For Registration Movie: ‘ಫಾರ್ ರಿಜಿಸ್ಟ್ರೇಷನ್’ ಚಿತ್ರಕ್ಕೆ 25 ದಿನಗಳ ಸಂಭ್ರಮ; ನೆನಪಿನ ಕಾಣಿಕೆ ನೀಡಿ ಖುಷಿಪಟ್ಟ ತಂಡ
Apr 06, 2024 07:00 AM IST
For Registration Movie: ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾಕ್ಕೆ 25 ದಿನಗಳ ಸಂಭ್ರಮ; ನೆನಪಿನ ಕಾಣಿಕೆ ನೀಡಿ ಖುಷಿಪಟ್ಟ ತಂಡ
- ಪೃಥ್ವಿ ಅಂಬಾರ್ ಮತ್ತು ಮಿಲನಾ ನಾಗರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿದ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಇಡೀ ತಂಡ ನೆನಪಿನ ಕಾಣಿಕೆ ನೀಡಿ ಸಂಭ್ರಮಿಸಿದೆ.
For Registration Movie: ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ನಟನೆಯ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಚಿತ್ರತಂಡ ಈ ಸಂಭ್ರಮವನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಚಿತ್ರ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಿದೆ ಚಿತ್ರತಂಡ.
ಬಳಿಕ ಮಾತನಾಡಿದ ನಿರ್ಮಾಪಕ ನವೀನ್ ರಾವ್, ಪ್ರಾರಂಭದ ದಿನದಲ್ಲೆ ಬಹುತೇಕ ಕಡೆ ನಮ್ಮ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಪರಭಾಷಾ ಸಿನಿಮಾಗಳ ಅಬ್ಬರದ ನಡುವೆ ಫಾರ್ ರಿಜಿಸ್ಟ್ರೇಷನ್ ಸಿನಿಮಾ 25 ದಿನ ಪೂರೈಸಿದೆ. ನಮ್ಮ ಮೊದಲ ಸಿನಿಮಾಗೆ ಎಲ್ಲೆಡೆಯಿಂದ ಬೆಂಬಲ ಸಿಕ್ಕಿದೆ. ಚಿತ್ರ ಗೆದ್ದಿರುವುದು ಖುಷಿ ಕೊಟ್ಟಿದೆ ಎಂದರು.
ನಿರ್ದೇಶಕ ನವೀನ್ ದ್ವಾರಕನಾಥ್, ನನ್ನ ಮೊದಲ ಕನಸಿಗೆ ನವೀನ್ ಜೊತೆಯಾದರು. ನಾವು ಏನೇ ಕಥೆ ಬರೆದರು. ಕಥೆಗೆ ರೂಪ ಕೊಡುವುದು ಪಾತ್ರಧಾರಿಗಳು. ಪಿಕ್ಚರ್ ಮಾಡುವುದು ಮುಖ್ಯವಲ್ಲ. ರಿಲೀಸ್ ಮಾಡುವುದು ಎಷ್ಟು ಮುಖ್ಯ ಎನ್ನುವುದು ಅರ್ಥ ಆಗಿದೆ. ಜೂನ್ ನಲ್ಲಿ ಸಿನಿಮಾ ತೆಲುಗಿಗೆ ಡಬ್ ಆಗಲಿದೆ. 25 ದಿನ ಸೆಲೆಬ್ರೆಟ್ ಮಾಡುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಈಗ ಖುಷಿಯಾಗುತ್ತಿದೆ ಎಂದು ಸಂತಸ ಹಂಚಿಕೊಂಡರು.
ನಟ ಪೃಥ್ವಿ ಅಂಬರ್ ಮಾತನಾಡಿ, ಸಿನಿಮಾ ಗೆದ್ದಿರುವುದು ತುಂಬಾ ಖುಷಿ ಇದೆ. ಇದೊಂದು ದೊಡ್ಡ ಜರ್ನಿ. ನಿರ್ದೇಶಕರು ನಿರ್ಮಾಪಕರು ಇಬ್ಬರು ಫ್ಯಾಷನೇಟೇಡ್. ಇಬ್ಬರು ಇದೇ ರೀತಿ ಮುಂದೆ ಸಾಗಲಿ. ನಿಮ್ಮ ಮುಂದಿನ ಸಿನಿಮಾ ಶತದಿನೋತ್ಸವ ಆಚರಿಸುವಂತಾಗಲಿ ಎಂದರು ನಾಯಕ ಪೃಥ್ವಿ.
ನವೀನ್ ದ್ವಾರಕಾನಾಥ್ ನಿರ್ದೇಶನ
ಸಂಬಂಧ ಹಾಗೂ ಭಾವನಾತ್ಮಕ ಎಳೆಯನ್ನು ಒಳಗೊಂಡ ಫಾರ್ ರಿಜಿಸ್ಟ್ರೇಷನ್ ಸಿನಿಮಾಗೆ ನವೀನ್ ದ್ವಾರಕನಾಥ್ ಆಕ್ಷನ್ ಕಟ್ ಹೇಳಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಒಂದೊಳ್ಳೆ ಕಥೆ ಮೂಲಕ ನವೀನ್ ಗೆದ್ದಿದ್ದಾರೆ. ನವೀನ್ ಕನಸಿಗೆ ಅವರ ಗೆಳೆಯರಾದ ನವೀನ್ ರಾವ್ ಸಾಥ್ ಕೊಟ್ಟಿದ್ದರು. ಫಾರ್ ರಿಜಿಸ್ಟ್ರೇಷನ್ ಚಿತ್ರಕ್ಕೆ ನವೀನ್ ರಾವ್ ಹಣ ಹಾಕುವ ಮೂಲಕ ಗೆಳೆಯನ ಚೊಚ್ಚಲ ಪ್ರಯತ್ನಕ್ಕೆ ಬೆನ್ನುಲಬಾಗಿ ನಿಂತಿದ್ದರು.
ಪೃಥ್ವಿಗೆ ಜೋಡಿಯಾಗಿದ್ದ ಮಿಲನಾ
ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕನಾದರೆ, ಮಿಲನಾ ನಾಗರಾಜ್ ನಾಯಕಿಯಾಗಿ ನಟಿಸಿದ್ದರು. ಇನ್ನುಳಿದಂತೆ ತಬಲಾ ನಾಣಿ, ರವಿಶಂಕರ್, ಸುಧಾ ಬೆಳವಾಡಿ ಪ್ರಮುಖ ಪಾತ್ರದಲ್ಲಿದ್ದರು. ನವೀನ್ ದ್ವಾರಕನಾಥ್ ಕಥೆ ಬರೆದು ನಿರ್ದೇಶನ ಮಾಡಿದರೆ, ಆರ್.ಕೆ ಹರೀಶ್ ಸಂಗೀತ, ಛಾಯಾಗ್ರಹಣ ಅಭಿಷೇಕ್ ಜಿ.ಕಾಸರಗೋಡು , ಮನು ಶೇಡ್ಗರ್ ಸಂಕಲನದ ಜವಾಬ್ದಾರಿ ಹೊತ್ತಿದ್ದರು.