ಕಾಂತಾರ ಕೈತಪ್ಪಿದ ಗೋಲ್ಡನ್ ಪಿಕಾಕ್ ಪ್ರಶಸ್ತಿ; ಶಂಕರ್ ನಾಗ್ ಬಳಿಕ ಚಂದನವನಕ್ಕೆ ಸಿಲ್ವರ್ ಪಿಕಾಕ್ ಪ್ರಶಸ್ತಿ ತಂದ ರಿಷಬ್ ಶೆಟ್ಟಿ
Nov 29, 2023 06:26 PM IST
ಶಂಕರ್ ನಾಗ್ ಬಳಿಕ ಚಂದನವನಕ್ಕೆ ಸಿಲ್ವರ್ ಪಿಕಾಕ್ ಪ್ರಶಸ್ತಿ ತಂದ ರಿಷಬ್ ಶೆಟ್ಟಿ
- Kantara Silver Peacock Award: 54ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪರ್ಷಿಯಾದ ಎಂಡ್‌ಲೆಸ್ ಬಾರ್ಡರ್ ಚಿತ್ರಕ್ಕೆ ಗೋಲ್ಡನ್ ಪಿಕಾಕ್ ಪ್ರಶಸ್ತಿ ಮತ್ತು ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾಕ್ಕೆ ಸಿಲ್ವರ್ ಪಿಕಾಕ್ ಪ್ರಶಸ್ತಿ ದೊರಕಿದೆ. ಶಂಕರ್‌ನಾಗ್ ಅವರ ಒಂದಾನೊಂದು ಕಾಲದಲ್ಲಿ ಚಿತ್ರಕ್ಕೂ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿತ್ತು.
ಬೆಂಗಳೂರು: ಭಾರತದ ಚಿತ್ರರಂಗಕ್ಕೆ ಹೆಮ್ಮೆ ತರುವಂತಹ ಸುದ್ದಿಯೊಂದು ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಿನಿಮೋತ್ಸವದಿಂದ ಬಂದಿದೆ. ಕಾಂತಾರ ಸಿನಿಮಾಕ್ಕೆ ಪ್ರತಿಷ್ಠಿತ ಸಿಲ್ವರ್ ಪಿಕಾಕ್ ಪ್ರಶಸ್ತಿ ದೊರಕಿದೆ. ಶಂಕರ್ ನಾಗ್ ಅವರು ನಟಿಸಿದ ಒಂದಾನೊಂದು ಕಾಲದಲ್ಲಿ ಚಿತ್ರಕ್ಕೂ ಇದೇ ಪ್ರತಿಷ್ಠಿತ ಪ್ರಶಸ್ತಿ ದೊರಕಿತ್ತು. ಇದೀಗ ಕನ್ನಡದ ಇನ್ನೊಂದು ಚಿತ್ರಕ್ಕೆ ಈ ಪ್ರಶಸ್ತಿ ದೊರಕಿದೆ. ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಾಪ್ಟರ್ 1ರ ಫಸ್ಟ್ ಲುಕ್ ಬಿಡುಗಡೆ ಮಾಡಿ, ಎಲ್ಲರನ್ನೂ ಆಶ್ಚರ್ಯಕ್ಕೆ ದೂಡಿದ್ದು, ಇದೇ ಸಮಯದಲ್ಲಿ ಕಾಂತಾರ ಸಿನಿಮಾಕ್ಕೆ ಪ್ರಶಸ್ತಿಯೂ ದೊರಕಿದೆ.
ಗೋವಾದಲ್ಲಿ ಕಳೆದ ಹಲವು ದಿನಗಳಿಂದ ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯುತ್ತಿದೆ. ಈ ಸಮಾರಂಭದಲ್ಲಿ ಕಾಂತಾರ ಸಿನಿಮಾಕ್ಕೆ ಸಿಲ್ವರ್ ಪಿಕಾಕ್ ಪ್ರಶಸ್ತಿ ದೊರಕಿದೆ. ಕಾಂತಾರ ಸಿನಿಮಾ ಬಿಡುಗಡೆಯಾಗಿ ಸುಮಾರು ಒಂದು ವರ್ಷದ ಬಳಿಕ ಈ ಪ್ರತಿಷ್ಠಿತ ಪ್ರಶಸ್ತಿಯು ಕಾಂತಾರ ಸಿನಿಮಾಕ್ಕೆ ದೊರಕಿದೆ. ಇದನ್ನು ಓದಿ: ಕಾಂತಾರ ಚಾಪ್ಟರ್ 1 ಫಸ್ಟ್‌ಲುಕ್‌ಗೆ ಬೆರಗಾಯ್ತು ಗೂಗಲ್; ವಾಹ್, 2024 ಇನ್ನಷ್ಟು ರೋಚಕ ಎಂದು ಟ್ವೀಟ್ ಮಾಡಿದ ಸರ್ಚ್ ಎಂಜಿನ್ ದೈತ್ಯ
ಸಿಲ್ವರ್ ಪಿಕಾಕ್ ಪಡೆದ ಕನ್ನಡದ ಎರಡನೇ ನಟ
ಈ ಹಿಂದೆ ಶಂಕರ್‌ನಾಗ್ ಈ ಪ್ರಶಸ್ತಿ ಪಡೆದಿದ್ದರು. ಅಂದರೆ, 1978ರಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರಕ್ಕಾಗಿ ಶಂಕರ್‌ನಾಗ್‌ಗೆ ಈ ಸಿಲ್ವರ್ ಪಿಕಾಕ್ ಪ್ರಶಸ್ತಿ ದೊರಕಿತ್ತು. ಇದೀಗ ಕಾಂತಾರ ಸಿನಿಮಾಕ್ಕಾಗಿ ರಿಷಬ್ ಶೆಟ್ಟಿ ಈ ಪ್ರಶಸ್ತಿ ಪಡೆದಿದ್ದಾರೆ. ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರು ರಿಷಬ್ ಶೆಟ್ಟಿ ಅವರಿಗೆ ಸಿಲ್ವರ್ ಪಿಕಾಕ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ಪ್ರಶಸ್ತಿ ಪಡೆಯಲು ಅಂತಾರಾಷ್ಟ್ರೀಯ ಮಟ್ಟದ ಹನ್ನೆರಡು ಸಿನಿಮಾಗಳು ಮತ್ತು ಭಾರತದ ಮೂರು ಸಿನಿಮಾಗಳು ಸ್ಪರ್ಧೆ ನಡೆಸಿತ್ತು.
ಕಾಂತಾರ ಕೈತಪ್ಪಿದ ಗೋಲ್ಡನ್ ಪಿಕಾಕ್ ಪ್ರಶಸ್ತಿ
ಕಾಂತಾರ ಸಿನಿಮಾಕ್ಕೆ ಈ ಬಾರಿ ಗೋಲ್ಡನ್ ಪಿಕಾಕ್ ಪ್ರಶಸ್ತಿ ಪಡೆಯುವ ನಿರೀಕ್ಷೆ ಇತ್ತು. ಆದರೆ, ಈ ಸಿನಿಮೋತ್ಸವದಲ್ಲಿ ಗೋಲ್ಡನ್ ಪಿಕಾಕ್ ಪ್ರಶಸ್ತಿಯನ್ನು ಪರ್ಷಿಯಾದ ಎಂಡ್‌ಲೆಸ್ ಬಾರ್ಡರ್ಸ್ ಎಂಬ ಸಿನಿಮಾ ಪಡೆದುಕೊಂಡಿದೆ. ಇದು ಅಬ್ಬಾಸ್ ಅಮಿನಿ ನಿರ್ದೇಶನದ ಚಿತ್ರವಾಗಿದೆ. ಈ ಸಿನಿಮಾವು ಹೊರಗಿನ ಗಡಿಗಳ ಬದಲು ನಮ್ಮೊಳಗಿನ ಸಂಕೀರ್ಣ ಗಡಿಗಳ ಕುರಿತು ಮಾತನಾಡುತ್ತದೆ.
ಶಂಕರ್‌ನಾಗ್‌ಗೂ ದೊರಕಿತ್ತು ಸಿಲ್ವರ್ ಪಿಕಾಕ್ ಪ್ರಶಸ್ತಿ
ಶಂಕರ್‌ನಾಗ್ ಅವರಿಗೆ 7ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಐಎಫ್‌ಐಐ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಸಿಲ್ವರ್ ಪಿಕಾಕ್ ಪ್ರಶಸ್ತಿ ದೊರಕಿತ್ತು. ಒಂದಾನೊಂದು ಕಾಲದಲ್ಲಿ ಚಿತ್ರದ ನಟನೆಗಾಗಿ ಈ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು.
ವಿಶೇಷ ಜ್ಯೂರಿ ಅವಾರ್ಡ್ ಪಡೆದ ಕಾಂತಾರ
ಸಿಲ್ವರ್ ಪಿಕಾಕ್ ಪ್ರಶಸ್ತಿ ಮಾತ್ರವಲ್ಲದೆ ಕಾಂತಾರ ಸಿನಿಮಾಕ್ಕೆ ಈ ಸಿನಿಮೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿಯೂ ದೊರಕಿದೆ. ಈ ಬಾರಿ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ 15 ಚಿತ್ರಗಳು ಕಣದಲ್ಲಿದ್ದವು. ಈ ಪೈಕಿ ಭಾರತದಿಂದ ‘ಕಾಂತಾರ’ ಸೇರಿದಂತೆ ಒಟ್ಟು ಮೂರು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ವಿಭಾಗದಲ್ಲಿ "ಕಾಂತಾರ" ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿ ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಒಳಗೊಂಡಿದೆ. ಇದನ್ನೂ ಓದಿ: IFFI 2023: 54ನೇ ಗೋವಾ ಸಿನಿಮೋತ್ಸವದಲ್ಲಿ ಕಾಂತಾರ ಚಿತ್ರಕ್ಕೆ ಸಿಕ್ತು ಸ್ಪೆಷಲ್ ಅವಾರ್ಡ್