Spandana Vijay: ಅವಳಿಗೂ ಮರ್ಯಾದೆ ಕೊಡಿ; ತೂಕ ಕಡಿಮೆ ಮಾಡಿಕೊಂಡಿದ್ದಕ್ಕೇ ಸ್ಪಂದನಾ ಸಾವು ಎಂದವರಿಗೆ ಮೇಘನಾ ರಾಜ್ ತಿರುಗೇಟು!
Aug 09, 2023 03:01 PM IST
Spandana Vijay: ಅವಳಿಗೂ ಮರ್ಯಾದೆ ಕೊಡಿ: ತೂಕ ಕಡಿಮೆ ಮಾಡಿಕೊಂಡಿದ್ದಕ್ಕೇ ಸ್ಪಂದನಾ ಸಾವು ಎಂದವರಿಗೆ ಮೇಘನಾ ರಾಜ್ ತಿರುಗೇಟು!
ದಯಮಾಡಿ ಸ್ಪಂದನಾ ಸಾವಿನ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಬೇಡಿ ಎಂದು ನಟಿ ಮೇಘನಾ ರಾಜ್ ಮಾಧ್ಯಮಗಳಲ್ಲಿ ಮನವಿ ಮಾಡಿದ್ದಾರೆ.
Spandana Vijay: ಸ್ಯಾಂಡಲ್‌ವುಡ್ ನಟ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಲ್ಲೇಶ್ವರದ ಅವರ ಮನೆ ಬಳಿ ಈಗಾಗಲೇ ಅಪಾರ ಪ್ರಮಾಣ ಅಭಿಮಾನಿಗಳು, ಸಿನಿಮಾಕ್ಷೇತ್ರದ ಆಪ್ತರು ಆಗಮಿಸಿ ಅಂತಿಮ ದರ್ಶನ ಪಡೆದು ವಿಜಯ್ ರಾಘವೇಂದ್ರಗೆ ಸಂತೈಸುತ್ತಿದ್ದಾರೆ. ಈ ನಡುವೆ ಇದೇ ಸ್ಪಂದನಾ ಸಾವಿನ ಬಗ್ಗೆ ಕೆಲವು ಪುಕಾರುಗಳೂ ಹರಿದಾಡುತ್ತಿವೆ. ತೂಕ ಕಡಿಮೆ ಮಾಡಿಕೊಳ್ಳಲು ಹೋಗಿ ಹೀಗಾಯ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ನಟಿ ಮೇಘನಾ ರಾಜ್ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.
ಆಕೆಯ ಸಾವಿಗೆ ಮರ್ಯಾದೆ ಕೊಡಿ..
ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮೇಘನಾ ರಾಜ್ ಸರ್ಜಾ, "ಈ ವೇಳೆ ಮಾತನಾಡುವುದಕ್ಕೆ ಏನೂ ಇಲ್ಲ. ಆದರೆ, ನಾನು ಒಂದು ಕೇಳಿಕೊಳ್ಳಬೇಕಿದೆ. ರಾಘು ಮತ್ತು ಸ್ಪಂದನಾ ಬಹಳ ಆತ್ಮೀಯರು. ಸ್ಪಂದನಾ ಅವರಿಗೆ ಏನಾಗಿದೆ, ಯಾಕಾಯ್ತು ಅಂತ ಕುಟುಂಬಕ್ಕೆ, ಡಾಕ್ಟರ್‌ಗಳಿಗೆ ಗೊತ್ತಿದೆ. ನೀವೇ ಡಯೆಟಿಷಿಯನ್ ಆಗಬೇಡಿ, ನೀವುಗಳೇ ಡಾಕ್ಟರ್ಸ್, ಫಿಟ್‌ನೆಸ್ ಟ್ರೇನರ್ಸ್ ಆಗಬೇಡಿ. ದಯವಿಟ್ಟು ಆಕೆಗೆ ಮರ್ಯಾದೆ ಕೊಡಿ. ಆಕೆ ಆತ್ಮಕ್ಕೆ ಶಾಂತಿ ಸಿಗುವಂತೆ ನೋಡಿಕೊಳ್ಳಿ"
"ಏನೇನೋ ಅಪಪ್ರಚಾರ ಮಾಡಬೇಡಿ. ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಹೇಳಬೇಡಿ. ಸುಳ್ಳು ಸುದ್ದಿ ಹರಡಬೇಡಿ. ಕುಟುಂಬಸ್ಥರಿಗೆ ನೋವು ಕಡಿಮೆಯಾಗಲು ಸಮಯ ಕೊಡಿ, ಅವರಿಗೆ ಸ್ವಲ್ಪ ಸ್ಪೇಸ್ ಕೊಡಿ. ನಾವಿರುವಂತಹ ಪರಿಸ್ಥಿತಿಯಲ್ಲಿ ಇನ್ನೊಂದು ಕುಟುಂಬವನ್ನು ನೋಡೋಕೆ ಆಗಲ್ಲ. ರಾಘು, ಸ್ಪಂದನಾ ನಮ್ಮ ಕುಟುಂಬದವರು. ಈಗಾಗಲೇ ನಮ್ಮ ಕುಟುಂಬದಲ್ಲಿ ಅಂಥದ್ದೊಂದು ನೋವು ಅನುಭವಿಸಿದ್ದೇವೆ. ಆ ನೋವು ನಮಗೆ ಗೊತ್ತಿದೆ" ಎಂದಿದ್ದಾರೆ ಮೇಘನಾ.
ಅಂತಿಮ ದರ್ಶನ ಪಡೆದ ಚಂದನವನದ ಗಣ್ಯರು
ಕನ್ನಡ ಸಿನಿಮಾರಂಗ ಬಹುತೇಕ ಕಲಾವಿದರು ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದಿದ್ದಾರೆ. ಹಿರಿಯ ನಟ ರವಿಚಂದ್ರನ್, ರಮೇಶ್ ಅರವಿಂದ್, ನಟ ಯಶ್, ಧ್ರುವ ಸರ್ಜಾ, ಮೇಘನಾ ರಾಜ್, ಪ್ರಿಯಾಂಕಾ ಉಪೇಂದ್ರ, ಸೃಜನ್ ಲೋಕೇಶ್, ವಿನೋದ್ ರಾಜ್, ಉಮಾಶ್ರೀ, ನೆನಪಿರಲಿ ಪ್ರೇಮ್ ಸೇರಿ ಕನ್ನಡದ ಬಹುತೇಕ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.
ಮರಂಜನೆ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ