ಅಣ್ಣಾ ಎಂದು ಬಾಯಿ ತುಂಬಾ ಹೇಳುವ ದರ್ಶನ್‌ಗೆ ಹೀಗೆ ಆಗಬಾರ್ದಿತ್ತು; ಜೈಲಲ್ಲಿ ದರ್ಶನ್ ಭೇಟಿ ಬಳಿಕ ವಿನೋದ್ ರಾಜ್ ಮಾತು
Jul 23, 2024 09:39 AM IST
ಅಣ್ಣಾ ಎಂದು ಬಾಯಿ ತುಂಬಾ ಹೇಳುವ ದರ್ಶನ್‌ಗೆ ಹೀಗೆ ಆಗಬಾರ್ದಿತ್ತು; ಜೈಲಲ್ಲಿ ದರ್ಶನ್ ಭೇಟಿ ಬಳಿಕ ವಿನೋದ್ ರಾಜ್ ಮಾತು
- ಹಿರಿಯ ನಟ ವಿನೋದ್ ರಾಜ್, ಬೆಂಗಳೂರಿನ ಸೆಂಟ್ರಲ್ ಜೈಲಿಗೆ ತೆರಳಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.
Vinod Raj on Darshan thoogudeepa: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 17 ಮಂದಿ ಜೈಲು ಸೇರಿದ್ದಾರೆ. ಘಟನೆ ನಡೆದು ತಿಂಗಳ ಮೇಲಾದರೂ, ಈ ವರೆಗೂ ಜಾಮೀನು ಸಿಗದೆ ದರ್ಶನ್ ಪರಿತಪಿಸುತ್ತಿದ್ದಾರೆ. ನ್ಯಾಯಾಂಗ ಬಂಧನವೂ ವಿಸ್ತರಣೆ ಆಗುತ್ತಲೇ ಇದೆ. ಸದ್ಯ ಆಗಸ್ಟ್ 1ರ ವರೆಗೆ ದರ್ಶನ್ ಅಂಡ್ ಗ್ಯಾಂಗ್‌ಗೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ, ಜುಲೈ 18ರಂದು ಕೋರ್ಟ್ ತೀರ್ಪು ನೀಡಿತ್ತು. ಬಂಧನದ ಬಳಿಕ ಇಲ್ಲಿಯವರೆಗೂ ಸ್ಯಾಂಡಲ್‌ವುಡ್‌ನ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಇದೀಗ ಹಿರಿಯ ನಟಿ, ದಿವಂಗತ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ದರ್ಶನ್ ಬಳಿ ಮಾತನಾಡಿ ಬಂದಿದ್ದಾರೆ.
ವಿನೋದ್ ರಾಜ್ ಭಾವುಕ
"ದರ್ಶನ್ ಅವರನ್ನು ಒಬ್ಬ ಕಲಾವಿದ ಎನ್ನುವ ಬದಲು, ನಮ್ಮ ಹತ್ರದ ಸಂಬಂಧದವರು, ನಮ್ಮ ಕರುಳ ಸಂಬಂಧದವರು ಎನಿಸುತ್ತದೆ. ಅಷ್ಟು ಪ್ರೀತಿಯಿಂದ ಅಣ್ಣ ಅಂತ ಬಂದು ಅವರು ತಬ್ಬಿಕೊಂಡರು. ಪ್ರಾಣ ಕಳೆದುಕೊಂಡಂತೆ ಆಯ್ತು ನಮಗೆ. ಅಷ್ಟು ಪ್ರೀತಿಯನ್ನು ಕೊಟ್ಟರು, ಹೇಗೆ ಹೇಳಬೇಕು ಅಂತ ತಿಳಿಯುತ್ತಿಲ್ಲ. ಆಪರೇಷನ್ಗೆ ಹೋಗುವುದಕ್ಕೂ ಮುನ್ನ ನಾನು ಅವರ ಬಳಿ ಫೋನ್ನಲ್ಲಿ ಮಾತನಾಡಿದ್ದೆ. ಆಪರೇಷನ್ ವಿಷಯವನ್ನು ಅವರಿಗೆ ಹೇಳಿರಲಿಲ್ಲ. ಆದರೆ ನನ್ನ ಧ್ವನಿಯಿಂದ ಅವರು ಕಂಡುಹಿಡಿದು ಬಿಟ್ರು. ಯಾಕಣ್ಣ ಯಾಕಣ್ಣ ಡಲ್ ಆಗಿದ್ದೀರಿ ಅಂತ ಕೇಳಿದರು. ಏನಿಲ್ಲ ಅಂತ ಅಷ್ಟೇ ಹೇಳಿದ್ದೆ. ನಾನು ಅಡ್ಮಿಟ್ ಆದ ಮರುದಿನ ಈ ಸುದ್ದಿ ಬಂತು ನನಗೆ" ಎಂದಿದ್ದಾರೆ.
ನೋವಲ್ಲೂ ನಗ್ತಿದ್ರು..
"ಪಾಪ ತಬ್ಬಿಕೊಂಡು, ಚೆನ್ನಾಗಿದ್ದೀನಿ ಅಣ್ಣ ಅಳಬೇಡಿ, ಅಳಬೇಡಿ ಅಂದ್ರು. ಕಷ್ಟ ಆಗುತ್ತೆ. ಈ 33 ದಿನ ಕೆಲಸ ಇಲ್ಲದೇ ಆ ಮನುಷ್ಯ ಎಷ್ಟು ಯೋಚನೆ ಮಾಡಿರಬಹುದು. ಎಷ್ಟು ಸೊರಗಿರಬಹುದು ಎಂಬುದನ್ನು ನೆನಪಿಸಿಕೊಂಡರೆ ಮನಸಿಗೆ ನೋವಾಗುತ್ತದೆ. ಏನ್ ಪರಿಸ್ಥಿತಿ ಆಯ್ತಲ್ಲ ಅಪ್ಪಾಜಿ ಅಂತ ಕೇಳಿದೆ, ಇಲ್ಲಣ್ಣ, ಏನ್ಮಾಡೋಕೆ ಆಗುತ್ತೆ ಅಂತ ಅಂದ್ರು. ಆಗೋದಮೇಲೆ ಏನೂ ಮಾಡೋಕೆ ಆಗಲ್ಲ ಎಂದೆ. ಏನ್ಮಾಡಬೇಕು, ಏನಾಗುತ್ತೆ ಅನ್ನೋದು ಕಾಲಕ್ಕೂ, ವಿಧಿಗೂ ಮಾತ್ರ ಗೊತ್ತಿರುತ್ತೆ."
ನೋವು ಕಣ್ಣೀರು ಬಿಟ್ಟರೆ ಏನೂ ಕಾಣ್ತಿಲ್ಲ..
"ನಾನು, ದರ್ಶನ್ ಪತ್ನಿ, ಮಗ, ದಿನಕರ್ ಮತ್ತು ಲಾಯರ್ ಸೇರಿ ಒಟ್ಟು 5 ಜನ ಒಳಗೆ ಹೋಗಿದ್ದೆವು. ಇದೇ ಕಷ್ಟ ಸುಖದ ಬಗ್ಗೆ ಮಾತನಾಡಿದ್ದೇವೆ. ಅಲ್ಲೇನು ಬೇರೆ ಮಾತನಾಡೋಕೆ ಆಗುತ್ತೆ. ಏನೂ ಹೇಳಲಿಲ್ಲ. ಜೈಲಿನ ನಿಯಮಗಳು ತುಂಬ ಕಟ್ಟುನಿಟ್ಟಾಗಿವೆ. ಅವರ ವಕೀಲರು ಮಾತನಾಡಿದರು ಅಷ್ಟೇ. ವಿಜಯಲಕ್ಷ್ಮಿ ಅವರು ಕೂಡ ಹೆಚ್ಚೇನೂ ಮಾತನಾಡಿಲ್ಲ ಅನ್ನೋದಕ್ಕಿಂತ ಅವರಿಗೆ ಏನೂ ತಿಳಿಯುತ್ತಿಲ್ಲ. ಇಷ್ಟು ಕಹಿಯಾಗಿ, ಈ ಸ್ಥಿತಿಯಲ್ಲಿ ಅವರನ್ನು ನೋಡಬೇಕಿತ್ತ? ಅಂತ ನನ್ನ ಕಣ್ಣುಗಳನ್ನೇ ನಂಬೋಕೆ ಆಗ್ತಿಲ್ಲ. ನಂಬಬೇಕಾದ ಅನಿವಾರ್ಯ ಬಂದಿದೆ. ನೋವು ಕಣ್ಣೀರು ಬಿಟ್ಟರೆ ಏನೂ ಕಾಣ್ತಿಲ್ಲ. ಇದೆಲ್ಲ ನೋಡಿದಾಗ ಇದರ ಪರಿಣಾಮ ಹೇಗಿರುತ್ತದೆ ಎಂಬುದನ್ನು ಊಹಿಸಲೂ ಅಸಾಧ್ಯ" ಎಂದಿದ್ದಾರೆ.
"ಈ ಕಹಿಗಿಂತ ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ದೊಡ್ಡದು. ಭಗವಂತ ಅವರಿಗೆ ಕೊಟ್ಟ ಯಶಸ್ಸು, ಇನ್ಯಾರಿಗೂ ಸಾಧ್ಯವಿಲ್ಲ. ಈ ಹಿಂದಿನ ಹಳೇ ಸಿನಿಮಾಗಳು ಮರು ಬಿಡುಗಡೆಯಾಗಿ ಯಶಸ್ವಿಯಾಗುತ್ತಿವೆ. ಏನೋ ಒಂದು ಇದರಲ್ಲಿ ನಿಗೂಢವಾದ ಸತ್ಯವಿದೆ. ಆ ಸತ್ಯ ಭಗವಂತನಿಗೆ ಗೊತ್ತಿವೆ. ಒಳ್ಳೇ ತೀರ್ಪು ಬರಲಿ, ಆದಷ್ಟು ಬೇಗ ಅವರ ಕುಟುಂಬ, ತಲೆ ಎತ್ತಿ ನಡೆಯುವ ಸಮಯ ಬರಲಿ" ಎಂದು ಖಾಸಗಿ ಸುದ್ದಿವಾಹಿನಿ ಜತೆಗೆ ವಿನೋದ್ ರಾಜ್ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.