Toby Trailer Review: ತಣ್ಣಗಾದ್ರೆ ಸೌದೆಗೇನು ಬೆಲೆ? ಟೋಬಿ ಕಣ್ ಮುಚ್ಬೇಕಿತ್ತು, ಆದ್ರೆ ಅವನು ಕಣ್ ಬಿಟ್ಟಾಗಿದೆ; ಟೋಬಿ ಟ್ರೇಲರ್ ವಿಮರ್ಶೆ
Aug 04, 2023 05:28 PM IST
ತಣ್ಣಗಾದ್ರೆ ಸೌದೆಗೇನು ಬೆಲೆ? ಟೋಬಿ ಕಣ್ ಮುಚ್ಬೇಕಿತ್ತು, ಆದ್ರೆ ಅವನು ಕಣ್ಣು ಬಿಟ್ಟಾಗಿದೆ; ಟೋಬಿ ಟ್ರೇಲರ್ ವಿಮರ್ಶೆ
- ಒಂದು ಕಡೆ ರೌದ್ರಾವತಾರ ಮತ್ತೊಂದು ಕಡೆ ಆತನ ಮುಗ್ಧತೆ. ಇವೆರಡರ ಹಳಿಯ ಮೇಲೆ ಒಂದು ಸೆಳೆತ, ನವಿರಾದ ಕಿರು ಪ್ರೇಮಕಥೆ ಬಳಿಕ ಮದುವೆ ಮತ್ತು ಮಕ್ಕಳು. ಹೀಗೆ ತಣ್ಣಗಾಗುತ್ತದೆ ಕಥೆ. ತಣ್ಣಗಾದ್ರೆ ಸೌದೆಗೇನು ಬೆಲೆ? ಅದಕ್ಕೆ ಬೆಂಕಿ ಬೀಳಬೇಕಲ್ಲವೇ? ಆ ಬೆಂಕಿಯೂ ಬೀಳುತ್ತದೆ. ಒಂದು ಸೇಡಿನ ಕಥೆ ಅಲ್ಲಿಂದ ಶುಭಾರಂಭ ಮತ್ತು ಅಂತ್ಯ.
Toby Trailer Review: ಸಿನಿಮಾ ಹೀರೋ ಎಂದರೆ ಆರಡಿ ಇರಬೇಕು, ಕಟ್ಟುಮಸ್ತಾದ ಮೈಕಟ್ಟು, ಹಾಡುಗಳಿಗೆ ಮಸ್ತ್ ಡಾನ್ಸ್, ಸಾಹಸ ದೃಶ್ಯಗಳಲ್ಲಿ ಜಬರ್‌ದಸ್ತ್ ಫೈಟಿಂಗ್ ಮಾಡಬೇಕು, ಖಡಕ್ ಡೈಲಾಗ್ ಬಾಯಿಂದ ಹೊಮ್ಮಬೇಕು.. ನಾಯಕ ನಟ ಎಂದರೆ ಹೀಗೆ ಒಂದಷ್ಟು ಸಿದ್ದ ಸೂತ್ರಗಳು ಇನ್ನೂ ಸಿನಿಮಾರಂಗದಲ್ಲಿ ಚಾಲ್ತಿಯಲ್ಲಿವೆ. ಕೆಲವು ನಟರನ್ನು ಈ ಕಟ್ಟುಪಾಡುಗಳೇ ಕೈ ಹಿಡಿದು ಮುಂದಕ್ಕೆ ಕರೆದೊಯ್ಯುತ್ತಿವೆ. ಆದರೆ, ಈ ಮೇಲಿನ ಯಾವ ಗುಣವೂ ಇಲ್ಲದ, ತುಂಬ ವಿಭಿನ್ನವಾಗಿಯೇ ತಮ್ಮನ್ನು ನಾಡಿನ ಪ್ರೇಕ್ಷಕರಿಗೆ ಪರಿಚಯಿಸಿಕೊಂಡಿದ್ದಾರೆ ರಾಜ್ ಬಿ. ಶೆಟ್ಟಿ.
ಮೊದಲ ಸಿನಿಮಾದಿಂದಲೇ ಈ ನಟನೊಳಗೆ ಏನೋ ಇದೆ ಎಂದು ಪ್ರೇಕ್ಷಕ ನಂಬಿದ್ದಾನೆ. ಅಚ್ಚರಿಯ ವಿಚಾರ ಏನೆಂದರೆ ಅಲ್ಲಿಂದ ಇಲ್ಲಿಯವರೆಗೂ ಅದು ಹುಸಿಯಾಗಿಲ್ಲ. ಒಂದಕ್ಕಿಂತ ಒಂದು ವಿಭಿನ್ನ ಕಥೆಗಳು, ಪಾತ್ರಗಳ ಮೂಲಕ ಬರುವ ರಾಜ್ ಶೆಟ್ಟಿ, ಪ್ರೇಕ್ಷಕರಿಗೆ ಮನರಂಜನೆ ನೀಡಿಯೇ ಶುಭಂ ಹೇಳಿದ್ದುಂಟು. ಸೌಮ್ಯ ಮೊಗದಲ್ಲೂ ಕ್ರೌರ್ಯವನ್ನು ಉಕ್ಕಿಸುವ ಈ ನಟನ ಮೇಲೀಗ ಮತ್ತೆ ಇಡೀ ಕರುನಾಡಿನ ಕಣ್ಣು ಬಿದ್ದಿದೆ.
ಆರಂಭದಿಂದಲೂ ಕುತೂಹಲ ಮೂಡಿಸುತ್ತಲೇ ಬಂದ ಟೋಬಿ ಸಿನಿಮಾ ಇನ್ನೇನು ಬಿಡುಗಡೆಗೆ ಹತ್ತಿರ ಬಂದಿದೆ. ಪೋಸ್ಟರ್, ಟೀಸರ್ ಹೀಗೆ ಹಲವು ಕೌತುಕ ವಿಚಾರಗಳನ್ನು ಪ್ರೇಕ್ಷಕನ ಮಡಿಲಿಗೆ ಹಾಕುತ್ತಲೇ ಬಂದಿದ್ದ ರಾಜ್ ಶೆಟ್ಟಿ, ಇದೀಗ ಟ್ರೇಲರ್ ಮೂಲಕ ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದೇವೆ ಎಂಬ ಅಂಶವನ್ನು ತೆರೆದಿಟ್ಟಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿಯ ಮುಗ್ಧತೆಯನ್ನು ದುರುಪಯೋಗ ಮಾಡಿಕೊಂಡಾಗ ಆತನೊಳಗಿನ ರಕ್ಕಸ ಕ್ರೌರ್ಯ ಹೇಗೆ ಹೊರಹೊಮ್ಮುತ್ತದೆ ಎಂಬುದನ್ನು ಟೋಬಿ ಟ್ರೇಲರ್‌ನ ಒಂದೆಳೆ.
ವಿಶೇಷ ಏನೆಂದರೆ ಹಿಂದೆಂದೂ ಕಾಣದ ಗೆಟಪ್, ರಾಜ್ ಶೆಟ್ರಿಗೆ ಮಜವಾಗಿಯೇ ಒಪ್ಪಿದೆ. ಈ ವರೆಗೂ ಬೋಳು ತಲೆಯಲ್ಲಿಯೇ ಕಾಣಿಸಿಕೊಂಡಿದ್ದ ಈ ನಟ, ಇದೀಗ ತಲೆತುಂಬ ಕೂದಲು ಬೆಳೆಸಿಕೊಂಡು, ಟೋಬಿಯ ಮತ್ತೊಂದು ಅವತಾರವಾಗಿದ್ದಾರೆ. "ಹರಕೆ ಕುರಿ ತಪ್ಪಿಸಿಕೊಂಡಿದೆ. ಯಾವುದೇ ಕಾರಣಕ್ಕೂ ಕುರಿ ಮತ್ತೆ ಊರಿಗೆ ಕಾಲಿಡ್ಬಾರ್ದು. ಕುರಿ ಹಿಂದೆ ಬಂದ್ರೆ. ಅದು ಕುರಿ ಆಗಿರಲ್ಲ, ಮಾರಿ ಆಗಿರುತ್ತೆ.. ಹೀಗೊಂದು ಡೈಲಾಗ್ ಮೂಲಕವೇ ಟೋಬಿ ಸಿನಿಮಾದ ಟ್ರೇಲರ್ ಆರಂಭವಾಗುತ್ತದೆ. ಒಂದರ್ಥದಲ್ಲಿ ಇಡೀ ಚಿತ್ರದ ಜೀವಾಳವೂ ಈ ಒಂದು ಡೈಲಾಗ್ ಆಗಲೂ ಬಹುದು.
ಹೀಗೆ ತೆರೆದುಕೊಳ್ಳುವ ಟ್ರೇಲರ್‌ನಲ್ಲಿ ಟೋಬಿಯ ಹಲವು ಮುಖಗಳೂ ಕಾಣ ಸಿಗುತ್ತವೆ. ಒಂದು ಕಡೆ ರೌದ್ರಾವತಾರ ಮತ್ತೊಂದು ಕಡೆ ಆತನ ಮುಗ್ಧತೆ. ಇವೆರಡರ ಹಳಿಯ ಮೇಲೆ ಒಂದು ಸೆಳೆತ, ನವಿರಾದ ಕಿರು ಪ್ರೇಮಕಥೆ ಬಳಿಕ ಮದುವೆ ಮತ್ತು ಮಕ್ಕಳು. ಹೀಗೆ ತಣ್ಣಗಾಗುತ್ತದೆ ಕಥೆ. ತಣ್ಣಗಾದ್ರೆ ಸೌದೆಗೇನು ಬೆಲೆ? ಅದಕ್ಕೆ ಬೆಂಕಿ ಬೀಳಬೇಕಲ್ಲವೇ? ಆ ಬೆಂಕಿಯೂ ಬೀಳುತ್ತದೆ. ಒಂದು ಸೇಡಿನ ಕಥೆ ಅಲ್ಲಿಂದ ಶುಭಾರಂಭ ಮತ್ತು ಅಂತ್ಯ.
ಹೀಗೆ ಹಲವು ಆಯಾಮಗಳಲ್ಲಿ ಟೋಬಿ ಟ್ರೇಲರ್ ವಿಶೇಷ ಎನಿಸುತ್ತದೆ. ನೋಡುಗನ ಕಣ್ಣರಳಿಸುವಂತಿದೆ. ಇಲ್ಲಿ ನಟಿ ಚೈತ್ರಾ ಆಚಾರ್ ಬೇರೆ ರೀತಿಯೇ ಕಾಣಿಸುತ್ತಾರೆ. ಗೋಪಾಲಕೃಷ್ಣ ದೇಶಪಾಂಡೆ ಎಂದಿನಂತೆ ಸೂಪರ್. ಹಿನ್ನೆಲೆ ಸಂಗೀತ, ಮೇಕಿಂಗ್ ವಿಚಾರದಲ್ಲೂ ಟೋಬಿ ಟ್ರೇಲರ್ ಅಚ್ಚುಕಟ್ಟಾಗಿದೆ. ಇನ್ನೇನು ಆಗಸ್ಟ್ 25ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಹಾಗಾಗಿ ಒಟಿಟಿ ಗೊಡವೆ ಬಿಟ್ಟು ಚಿತ್ರಮಂದಿರದಲ್ಲಿಯೇ ನೋಡಿ.
ಹೀಗಿದೆ ಟೋಬಿ ಚಿತ್ರದ ಟ್ರೇಲರ್
ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ