ಧ್ರುವ ಸರ್ಜಾ ನನ್ನನ್ನಾಗಲೀ, ನಾನು ಆತನನ್ನಾಗಲೀ ನೋಡಿಕೊಳ್ಳುವ ಅವಶ್ಯಕತೆ ಇಲ್ಲ; ಮೇಘನಾ ರಾಜ್
Aug 28, 2023 05:19 PM IST
ಧ್ರುವ ಸರ್ಜಾ ಕುರಿತಂತೆ ಮೇಘನಾ ರಾಜ್ ಸರ್ಜಾ ಮಾತು
ನೋಡಿಕೊಳ್ಳೋದು, ಮಾಡುವುದು ಅನ್ನೋ ಪದ ಯಾರೂ ಬಳಸಬಾರದು, ಧ್ರುವ ನನ್ನ ತಮ್ಮ ಇದ್ದಂತೆ. ಮೊದಲು ಹೇಗಿದ್ದೆವೋ ಈಗಲೂ ಅದೇ ರೀತಿ ಇದ್ದೇವೆ. ನನಗೆ ಧ್ರುವ ಜೊತೆ ಏನಾದರೂ ಹಂಚಿಕೊಳ್ಳಬೇಕು ಎಂದಾದರೆ ಅವನಿಗೆ ಕರೆ ಮಾಡುತ್ತೇನೆ, ಅವನಿಗೆ ನನ್ನ ಬಳಿ ಮಾತನಾಡಬೇಕು ಎನಿಸಿದಾಗ ನನಗೆ ಕರೆ ಮಾಡುತ್ತಾನೆ
ಭಾನುವಾರ ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೇಘನಾ ರಾಜ್ ಅಭಿನಯದ 'ತತ್ಸಮ ತದ್ಭವ' ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ದಾರೆ. ಬಹಳ ದಿನಗಳ ನಂತರ ಮತ್ತೆ ಮೇಘನಾ ಅವರನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.
'ತತ್ಸಮ ತದ್ಭವ' ಪ್ರಮೋಷನ್‌ನಲ್ಲಿ ಮೇಘನಾ ಬ್ಯುಸಿ
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರದ್ದು 10 ವರ್ಷಗಳ ಪ್ರೀತಿ. ಈ ಜೋಡಿ ಮನೆಯವರನ್ನು ಒಪ್ಪಿಸಿ 2018ರಲ್ಲಿ ಮದುವೆ ಆದರು. ಆದರೆ 2 ವರ್ಷಗಳ ನಂತರ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು. ಆ ಸಮಯದಲ್ಲಿ ಮೇಘನಾ ರಾಜ್ 5 ತಿಂಗಳ ಗರ್ಭಿಣಿಯಾಗಿದ್ದರು. ಜೀವಕ್ಕೆ ಜೀವವಾಗಿದ್ದ ಚಿರುವನ್ನು ಕಳೆದುಕೊಂಡ ಮೇಘನಾಗೆ ತಂದೆ, ತಾಯಿ, ಚಿರಂಜೀವಿ ಸರ್ಜಾ ಕುಟುಂಬದವರು, ಸ್ನೇಹಿತರು ಜೊತೆಯಾಗಿ ನಿಂತರು. ನಿನ್ನ ಜೊತೆಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಧ್ರುವ ಸರ್ಜಾ ಅವರೇ, ಮೇಘನಾ ರಾಜ್‌ನನ್ನು ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿರುವ ಮೇಘನಾ ರಾಜ್, ಯಾರನ್ನೂ ಯಾರೂ ನೋಡಿಕೊಳ್ಳುವ ಅವಶ್ಯತೆ ಇಲ್ಲ ಎಂದಿದ್ದಾರೆ.
ಫಿಲ್ಮಿ ಬೀಟ್ ಜೊತೆ ಮಾತನಾಡಿರುವ ಮೇಘನಾ ರಾಜ್ ತಮ್ಮ ಹಾಗೂ ಧ್ರುವಾ ಸರ್ಜಾ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ''ನಾವೆಲ್ಲರೂ ದೊಡ್ಡವರು, ನಾನು ಧ್ರುವ ಸರ್ಜಾನನ್ನಾಗಲೀ, ಧ್ರುವ, ನನ್ನನ್ನಾಗಲೀ ನೋಡಿಕೊಳ್ಳುವ ಅವಶ್ಯಕತೆಯಿಲ್ಲ. ಇಬ್ಬರಿಗೂ ಕೆಲಸ ಇದೆ, ಯಾರೂ ಯಾರನ್ನೂ ನೋಡಿಕೊಳ್ಳುವ ಅವಶ್ಯತೆ ಇಲ್ಲ. ನೋಡಿಕೊಳ್ಳೋದು, ಮಾಡುವುದು ಅನ್ನೋ ಪದ ಯಾರೂ ಬಳಸಬಾರದು, ಧ್ರುವ ನನ್ನ ತಮ್ಮ ಇದ್ದಂತೆ. ಮೊದಲು ಹೇಗಿದ್ದೆವೋ ಈಗಲೂ ಅದೇ ರೀತಿ ಇದ್ದೇವೆ. ನನಗೆ ಧ್ರುವ ಜೊತೆ ಏನಾದರೂ ಹಂಚಿಕೊಳ್ಳಬೇಕು ಎಂದಾದರೆ ಅವನಿಗೆ ಕರೆ ಮಾಡುತ್ತೇನೆ, ಅವನಿಗೆ ನನ್ನ ಬಳಿ ಮಾತನಾಡಬೇಕು ಎನಿಸಿದಾಗ ನನಗೆ ಕರೆ ಮಾಡುತ್ತಾನೆ.''
ಧ್ರುವ ಸರ್ಜಾ ನನ್ನ ಬ್ಯಾಕ್ ಬೋನ್
''ಆತ ನನಗೆ ಬ್ಯಾಕ್ ಬೋನ್ ಇದ್ದಂತೆ, ಕಾಲ್ ಮಾಡಿದರೆ ಮಕ್ಕಳ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಶಿಷ್ಯ ಸ್ಕೂಲ್‌ಗೆ ಹೋಗುತ್ತಿದ್ದಾನಾ ಎಂದು ಧ್ರುವ ರಾಯನ್ ಬಗ್ಗೆ ಕೇಳುತ್ತಾರೆ, ನಿನ್ನ ಮಗಳು ರಾತ್ರಿ ಸುಮ್ಮನೆ ಮಲಗುತ್ತಾಳಾ ಎಂದು ನಾನು ಕೇಳುತ್ತೇನೆ. ಇದನ್ನು ಹೊರತುಪಡಿಸಿ ಏನಾದರೂ ಫನ್ನಿ ಮಾತುಕತೆ ಇರುತ್ತದೆ'' ಎಂದು ಮೇಘನಾ, ಧ್ರುವ ಸರ್ಜಾ ಬಗ್ಗೆ ಮಾತನಾಡಿದ್ದಾರೆ.
ನೀವು ಮತ್ತೆ ಸಿನಿಮಾ ಮಾಡುವುದು ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ನಾನು ಸಿನಿಮಾ ಮಾಡಿದರೆ ನೋಡುತ್ತೀರಾ ಎಂದು ಅವರನ್ನು ಕೇಳುತ್ತಿದ್ದೆ, ಎಲ್ಲರೂ ಖಂಡಿತ ನೋಡುತ್ತೇವೆ ಎಂದು ಹೇಳಿದ್ದರು. ಈಗ ನಾನು ಸಿನಿಮಾ ಮಾಡಿದ್ದೇನೆ, ಎಲ್ಲರೂ ಬಂದು ಸಿನಿಮಾ ನೋಡಿ, ಸ್ನೇಹಿತರೆಲ್ಲಾ ಸೇರಿ, ಸ್ನೇಹಿತನಿಗಾಗಿ ಮಾಡಿದ ಸಿನಿಮಾ, ಎಲ್ಲರೂ ಬಂದು ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಎಂದು ಮೇಘನಾ ಸಿನಿಮಾಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.