Sapta Sagaradaache Ello: ಸಪ್ತ ಸಾಗರದಾಚೆ ಎಲ್ಲೋ ಟ್ರೇಲರ್ ರಿಲೀಸ್; ಮಗ್ಗಲು ಬದಲಿಸಿ ನವಿರಾದ ಪ್ರೇಮಕಥೆಯ ನೇಯ್ದು ತಂದ ರಕ್ಷಿತ್ ಶೆಟ್ಟಿ
Aug 17, 2023 07:21 PM IST
Sapta Sagaradaache Ello: ಸಪ್ತ ಸಾಗರದಾಚೆ ಎಲ್ಲೋ ಟ್ರೇಲರ್ ರಿಲೀಸ್; ಮಗ್ಗಲು ಬದಲಿಸಿ ನವಿರಾದ ಪ್ರೇಮಕಥೆಯ ನೇಯ್ದು ತಂದ ರಕ್ಷಿತ್ ಶೆಟ್ಟಿ
- ಅವನು ಮನು, ಅವಳು ಪ್ರಿಯಾ ಈ ಇಬ್ಬರ ನಡುವೆ ಸಾಗುವ ನವಿರಾದ ಪ್ರೇಮಕಥೆ. ಸಮುದ್ರದಲೆಯಂತೆ ಏರಿಳಿತವಾಗಿ ಸಾಗುವ ಈ ಕಥೆಯಲ್ಲಿ ಹಲವು ಪಾತ್ರಗಳ ಪ್ರವೇಶವೂ ಆಗುತ್ತದೆ. ಹೀಗೆ ಹಲವು ವಿಶೇಷತೆಗಳ ಗುಚ್ಛವನ್ನೇ ತುಂಬಿಸಿರುವ ನಿರ್ದೇಶಕರು, ಎಲ್ಲಿಯೂ ಕಥೆಯ ಸಣ್ಣ ಎಳೆಯ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.
Sapta Sagaradaache Ello: ಕೀ ಪ್ಯಾಡ್ ಫೋನು, ಕ್ಯಾಸೆಟ್ ಟೇಪ್ ರೆಕಾರ್ಡರ್ ಧ್ವನಿ, ಗಾರ್ಮೆಂಟ್ಸ್ ಫ್ಯಾಕ್ಟರಿ, ತಿರುಗೋ ರೀಲು, ಕಥೆ ಹೇಳುವ ಕಡಲು ತೀರ, ಪೊಲೀಸು, ಜೈಲು, ಒಂದು ಪ್ರೇಮಕಥೆ, ಅದರ ಜತೆಗೆ ಅಂಟಿಕೊಂಡ ವ್ಯಥೆ.. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟ್ರೇಲರ್‌ನಲ್ಲಿ ಕಾಣಿಸಿದ ವಿಶೇಷತೆಗಳಿವು. 3 ನಿಮಿಷದ ಟ್ರೇಲರ್‌ನಲ್ಲಿ ಪ್ರತಿಯೊಂದು ಪ್ರಾಪರ್ಟಿ ಹಿಂದೆಯೂ ಒಂದೊಂದು ಕಥೆಯಿದೆ. ಅದು ಮೌನದಲ್ಲಿಯೇ ಮಾತನಾಡುತ್ತದೆ.
ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ, 777 ಚಾರ್ಲಿ ಬಳಿಕ ಚಿತ್ರಮಂದಿರದ ಕಡೆ ಬಂದಿಲ್ಲ. ಈಗ ಸಪ್ತ ಸಾಗರದಾಚೆ ಎಲ್ಲೋ ಅನ್ನೋ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್, ಟೀಸರ್, ಹಾಡಿನ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿರುವ ಈ ಸಿನಿಮಾ ಇನ್ನೇನು ಬಿಡುಗಡೆಗೆ ಹೆಚ್ಚು ದಿನ ಉಳಿದಿಲ್ಲ. ಸೆಪ್ಟೆಂಬರ್ 1ರಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ಇದೀಗ ಟ್ರೇಲರ್ ಮೂಲಕ ಪ್ರಚಾರ ಕಣಕ್ಕಿಳಿದಿದೆ ಇಡೀ ತಂಡ.
ಗೋಧಿಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಹೇಮಂತ್ ಎಂ ರಾವ್ ತುಂಬ ದಿನಗಳ ಬಳಿಕ ಮತ್ತೆ ಆಗಮಿಸುತ್ತಿದ್ದಾರೆ. ಸುದೀರ್ಘ ಗ್ಯಾಪ್ ಎನ್ನುವುದಕ್ಕಿಂತ ಒಂದೇ ಚಿತ್ರದ ಮೇಲೆ ತುಂಬ ವರ್ಷಗಳ ಕಾಲ ಶ್ರಮಹಾಕಿ ಇದೀಗ ತೆರೆಗೆ ತರುತ್ತಿದ್ದಾರೆ ಹೇಮಂತ್ ರಾವ್. ಒಂದಲ್ಲ ಎರಡು ಭಾಗಗಳಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆ ಆಗುತ್ತಿದೆ.
ಟ್ರೇಲರ್ ನೋಡಿದಾಕ್ಷಣ ಇದೊಂದು ಪ್ರೇಮಕಥೆ ಎಂಬುದು ಕಣ್ಣಿಗೆ ಕಾಣುತ್ತದೆಯಾದರೂ, ಅದರೊಳಗೊಂದಿಷ್ಟು ರೋಚಕತೆಯ ಕವಲುಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ ನಿರ್ದೇಶಕರು. ಕೀಪ್ಯಾಡ್ ಫೋನ್ ಬಳಕೆ, ಕ್ಯಾಸೆಟ್ ಟೇಪ್ ರೆಕಾರ್ಡರ್ ಬಳಕೆಯೂ ಇಲ್ಲಿ ಕಾಣಿಸುತ್ತದೆ. ಈ ಹಿಂದೆ ನಿರ್ದೇಶಕರು ಹೇಳಿಕೊಂಡಂತೆ ಇದು 2010ರ ಕಾಲಘಟ್ಟದಲ್ಲಿ ನಡೆಯುವ ಕಥೆ. ವಿಶೇಷ ಎಂದರೆ ಚಿತ್ರದಲ್ಲಿ ಸಮುದ್ರವೂ ಪ್ರಮುಖ ಪಾತ್ರ ನಿರ್ವಹಿಸಿದೆ. ಅದೂ ಟ್ರೇಲರ್‌ನಲ್ಲಿ ಕಾಣಿಸುತ್ತದೆ.
ಅವನು ಮನು, ಅವಳು ಪ್ರಿಯಾ ಈ ಇಬ್ಬರ ನಡುವೆ ಸಾಗುವ ನವಿರಾದ ಪ್ರೇಮಕಥೆ. ಸಮುದ್ರದಲೆಯಂತೆ ಏರಿಳಿತವಾಗಿ ಸಾಗುವ ಈ ಕಥೆಯಲ್ಲಿ ಹಲವು ಪಾತ್ರಗಳ ಪ್ರವೇಶವೂ ಆಗುತ್ತದೆ. ಹೀಗೆ ಹಲವು ವಿಶೇಷತೆಗಳ ಗುಚ್ಛವನ್ನೇ ತುಂಬಿಸಿರುವ ನಿರ್ದೇಶಕರು, ಎಲ್ಲಿಯೂ ಕಥೆಯ ಸಣ್ಣ ಎಳೆಯ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಹಿನ್ನೆಲೆ ಸಂಗೀತದ ವಿಚಾರದಲ್ಲಿಯೂ ಟ್ರೇಲರ್ ಕೇಳುಗನ ಕಿವಿಗೆ ಹಿತವನೀಯುತ್ತದೆ. ಚರಣ್ ರಾಜ್ ಮ್ಯೂಸಿಕ್ ಮೋಡಿ, ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ದೃಶ್ಯಗಳನ್ನು ಚೆಂದಗಾಣಿಸಿದೆ.
ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ