ಅರ್ಜುನ ಆನೆಗೆ ಸ್ಮಾರಕ ನಿರ್ಮಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ; ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೂ ಮೋಸ
May 27, 2024 11:50 AM IST
ಅರ್ಜುನ ಆನೆಗೆ ಸ್ಮಾರಕ ನಿರ್ಮಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ
- ಮೈಸೂರು ದಸರಾ ಅಂಬಾರಿ ಆನೆ ಅರ್ಜುನನ ಸ್ಮಾರಕ ನಿರ್ಮಾಣ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ವಾಟ್ಸಪ್ ಗ್ರೂಪ್ ಮಾಡಿ ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ್ದಾನೆ. ನಟ ದರ್ಶನ್‌ಗೂ ಈ ವ್ಯಕ್ತಿಯಿಂದ ಮೋಸವಾಗಿದೆ ಎಂದು ವರದಿಗಳು ತಿಳಿಸಿವೆ.
ಬೆಂಗಳೂರು: ಮೃತಪಟ್ಟ ಮೈಸೂರು ದಸರಾ ಅಂಬಾರಿ ಆನೆ ಅರ್ಜುನ ಸ್ಮಾರಕಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬರು ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅರ್ಜುನ ಆನೆಗೆ ಸ್ಮಾರಕ ನಿರ್ಮಾಣ ಮಾಡುವ ವಿಚಾರವನ್ನೇ ಬಂಡವಾಳ ಮಾಡಿಕೊಂಡ ಮೈಸೂರಿನ ನವೀನ್ ಎಚ್‌ಎನ್ ಈ ರೀತಿ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ್ ಜಾನೇಕೆರೆ ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ನವೀನ್ ಎಚ್‌ಎನ್ ಎಂಬ ವ್ಯಕ್ತಿ ಅರ್ಜುನ ಪಡೆ ಎಂಬ ವಾಟ್ಸಪ್ ಗ್ರೂಪ್ ರಚಿಸಿದ್ದನು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಮಳೆಗಾಲಕ್ಕೆ ಮೊದಲು ಅರ್ಜುನ ಆನೆಯ ಸ್ಮಾರಕ ನಿರ್ಮಾಣ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಎಚ್ಚರಿಸಿದ್ದರು. ಈ ಸಮಯದಲ್ಲಿ ಇದೇ ವಿಷಯದ ಮೂಲಕ ಹಣ ಸಂಗ್ರಹಿಸಲು ನವೀನ್ ಉದ್ದೇಶಿಸಿ ವಾಟ್ಸಪ್ ಗ್ರೂಪ್ ಮಾಡಿದ್ದಾನೆ ಎನ್ನಲಾಗಿದೆ.
ಈ ವಾಟ್ಸಪ್ ಗ್ರೂಪ್‌ನಲ್ಲಿ "ಅರ್ಜುನ ಆನೆಗೆ ಸಮಾಧಿ ನಿರ್ಮಾಣಕ್ಕೆ ಧನ ಸಹಾಯ ಮಾಡಿ" ಎಂದು ಸಂದೇಶ ಕಳುಹಿಸಿದ್ದಾನೆ. ಸಾಕಷ್ಟು ಜನರು ಈತ ಕಳುಹಿಸಿದ ಖಾತೆಗೆ ಹಣ ಕಳುಹಿಸಿದ್ದಾರೆ. ಗೂಗಲ್ ಪೇ, ಫೋನ್ ಪೇ ಇತ್ಯಾದಿ ಯುಪಿಐ ಐಡಿಗಳ ಮೂಲಕ ಜನರು ಹಣ ಹಾಕಿದ್ದಾರೆ. ಈತ ಈ ರೀತಿ ಹಣ ಸಂಗ್ರಹಿಸಿ ಮೋಸ ಮಾಡಿದ್ದಾನೆ ಎಂಬ ಸಂದೇಶಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಅರಣ್ಯ ಇಲಾಖೆಯಿಂದ ಹಣ ತೆಗೆದುಕೊಂಡ ವ್ಯಕ್ತಿ
ನವೀನ್ ಎಚ್‌ಎನ್ ಎಂಬ ವ್ಯಕ್ತಿ ಅರ್ಜುನ ಆನೆಗೆ ಸ್ಮಾರಕ ನಿರ್ಮಿಸಲು ಕಲ್ಲಿಗಾಗಿ ದರ್ಶನ್/ದರ್ಶನ್ ಪಿಎ ಮೂಲಕ ಹಣ ಪಡೆದುಕೊಂಡಿದ್ದಾನೆ. ಈ ಹಣ ಮಾತ್ರವಲ್ಲದೆ ಜನರಿಂದಲೂ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದಾನೆ ಎನ್ನಲಾಗಿದೆ. ದರ್ಶನ್ ಕಡೆಯಿಂದ ಪಡೆದ ಹಣದಿಂದ ಸ್ಮಾರಕಕ್ಕೆ ಕಲ್ಲು ಜೋಡಿಸುವಾಗ ಅರಣ್ಯ ಇಲಾಖೆಯವರು ಈ ಕೆಲಸ ನಾವು ಮಾಡ್ತಿವಿ ಎಂದು ಹೇಳಿದ್ದಾರೆ. ನಾನು ಬೆಂಗಳೂರಿನಿಂದ ಕಲ್ಲು ತಂದಿದ್ದೇನೆ ಎಂದು ಅರಣ್ಯ ಇಲಾಖೆಯವರ ಕಡೆಯಿಂದ ಕಲ್ಲಿನ ದುಡ್ಡನ್ನೂ ಈತ ತೆಗೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
"ಈಗಾಗಲೇ ಸಾಕಷ್ಟು ಜನರು ಅರ್ಜುನ ಪಡೆ ಹೆಸರಿನ ವಾಟ್ಸಪ್ ಗ್ರೂಪ್‌ನಲ್ಲಿ ನೀಡಿರುವ ಖಾತೆಗೆ ಹಣ ಹಾಕಿದ್ದಾರೆ. ಈ ಹಣ ನವೀನ್ ಎಚ್‌ಎನ್ ಎಂಬ ವ್ಯಕ್ತಿಯ ವೈಯಕ್ತಿಕ ಖಾತೆಗೆ ಹೋಗುತ್ತಿದೆ. ನೂರಾರು ಜನರು ಈತನ ಖಾತೆಗೆ ಹಣ ಹಾಕಿದ್ದಾರೆ. ಸರಕಾರ ಈ ಕೂಡಲೇ ಈ ಹಣವನ್ನು ಮುಟ್ಟುಗೋಲು ಹಾಕುವಂತೆ" ಮಲೆನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರು ಆಗ್ರಹಿಸಿದ್ದಾರೆ.
ಟಿವಿ9 ವರದಿ ಪ್ರಕಾರ ಈ ವ್ಯಕ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಿಎಗೂ ಕರೆ ಮಾಡಿ ಸಮಾಧಿ ರಕ್ಷಣೆಗೆ ಕಲ್ಲಿಗಾಗಿ ಹಣ ಪಡೆದಿದ್ದಾನೆ. ಈ ಕಲ್ಲುಗಳನ್ನು ಅರಣ್ಯ ಇಲಾಖೆಗೆ ಮಾರಾಟ ಮಾಡಿದ್ದಾನೆ. ಈ ಮೂಲಕ ನಟ ದರ್ಶನ್‌ಗೂ ಈತನ ಕಡೆಯಿಂದ ವಂಚನೆಯಾಗಿದೆ ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ಅರ್ಜುನ ಆನೆ ಸಮಾಧಿ ವಿಚಾರ ಸುದ್ದಿಯಲ್ಲಿದೆ. ರ್ಶನ್ ಅಭಿಮಾನಿಗಳು ಕಷ್ಟಪಟ್ಟು ಕಲ್ಲು ಚಪ್ಪಡಿಗಳನ್ನು ತಂದು ಸಮಾಧಿ ರಕ್ಷಣೆಗೆ ಮುಂದಾಗಿದ್ದರು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ವಲಯದ ದಬ್ಬಳ್ಳಿಕಟ್ಟೆ ಕೆಎಫ್‌ಡಿಸಿ ನಡುತೋಪಿನ ಪ್ರದೇಶದಲ್ಲಿ ಸಮಾಧಿ ಸ್ಥಳಕ್ಕೆ ರಕ್ಷಣೆ ನೀಡಲು ಕಲ್ಲಿನ ಸ್ಲ್ಯಾಬ್‌ಗಳನ್ನು ತಂದು ಸಾಕಷ್ಟು ಕೆಲಸ ಮಾಡಿದ್ದರು. ಆದರೆ, ಅರಣ್ಯ ಇಲಾಖೆಯವರು ಕೊನೆಕ್ಷಣದಲ್ಲಿ ಎಚ್ಚೆತ್ತು ತಾವೇ ಸಮಾಧಿ ರಕ್ಷಣೆಗೆ ಮುಂದಾಗಿದ್ದರು. ಈ ವಿಷಯವು ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದೆ.
ಮೈಸೂರು ದಸರಾದಲ್ಲಿ ಎಂಟು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಕೆಲವು ತಿಂಗಳ ಹಿಂದೆ ದುರ್ಮರಣಕ್ಕೀಡಾಗಿತ್ತು. ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಯುವಾಗ ಒಂಟಿ ಸಲಗದೊಂದಿಗೆ ನಡೆದ ಸಂಘರ್ಷದಲ್ಲಿ ತಿವಿತಕ್ಕೊಳಗಾಗಿ ಮೃತಪಟ್ಟಿತ್ತು.