ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್ ಬೆನ್ನಲ್ಲೇ ಅದೇ ಘಟನೆ ಹೋಲುವ ಸಿನಿಮಾದ ಟೀಸರ್ ರಿಲೀಸ್; ಇದು ನಿರ್ದೇಶಕರ ಪ್ರೀ ಪ್ಲಾನಾ? VIDEO
May 23, 2024 06:33 AM IST
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್ ಬೆನ್ನಲ್ಲೇ ಅದೇ ಘಟನೆ ಹೋಲುವ ಸಿನಿಮಾದ ಟೀಸರ್ ರಿಲೀಸ್; ಇದು ನಿರ್ದೇಶಕರ ಪ್ರೀ ಪ್ಲಾನಾ?
- ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್ ಬೆನ್ನಲ್ಲೇ, ಅದೇ ಘಟನಾವಳಿಗಳನ್ನೇ ಹೋಲುವ ಸಿನಿಮಾವೊಂದರ ಟೀಸರ್ ಬಿಡುಗಡೆಯಾಗಿದೆ. ಆ ಚಿತ್ರದ ಹೆಸರು ಸಿಂಹಗುಹೆ. ಈ ಚಿತ್ರದ ಟೀಸರ್ ಸದ್ಯ ಹಲವು ಹತ್ತಾರು ಅನುಮಾನಗಳಿಗೆ ಒಗ್ಗರಣೆ ಹಾಕುತ್ತಿದೆ.
Simhaguhe Movie Teaser: ಕರುನಾಡಿನಲ್ಲಿ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್ ಬರೀ ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಸುದ್ದಿಯಾಗಿದೆ. ಸದ್ಯ ತಲೆ ಮರೆಸಿಕೊಂಡಿರುವ ಪ್ರಜ್ವಲ್‌ಗಾಗಿ ಹುಡುಕಾಟ ಆರಂಭವಾಗಿದೆ. ಈ ನಡುವೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕಾಗಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾರಂಟ್ ಸಹ ಜಾರಿ ಮಾಡಿದ್ದು, ವಿಶೇಷ ತನಿಖಾ ತಂಡ ವಾರಂಟ್ ಹಿಡಿದು ಪ್ರಜ್ವಲ್‌ಗಾಗಿ ಶೋಧ ಆರಂಭಿಸಿದೆ. ಇತ್ತ ಜಾಮೀನಿನ ಮೇಲೆ ಹೊರ ಬಂದಿರುವ ಎಚ್.ಡಿ ರೇವಣ್ಣ ಟೆಂಪಲ್ ರನ್ ಆರಂಭಿಸಿದ್ದಾರೆ.
ಬುಧವಾರ ಹೊಳೆನರಸೀಪುರದಲ್ಲಿ ಮಾತನಾಡಿರುವ ಎಚ್‌ಡಿ ರೇವಣ್ಣ, ಕಳೆದ 60 ವರ್ಷಗಳಿಂದ ಹಾಸನವನ್ನು ನಮ್ಮ ತಂದೆಯವರಾದ ಎಚ್.ಡಿ ದೇವೇಗೌಡ ಅವರು ರಕ್ಷಿಸುತ್ತಲೇ ಬಂದಿದ್ದಾರೆ. ಈಗಲೂ ಅದು ಮುಂದುವರಿಯಲಿದೆ. ನಮ್ಮ ತಂದೆ ಇರುವವರೆಗೂ ಯಾರೂ ಭಯ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಮುಂದುವರಿದು ಮಾತನಾಡಿ, ಹೊಳೆನರಸೀಪುರ ಜನತೆಯ ಜತೆಗೆ ನಾನು, ನಮ್ಮ ತಂದೆ, ಕುಮಾರಸ್ವಾಮಿ ಮತ್ತು ನಮ್ಮ ಇಡೀ ಕುಟುಂಬ ನಿಮ್ಮ ಜತೆಗಿರುತ್ತದೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದಿದ್ದರು.
ಹೀಗೆ ಪ್ರಕರಣ ಬೇರೆ ಬೇರೆ ಆಯಾಮಗಳನ್ನು ಪಡೆದು ಮುಂದುವರಿಯುತ್ತಿದ್ದರೆ, ಇದೇ ಘಟನೆಯನ್ನೇ ಆಧರಿಸಿ ಸದ್ದಿಲ್ಲದೆ ಸಿನಿಮಾವೊಂದು ಸಿದ್ಧವಾಗಿದೆ ಎಂಬ ಅನುಮಾನ ಮೂಡತೊಡಗಿದೆ. ಹೊಸಬರ ತಂಡವೊಂದು, ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣವನ್ನೇ ಹೋಲುವ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಿ ಮುಗಿಸಿದ್ದು, ಗ್ಯಾಪ್‌ನಲ್ಲಿಯೇ ಟೀಸರ್ ಸಹ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಟೀಸರ್‌ನಲ್ಲಿ ಮಹಿಳೆಯರ ಜತೆಗೆ ಪ್ರಭಾವಿ ವ್ಯಕ್ತಿಯೊಬ್ಬನ ಚೆಲ್ಲಾಟವೇ ಕಾಣಿಸಿದೆ. ಮಹಿಳೆಯರ ಜತೆಗಿನ ಸಲ್ಲಾಪದ ವಿಡಿಯೋವನ್ನೂ ಮಾಡಿ ಖುಷಿಪಡುವ ದೃಶ್ಯವೂ ಇದೆ. ಹಾಗಾದರೆ, ಯಾವುದಾ ಸಿನಿಮಾ? ಇದು ನಿಜಕ್ಕೂ ನೈಜ ಘಟನೆಯೇ? ನಿರ್ದೇಶಕರೇ ಉತ್ತರಿಸಿದ್ದಾರೆ.
ರಾಷ್ಟ್ರವ್ಯಾಪಿ ಸದ್ದು ಮಾಡಿದ ಒಂದಷ್ಟು ಘಟನೆಗಳು ಸಿನಿಮಾರೂಪ ಪಡೆದ ಉದಾಹರಣೆಗಳು ಸಾಕಷ್ಟಿವೆ. ಘಟನೆ ನಡೆದು ಒಂದಷ್ಟು ತಿಂಗಳಿಗೋ ಅಥವಾ ವರ್ಷಕ್ಕೋ ಆ ಸಿನಿಮಾಗಳು ಮೂಡಿಬಂದಿವೆ. ಇದೀಗ ಪ್ರಕರಣ ತನಿಖೆ ಹಂತದಲ್ಲಿ ಇರುವಾಗಲೇ, ಇನ್ನೂ ಹಸಿಯಾಗಿರುವಾಗಲೇ ಅದೇ ಘಟನಾವಳಿಗಳನ್ನು ಹೋಲುವ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಆ ಚಿತ್ರದ ಹೆಸರು ಸಿಂಹಗುಹೆ. ಎಸ್‌ಜಿಆರ್ ಎಂಬುವವರು ಈ ಸಿನಿಮಾ ನಿರ್ದೇಶನ ಮಾಡಿದ್ದು, ಸರ್ವ ಕ್ರಿಯೇಷನ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿ ಬಂದಿದೆ.
ಏನಿದೆ ಟೀಸರ್‌ನಲ್ಲಿ?
ಸಿಂಹ ಗುಹೆಯಲ್ಲಿ ನಡೆದ ಅಶ್ಲೀಲ ವಿಡಿಯೋ ಪ್ರಕರಣ. ಬಗೆದಷ್ಟು ಬಯಲಾಗುತ್ತಿರುವ ತೋಟದ ಮನೆ ರಹಸ್ಯ ಎಂದ ಸುದ್ದಿವಾಹಿನಿಯಲ್ಲಿ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ, ಪ್ರಜ್ವಲ್ ರೇವಣ್ಣ ಅವರನ್ನೇ ಹೋಲುವ ವ್ಯಕ್ತಿ ಸಾಕಷ್ಟು ಮಹಿಳೆಯರ ಜತೆ ಸಂಬಂಧ ಇಟ್ಟುಕೊಂಡ ದೃಶ್ಯಗಳಿವೆ. ಹಾಗಾದರೆ, ಇದು ಪ್ರಜ್ವಲ್ ರೇವಣ್ಣ ಅವರನ್ನೇ ಟಾರ್ಗೆಟ್ ಮಾಡಿ ನಿರ್ಮಿಸಿದ ಚಿತ್ರವೇ? ಅಥವಾ ಬೇಕು ಅಂತಲೇ ಹೈಪ್ ಹೆಚ್ಚಿಸಿಕೊಳ್ಳಲು ಚಿತ್ರತಂಡ ಈ ರೀತಿ ಮಾಡಿದಿಯೇ? ಈ ಬಗ್ಗೆ ನಿರ್ದೇಶಕ ಎಸ್‌ಜಿಆರ್ ನೀಡಿದ ಉತ್ತರ ಹೀಗಿದೆ.
ನಮ್ಮದು ಕಾಲ್ಪನಿಕ ಕಥೆ
ʼಸದ್ಯದ ಟೀಸರ್ ನೋಡಿದರೆ, ನಮ್ಮ ಕಥೆಯನ್ನೇ ಯಾರೋ ಕದ್ದಿರಬಹುದು ಅನಿಸುತ್ತಿದೆ. ಏಕೆಂದರೆ, ಕಳೆದ ಒಂದು ವರ್ಷದ ಹಿಂದೆಯೇ ನಮ್ಮ ಸಿಂಹಗುಹೆ ಸಿನಿಮಾದ ಶೂಟಿಂಗ್ ಮುಗಿದು, ಸೆನ್ಸಾರ್ ಸಹ ಆಗಿದೆ. ನಮ್ಮ ಚಿತ್ರದ ಕಥೆ ಕಾಲ್ಪನಿಕವಾದದ್ದು. ನಮ್ಮ ಕಲ್ಪನೆಗೆ ಬಂದಿದೆ ಅದನ್ನು ಮಾಡಿದ್ದೇವೆ. ಹಾಗಂತ ನಮ್ಮ ಸಿನಿಮಾಕ್ಕೂ ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ. ಕೆಲ ವರ್ಷಗಳ ಹಿಂದೆಯೇ ಕಥೆ ಬರೆದುಕೊಂಡಿದ್ದೇನೆ. ನಮ್ಮದು ಸತ್ಯ ಘಟನೆ ಆಧರಿಸಿದ ಸಿನಿಮಾ ಅಲ್ಲ. ಜೂನ್ ವೇಳೆ ನಮ್ಮ ಸಿನಿಮಾ ಬಿಡುಗಡೆ ಆಗಲಿದೆ" ಎಂದಿದ್ದಾರೆ ನಿರ್ದೇಶಕರು.
ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣ
"ಇದನ್ನು ಹೊರತುಪಡಿಸಿ ಇನ್ನೂ ಸಾಕಷ್ಟು ಅಂಶಗಳು ಸಿನಿಮಾದಲ್ಲಿ ಇದೆ. ಬರೀ ಇದಷ್ಟೇ ನಡೆಯಲ್ಲ, ಸಮಾಜಕ್ಕೆ ಒಂದಷ್ಟು ಹೊಸ ವಿಚಾರಗಳನ್ನೂ ನೀಡಿದ್ದೇವೆ. ಸದ್ಯ ಟೀಸರ್‌ನಲ್ಲಿನ ಅಂಶ ಮತ್ತು ಪ್ರಜ್ವಲ್ ರೇವಣ್ಣ ಅವರ ಕೇಸ್ ಕೇವಲ ಕಾಕತಾಳೀಯ. ನಮ್ಮ ಸಿನಿಮಾದ ನಾಯಕರೂ ವಿದೇಶದಲ್ಲಿದ್ದಾರೆ. ಯಾವುದೇ ಕಟ್ ಇಲ್ಲದೆ ಸೆನ್ಸಾರ್‌ನಿಂದಲೂ ನಮ್ಮ ಸಿನಿಮಾಕ್ಕೆ ಪ್ರಮಾಣ ಪತ್ರ ಸಿಕ್ಕಿದೆ. ಇನ್ನು ಸಿನಿಮಾದಲ್ಲಿ ಇಬ್ಬರು ನಾಯಕಿರಿದ್ದಾರೆ. ಕನ್ನಡದ ಜತೆಗೆ ತೆಲುಗಿನಲ್ಲಿ ಈ ಸಿನಿಮಾ ಮೂಡಿಬಂದಿದೆ. ಇದೇ ಜೂನ್‌ನಲ್ಲಿ ಚಿತ್ರಮಂದಿರಕ್ಕೆ ಬರಲಿದ್ದೇವೆ" ಎಂದಿದ್ದಾರೆ ನಿರ್ದೇಶಕ.
ರವಿ ಸಿರೂರ್ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ನಿವಿಶ್ಕಾ ಪಾಟೀಲ್, ಅನುರಾಧಾ ನಾಯಕಿಯರಾಗಿದ್ದಾರೆ. ಸತೋಶ್ ಆರ್ಯನ್ ಸಂಗೀತ, ಎ.ಸಿ ಮಹೇಂದ್ರನ್ ಈ ಸಿನಿಮಾದ ಛಾಯಾಗ್ರಾಹಕರು. ಸರ್ವ ಕ್ರಿಯೇಷನ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.