logo
ಕನ್ನಡ ಸುದ್ದಿ  /  ಮನರಂಜನೆ  /  ನಿರ್ದೇಶಕ ಭಾಸ್ಕರ್‌ ಅಂತ್ಯಸಂಸ್ಕಾರಕ್ಕೆ ಬಾರದ ಸಿನಿಗಣ್ಯರು; ಒಬ್ಬಂಟಿಯಾಗಿ ಮಗನ ಅಂತ್ಯಸಂಸ್ಕಾರ ನೆರವೇರಿಸಿದ ವೃದ್ಧ ತಾಯಿ

ನಿರ್ದೇಶಕ ಭಾಸ್ಕರ್‌ ಅಂತ್ಯಸಂಸ್ಕಾರಕ್ಕೆ ಬಾರದ ಸಿನಿಗಣ್ಯರು; ಒಬ್ಬಂಟಿಯಾಗಿ ಮಗನ ಅಂತ್ಯಸಂಸ್ಕಾರ ನೆರವೇರಿಸಿದ ವೃದ್ಧ ತಾಯಿ

HT Kannada Desk HT Kannada

Sep 15, 2023 01:38 PM IST

google News

ಸ್ಯಾಂಡಲ್‌ವುಡ್‌ ನಿರ್ದೇಶಕ ವಿಆರ್‌ ಭಾಸ್ಕರ್‌ ನಿಧನ

  • ಭಾಸ್ಕರ್‌ , ಡಾ. ವಿಷ್ಣುವರ್ಧನ್‌ ಅವರಿಗೆ ಬಹಳ ಆಪ್ತರಾಗಿದ್ದರು. ಅವರೊಂದಿಗೆ ಒಡನಾಟದಿಂದ ಚಿತ್ರರಂಗದಲ್ಲಿ ಭಾಸ್ಕರ್‌ ನಿರ್ದೇಶಕರಾಗಿ, ಬರಹಗಾರರಾಗಿ ಗುರುತಿಸಿಕೊಂಡಿದ್ದರು.

ಸ್ಯಾಂಡಲ್‌ವುಡ್‌ ನಿರ್ದೇಶಕ ವಿಆರ್‌ ಭಾಸ್ಕರ್‌ ನಿಧನ
ಸ್ಯಾಂಡಲ್‌ವುಡ್‌ ನಿರ್ದೇಶಕ ವಿಆರ್‌ ಭಾಸ್ಕರ್‌ ನಿಧನ (PC: Facebook)

ಮನುಷ್ಯ ಬದುಕಿದ್ದಾಗ ದೊರೆಯುವ ಗೌರವ , ಆತ ನಿಧನನಾದಾಗ ದೊರೆಯುವುದಿಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕನ್ನಡ ಚಿತ್ರರಂಗದ ನಿರ್ದೇಶಕ, ಸಾಹಿತಿ, ನಟ ವಿಆರ್‌ ಭಾಸ್ಕರ್‌ ಗುರುವಾರ ನಿಧನರಾಗಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಭಾಸ್ಕರ್‌

ವಿಆರ್‌ ಭಾಸ್ಕರ್‌ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರು ತಮ್ಮ ಕಿಡ್ನಿ ಸಮಸ್ಯೆಯನ್ನು ಹೇಳಿಕೊಂಡು ಕರ್ನಾಟಕದ ಜನರು ಆದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ದಿನಗಳ ಹಿಂದೆ ಮಗ ಹಾಗೂ ಪತ್ನಿಯನ್ನು ಕಳೆದುಕೊಂಡಿದ್ದರು. ಇದೀಗ ಆರೋಗ್ಯ ಸಮಸ್ಯೆಯಿಂದ ಹೊರ ಬರಲಾಗದೆ ಭಾಸ್ಕರ್‌ ಕೂಡಾ ಇಹಲೋಕ ತ್ಯಜಿಸಿದ್ದಾರೆ.

ಭಾಸ್ಕರ್‌ , ಡಾ. ವಿಷ್ಣುವರ್ಧನ್‌ ಅವರಿಗೆ ಬಹಳ ಆಪ್ತರಾಗಿದ್ದರು. ಅವರೊಂದಿಗೆ ಒಡನಾಟದಿಂದ ಚಿತ್ರರಂಗದಲ್ಲಿ ಭಾಸ್ಕರ್‌ ನಿರ್ದೇಶಕರಾಗಿ, ಬರಹಗಾರರಾಗಿ ಗುರುತಿಸಿಕೊಂಡಿದ್ದರು. ವಿಷ್ಣುವರ್ಧನ್‌ ನಟನೆಯ ಸುಪ್ರಭಾತ, ರುದ್ರವೀಣೆ, ಕದಂಬ, ರವಿವರ್ಮ, ಆಪ್ತಮಿತ್ರ, ಒಂದಾಗಿ ಬಾಳು, ಹೃದಯವಂತ ಸೇರಿ ಅನೇಕ ಸಿನಿಮಾಗಳಿಗೆ ಭಾಸ್ಕರ್‌ ಸಂಭಾಷಣೆ ಜೊತೆಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದರು. ಪಂಜಾಬಿ ಹೌಸ್‌, ಅನುರಾಗ ದೇವತೆ, ಮನೆ ಮನೆ ರಾಮಾಯಣ, ಹೃದಯಾಂಜಲಿ, ಸಕಲ ಕಲಾವಲ್ಲಭ ಸಿನಿಮಾಗಳಿಗೆ ಭಾಸ್ಕರ್‌ ಆಕ್ಷನ್‌ ಕಟ್‌ ಹೇಳಿದ್ದರು. ಕನ್ನಡ ಚಿತ್ರರಂಗದಲ್ಲಿ ಇಷ್ಟೆಲ್ಲಾ ಗುರುತಿಸಿಕೊಂಡಿದ್ದ ಭಾಸ್ಕರ್‌ ಅವರ ಅಂತ್ಯಕ್ರಿಯೆಗೆ ಯಾವ ಕನ್ನಡ ನಟ, ನಿರ್ಮಾಪಕ, ನಿರ್ದೇಶಕರು ಬಾರದೆ ಇರುವುದು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಒಳಗಾಗುತ್ತಿದೆ.

ನೆಟಿಜನ್ಸ್‌ ವ್ಯಾಪಕ ಟೀಕೆ

ಬದುಕಿದ್ದಾಗ ಹಿಂದೆ ಅಲೆದಾಡುವ ಜನರು ಸತ್ತಾಗ ಏನೋ ಗೊತ್ತಿಲ್ಲದಂತೆ ಇರುತ್ತಾರೆ. ಸೌಜನ್ಯಕ್ಕಾದರೂ ಯಾವ ನಟನ ಸೋಷಿಯಲ್‌ ಮೀಡಿಯಾದಲ್ಲೂ ಭಾಸ್ಕರ್‌ ಅವರ ನಿಧನಕ್ಕೆ ಸಂತಾಪ ಸೂಚಿಸುವ ಪೋಸ್ಟ್‌ ಇಲ್ಲ ಎಂದು ಜನರು ಚಿತ್ರರಂಗದ ಮಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾಸ್ಕರ್‌ ಅವರ ತಾಯಿಯೇ ಮಗನ ಮೃತದೇಹಕ್ಕೆ ಪೂಜೆ ಮಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸಿನಿಮಾರಂಗದಲ್ಲಿ ಶ್ರೀಮಂತ ನಟರಿಗಷ್ಟೇ ಬೆಲೆ ಹಣವಿಲ್ಲದಿದ್ದರೆ ಯಾರೂ ಬೆಲೆ ಕೊಡುವುದಿಲ್ಲ ಎಂದು ಜನರು ಕಾಮೆಂಟ್‌ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹೆಚ್ಚಿನ ಮನರಂಜನೆ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ