Puneeth Rajkumar: ಇಂದು ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ; ಸ್ಮಾರಕದತ್ತ ಜನಸಾಗರ, ಅಪ್ಪು ನೆನಪಲ್ಲಿ ವಿವಿಧ ಕಾರ್ಯಕ್ರಮ, ಉದ್ಯೋಗಮೇಳ
Oct 29, 2023 07:35 AM IST
Puneeth Rajkumar: ಇಂದು ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ
- Puneeth Rajkumar 2nd Death Anniversary: ಕನ್ನಡ ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನರಾಗಿ ಇಂದಿಗೆ ಎರಡು ವರ್ಷವಾಗುತ್ತಿದ್ದು, ಇಂದು ಎಲ್ಲೆಡೆ ಅಪ್ಪು ನೆನಪಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ರಾಜ್ ಕುಟುಂಬವು ಅಪ್ಪು ಸ್ಮಾರಕ ನಿರ್ಮಿಸಿದೆ.
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಎರಡನೇ ವರ್ಷದ ಪುಣ್ಯಸ್ಮರಣೆ ಇಂದು ನಡೆಯುತ್ತಿದ್ದು, ಪವರ್‌ಸ್ಟಾರ್ ನೆನಪಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇಂದು ಬೆಳಗ್ಗೆ 9 - 10 ಗಂಟೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಒಳಗೊಂಡಂತೆ ಅಪ್ಪು ಕುಟುಂಬ, ಬಂಧುಬಳಗ, ಸಾವಿರಾರು ಅಭಿಮಾನಿಗಳು ಸಮಾದಿ ಸ್ಥಳಕ್ಕೆ ಆಗಮಿಸಲಿದ್ದಾರೆ. ನಾಡಿನ ವಿವಿಧೆಡೆ ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ಅನ್ನದಾನ, ಸಾಮಾಜಿಕ ಕಾರ್ಯಗಳು, ಉದ್ಯೋಗಮೇಳ ಇತ್ಯಾದಿಗಳನ್ನು ಆಯೋಜಿಸಲಾಗಿದ್ದು, ಅಭಿಮಾನಿಗಳು ಅಪ್ಪು ನೆನಪಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಪುನೀತ್ ರಾಜ್‌ಕುಮಾರ್ ಸ್ಮಾರಕ
ಇಂದು ಪುನೀತ್ ರಾಜ್‌ಕುಮಾರ್ ಎರಡನೇ ವರ್ಷದ ಪುಣ್ಯಸ್ಮರಣೆಗಾಗಿ ಬೆಂಗಳೂರಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕ ಸಿಂಗಾರಗೊಂಡಿದೆ. ಡಾ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಸಮಾದಿ ಬಳಿಯೇ ಪುನೀತ್ ರಾಜ್‌ಕುಮಾರ್ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಬಿಳಿ ಮಾರ್ಬಲ್ಸ್‌ನಲ್ಲಿ ಅಪ್ಪು ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಅಪ್ಪು ಫೋಟೋ ಕೂಡ ಇದೆ. ಡಾ. ರಾಜ್‌ಕುಮಾರ್ ಸ್ಮಾರಕದ ರೀತಿಯೇ ಅಪ್ಪು ಸ್ಮಾರಕ ನಿರ್ಮಾಣ ಮಾಡಲಾಗಿದೆ. ಸ್ಮಾರಕದ ಸುತ್ತ ಬಿಳಿಬಣ್ಣದ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಇಂದು ಲಕ್ಷಾಂತರ ಜನರು ಸಮಾದಿ ಬಳಿಗೆ ಆಗಮಿಸುವ ನಿರೀಕ್ಷೆಯಿದೆ.
ಸಮಾದಿಯತ್ತ ರಾಜ್ ಕುಟುಂಬ
ಇಂದು ಬೆಳಗ್ಗೆ 9ರಿಂದ 10 ಗಂಟೆ ಆಸುಪಾಸಿನಲ್ಲಿ ಪುನೀತ್ ರಾಜ್‌ಕುಮಾರ್ ಕುಟುಂಬವು ಸಮಾದಿ ಸ್ಥಳಕ್ಕೆ ಆಗಮಿಸಲಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘಣ್ಣ, ಶಿವಣ್ಣ ಸೇರಿದಂತೆ ಕುಟುಂಬ ವರ್ಗ, ಬಂಧುಬಳಗ, ಸಾವಿರಾರು ಅಭಿಮಾನಿಗಳು ಸಮಾದಿ ಸ್ಥಳಕ್ಕೆ ಆಗಮಿಲಿದ್ದಾರೆ. ವರದಿಗಳ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಜನರು ಸ್ಮಾರಕದ ಬಳಿ ಸೇರುವ ನಿರೀಕ್ಷೆಯಿದೆ.
ಅಕ್ಟೋಬರ್ 29, 2021 ಅಪ್ಪು ನಿಧನ
ಅಕ್ಟೋಬರ್ 29, 2021ರ ಬೆಳಗ್ಗೆ 11.49 ಗಂಟೆಗೆ ಪುನೀತ್ ರಾಜ್‌ಕುಮಾರ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು. ಅಂದು, ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ-2' ಸಿನಿಮಾ ಬಿಡುಗಡೆಯಾಗಿತ್ತು. ಭಜರಂಗಿ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿದ್ದ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಎಲ್ಲರಿಗೂ ಆಘಾತ ತಂದಿತ್ತು. ಇಂದಿಗೆ ಅಪ್ಪು ನಮ್ಮನ್ನು ಅಗಲಿ 2 ವರ್ಷ ತುಂಬಿದೆ. ಅಭಿಮಾನಿಗಳು, ಕುಟುಂಬದವರು ಪ್ರತಿದಿನ ಅಪ್ಪುವನ್ನು ನೆನೆಯುತ್ತಿದ್ದಾರೆ.
ಅಪ್ಪು ನೆನಪಲ್ಲಿ ವಿವಿಧ ಕಾರ್ಯಕ್ರಮ
ಒಂದೆಡೆ ಪುನೀತ್ ರಾಜ್‌ಕುಮಾರ್ ನೆನಪಲ್ಲಿ ಅಪ್ಪು ಸ್ಮಾರಕದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಇದೇ ಸಮಯದಲ್ಲಿ ನಾಡಿನ ವಿವಿಧೆಡೆ ಅಪ್ಪು ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸೋಷಿಯಲ್ ಮೀಡಿಯಾ ಅಪ್‌ಡೇಟ್ ಪ್ರಕಾರ ಬೆಂಗಳೂರಿನ ರಾಜಾಜಿನಗರದಲ್ಲಿ ಕ್ಯಾಡ್‌ನೆಸ್ಟ್ ಎಂಬ ಸಂಸ್ಥೆಯೊಂದು ಬೃಹತ್ ಉದ್ಯೋಗಮೇಳ ಆಯೋಜಿಸಿದೆ. ಕ್ಯಾಡ್‌ನೆಸ್ಟ್ ರಾಜಾಜಿನಗರ ಶಾಖೆಯಲ್ಲಿ ಪವರ್‌ಸ್ಟಾರ್ ಉದ್ಯೋಗಮೇಳ ನಡೆಯಲಿದೆ. ಕಳೆದ ವರ್ಷವೂ ಈ ಸಂಸ್ಥೆ ಉದ್ಯೋಗ ಮೇಳ ಆಯೋಜಿಸಿತ್ತು. ಇದೇ ರೀತಿ, ಕರ್ನಾಟಕದ ವಿವಿಧೆಡೆ ಅಪ್ಪು ನೆನಪಲ್ಲಿ ರಕ್ತದಾನ, ಅನ್ನದಾನ, ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಅಪ್ಪು ಅಭಿಮಾನಿಗಳು ಆಯೋಜಿಸಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪುನೀತ್ ಆಗಿಯೇ ಕಾಣಿಸಿಕೊಂಡ, ಮೊದಲ ಸಾಕ್ಷ್ಯಚಿತ್ರ ‘ಗಂಧದ ಗುಡಿ’̤ ಕಳೆದ ವರ್ಷದ ಅಕ್ಟೋಬರ್ 28ರಂದು ಅಂದರೆ, ಪುನೀತ್ ಮೊದಲ ಪುಣ್ಯಸ್ಮರಣೆ ನಿಮಿತ್ತ ಈ ಚಿತ್ರ ಬಿಡುಗಡೆ ಆಗಿತ್ತು. ನಿರ್ದೇಶಕ ಅಮೋಘ ವರ್ಷ ಅವರ ನಿರ್ದೇಶನಕ್ಕೂ ಮೆಚ್ಚುಗೆ ಸಿಕ್ಕಿತ್ತು. ಅದಾದ ಬಳಿಕ ಅಮೆಜಾನ್ ಪ್ರೈಂ ಒಟಿಟಿಯಲ್ಲಿಯೂ ಸ್ಟ್ರೀಮ್ ಆಗಿ ಯಶಸ್ಸು ಪಡೆದುಕೊಂಡಿತ್ತು. ಇದೀಗ ಇದೇ ಸಾಕ್ಷ್ಯಚಿತ್ರ ಕಿರುತೆರೆಗೆ ಆಗಮಿಸುತ್ತಿದೆ. ಈ ಕುರಿತ ವರದಿ ಇಲ್ಲಿದೆ ಓದಿ.