ಮಳೆ ನಕ್ಷತ್ರದ ಹೆಸರಿನ ಸಿನಿಮಾ ಬಿಡುಗಡೆಗೆ ರೆಡಿ, ಶತಭಿಷ ಚಿತ್ರದ ಟ್ರೇಲರ್ ಬಿಡುಗಡೆ; ಅನಿರೀಕ್ಷಿತ ಕಷ್ಟಕ್ಕೆ ಸಿಲುಕಿದ ಪೋಲಿ ಹುಡುಗರ ಕಥೆ
Jun 25, 2024 12:07 PM IST
ಮಳೆ ನಕ್ಷತ್ರದ ಹೆಸರಿನ ಸಿನಿಮಾ ಬಿಡುಗಡೆಗೆ ರೆಡಿ, ಶತಭಿಷ ಚಿತ್ರದ ಟ್ರೇಲರ್ ಬಿಡುಗಡೆ
- Shatabhisha Kannada Movie: 'ಶತಭಿಷ' ಎಂಬ ಮಳೆ ನಕ್ಷತ್ರದ ಹೆಸರೇ ಸಿನಿಮಾವಾಗಿ ಈ ತಿಂಗಳು ಬಿಡುಗಡೆಯಾಗಲಿದೆ. ಶತಭಿಷ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಯುವಕರ ತಂಡ, ಪೊಲೀಸರು, ಟೆರರಿಸ್ಟ್‌ಗಳ ಕಥೆಯನ್ನು ಶತಭಿಷ ಹೊಂದಿರುವ ಸೂಚನೆ ದೊರಕಿದೆ.
ಬೆಂಗಳೂರು: ಈ ವಾರ ಶತಭಿಷ ಹೆಸರಿನ ಸಿನಿಮಾವೊಂದು ತೆರೆ ಕಾಣಲು ರೆಡಿಯಾಗಿದೆ. 'ಶತಭಿಷ' ಮಳೆ ನಕ್ಷತ್ರದ ಹೆಸರು. ಇದೇ ಶೀರ್ಷಿಕೆಯಡಿ ಚಲನಚಿತ್ರವೊಂದು ನಿರ್ಮಾಣವಾಗಿದ್ದು ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಪೊಲೀಸರು, ಟೆರರಿಸ್ಟ್ ಗಳು ಹಾಗೂ ಒಂದಷ್ಟು ಯುವಕರು ಅನಿರೀಕ್ಷಿತವಾಗಿ ಒಂದು ಕಡೆ ಸೇರುವಂತಾಗಿ, ಅಲ್ಲಿ ಒಂದಷ್ಟು ಸಮಸ್ಯೆಗಳು ಎದುರಾಗುತ್ತವೆ. ಅದನ್ನೆಲ್ಲ ಎದುರಿಸಿ ಅವರು ಹೇಗೆ ಹೊರಬರುತ್ತಾರೆ ಎನ್ನುವುದೇ ಶತಭಿಷ ಚಿತ್ರದ ಕಥಾಹಂದರ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ವೆಂಕಟೇಶ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಶತಭಿಷ' ಚಿತ್ರವನ್ನು ಶ್ರೀ ದುರ್ಗಿ ವಿಷ್ಣು ಕಂಬೈನ್ಸ್ ಮೂಲಕ ಕಾಶಿ ಶೇಖರ್ ಅವರು ನಿರ್ಮಾಣ ಮಾಡಿದ್ದಾರೆ. ದೀಪು ಅರ್ಜುನ್ ಈ ಚಿತ್ರದ ನಾಯಕನಾಗಿದ್ದು, ಶೋಭಿತಾ ಶಿವಣ್ಣ ನಾಯಕಿಯಾಗಿ ನಟಿಸಿದ್ದಾರೆ. ವಿಭಿನ್ನ ಶೈಲಿಯ ಕಳ್ಳ ಪೋಲೀಸ್ ಆಟವನ್ನು ನಿರ್ದೇಶಕ ವೆಂಕಟೇಶ್ ಅವರು ಈ ಚಿತ್ರದ ಮೂಲಕ ಹೇಳಿದ್ದಾರೆ. 'ನಾಲ್ವರು ಪೋಲಿ ಹುಡುಗರು ಭಯೋತ್ಪಾದಕರಿಗೆ ಬೆಂಬಲ ನೀಡಲು ಹೋಗಿ ಪೊಲೀಸ್ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ನಂತರ ಅವರು ಆ ಕೇಸ್‌ನಿಂದ ಹೊರಗೆ ಬರುತ್ತಾರಾ? ಈ ಕೇಸ್‌ಗೆ ಅವರು ಸಿಲುಕುವುದು ಹೇಗೆ ಎನ್ನುವುದೇ ಚಿತ್ರದ ಕಾನ್ಸೆಪ್ಟ್. ತಂಗಪಾಮಡಿಯನ್ ಅವರ ಛಾಯಾಗ್ರಹಣವಿದೆ.
ಈಗಿನ ಟ್ರೆಂಡ್ ಗೆ ಬೇಕಾದ ಕಥೆ, ವಿರಾಜಪೇಟೆ, ಮೇಲುಕೋಟೆ, ಹುಬ್ಬಳ್ಳಿ, ಮುಂಬೈ, ಗುಲ್ಬರ್ಗಾ, ಬೆಂಗಳೂರು, ಚಿಂತಾಮಣಿ ಅಲ್ಲದೆ ಚೆನ್ನೈ ಸೇರಿದಂತೆ ಸಾಕಷ್ಟು ಲೊಕೇಶನ್‌ಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದಲ್ಲಿ ಕಿತಾಪತಿ ಮಾಡೋ ಹುಡುಗ ಹೇಗೆ ನಕ್ಸಲೈಟ್ ಆಗ್ತಾನೆ, ಎಲ್ಲಿಂದಲೋ ಬಂದ ನಕ್ಸಲೈಟ್ ಗಳು ಒಬ್ಬ ಹುಡುಗನನ್ನು ಹೇಗೆ ಹಾಳು ಮಾಡ್ತಾರೆ, ನಾಯಕಿಯ ಪರಿಚಯವಾಗಿ, ಪ್ರೀತಿಯಾಗಿ ಮುಂದೇನಾಗುತ್ತೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು' ಎಂದು ನಾಯಕ ದೀಪು ಅರ್ಜುನ್ ಹೇಳಿದ್ದಾರೆ.
ನಮಗೆ ಸಿನಿಮಾ ಮಾಡೋ ಆಸಕ್ತಿ ಇರಲಿಲ್ಲ. ಆರಂಭದಲ್ಲಿ ನಾಯಕನೇ ನಿರ್ಮಾಪಕನಾಗಿದ್ದರು. ನಂತರ ನನ್ನಬಳಿ ಬಂದು ಹೇಳಿದಾಗ ಜೊತೆಯಾದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಾನು ಸಹ ಸಣ್ಣ ಪಾತ್ರ ಮಾಡಿದ್ದೇನೆ. ಕುಟುಂಬ ಸಮೇತ ನೋಡುವಂಥ ಒಳ್ಳೆಯ ಕಥೆ ಸಿನಿಮಾದಲ್ಲಿದೆ' ಎಂದು ನಿರ್ಮಾಪಕ ಕಾಶಿ ಶೇಖರ್ ಹೇಳಿದ್ದಾರೆ. ನಿರ್ಮಾಣದ ಜೊತೆಗೆ ಪೊಲೀಸ್ ಅಧಿಕಾರಿಯಾಗಿಯೂ ಅವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
ಶತಭಿಷ ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ನಾಲ್ಕು ಫೈಟ್‌ಗಳಿದ್ದು, ಅಭಿಷೇಕ್ ಜಿ. ರಾಯ್ ಅವರ ಸಂಗೀತ, ಅಂಜನ್ ಅವರ ಸಾಹಿತ್ಯ ಚಿತ್ರಕ್ಕಿದೆ. ಈ ಚಿತ್ರದ ಉಳಿದ ಪಾತ್ರಗಳಲ್ಲಿ ಟೆನ್ನಿಸ್ ಕೃಷ್ಣ, ಅಪ್ಪಣ್ಣ, ಮೂಗು ಸುರೇಶ್, ಕುರಿ ಸುನೀಲ್ ಮುಂತಾದವರು ನಟಿಸಿದ್ದಾರೆ.