logo
ಕನ್ನಡ ಸುದ್ದಿ  /  ಮನರಂಜನೆ  /  ಅವರಿಗೆ ಬೆಡ್‌ ಕೊಟ್ಟಿರಲಿಲ್ಲ, ಸಾಮಾನ್ಯ ಕೈದಿಯಂತೇ ಇದ್ರು; ದರ್ಶನ್‌ ಜೈಲಿನ ದಿನಗಳನ್ನು ನೆನೆದ ಪರಪ್ಪನ ಅಗ್ರಹಾರ ಮಾಜಿ ಜೈಲರ್‌ ತಿಮ್ಮಯ್ಯ

ಅವರಿಗೆ ಬೆಡ್‌ ಕೊಟ್ಟಿರಲಿಲ್ಲ, ಸಾಮಾನ್ಯ ಕೈದಿಯಂತೇ ಇದ್ರು; ದರ್ಶನ್‌ ಜೈಲಿನ ದಿನಗಳನ್ನು ನೆನೆದ ಪರಪ್ಪನ ಅಗ್ರಹಾರ ಮಾಜಿ ಜೈಲರ್‌ ತಿಮ್ಮಯ್ಯ

HT Kannada Desk HT Kannada

Oct 05, 2023 05:21 PM IST

google News

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲಿನ ದಿನಗಳನ್ನು ನೆನೆದ ಅಂದಿನ ಜೈಲರ್‌ ತಿಮ್ಮಯ್ಯ

  • ಸಾಮಾನ್ಯ ಕೈದಿಯಂತೆ ಅವರು ಚಾಪೆ ಹಾಸಿ ನೆಲದ ಮೇಲೆ ಕುಳಿತಿರುತ್ತಿದ್ದರು, ಅದರಲ್ಲೇ ಮಲಗುತ್ತಿದ್ದರು. ಅವರಿಗೂ ಬೆಡ್‌ ಕೊಟ್ಟಿರಲಿಲ್ಲ. ಊಟ ಕೂಡಾ ಮನೆಯಿಂದ ಬರುತ್ತಿತ್ತು. ಬೆಳಗ್ಗೆ ತಂದುಕೊಟ್ಟದ್ದನ್ನೇ ಇಡೀ ದಿನ ತಿನ್ನುತ್ತಿದ್ದರು.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲಿನ ದಿನಗಳನ್ನು ನೆನೆದ ಅಂದಿನ ಜೈಲರ್‌ ತಿಮ್ಮಯ್ಯ
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲಿನ ದಿನಗಳನ್ನು ನೆನೆದ ಅಂದಿನ ಜೈಲರ್‌ ತಿಮ್ಮಯ್ಯ (ಮಾಹಿತಿ ಕೃಪೆ: Janajagruthi Maadhyama)

ನಟ ದರ್ಶನ್ ಕಷ್ಟಪಟ್ಟು ಮೇಲೆ ಬಂದವರು. ಸ್ಟಾರ್ ನಟನಾಗಿ ಹೆಸರು ಮಾಡುವ ಮುನ್ನ ಆತ ಎಷ್ಟೆಲ್ಲಾ ಅವಮಾನ ಎದುರಿಸಿದ್ದರು ಎಂಬುದನ್ನು ಸ್ವತ: ದರ್ಶನ್‌ ಅನೇಕ ಇಂಟರ್‌ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಕೆಲವೊಂದು ವಿವಾದಕ್ಕೂ ಸಿಲುಕಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಸಂಬಂಧ ದರ್ಶನ್ ಕೆಲವು ದಿನಗಳ ಕಾಲ ಜೈಲಿನಲ್ಲಿದ್ದರು.

ಪರಪ್ಪನ ಅಗ್ರಹಾರದಲ್ಲಿ ಜೈಲರ್‌ ಆಗಿದ್ದ ತಿಮ್ಮಯ್ಯ

ದರ್ಶನ್‌ ಜೈಲಿನಲ್ಲಿದ್ದಾಗ ಏನೆಲ್ಲಾ ನಡೆಯಿತು, ಅವರು ಯಾವ ರೀತಿ ಇದ್ದರು ಎಂಬುದನ್ನು ಅಂದು ಪರಪ್ಪನ ಅಗ್ರಹಾರ ಜೈಲಿನ ಜೈಲರ್‌ ಆಗಿದ್ದ ತಿಮ್ಮಯ್ಯ ನೆನಪಿಸಿಕೊಂಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಜೈಲರ್‌ ತಿಮ್ಮಯ್ಯ ಅವರು ನೀಡಿದ ಸಂದರ್ಶನದಲ್ಲಿ ದರ್ಶನ್ ಜೈಲಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗುತ್ತಿದೆ.

ದರ್ಶನ್‌ ಹೆಚ್ಚು ಮಾತನಾಡುತ್ತಿರಲಿಲ್ಲ

''ಬಿಎಸ್‌ ಯಡಿಯೂರಪ್ಪ ಇದ್ದ ಪಕ್ಕದ ಸೆಲ್‌ನಲ್ಲಿ ದರ್ಶನ್‌, ಕಟ್ಟಾ ಜಗದೀಶ್‌ ಹಾಗೂ ಇನ್ನಿಬ್ಬರು ಒಟ್ಟಿಗೆ ಇದ್ದರು. ದರ್ಶನ್ ಬಹಳ ಮುಗ್ಧ ವ್ಯಕ್ತಿ. ಹೆಚ್ಚು ಮಾತನಾಡುತ್ತಿರಲಿಲ್ಲ, ಸದಾ ಮೌನವಾಗಿರುತ್ತಿದ್ದರು. ಅವರಿಗೆ ತೆಲುಗು ಚೆನ್ನಾಗಿ ಬರುತ್ತಿತ್ತು. ನಾನೂ ಕೂಡಾ ತೆಲುಗಿನಲ್ಲಿ ಮಾತನಾಡಿದೆ. ಹೇಗಿದ್ದೀರಿ ಎಂದು ಕೇಳಿದೆ, ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಿ ಎಂದರು. ಏಕೆ ಹೀಗೆ ಮಾಡಿಬಿಟ್ರಿ, ಪಬ್ಲಿಕ್‌ನಲ್ಲಿ ನಿಮ್ಮ ಇಮೇಜ್‌ ಹೇಗಿದೆ ಬಟ್‌ ನೀವು ಈ ರೀತಿ ಮಾಡಿಬಿಟ್ರಲ್ಲಾ ಎಂದು ಅವರಲ್ಲಿ ಕೇಳಿದೆ. ಅದಕ್ಕೆ ಉತ್ತರಿಸಿದ ಅವರು, ಏನೂ ಕೆಟ್ಟ ಸಮಯ ಆಗಿಹೋಯ್ತ ಸರ್‌, ಈಗ ನಮ್ಮ ಪತ್ನಿಯೇ ಜಾಮೀನಿಗೆ ಓಡಾಡುತ್ತಿದ್ದಾರೆ ಎಂದರು. ಇನ್ಮುಂದೆ ಇಬ್ಬರೂ ಚೆನ್ನಾಗಿರಿ ಎಂದೆ, ಅವರೂ ಸರಿ'' ಎಂದರು.

ಚಾಪೆ ಮೇಲೆ ಮಲಗುತ್ತಿದ್ದರು

''ಸಾಮಾನ್ಯ ಕೈದಿಯಂತೆ ಅವರು ಚಾಪೆ ಹಾಸಿ ನೆಲದ ಮೇಲೆ ಕುಳಿತಿರುತ್ತಿದ್ದರು, ಅದರಲ್ಲೇ ಮಲಗುತ್ತಿದ್ದರು. ಅವರಿಗೂ ಬೆಡ್‌ ಕೊಟ್ಟಿರಲಿಲ್ಲ. ಊಟ ಕೂಡಾ ಮನೆಯಿಂದ ಬರುತ್ತಿತ್ತು. ಬೆಳಗ್ಗೆ ತಂದುಕೊಟ್ಟದ್ದನ್ನೇ ಇಡೀ ದಿನ ತಿನ್ನುತ್ತಿದ್ದರು. ಅವರು ಹೆಚ್ಚಿಗೆ ಊಟ ಕೂಡಾ ಮಾಡುತ್ತಿರಲಿಲ್ಲ. ಹಾಗೇ ಅವರು ರಿಲೀಸ್‌ ಆಗುವ ದಿನ ಎರಡೂ ಕಾಲಿಲ್ಲದ ಒಬ್ಬರು ಅಭಿಮಾನಿ ಚಾಮರಾಜನಗರದಿಂದ ಪರಪ್ಪನ ಅಗ್ರಹಾರ ಜೈಲಿನವರೆಗೆ ಬಂದಿದ್ದರು. ಆತನನ್ನು ನೋಡಿ ನನಗೆ ಅಯ್ಯೋ ಎನಿಸಿತು. ದರ್ಶನ್‌ಗೆ ವಿಚಾರ ತಿಳಿಸಿದೆ, ಅವರು ತಮ್ಮ ಅಭಿಮಾನಿಯನ್ನು ನೋಡಲು ಒಪ್ಪಿಕೊಂಡರು.

ತಮ್ಮನ್ನು ನೋಡಲು ಬಂದ ಅಭಿಮಾನಿಯನ್ನು ಭೇಟಿ ಆಗಿದ್ದ ದರ್ಶನ್‌

ಆಗ ಅವರು ಜೈಲಿನಿಂದ ಹೊರ ಬರಲು ಇನ್ನು 15 ನಿಮಿಷಗಳು ಬಾಕಿ ಇತ್ತು. ತಮಗಾಗಿ ಬಂದ ಅಭಿಮಾನಿಯನ್ನು ಮಾತನಾಡಿಸಿ, ಆತನಿಗೆ ತಮ್ಮ ಕೈಯ್ಯಲ್ಲಿದ್ದ 5 ಸಾವಿರ ಹಣ ನೀಡಿದರು. ನಾವು ಹಾಗೂ ಅಲ್ಲಿದ್ದವರು ಸ್ವಲ್ಪ ಹಣ ಕಲೆಕ್ಟ್‌ ಮಾಡಿ ಆತನಿಗೆ ನೀಡಿದೆವು. ಕೋರ್ಟಿಗೆ ಕೈದಿಗಳಿಗೆ ಕರೆದೊಯ್ಯವ ವ್ಯಾನ್‌ನಲ್ಲಿ ಆತನನ್ನು ಮೆಜೆಸ್ಟಿಕ್‌ಗೆ ಕಳಿಸಿದೆವು'' ಎಂದು ಜೈಲರ್‌ ತಿಮ್ಮಯ್ಯ ಅಂದಿನ ದಿನವನ್ನು ನೆನಪಿಸಿಕೊಂಡಿದ್ದಾರೆ.

ಕಾಟೇರ ಚಿತ್ರದಲ್ಲಿ ಬ್ಯುಸಿ

ನಟ ದರ್ಶನ್ ಸದ್ಯಕ್ಕೆ 'ಕಾಟೇರ' ಸಿನಿಮಾ ಬ್ಯುಸಿಯಲ್ಲಿದ್ದಾರೆ. ಚಿತ್ರವನ್ನು ರಾಕ್‌ ಲೈನ್‌ ವೆಂಕಟೇಶ್‌ ನಿರ್ಮಿಸುತ್ತಿದ್ದು ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳುತ್ತಿದ್ಧಾರೆ. ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ನಟಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ