logo
ಕನ್ನಡ ಸುದ್ದಿ  /  ಮನರಂಜನೆ  /  ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕರಿಂದ ಶಿವರಾಜ್‌ ಕುಮಾರ್‌ಗೆ ಭೈರವನ ಕೊನೆ ಪಾಠ; ಶಿವಣ್ಣನ ವೃತ್ತಿಜೀವನದಲ್ಲೇ ವಿನೂತನ ಸಿನಿಮಾ

ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕರಿಂದ ಶಿವರಾಜ್‌ ಕುಮಾರ್‌ಗೆ ಭೈರವನ ಕೊನೆ ಪಾಠ; ಶಿವಣ್ಣನ ವೃತ್ತಿಜೀವನದಲ್ಲೇ ವಿನೂತನ ಸಿನಿಮಾ

Praveen Chandra B HT Kannada

Aug 09, 2024 05:49 PM IST

google News

ಶಿವರಾಜ್‌ ಕುಮಾರ್‌ ಮುಂದಿನ ಸಿನಿಮಾದ ಹೆಸರು ಭೈರವನ ಕೊನೆ ಪಾಠ

    • Bhairvana Kone Pata Movie: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಸೈಡ್‌ ಬಿ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಗಮನ ಸೆಳೆದ ನಿರ್ದೇಶಕ ಹೇಮಂತ್‌ ರಾವ್‌ ಇದೀಗ ಶಿವರಾಜ್‌ ಕುಮಾರ್‌ಗೆ ಆಕ್ಷನ್‌ ಕಟ್‌ ಹೇಳಲು ಮುಂದಾಗಿದ್ದಾರೆ. ಶಿವಣ್ಣ ನಟನೆಯ ಮುಂಬರುವ ಚಿತ್ರ "ಭೈರವನ ಕೊನೆ ಪಾಠ" ಟೈಟಲ್‌ ಬಿಡುಗಡೆಯಾಗಿದೆ.
ಶಿವರಾಜ್‌ ಕುಮಾರ್‌ ಮುಂದಿನ ಸಿನಿಮಾದ ಹೆಸರು ಭೈರವನ ಕೊನೆ ಪಾಠ
ಶಿವರಾಜ್‌ ಕುಮಾರ್‌ ಮುಂದಿನ ಸಿನಿಮಾದ ಹೆಸರು ಭೈರವನ ಕೊನೆ ಪಾಠ

ಬೆಂಗಳೂರು: ಬ್ಲಾಕ್‌ಬಸ್ಟರ್‌ ಚಿತ್ರಗಳಿಲ್ಲದೆ ಸೊರಗುತ್ತಿರುವ ಕನ್ನಡ ಚಿತ್ರರಂಗವನ್ನು ಮೇಲಕ್ಕೆತ್ತಲು ಎಂಬಂತೆ ಹ್ಯಾಟ್ರಿಕ್‌ಹೀರೋ ಶಿವರಾಜ್‌ ಕುಮಾರ್‌ ಭೈರವನ ಅವತಾರವನ್ನು ತಾಳಿದ್ದಾರೆ. ಶಿವಣ್ಣನ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಲು ಸರದಿಯಲ್ಲಿದ್ದು, ಇದೇ ಸಮಯದಲ್ಲಿ ಶಿವರಾಜ್‌ ಕುಮಾರ್‌ ನಟನೆಯ ಹೊಸ ಚಿತ್ರವೊಂದರ ಟೈಟಲ್‌ ಘೋಷಣೆಯೂ ಆಗಿದೆ. ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್‌ ರಾವ್‌ ಆಕ್ಷನ್‌ ಕಟ್‌ ಹೇಳುತ್ತಿರುವ "ಭೈರವನ ಕೊನೆ ಪಾಠ" ಚಿತ್ರದ ಟೈಟಲ್‌ ಬಿಡುಗಡೆಯಾಗಿದೆ.

ಭೈರವನ ಕೊನೆ ಪಾಠ ಟೈಟಲ್‌ ಬಿಡುಗಡೆ

ಸ್ಟೇ ಟ್ಯೂನ್ಡ್‌, ಆತನ ಆಗಮನಕ್ಕಾಗಿ ಕಾಯಿರಿ. ಸಿನಿಮಾ ಟೈಟಲ್‌ ಬಿಡುಗಡೆ ಜುಲೈ 4ರಂದು ಇಂದು ಶಿವರಾಜ್‌ ಕುಮಾರ್‌ ನಿನ್ನೆಯೇ ಸಿನಿ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಅಂದುಕೊಂಡಂತೆ, ಇಂದು ಶಿವಣ್ಣನ ಮುಂದಿನ ಚಿತ್ರದ ಟೈಟಲ್‌ ಬಿಡುಗಡೆಯಾಗಿದೆ. ಭೈರವನ ಕೊನೆ ಪಾಠ ಎಂಬ ವಿನೂತನ ಶೀರ್ಷಿಕೆಯ ಸಿನಿಮಾದ ಕುರಿತು ಘೋಷಿಸಿದ್ದಾರೆ. ವೇದ, ಭಜರಂಗಿ, ಓಂ, ಟಗರು, ವಜ್ರಕಾಯ ಮುಂತಾದ ಸಿನಿಮಾಗಳ ಹೆಸರನ್ನು ನೋಡಿದ್ದವರಿಗೆ ಶಿವಣ್ಣ ಭೈರವನ ಹೊಸ ಪಾಠ ಎಂಬ ಹೊಸ ಶೀರ್ಷಿಕೆಯ ಅಚ್ಚರಿ ನೀಡಿದ್ದಾರೆ. ಹೇಮಂತ್‌ ರಾವ್‌ ಹೇಳೋ ಕಥೆ ಡಿಫರೆಂಟ್‌ ಇರುವ ಕಾರಣ ಈ ಹೊಸ ಟೈಟಲ್‌ ಸಾಕಷ್ಟು ಕುತೂಹಲ ಕೆರಳಿಸಿದೆ.

ಶಿವಣ್ಣನ ಸಿನಿಮಾಕ್ಕೆ ಹೇಮಂತ್‌ ರಾವ್‌ ನಿರ್ದೇಶನ

ಹೇಮಂತ್‌ ರಾವ್‌ ಸಿನಿಮಾದ ಟೈಟಲ್‌ಗಳು ಹೆಚ್ಚಾಗಿ ಉದ್ದುದ್ದ ಇರುತ್ತವೆ. ಹಿಂದಿಯ ಅಂಧಧುನ್‌, ಕನ್ನಡದ ಕವಲುದಾರಿ ಹೊರತುಪಡಿಸಿ ಇವರು ಕೆಲಸ ಮಾಡಿರುವ ಬಹುತೇಕ ಸಿನಿಮಾಗಳ ಟೈಟಲ್‌ಗಳು ಉದ್ದವೇ ಇದೆ. ಪುಷ್ಕರ್‌ ಮಲ್ಲಿಕಾರ್ಜುನಾ ನಿರ್ಮಾಣದ, ರಕ್ಷಿತ್‌ ಶೆಟ್ಟಿ, ಅನಂತ್‌ ನಾಗ್‌, ವಸಿಷ್ಠ ಸಿಂಹ ಮುಂತಾದವರು ನಟಿಸಿರುವ ಗೋಧಿ ಬಣ್ಣ ಸಾಧಾರಣ ಮೈಕಟ್ಟು (ನಿರ್ದೇಶನ), ಹಂಬಲ್‌ ಪೊಲಿಟಿಷಿಯನ್‌ ನೋಗ್‌ರಾಜ್‌ (ಪ್ರೊಡ್ಯುಸರ್‌), ಭೀಮಸೇನಾ ನಳಮಹಾರಾಜ, ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಬಿ ಸಿನಿಮಾಗಳು ಉದ್ದದ ಹೆಸರನ್ನು ಹೊಂದಿವೆ. ಇವುಗಳಲ್ಲಿ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ. ಇದೀಗ ಶಿವರಾಜ್‌ ಕುಮಾರ್‌ಗೆ ಭೈರವ ಎಂಬ ಸಿನಿಮಾ ಮಾಡೋದು ಬಿಟ್ಟು "ಭೈರವನ ಕೊನೆಯ ಪಾಠ" ಎಂಬ ವಿನೂತನ ಶೀರ್ಷಿಕೆಯ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಶಿವಣ್ಣ ಮಾಡದೆ ಇರುವಂತಹ ಪಾತ್ರ

ಭೈರವನ ಕೊನೆ ಪಾಠದಲ್ಲಿ ಶಿವರಾಜ್‌ ಕುಮಾರ್‌ ತಮ್ಮ ಅಮೋಘ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಮಾಡದೆ ಇರುವಂತಹ ಪಾತ್ರವನ್ನು ಮಾಡಲಿದ್ದಾರೆ. ಈ ಕುರಿತು ಈ ಹಿಂದೆಯೇ ಹಿಂದೂಸ್ತಾನ್‌ ಟೈಮ್ಸ್‌ಗೆ ಹೇಮಂತ್‌ ರಾವ್‌ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು. "ಇದು ಸೈನ್ಸ್‌ ಫಿಕ್ಷನ್‌ ಚಿತ್ರ ಎಂದು ಕೆಲವು ವರದಿಗಳು ಹೇಳಿವೆ. ಆದರೆ, ಇದು ಸೈನ್ಸ್‌ ಫಿಕ್ಷನ್‌ ಚಿತ್ರವಲ್ಲ. ಇದೊಂದು ಆಕ್ಷನ್‌ ಡ್ರಾಮಾ. ಶಿವಣ್ಣ ಸರ್‌ ತಮ್ಮ ವೃತ್ತಿಜೀವನದಲ್ಲಿ ಮಾಡದೆ ಇರುವಂತಹ ಕಥೆ ಇದಾಗಿದೆ. ಅವರ ಸಿನಿಮಾಗಳನ್ನು ನೋಡುತ್ತ ಬೆಳೆದ ನಾನು ಅವರನ್ನು ಹೊಸ ಪಾತ್ರದಲ್ಲಿ ನೋಡಲು ಬಯಸುತ್ತೇನೆ. ಇದು ತುಂಬಾ ವಿಭಿನ್ನ ಎಂದು ನಾನು ಭಾವಿಸುವೆ" ಎಂದು ಹೇಮಂತ್‌ ರಾವ್‌ ಹೇಳಿದ್ದಾರೆ.

ಭೈರತಿ ರಣಗಲ್‌ ಬಳಿಕ ಭೈರವನ ಕೊನೆ ಪಾಠ

ಕೆಲವು ಮೂಲಗಳ ಪ್ರಕಾರ ಭೈರವನ ಕೊನೆ ಪಾಠ ಚಿತ್ರದಲ್ಲಿ ಐತಿಹಾಸಿಕ ಅಂಶಗಳು ಇರಲಿವೆ. ಪಿರೆಯಿಡಿಕಲ್‌ ಅಂಶಗಳು ಇರಲಿವೆ ಎನ್ನಲಾಗುತ್ತಿದೆ. ಈ ಸಿನಿಮಾ ಮುಂದಿನ ವರ್ಷ ಅಂದರೆ 2025ರಲ್ಲಿ ರಿಲೀಸ್‌ ಆಗಲಿದೆ. ಈಗಾಗಲೇ ಹೇಮಂತ್‌ ರಾವ್‌ ಈ ಚಿತ್ರದ ಸ್ಕ್ರಿಪ್ಟ್‌ ರೆಡಿ ಮಾಡಿದ್ದಾರೆ. ನರ್ತನ್‌ ಆಕ್ಷನ್‌ ಕಟ್‌ ಹೇಳಿರುವ ಭೈರತಿ ರಣಗಲ್‌ ಚಿತ್ರದ ಬಳಿಕ ಹೇಮಂತ್‌ ರಾವ್‌ ನಿರ್ದೇಶನದ ಭೈರವನ ಕೊನೆ ಪಾಠದಲ್ಲಿ ಶಿವಣ್ಣ ನಟಿಸಲಿದ್ದಾರೆ. ಇದೇ ಸಮಯದಲ್ಲಿ ಶಿವಣ್ಣ ಮತ್ತು ಡಾಲಿ ಧನಂಜಯ್‌ ನಟನೆಯ ಉತ್ತರಕಾಂಡ ಸಿನಿಮಾವೂ ನಿರೀಕ್ಷೆ ಹುಟ್ಟಿಸಿದೆ. ಉತ್ತರಕಾಂಡ ಸಿನಿಮಾವು ಈ ವರ್ಷ ಬಿಡುಗಡೆಯಾಗಲಿದೆ. ಸ್ಟಾರ್‌ ನಟರ ಸಿನಿಮಾಗಳಿಲ್ಲದೆ ಸೊರಗುತ್ತಿರುವ ಕನ್ನಡ ಚಿತ್ರರಂಗ, ಕರ್ನಾಟಕದ ಥಿಯೇಟರ್‌ಗಳಿಗೆ ಭೈರತಿ ರಣಗಲ್‌, ಉತ್ತರಕಾಂಡ, ಭೈರವನ ಕೊನೆ ಪಾಠದಂತಹ ಸ್ಟಾರ್‌ ನಟರ ಸಿನಿಮಾಗಳು ಶಕ್ತಿ ತುಂಬುವ ಸೂಚನೆಗಳಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ