಳೆಯ, ಆತನನ್ನು ರಕ್ಷಿಸಲು ಮಾಡುವ ಪ್ರಯತ್ನ, ಇದೇ ಸಮಯದಲ್ಲಿ ನೆನಪಾಗುವ ಬಾಲ್ಯದ ಘಟನೆಗಳು... ಥೇಟ್‌ ದಿ ಕೇವ್‌ ರಿಸ್ಕ್ಯೂನಂತೆಯೇ ಇದೆ. ಇಷ್ಟೆಲ್ಲ ಹೋಲಿಕೆ ಇದ್ದರೂ ಯಾರೂ ಈ ಕುರಿತು ಪ್ರಶ್ನಿಸುವುದಿಲ್ಲ. ಆದರೆ, ಕಾಂತಾರ ಸಿನಿಮಾದಲ್ಲಿ "ವರಹಾರೂಪಂ" ಟ್ಯೂನ್‌ ಹೋಲಿಕೆ ಕಂಡಿರುವುದಕ್ಕೆ ಕೇಸ್‌ ದಾಖಲಿಸಿ ಅಷ್ಟು ಸುಂದರವಾದ ಹಾಡನ್ನೇ ತೆಗೆಸಲಾಗಿತ್ತು. ಕನ್ನಡದ ಯಾವುದೇ ಸಿನಿಮಾದಲ್ಲಿ ಟ್ಯೂನ್‌ ಅಥವಾ ದೃಶ್ಯಗಳು ಕಂಡರೂ ಸೋಷಿಯಲ್‌ ಮೀಡಿಯಾದಲ್ಲಿ "ಅಲ್ಲಿಂದ ಕದ್ದದ್ದು" ಎಂದು ವೈರಲ್‌ ಮಾಡಲಾಗುತ್ತದೆ. ಈ ರೀತಿಯ ಹಲವು ಘಟನೆಗಳು ಕನ್ನಡ ಚಿತ್ರರಂಗದ ಕುರಿತು ನಡೆದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕವಿರಾಜ್‌ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ಮಲಯಾಳಂ ಸಿನಿಮಾಗಳಿಗೆ ನಮ್ಮವರಿಂದಲೇ ಬಿಲ್ಡಪ್‌

"ಮಂಜುಮೆಲ್ಸ್ ಬಾಯ್ಸ್ ನಿಜವಾಗಿ ನಡೆದ ಘಟನೆ. ಈ ಚಿತ್ರದಲ್ಲಿ ನಿಜವಾದ ಘಟನೆಯನ್ನು ಅನುಭವಿಸಿದವರೂ ಇದ್ದಾರೆ. ಅದೂ ಮತ್ತು ಇದೂ ಒಂದೇ ತೆರನಾದ ಘಟನೆಗಳು. ಅಂದಹಾಗೆ ಆಗಾಗ ನೆನಪಿಗೆ ಬರುವ ಬಾಲ್ಯದ ಅಭದ್ರತೆಯ ಘಟನೆಗಳನ್ನು, ಇವರು ಭಟ್ಟಿ ಇಳಿಸಿದಂತೆ ಕಾಣುತ್ತದೆ" ಎಂದು ಬಸವರಾಜ್‌ ಕಾಮೆಂಟ್‌ ಮಾಡಿದ್ದಾರೆ. " ಹೌದು ಸರ್ ಈ ಮಲಯಾಳಂ ಸಿನಿಮಾಗಳು ಆವರೇಜ್ ಗಿಂತ ಕಮ್ಮಿ ಇದ್ರೂ ಸಹ ಹೆವ್ವಿ ಬಿಲ್ಡಪ್ ಕೊಟ್ಟು ನಮ್ಮವ್ರೆ ಮಾರ್ಕೆಟಿಂಗ್ ಮಾಡ್ತಾರೆ. ಅದೇ ನಮ್ಮ ಕನ್ನಡದಲ್ಲಿ ಮಾಡಿದ್ರೆ ಕ್ರೀನ್ಜ್ ಮೂವೀಸ್ ಅಂತ ಕಾಲು ಎಳಿತಾರೆ" ಎಂದು ಹರ್ಷಿತ್‌ ಎಸ್‌ ಅಭಿಪ್ರಾಯಪಟ್ಟಿದ್ದಾರೆ. "ಜನ ಆವೇಶಂ ನೋಡಿ ಹೊಗಳಿದ್ದೊ ಹೊಗಳಿದ್ದು. ಅದು ಏನು ಚೆನ್ನಾಗಿ ಇದೆಯೋ ಕಾಣೆ ಆ ಮೂವಿಲಿ" ಎಂದು ಆದರ್ಶ್‌ ಕುಡ್ಲೂರು ಕಾಮೆಂಟ್‌ ಮಾಡಿದ್ದಾರೆ. "ಯಾವುದೇ ಮಲೆಯಾಳಂ ಸಿನಿಮಾ ಬಂದ್ರು ಕನ್ನಡಿಗರ ಒಂದು ವರ್ಗದ ಜನ ಉಘೇ ಉಘೇ ಹೇಳ್ತಾರೆ" ಎಂದು ಸೂರಜ್‌ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ. "ಕನ್ನಡ ಯೂಟ್ಯೂಬರ್‌ ವಿಮರ್ಶಕರು ಒಳ್ಳೆಯ ಸಿನಿಮಾವನ್ನೂ ಕೆಟ್ಟದ್ದಾಗಿ ವಿಮರ್ಶೆ ಮಾಡುತ್ತಾರೆ" "ನಮ್ಮ ಕನ್ನಡ ದ್ರೋಹಿಗಳ ಒಂದು ಗುಂಪು ಇದೆ...ನಮ್ಮ ಕನ್ನಡ ಚಿತ್ರಗಳ ಬಗ್ಗೆ ಅಸಡ್ಡೆ ತೋರಿಸ್ತಾರೆ, ಅದೇ ಹಿಂದಿ, ತಮಿಳು, ತೆಲುಗು, ಮಲೆಯಾಳಂ ಚಿತ್ರಗಳು ಅಂದರೆ ಜೊಲ್ಲು ಸುರಿಸಿಕೊಂಡು ನೋಡ್ತಾರೆ" ಎಂದು ಸಾಕಷ್ಟು ಜನರು ಕವಿರಾಜ್‌ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ.

ಉತ್ತಮ ಚಿತ್ರಗಳನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ

ಕವಿರಾಜ್‌ ಪೋಸ್ಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. "ತಮಿಳು-ಮಲೆಯಾಳಂನಲ್ಲಿ ಒಂದು ಸಣ್ಣ ಘಟನೆಯನ್ನು, ಭಾವನೆಗಳ ತಾಕಲಾಟಗಳನ್ನು, ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡ ಬಿಗಿಯಾದ ಚಿತ್ರಕಥೆಗಳನ್ನು, ಅದ್ಭುತ ನಿರೂಪಣೆಯುಳ್ಳ ಚಿತ್ರಗಳನ್ನು ಮಾಡುತ್ತಿದ್ದಾರೆ. ಉದಾ: ಅಸುರನ್, ಕರ್ಣನ್, ಜೈ ಭೀಮ್, ಮಾಮನ್ನನ್, ಅಯ್ಯಪ್ಪನುಂ ಕೋಶಿಯಂ, ಟ್ರಾನ್ಸ್, ಸೀತಾ ರಾಮಮಂ, ಆಡುಜೀವಿತಂ ಇನ್ನೂ ಹಲವು.... ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಕನ್ನಡದಲ್ಲೂ ಕಾಂತಾರ ಮತ್ತು ಕಾಟೇರಾ ಅತ್ಯುತ್ತಮ ಮೆಚ್ಚುಗೆ ಪಡೆದಿವೆ. ನಿಮ್ಮ ಹೀರೋಗಳು ಐದು ವರ್ಷಕ್ಕೊಂದು ಚಿತ್ರ ಮಾಡುತ್ತಿದ್ದಾರೆ. ಉತ್ತಮ ಚಿತ್ರಗಳನ್ನು ಮಾತ್ರವೇ ಪ್ರೇಕ್ಷಕರು ಗೆಲ್ಲಿಸುತ್ತಾರೆ ಎಂದು ಕವಿರಾಜ್‌ ಪೋಸ್ಟ್‌ಗೆ ಮಂಜುನಾಥ್ ಜವರನಹಳ್ಳಿ ಬೋರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ